ಬೆಂಗಳೂರು: ಕರ್ನಾಟಕದಲ್ಲಿ 0 ಯಿಂದ 5 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಕಡ್ಡಾಯವಾಗಿ ಪೋಲಿಯೋ ಲಸಿಕೆ ನೀಡುವ ಉದ್ದೇಶದಿಂದ 2026ರ ಜೂನ್ 28ರ ಭಾನುವಾರದಂದು ‘ರಾಷ್ಟ್ರೀಯ ಲಸಿಕಾ ದಿನ (ಪಲ್ಸ್ ಪೋಲಿಯೋ)’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ರಿತ್ವಿಕ್ ಪಾಂಡೆ ತಿಳಿಸಿದ್ದಾರೆ.
ಭಾರತವು ಕಳೆದ 14 ವರ್ಷಗಳಿಗೂ ಹೆಚ್ಚು ಅವಧಿಯಿಂದ ಪೋಲಿಯೊ ಮುಕ್ತ ರಾಷ್ಟ್ರವಾಗಿದ್ದರೂ, ಜಗತ್ತಿನ ಕೆಲವು ಭಾಗಗಳಲ್ಲಿ ಹಾಗೂ ಭಾರತದ ನೆರೆ ರಾಷ್ಟ್ರಗಳಲ್ಲಿ ವೈಲ್ಡ್ ಪೋಲಿಯೋ ವೈರಸ್ (Wild Polio Virus) ಹರಡುವಿಕೆ ಇನ್ನೂ ಇರುವುದರಿಂದ ಈ ಮುನ್ನೆಚ್ಚರಿಕೆ ಕ್ರಮ ಅತ್ಯಗತ್ಯವಾಗಿದೆ. ಭಾರತ ತಜ್ಞ ಸಲಹಾ ಗುಂಪಿನ ಶಿಫಾರಸ್ಸಿನ ಅನ್ವಯ ಈ ಬೃಹತ್ ಅಭಿಯಾನವನ್ನು ನಡೆಸಲಾಗುತ್ತಿದೆ ಎಂದು ಅವರು ವಿವರಿಸಿದ್ದಾರೆ.
ಅಭಿಯಾನದ ಮೊದಲ ದಿನವಾದ ಜೂನ್ 28 ರಂದು ನಿಗದಿಪಡಿತ ಪೋಲಿಯೋ ಬೂತ್ಗಳಲ್ಲಿ ಲಸಿಕೆ ನೀಡಲಾಗುವುದು. ಆ ದಿನ ಲಸಿಕೆ ಪಡೆಯದೇ ಬಾಕಿ ಉಳಿಯುವ ಮಕ್ಕಳಿಗಾಗಿ ನಂತರದ 2 ರಿಂದ 3 ದಿನಗಳಲ್ಲಿ ಆರೋಗ್ಯ ಕಾರ್ಯಕರ್ತರು ನೇರವಾಗಿ ಮನೆ ಮನೆಗೆ ಭೇಟಿ ನೀಡಿ ಲಸಿಕೆ ಹಾಕಲಿದ್ದಾರೆ. ವಲಸಿಗ ಸಮುದಾಯದ ಮಕ್ಕಳು, ಹೆಚ್ಚು ಅಪಾಯದಂಚಿನಲ್ಲಿರುವ ಪ್ರದೇಶಗಳು ಹಾಗೂ ನಗರ ಪ್ರದೇಶದ ಕೊಳಗೇರಿಗಳಲ್ಲಿ ವಾಸಿಸುವ ಮಕ್ಕಳಿಗೆ ಈ ಅಭಿಯಾನದಲ್ಲಿ ವಿಶೇಷ ಆದ್ಯತೆ ನೀಡಲಾಗುತ್ತದೆ.
ಈ ಬೃಹತ್ ಲಸಿಕಾ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಆರೋಗ್ಯ ಇಲಾಖೆಯು ಎಲ್ಲಾ ಸರ್ಕಾರಿ ಇಲಾಖೆಗಳ ಸಹಕಾರವನ್ನು ಕೋರಿದೆ. ಮಾಹಿತಿ, ಶಿಕ್ಷಣ ಮತ್ತು ಸಂವಹನ ಚಟುವಟಿಕೆಗಳ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಹಾಗೂ ಎಲ್ಲಾ ಮಾಧ್ಯಮಗಳು, ಆಕಾಶವಾಣಿ ಮತ್ತು ಎಫ್.ಎಮ್ ವಾಹಿನಿಗಳ ಮೂಲಕ ವ್ಯಾಪಕ ಪ್ರಚಾರ ಕೈಗೊಳ್ಳುವಂತೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಗೆ ನಿರ್ದೇಶನ ನೀಡಲಾಗಿದೆ. ಸಾರ್ವಜನಿಕರು ಹಾಗೂ ಪೋಷಕರು ತಮ್ಮ 5 ವರ್ಷದೊಳಗಿನ ಮಕ್ಕಳಿಗೆ ತಪ್ಪದೇ ಪೋಲಿಯೋ ಹನಿಗಳನ್ನು ಹಾಕಿಸಿ ಸಹಕರಿಸುವಂತೆ ಇಲಾಖೆ ವಿನಂತಿಸಿದೆ.

