ನವದೆಹಲಿ: ಕರ್ನಾಟಕದ ದಶಕಗಳ ಹಳೆಯ ನೀರಾವರಿ ಹಾಗೂ ಕುಡಿಯುವ ನೀರಿನ ಯೋಜನೆಗಳಾದ ಮೇಕೆದಾಟು, ಕೃಷ್ಣಾ ಮೇಲ್ದಂಡೆ, ಭದ್ರಾ ಮೇಲ್ದಂಡೆ ಮತ್ತು ಮಹದಾಯಿ ಯೋಜನೆಗಳಿಗೆ ತಕ್ಷಣವೇ ತಾಂತ್ರಿಕ ಅನುಮತಿ ಹಾಗೂ ಅಗತ್ಯ ಅನುದಾನ ಬಿಡುಗಡೆ ಮಾಡಬೇಕು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕೇಂದ್ರ ಸರ್ಕಾರಕ್ಕೆ ಕಟ್ಟುನಿಟ್ಟಿನ ಮನವಿ ಸಲ್ಲಿಸಿದ್ದಾರೆ.
ದೆಹಲಿ ಪ್ರವಾಸದಲ್ಲಿರುವ ಮುಖ್ಯಮಂತ್ರಿಗಳು ಶುಕ್ರವಾರ ಕೇಂದ್ರ ಜಲಶಕ್ತಿ ಸಚಿವರನ್ನು ಖುದ್ದಾಗಿ ಭೇಟಿ ಮಾಡಿ ರಾಜ್ಯದ ಪ್ರಮುಖ ಜಲ ಯೋಜನೆಗಳ ಸ್ಥಿತಿಗತಿಗಳ ಕುರಿತು ಸುದೀರ್ಘ ಸಮಾಲೋಚನೆ ನಡೆಸಿದರು.
ಮುಖ್ಯಮಂತ್ರಿಗಳ ಪ್ರಸ್ತಾವನೆಯ ಪ್ರಮುಖ ಅಂಶಗಳು ಹೀಗಿವೆ:
1. ಮೇಕೆದಾಟು ಯೋಜನೆ:
ಸುಪ್ರೀಂ ಕೋರ್ಟ್ 13.11.2025 ರಂದು ತಮಿಳುನಾಡು ರಾಜ್ಯದ ವಿವಿಧ ಅರ್ಜಿಗಳನ್ನು ವಜಾಗೊಳಿಸಿದೆ ಮತ್ತು ಮೇಕೆದಾಟು ಯೋಜನೆಯ ಅನುಮತಿಯ ಬಗ್ಗೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (CWMA) ಮತ್ತು ಕೇಂದ್ರ ಜಲ ಆಯೋಗ (CWC) ನಿರ್ಧಾರ ತೆಗೆದುಕೊಳ್ಳಬೇಕು ಎಂದು ಅಭಿಪ್ರಾಯಪಟ್ಟಿದೆ. CWMA ಈಗಾಗಲೇ ಯೋಜನೆಯನ್ನು ಮೌಲ್ಯಮಾಪನ ಮಾಡಲು CWC ಗೆ ಸೂಚಿಸಿರುವುದರಿಂದ, ಈ ಯೋಜನೆಗೆ ಶೀಘ್ರ ಅನುಮತಿ ಸಿಗುವಂತೆ ನೋಡಿಕೊಳ್ಳಬೇಕು.
2. ಕೃಷ್ಣಾ ನೀರು ವಿವಾದ ನ್ಯಾಯಾಧೀಕರಣ (KWDT-II) ತೀರ್ಪಿನ ಗೆಜೆಟ್ ಅಧಿಸೂಚನೆ:
ಕೃಷ್ಣಾ ನದಿ ನೀರು ಹಂಚಿಕೆಗೆ ಸಂಬಂಧಿಸಿದಂತೆ, ಕೃಷ್ಣಾ ನೀರು ವಿವಾದ ನ್ಯಾಯಾಧೀಕರಣ-II (KWDT-II) ತೀರ್ಪು ನೀಡಿ ಒಂದು ದಶಕಕ್ಕೂ ಹೆಚ್ಚು ಕಾಲ ಕಳೆದಿದ್ದರೂ, ಕೇಂದ್ರ ಸರ್ಕಾರವು ಇನ್ನು ಸಹ ಈ ತೀರ್ಪನ್ನು ಗೆಜೆಟ್‌ನಲ್ಲಿ ಅಧಿಸೂಚಿಸಿಲ್ಲ. ಕರ್ನಾಟಕ ರಾಜ್ಯವು ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-III ರ ಅನುಷ್ಠಾನದಲ್ಲಿ ಭಾರಿ ಮೊತ್ತವನ್ನು ಹೂಡಿಕೆ ಮಾಡಿದೆ ಮತ್ತು ನಮ್ಮ ಯೋಜನೆಯನ್ನು ಮುಂದುವರಿಸಲು ಹಾಗೂ ನಮ್ಮ ಪಾಲಿನ ನೀರನ್ನು ಬಳಸಿಕೊಳ್ಳಲು ಕೇಂದ್ರದ ಬೆಂಬಲದ ಅಗತ್ಯವಿದೆ.
3. ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರದ ನೆರವು:
ಭದ್ರಾ ಮೇಲ್ದಂಡೆ ಯೋಜನೆಗೆ ಸಂಬಂಧಿಸಿದಂತೆ, ಕೇಂದ್ರ ಸರ್ಕಾರವು 2023-24 ರ ಕೇಂದ್ರ ಬಜೆಟ್‌ನಲ್ಲಿ 5,300 ಕೋಟಿ ರೂ.ಗಳ ನೆರವನ್ನು ಘೋಷಿಸಿತ್ತು. ಆದರೆ, 3 ವರ್ಷಗಳು ಕಳೆದರೂ ರಾಜ್ಯಕ್ಕೆ ಈ ಹಣಕಾಸಿನ ನೆರವು ಬಿಡುಗಡೆಯಾಗಿಲ್ಲ. ಈ ಯೋಜನೆಯ 21,167.93 ಕೋಟಿ ರೂ.ಗಳ ಪರಿಷ್ಕೃತ ವೆಚ್ಚದ ಅಂದಾಜಿನ ಪ್ರಸ್ತುತ ಪ್ರಸ್ತಾವನೆಯನ್ನು ಮೌಲ್ಯಮಾಪನ ಮಾಡಿದೆ. PMKSY-AIBP ಯೋಜನೆಯಡಿ ಈ ಯೋಜನೆಗೆ ಕೇಂದ್ರದ ನೆರವನ್ನು ಶೀಘ್ರ ಬಿಡುಗಡೆ ಮಾಡಬೇಕು.
4. ಮಹದಾಯಿ ಕಣಿವೆಯ ಕಳಸಾ ಮತ್ತು ಬಂಡೂರಿ ನಾಲಾ ಯೋಜನೆಗಳು:
ಮಹದಾಯಿ ಕಣಿವೆಯಡಿ ಬರುವ ಕಳಸಾ ಮತ್ತು ಬಂಡೂರಿ ನಾಲಾ ಯೋಜನೆಗಳನ್ನು ಹುಬ್ಬಳ್ಳಿ-ಧಾರವಾಡದ ಕುಡಿಯುವ ನೀರಿನ ಅಗತ್ಯಗಳನ್ನು ಪೂರೈಸಲು ಉದ್ದೇಶಿಸಲಾಗಿದೆ. ಇವುಗಳಿಗೆ ಡಿಸೆಂಬರ್ 2022 ರಲ್ಲಿ CWC/ಜಲಶಕ್ತಿ ಸಚಿವಾಲಯವು ಅನುಮತಿ ನೀಡಿದ್ದರೂ, ಈ ಯೋಜನೆಗೆ ಯಾವುದೇ ಕಾನೂನು ಅಡಚಣೆಗಳಿಲ್ಲದಿದ್ದರೂ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದಿಂದ (MoEF & CC) ಅರಣ್ಯ/ವನ್ಯಜೀವಿ ಅನುಮತಿ ಇನ್ನೂ ಸಿಕ್ಕಿಲ್ಲ. ಇದರಿಂದಾಗಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಕುಡಿಯುವ ನೀರಿನ ಅಗತ್ಯಗಳನ್ನು ಪೂರೈಸಲು ತೀರ್ಪಿನ ಅನ್ವಯ ಹಂಚಿಕೆಯಾದ ನೀರನ್ನು ಬಳಸಿಕೊಳ್ಳಲು ನಮಗೆ ಸಾಧ್ಯವಾಗುತ್ತಿಲ್ಲ. ಹೀಗಾಗಿ ಆದಷ್ಟು ಬೇಗ ಈ ಯೋಜನೆಗಳಿಗೆ ಅನುಮತಿ ಕೊಡಿಸಬೇಕು.
5. ಏತ ನೀರಾವರಿ, ಕಾಲುವೆ ಕಾಮಗಾರಿಗಳಿಗೆ AIBP-PMKSY ಮತ್ತು FMBAP ಯೋಜನೆಗಳಡಿ ಕೇಂದ್ರದ ನೆರವು:
ಭಾರತ ಸರ್ಕಾರದ AIBP-PMKSY ಮತ್ತು FMBAP ಯೋಜನೆಗಳಡಿ ಕೇಂದ್ರದ ನೆರವು ಕೋರಿ ಕರ್ನಾಟಕ ರಾಜ್ಯವು ಫೆಬ್ರವರಿ 2025 ರಲ್ಲಿ ಈ ಕೆಳಗಿನ ಯೋಜನೆಗಳ PFR / DPR ಗಳನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದೆ.
ಸೊಂತಿ ಏತ ನೀರಾವರಿ, ಇಂಡಿ ಶಾಖಾ ಕಾಲುವೆ, ಮಲಪ್ರಭಾ ಕಾಲುವೆ ಬಾಕಿ ಕಾಮಗಾರಿ, ಘಟಪ್ರಭಾ ಬಲದಂಡೆ ಕಾಲುವೆ ಮತ್ತು ಚಿಕ್ಕೋಡಿ ಶಾಖಾ ಕಾಲುವೆ, ತುಂಗಭದ್ರಾ ಎಡದಂಡೆ ಕಾಲುವೆ ಬಾಕಿ ಕಾಮಗಾರಿ, ಬೆಣ್ಣಿಹಳ್ಳ ನದಿಯ ಪ್ರವಾಹ ನಿಯಂತ್ರಣ ಮತ್ತು ಪ್ರವಾಹ ನಿರ್ವಹಣೆ ಯೋಜನೆಗಳಿಗೆ ಕೇಂದ್ರ ಸರ್ಕಾರ ನೆರವು ನೀಡಬೇಕು.
6. ನದಿ ಜೋಡಣೆ ಯೋಜನೆಯಲ್ಲಿ ರಾಜ್ಯಕ್ಕೆ ನ್ಯಾಯಯುತ ಪಾಲು ಹಂಚಿಕೆ
ಕೇಂದ್ರ ಸರ್ಕಾರದ ನದಿಗಳ ಜೋಡಣೆಯ ಪ್ರಸ್ತಾವನೆಗಳ ಅಡಿಯಲ್ಲಿ, ನದಿ ಜೋಡಣೆ (ILR) ಯೋಜನೆಗಳಿಂದ “ಸಮತೆ ಮತ್ತು ಸಮಾನ ಹಂಚಿಕೆಯ ತತ್ವದ” ಮೇಲೆ ಕರ್ನಾಟಕ ರಾಜ್ಯಕ್ಕೆ ನ್ಯಾಯಸಮ್ಮತವಾದ ಪಾಲನ್ನು ಹಂಚಿಕೆ ಮಾಡಬೇಕು.

