ಬೆಂಗಳೂರು: ಕಾಂಗ್ರೆಸ್ ಪಕ್ಷದಲ್ಲಿ ಹಣವಿಲ್ಲದಿದ್ದರೂ ಗೆಲ್ಲುವ ಅರ್ಹತೆ ಇರುವ ನಿಷ್ಠಾವಂತ ಕಾರ್ಯಕರ್ತರಿಗೆ ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಟಿಕೆಟ್ ಸಿಗುವುದು ಖಚಿತ ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಭರವಸೆ ನೀಡಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ನಡೆದ ಕಾರ್ಯಕರ್ತರ ಸಭೆ ಹಾಗೂ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು,ಕಾಂಗ್ರೆಸ್ ಸದಾ ಬಡವರ ಪರವಾಗಿರುವ ಪಕ್ಷ ಎಂದ ಅವರು, ದೇಶದಲ್ಲಿ ಆಡಳಿತಾರೂಢ ಬಿಜೆಪಿಯ ಬಳಿ ಹತ್ತು ಸಾವಿರ ಕೋಟಿ ರೂಪಾಯಿಗಳ ನಿಧಿ ಇದ್ದರೆ, ಕಾಂಗ್ರೆಸ್ ಬಳಿ ಇರುವುದು ಕೇವಲ 700 ಕೋಟಿ ರೂಪಾಯಿ ಮಾತ್ರ. ಹೀಗಾಗಿ ಕಾರ್ಯಕರ್ತರು ನನಗೆ ಶುಭ ಕೋರಲು ಶಾಲು, ಹೂವಿನ ಹಾರಗಳನ್ನು ತರುವ ಬದಲು, ಅದೇ ಹಣವನ್ನು ಪಕ್ಷದ ನಿಧಿಗೆ ಜಮಾ ಮಾಡುವ ಮೂಲಕ ಪಕ್ಷದ ಖಜಾನೆ ತುಂಬಿಸಲು ಸಹಕರಿಸಬೇಕು ಎಂದು ಮನವಿ ಮಾಡಿದರು.
ತ್ಯಾಗದ ಹಾದಿಯಲ್ಲಿ ಸಂಘಟನೆ:
ಹಿಂದೆ ಬೆಂಗಳೂರು ಪಾಲಿಕೆ ಚುನಾವಣೆ ಜವಾಬ್ದಾರಿ ವಹಿಸಿದ್ದಾಗ ಸಾಮಾನ್ಯ ವರ್ಗದ ಜನರಿಗೆ ಟಿಕೆಟ್ ನೀಡಿ ಗೆಲ್ಲಿಸಿದ ಉದಾಹರಣೆಯನ್ನು ಸ್ಮರಿಸಿದ ಅವರು, ಪಕ್ಷಕ್ಕಾಗಿ ದುಡಿಯುವ ಯಾರಿಗೂ ಅಧಿಕಾರ ಸಿಗುವುದಿಲ್ಲ ಎಂಬ ನಿರಾಶೆ ಬೇಡ ಎಂದರು. ಸೋನಿಯಾ ಗಾಂಧಿ ಅವರು ಪ್ರಧಾನಿ ಹುದ್ದೆಯನ್ನೇ ತ್ಯಾಗ ಮಾಡಿ ಪಕ್ಷವನ್ನು ಉಳಿಸಿದ ಮಾದರಿ ನಮ್ಮ ಮುಂದಿದೆ. ಅವರ ಆಶಯ ಹಾಗೂ ಕಾಂಗ್ರೆಸ್ ಸಂವಿಧಾನದಂತೆ ಮಹಿಳೆಯರಿಗೆ ಶೇ. 33 ರಷ್ಟು ರಾಜಕೀಯ ಅವಕಾಶಗಳನ್ನು ನೀಡಲಾಗುವುದು. ಯಾವುದೇ ಜಾತಿ, ಧರ್ಮ, ಭಾಷೆಯ ತಾರತಮ್ಯವಿಲ್ಲದೆ ಯುವಕರನ್ನು ಒಗ್ಗೂಡಿಸಿ ಮುನ್ನಡೆಯಲಾಗುವುದು ಎಂದು ಸ್ಪಷ್ಟಪಡಿಸಿದರು.
ಬಿಜೆಪಿ-ಆರ್‌ಎಸ್‌ಎಸ್ ಮಣಿಸಲು ಕರೆ:
ಮುಂಬರುವ ಎರಡು ವರ್ಷಗಳು ಕಾಂಗ್ರೆಸ್ ಕಾರ್ಯಕರ್ತರ ವರ್ಷಗಳಾಗಿದ್ದು, ಸ್ಥಳೀಯ ಸಂಸ್ಥೆಗಳ ಚುನಾವಣೆ, ರಾಜ್ಯ ವಿಧಾನಸಭಾ ಚುನಾವಣೆ ಹಾಗೂ ಲೋಕಸಭಾ ಚುನಾವಣೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕಿದೆ. ಬಿಜೆಪಿ ಮತ್ತು ಆರ್‌ಎಸ್‌ಎಸ್ ಸಿದ್ಧಾಂತವನ್ನು ಮಣಿಸಲು ಕಾರ್ಯಕರ್ತರು ಶಕ್ತಿ ಮೀರಿ ಶ್ರಮಿಸಬೇಕು ಎಂದು ಅವರು ಕರೆ ನೀಡಿದರು. ಜೂನ್ 21 ರಂದು ನಡೆಯಲಿರುವ ಬೃಹತ್ ಕಾರ್ಯಕ್ರಮದಲ್ಲಿ ಎಲ್ಲ ಪ್ರಮುಖ ವಿಚಾರಗಳ ಕುರಿತು ವಿಸ್ತೃತವಾಗಿ ಮಾತನಾಡುವುದಾಗಿ ಹರಿಪ್ರಸಾದ್ ತಿಳಿಸಿದರು.
ರಾಜ್ಯಸಭೆ ಸ್ಥಾನಗಳನ್ನೇ ಕಳ್ಳತನ ಮಾಡುತ್ತಿದೆ ಬಿಜೆಪಿ: “ಇಲ್ಲಿಯವರೆಗೆ ಕೇವಲ ಮತಗಳ ಕಳ್ಳತನ ಮಾಡುತ್ತಿದ್ದ ಭಾರತೀಯ ಜನತಾ ಪಕ್ಷವು, ಈಗ ನೇರವಾಗಿ ರಾಜ್ಯಸಭೆಯ ಸ್ಥಾನಗಳನ್ನೇ ಕದಿಯುವ ಮೂಲಕ ಕೀಳು ಮಟ್ಟದ ರಾಜಕಾರಣಕ್ಕೆ ಇಳಿದಿದೆ” ಎಂದು ಬಿಕೆ ಹರಿಪ್ರಸಾದ್ ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಮೀನಾಕ್ಷಿ ನಟರಾಜನ್ ಅವರ ನಾಮಪತ್ರ ತಿರಸ್ಕಾರಗೊಂಡಿದೆ.ಬಿಜೆಪಿಯ ಇಂತಹ ನಡವಳಿಕೆ ಹೊಸದೇನಲ್ಲ ಎಂದ ಅವರು, ಎರಡು ತಿಂಗಳ ಹಿಂದೆ ಹರಿಯಾಣದಲ್ಲಿ ನಡೆದ ರಾಜ್ಯಸಭೆ ಚುನಾವಣೆಯ ಉದಾಹರಣೆ ನೀಡಿದರು. ಅಲ್ಲಿ ನಮಗೆ ಗೆಲುವಿಗೆ 31 ಮತಗಳ ಅಗತ್ಯವಿದ್ದು, 37 ಮತಗಳಿದ್ದರೂ ಕೇವಲ 27 ಮತಗಳು ಮಾತ್ರ ಲಭ್ಯವಾಗುವಂತೆ ಮಾಡಿ, ಉಳಿದ 4 ಮತಗಳನ್ನು ಅಸಿಂಧುಗೊಳಿಸಲಾಯಿತು. ಇದೇ ರೀತಿ 2016ರ ಚುನಾವಣೆಯಲ್ಲೂ ಕಾಂಗ್ರೆಸ್‌ನ 14 ಮತಗಳನ್ನು ಅಸಿಂಧುಗೊಳಿಸಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಲಾಗಿತ್ತು ಎಂದು ಇತಿಹಾಸವನ್ನು ನೆನಪಿಸಿದರು. ಬಿಜೆಪಿ ದೇಶದ ಪ್ರಜಾಪ್ರಭುತ್ವವನ್ನು ಸಂಪೂರ್ಣವಾಗಿ ಹತ್ತಿಕ್ಕಲು ಮತ್ತು ಸಂವಿಧಾನದ ಚೌಕಟ್ಟನ್ನು ಮೀರಿ ಕೆಲಸ ಮಾಡಲು ನಿರಂತರವಾಗಿ ಷಡ್ಯಂತ್ರ ಹಾಗೂ ಕುತಂತ್ರಗಳನ್ನು ರೂಪಿಸುತ್ತಿದೆ ಎಂದು ಅವರು ತೀವ್ರವಾಗಿ ಖಂಡಿಸಿದರು.
ಪ್ರಿಯಾಂಕ್ ಖರ್ಗೆ ಹೇಳಿಕೆಗೆ ಸಂಪೂರ್ಣ ಬೆಂಬಲ:
ಇದೇ ವೇಳೆ ಆರ್‌ಎಸ್‌ಎಸ್ (RSS) ನೋಂದಣಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ಸಚಿವ ಪ್ರಿಯಾಂಕ್ ಖರ್ಗೆ ಅವರು ನೀಡಿರುವ ಹೇಳಿಕೆಯನ್ನು ಹರಿಪ್ರಸಾದ್ ಮುಕ್ತವಾಗಿ ಸಮರ್ಥಿಸಿಕೊಂಡಿದ್ದಾರೆ. “ಪ್ರಿಯಾಂಕ್ ಖರ್ಗೆ ಅವರು ಸರ್ಕಾರದ ಜವಾಬ್ದಾರಿಯುತ ಸಚಿವರಾಗಿದ್ದಾರೆ. ಸಂವಿಧಾನದ ವ್ಯಾಪ್ತಿಯಲ್ಲಿ ತೀರ್ಮಾನ ಕೈಗೊಳ್ಳಲು ಅವರಿಗೆ ಸಂಪೂರ್ಣ ಅಧಿಕಾರವಿದ್ದು, ಅವರ ಹೇಳಿಕೆಗೆ ನನ್ನ ಸಂಪೂರ್ಣ ಸಹಮತವಿದೆ” ಎಂದು ಸ್ಪಷ್ಟಪಡಿಸಿದರು.

