ಬೆಂಗಳೂರು: ಕರ್ನಾಟಕದಲ್ಲಿ ಸಚಿವರಾದ ಡಿ.ಕೆ. ಶಿವಕುಮಾರ್, ರಾಮಲಿಂಗಾರೆಡ್ಡಿ ಹಾಗೂ ಕೃಷ್ಣಬೈರೇಗೌಡ ಅವರು ಆರ್ಥಿಕ ದಬ್ಬಾಳಿಕೆ ನಡೆಸುತ್ತಿದ್ದು, ರಾಜಧಾನಿ ಬೆಂಗಳೂರು ಭ್ರಷ್ಟಾಚಾರದ ಕೇಂದ್ರವಾಗಿ ಮಾರ್ಪಟ್ಟಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಉಸ್ತುವಾರಿ ಡಾ. ರಾಧಾಮೋಹನ್ ದಾಸ್ ಅಗ್ರವಾಲ್ ತೀವ್ರವಾಗಿ ಟೀಕಿಸಿದ್ದಾರೆ.
ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ಜಕ್ಕೂರು ಏರೊಡ್ರೋಮ್ ಬಳಿ ನಡೆದ ಶಕ್ತಿ ಕೇಂದ್ರದ ಪ್ರಮುಖರ ಸಭೆಯಲ್ಲಿ ಮಾತನಾಡಿದ ಅವರು, ನಗರದಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲ ಮತ್ತು ಮೂಲಭೂತ ಸೌಕರ್ಯಗಳನ್ನು ಒದಗಿಸುವ ಯೋಜನೆಗಳೂ ಇಲ್ಲದಂತಾಗಿದೆ. ಇದು ಪ್ರಸ್ತುತ ಬ್ರ್ಯಾಂಡ್ ಅಲ್ಲ, ಬದಲಿಗೆ ‘ಬ್ಯಾಡ್ ಬೆಂಗಳೂರು’ ಆಗಿದೆ ಎಂದು ಆಕ್ರೋಶ ಹೊರಹಾಕಿದರು. ಮುಂಬರುವ 2028ರ ಚುನಾವಣೆಯಲ್ಲಿ ಬ್ಯಾಟರಾಯನಪುರ ಕ್ಷೇತ್ರದಲ್ಲಿ ಭಾರತೀಯ ಜನತಾ ಪಕ್ಷವನ್ನು ಗೆಲ್ಲಿಸಲು ಕಾರ್ಯಕರ್ತರು ಈಗಿನಿಂದಲೇ ಸಂಘಟನಾತ್ಮಕವಾಗಿ ಶ್ರಮಿಸಬೇಕು ಎಂದು ಕರೆ ನೀಡಿದರು.
ಜನತೆ ತಕ್ಕ ಪಾಠ ಕಲಿಸಲಿದ್ದಾರೆ:
ಸಭೆಯಲ್ಲಿ ಭಾಗವಹಿಸಿದ್ದ ರಾಜ್ಯ ಸಹ-ಉಸ್ತುವಾರಿ ಸುಧಾಕರ ರೆಡ್ಡಿ ಮಾತನಾಡಿ, ರಾಜ್ಯದಲ್ಲಿ ಸಂಪೂರ್ಣ ಭ್ರಷ್ಟ ಸರ್ಕಾರ ಆಡಳಿತದಲ್ಲಿದ್ದು, ಮುಂದಿನ ದಿನಗಳಲ್ಲಿ ಸಾರ್ವಜನಿಕರೇ ಇವರಿಗೆ ತಕ್ಕ ಪಾಠ ಕಲಿಸಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ದೇಶ ಪ್ರಗತಿ ಹೊಂದುತ್ತಿದ್ದು, 2028ರಲ್ಲಿ ರಾಜ್ಯದಲ್ಲಿ ಮತ್ತೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಜನಜಾಗೃತಿ ಅಭಿಯಾನ:
ರಾಜ್ಯ ಕಾರ್ಯದರ್ಶಿ ಹೆಚ್.ಸಿ. ತಮ್ಮೇಶ್ ಗೌಡ ಮಾತನಾಡಿ, ಕ್ಷೇತ್ರದಲ್ಲಿ ಕಾರ್ಯಕರ್ತರು ಮನೆ ಮನೆಗೆ ತೆರಳಿ ಪಕ್ಷವನ್ನು ಬಲಪಡಿಸುವ ಕೆಲಸ ಮಾಡುತ್ತಿದ್ದಾರೆ. ಸ್ಥಳೀಯ ಬಿಬಿಎಂಪಿ (ಜಿಬಿಎ) ಚುನಾವಣೆ ಅಥವಾ ವಿಧಾನಸಭಾ ಚುನಾವಣೆ ಯಾವಾಗ ಬಂದರೂ ಗೆಲ್ಲುವ ಸಾಮರ್ಥ್ಯ ಪಕ್ಷಕ್ಕಿದೆ. ಅಭಿವೃದ್ಧಿ ಶೂನ್ಯವಾಗಿರುವ ಸ್ಥಳೀಯ ಶಾಸಕರ ವಿರುದ್ಧ ಶೀಘ್ರದಲ್ಲೇ ದೊಡ್ಡ ಮಟ್ಟದ ಆಂದೋಲನ ಹಾಗೂ ಜನಜಾಗೃತಿ ಅಭಿಯಾನವನ್ನು ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಈ ಸಭೆಯಲ್ಲಿ ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಎಸ್. ಹರೀಶ್, ಮಂಡಲ ಅಧ್ಯಕ್ಷ ಕೃಷ್ಣಮೂರ್ತಿ ಸೇರಿದಂತೆ ಪ್ರಮುಖ ಪದಾಧಿಕಾರಿಗಳು ಉಪಸ್ಥಿತರಿದ್ದರು.

