Mon. Jun 15th, 2026

ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆ ನಿಲ್ಲಿಸಲ್ಲ: ವಿಪಕ್ಷಗಳ ಟೀಕೆಗೆ ಸಿಎಂ ಡಿ.ಕೆ. ಶಿವಕುಮಾರ್ ತಿರುಗೇಟು

Share this with Friends

ಬೆಂಗಳೂರು: “ಆದಾಯ ಕುಸಿಯುತ್ತಿರುವ ಹಿನ್ನೆಲೆಯಲ್ಲಿ ಮಹಿಳೆಯರಿಗೆ ಆರ್ಥಿಕ ಶಕ್ತಿ ತುಂಬಲು ನಮ್ಮ ಸರ್ಕಾರ ಅತ್ಯಂತ ಪ್ರೀತಿಯಿಂದ ನೀಡಿರುವ ಗ್ಯಾರಂಟಿ ಯೋಜನೆಗಳನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ” ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸ್ಪಷ್ಟಪಡಿಸಿದ್ದಾರೆ.

ಗ್ಯಾರಂಟಿ ಯೋಜನೆಗಳನ್ನು ಸ್ಥಗಿತಗೊಳಿಸಲಾಗುತ್ತದೆ ಎಂದು ಅಪಪ್ರಚಾರ ಮಾಡುತ್ತಿರುವ ವಿರೋಧ ಪಕ್ಷಗಳ ವಿರುದ್ಧ ಅವರು ತೀವ್ರ ವಾಗ್ದಾಳಿ ನಡೆಸಿದ್ದಾರೆ. ಸೋಮವಾರ ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸಿದ ಸಿಎಂ, “ನಾವು ಯಾವುದೇ ಒಳ್ಳೆಯ ಕೆಲಸ ಮಾಡಲು ಮುಂದಾದರೂ ವಿರೋಧ ಪಕ್ಷಗಳು ಅದಕ್ಕೆ ಅಡ್ಡಗಾಲು ಹಾಕುತ್ತವೆ. ಅವರ ಕೈಯಲ್ಲಿ ಆಗದ ಸಾಧನೆಯನ್ನು ನಮ್ಮ ಸರ್ಕಾರ ಮಾಡುತ್ತಿದೆ” ಎಂದರು.

ಅನರ್ಹರಿಗೆ ಬ್ರೇಕ್, ಫಲಾನುಭವಿಗಳಿಗೆ ಹೊಸ ಐಡಿ ಕಾರ್ಡ್:

ಯೋಜನೆಯ ಆರಂಭದಲ್ಲಿ ಕೆಲವು ಫಲಾನುಭವಿಗಳು ತಪ್ಪು ದೂರವಾಣಿ ಸಂಖ್ಯೆ ಹಾಗೂ ಇತರೆ ತಪ್ಪು ಮಾಹಿತಿಗಳನ್ನು ನೀಡಿದ್ದರಿಂದ ಹಣ ಬೇರೆಯವರ ಖಾತೆಗಳಿಗೆ ಜಮಾವಣೆಯಾಗುತ್ತಿರುವ ದೂರುಗಳು ಬಂದಿವೆ. ಇದನ್ನು ಸರಿಪಡಿಸಿ ನೈಜ ಫಲಾನುಭವಿಗಳ ಖಾತೆಗೆ ನೇರವಾಗಿ ಹಣ ತಲುಪಿಸುವುದು ಸರ್ಕಾರದ ಉದ್ದೇಶವಾಗಿದೆ ಎಂದು ಸಿಎಂ ವಿವರಿಸಿದರು. “ಈ ಯೋಜನೆಗಳು ಕೇವಲ ಕರ್ನಾಟಕದ ನಾಗರಿಕರಿಗೆ ಮಾತ್ರ ಸೀಮಿತವಾಗಿದ್ದು, ಅನ್ಯ ರಾಜ್ಯದವರಿಗೆ ಉಚಿತ ವಿದ್ಯುತ್ ನೀಡಲು ಸಾಧ್ಯವಿಲ್ಲ. ಹೀಗಾಗಿ ಅರ್ಹರನ್ನು ಗುರುತಿಸಿ ವಿಶೇಷ ಗುರುತಿನ ಚೀಟಿ (ID Card) ನೀಡಲು ಸಚಿವ ಸಂಪುಟದಲ್ಲಿ ನಿರ್ಧರಿಸಲಾಗಿದ್ದು, ಈ ಪ್ರಕ್ರಿಯೆ ಚಾಲ್ತಿಯಲ್ಲಿದೆ” ಎಂದು ಅವರು ಸ್ಪಷ್ಟಪಡಿಸಿದರು.

ಅಕ್ರಮ ಆರ್ಥಿಕ ದಂಧೆಗೆ ಕಡಿವಾಣ:

ಕೆಲವೆಡೆ ಗೃಹಲಕ್ಷ್ಮಿ ಯೋಜನೆಯ ಹಣವನ್ನು ನಕಲಿ ಫೈನಾನ್ಸ್ ವ್ಯವಹಾರಗಳಿಗೆ ಬಳಸುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಇತ್ತೀಚಿನ ಬೆಳಗಾವಿ ಪ್ರಕರಣವನ್ನು ಉಲ್ಲೇಖಿಸಿದ ಮುಖ್ಯಮಂತ್ರಿಗಳು, ಗ್ರಾಮ ಪಂಚಾಯ್ತಿಯಿಂದ ತಾಲೂಕು ಪಂಚಾಯ್ತಿ ಮಟ್ಟದವರೆಗೆ ಇಂತಹ ಅಕ್ರಮ ಸ್ಕೀಂಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದರು. “ಹೆಣ್ಣು ಕುಟುಂಬದ ಕಣ್ಣು ಎಂಬ ಉದ್ದೇಶದಿಂದ ಅವರ ಮನೆಗಳನ್ನು ಬೆಳಗಿಸಲು ಜಾರಿಗೆ ತಂದಿರುವ ಈ ಯೋಜನೆಗಳು ದೇಶಕ್ಕೇ ಮಾದರಿಯಾಗಿದ್ದು, ಮಹಾರಾಷ್ಟ್ರ, ಮಧ್ಯಪ್ರದೇಶ ಹಾಗೂ ಆಂಧ್ರಪ್ರದೇಶ ರಾಜ್ಯಗಳು ಸಹ ನಮ್ಮನ್ನು ಅನುಸರಿಸುತ್ತಿವೆ” ಎಂದು ಡಿ.ಕೆ. ಶಿವಕುಮಾರ್ ಹೆಮ್ಮೆಯಿಂದ ನುಡಿದರು.

ಬಿಡದಿ ಟೌನ್‌ಶಿಪ್ ಕುಮಾರಸ್ವಾಮಿ ಅವರದ್ದೇ ಯೋಜನೆ; ಬಿಡದಿ ಉಪನಗರ ಯೋಜನೆಗೆ ವಿರೋಧ ಪಕ್ಷಗಳು ಹಮ್ಮಿಕೊಂಡಿರುವ ಪಾದಯಾತ್ರೆ ಮತ್ತು ಪ್ರತಿಭಟನೆಗಳ ಕುರಿತು ನಗರಾಭಿವೃದ್ಧಿ ಸಚಿವ ಡಿ.ಕೆ. ಶಿವಕುಮಾರ್ ಕಟುವಾಗಿ ಪ್ರತಿಕ್ರಿಯಿಸಿದ್ದಾರೆ. “ಬಿಡದಿ ಟೌನ್‌ಶಿಪ್ ನನ್ನ ವೈಯಕ್ತಿಕ ಯೋಜನೆಯಲ್ಲ. ಈ ಯೋಜನೆಗೆ ಈ ಹಿಂದೆ ಹೆಚ್.ಡಿ. ಕುಮಾರಸ್ವಾಮಿ ಅವರೇ ಅಧಿಸೂಚನೆ ಹೊರಡಿಸಿದ್ದರು” ಎಂದು ಅವರು ನೆನಪಿಸಿದ್ದಾರೆ.

ಮಹಾರಾಷ್ಟ್ರ ಮತ್ತು ತೆಲಂಗಾಣದಂತಹ ರಾಜ್ಯಗಳಲ್ಲಿ 40 ರಿಂದ 90 ಸಾವಿರ ಎಕರೆ ಪ್ರದೇಶದಲ್ಲಿ ಬೃಹತ್ ಟೌನ್‌ಶಿಪ್‌ಗಳನ್ನು ನಿರ್ಮಿಸಲಾಗುತ್ತಿದೆ ಎಂದು ಶಿವಕುಮಾರ್ ಉಲ್ಲೇಖಿಸಿದರು. “ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಇದೇ ಪ್ರದೇಶದಲ್ಲಿ ಸಾವಿರ ಎಕರೆ ಜಮೀನನ್ನು ಕೆಐಎಡಿಬಿ (KIADB) ಸ್ವಾಧೀನಪಡಿಸಿಕೊಂಡಾಗ ಇವರೆಲ್ಲಾ ಎಲ್ಲಿದ್ದರು? ಹಾರೋಹಳ್ಳಿ ಕೈಗಾರಿಕಾ ಪ್ರದೇಶವನ್ನು ಅಭಿವೃದ್ಧಿಪಡಿಸಿದಾಗ ರೈತರ ಹಿತ ನೆನಪಾಗಲಿಲ್ಲವೇ? ಬಿಡದಿಯಲ್ಲಿ ಹಲವು ರೈತರು ಸ್ವಯಂಪ್ರೇರಿತರಾಗಿ ಜಮೀನು ನೀಡಲು ಸಿದ್ಧರಿದ್ದಾರೆ. ಆದರೆ ವಿರೋಧ ಪಕ್ಷಗಳು ಕೇವಲ ರಾಜಕಾರಣಕ್ಕಾಗಿ ಈ ವಿಷಯವನ್ನು ಬಳಸಿಕೊಳ್ಳುತ್ತಿವೆ” ಎಂದು ಅವರು ಹರಿಹಾಯ್ದರು.

ಶಾಸಕ ಇಕ್ಬಾಲ್ ಹುಸೇನ್ ಆರೋಗ್ಯ ಸ್ಥಿರ:

ಇದೇ ಸಂದರ್ಭದಲ್ಲಿ ರಾಮನಗರ ಶಾಸಕ ಇಕ್ಬಾಲ್ ಹುಸೇನ್ ಅವರ ಆರೋಗ್ಯದ ಕುರಿತು ಸಚಿವರು ಮಾಹಿತಿ ನೀಡಿದರು. “ನಿನ್ನೆ ಶಾಸಕರಿಗೆ ಎದೆ ನೋವು ಹಾಗೂ ಎಡಗೈ ಸೆಳೆತ ಕಾಣಿಸಿಕೊಂಡಿದ್ದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ವೈದ್ಯರು ಅವರ ಆರೋಗ್ಯವನ್ನು ಸೂಕ್ಷ್ಮವಾಗಿ ಪರಿಶೀಲಿಸುತ್ತಿದ್ದು, ಶಾಸಕರು ಸದ್ಯ ಆರೋಗ್ಯವಾಗಿದ್ದಾರೆ. ಸಾರ್ವಜನಿಕರು ಹಾಗೂ ಕಾರ್ಯಕರ್ತರು ಯಾವುದೇ ಕಾರಣಕ್ಕೂ ಆತಂಕ ಪಡುವ ಅಗತ್ಯವಿಲ್ಲ. ಅವರ ಚಿಕಿತ್ಸೆಗೆ ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ” ಎಂದು ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದರು.

 

 


Share this with Friends

Related Post