Mon. Jun 15th, 2026

ಸರ್ಕಾರಿ ನೌಕರರ ಅಡ್ಡಾಡಕ್ಕೆ ಬ್ರೇಕ್: ‘ಕರ್ತವ್ಯ’ ಹೆಸರಿನ ನೂತನ ಜಿಯೋ-ಹಾಜರಾತಿ ತಂತ್ರಜ್ಞಾನ ಜಾರಿ!

Share this with Friends

ಬೆಂಗಳೂರು: ರಾಜ್ಯ ಸಾರ್ವಜನಿಕ ಆಡಳಿತದಲ್ಲಿ ಕಟ್ಟುನಿಟ್ಟಿನ ಶಿಸ್ತು, ಪಾರದರ್ಶಕತೆ ಹಾಗೂ ಹೊಣೆಗಾರಿಕೆಯನ್ನು ತರಲು ಕರ್ನಾಟಕ ಸರ್ಕಾರವು ‘ಕರ್ತವ್ಯ’ (KAAMS – ಕರ್ನಾಟಕ ಅಡ್ವಾನ್ಸ್ಡ್ ಅಟೆಂಡೆನ್ಸ್ ಮ್ಯಾನೇಜ್ಮೆಂಟ್ ಸಿಸ್ಟಮ್) ಎಂಬ ಹೊಸ ತಂತ್ರಜ್ಞಾನದ ಹಾಜರಾತಿ ವ್ಯವಸ್ಥೆಯನ್ನು ಅನುಷ್ಠಾನಕ್ಕೆ ತಂದಿದೆ.

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಇಲಾಖಾ ಕಾರ್ಯದರ್ಶಿಗಳೊಂದಿಗೆ ನಡೆಸಿದ ಮೊದಲ ಸಭೆಯಲ್ಲೇ ಸರ್ಕಾರಿ ನೌಕರರು ಕಚೇರಿ ಅವಧಿಯಲ್ಲಿ ಕಡ್ಡಾಯವಾಗಿ ಲಭ್ಯವಿರಬೇಕು ಮತ್ತು ಸಾರ್ವಜನಿಕರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಬೇಕು ಎಂದು ಕಟ್ಟುನಿಟ್ಟಿನ ಆದೇಶ ನೀಡಿದ್ದರು. ಈ ಹಿಂದೆ ಬಳಕೆಯಲ್ಲಿದ್ದ ಹಳೇ ಬಯೋಮೆಟ್ರಿಕ್ ವ್ಯವಸ್ಥೆಯಲ್ಲಿ ನೌಕರರು ಕೇವಲ ಬೆರಳು ಗುರುತು (ಡಿಜಿಟಲ್ ಸಹಿ) ಹಾಕಿ ಕಚೇರಿಯಿಂದ ಹೊರಗೆ ಹೋಗುವ ದೋಷಗಳಿದ್ದವು. ಇದನ್ನು ತಡೆಯಲು ನೌಕರರ ಭೌತಿಕ ಉಪಸ್ಥಿತಿ ಮತ್ತು ಕಚೇರಿಯ ನಿಖರ ಭೌಗೋಳಿಕ ಸ್ಥಳವನ್ನು (Geographical Location) ಪತ್ತೆಹಚ್ಚುವ ಈ ಜಿಯೋ ತಂತ್ರಜ್ಞಾನವನ್ನು ತರಲಾಗಿದೆ.

ಬೊಕ್ಕಸಕ್ಕೆ ಕೋಟ್ಯಂತರ ರೂ. ಉಳಿಸಿದ “ಮೇಡ್-ಇನ್-ಕರ್ನಾಟಕ” ತಂತ್ರಜ್ಞಾನ:

ಯಾವುದೇ ಖಾಸಗಿ ಸಾಫ್ಟ್‌ವೇರ್ ಸಂಸ್ಥೆಗಳ ನೆರವಿಲ್ಲದೆ, ಸಂಪೂರ್ಣವಾಗಿ ಸರ್ಕಾರದ ಆಡಳಿತ ವ್ಯವಸ್ಥೆಯಲ್ಲೇ ಈ ನೂತನ ‘ಕರ್ತವ್ಯ’ ಸಾಫ್ಟ್‌ವೇರ್ ಅನ್ನು ವಿನ್ಯಾಸಗೊಳಿಸಲಾಗಿದೆ. ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ (ಇ-ಆಡಳಿತ) ಉಸ್ತುವಾರಿಯಲ್ಲಿ, ಸೆಂಟರ್ ಫಾರ್ ಇ-ಗವರ್ನೆನ್ಸ್ (CeG) ಮತ್ತು ಕರ್ನಾಟಕ ಎಐ ಸೆಲ್ (Karnataka AI Cell) ಜಂಟಿಯಾಗಿ ಈ ತಂತ್ರಜ್ಞಾನವನ್ನು ಸಿದ್ಧಪಡಿಸಿವೆ. ಇದರಿಂದಾಗಿ ಹೊರಗಿನ ಕಂಪನಿಗಳಿಗೆ ನೀಡಬೇಕಾಗಿದ್ದ ಕೋಟ್ಯಂತರ ರೂಪಾಯಿ ವೆಂಡರ್ ವೆಚ್ಚ ಉಳಿತಾಯವಾಗಿದ್ದು, ಸರ್ಕಾರದ ದತ್ತಾಂಶಗಳ (Data Security) ಸುರಕ್ಷತೆ ಹೆಚ್ಚಾಗಿದೆ. ಕರ್ನಾಟಕ ಸರ್ಕಾರದ ಈ ಡಿಜಿಟಲ್ ಹೆಜ್ಜೆಯು ದೇಶದ ಇತರೆ ರಾಜ್ಯಗಳಿಗೂ ಮಾದರಿಯಾಗಿದೆ

ತಂತ್ರಜ್ಞಾನದ ಪ್ರಮುಖ ವೈಶಿಷ್ಟ್ಯಗಳು:

​ಕೃತಕ ಬುದ್ಧಿಮತ್ತೆ (AI) ಆಧಾರಿತ ಮುಖ ಗುರುತಿಸುವಿಕೆ – ವಂಚನೆಯ ಹಾಜರಾತಿಯನ್ನು ತಡೆಯಲು ಲೈವ್‌ನೆಸ್ ಡಿಟೆಕ್ಷನ್ (Liveness Detection) ತಂತ್ರಜ್ಞಾನದೊಂದಿಗೆ ಎಐ ಫೇಶಿಯಲ್ ರೆಕಗ್ನಿಷನ್ ಬಳಸಲಾಗಿದೆ.

ಜಿಯೋಫೆನ್ಸಿಂಗ್ (Geofencing)- ಜಿಐಎಸ್ (GIS) ತಂತ್ರಜ್ಞಾನದ ಮೂಲಕ ಉದ್ಯೋಗಿ ತನ್ನ ಕಚೇರಿಯ ನಿಗದಿತ ಪರಿಧಿಯೊಳಗೆ ಇದ್ದಾಗ ಮಾತ್ರ ಹಾಜರಾತಿ ದಾಖಲಿಸಲು ಸಾಧ್ಯವಾಗುತ್ತದೆ.

ಸಂಯೋಜಿತ ಡೇಟಾಬೇಸ್ – ಇದನ್ನು ಆಧಾರ್ ಇ-ಕೆವೈಸಿ (e-KYC) ಮತ್ತು ಮಾನವ ಸಂಪನ್ಮೂಲ ನಿರ್ವಹಣಾ ವ್ಯವಸ್ಥೆ (HRMS) ಯೊಂದಿಗೆ ಸಂಯೋಜಿಸಲಾಗಿದೆ.

ಮೊಬೈಲ್ ಆಪ್ ಮತ್ತು ರಜೆ ನಿರ್ವಹಣೆ –  ಆಂಡ್ರಾಯ್ಡ್ ಮತ್ತು ಐಒಎಸ್ ಆಪ್‌ಗಳ ಮೂಲಕ ಹಾಜರಾತಿ, ರಜೆ ಮತ್ತು ಅಧಿಕೃತ ಹೊರಗಿನ ಕೆಲಸದ (OOD) ವಿವರಗಳನ್ನು ದಾಖಲಿಸುವ ಸೌಲಭ್ಯವಿದೆ.

ಇಲಾಖೆಗಳಲ್ಲಿ ದಾಖಲೆ ವೇಗದ ಅನುಷ್ಠಾನ

​ಮುಖ್ಯಮಂತ್ರಿಗಳ ಕಟ್ಟುನಿಟ್ಟಿನ ಆದೇಶದ ಬೆನ್ನಲ್ಲೇ ಈ ತಂತ್ರಜ್ಞಾನವು ಇಲಾಖೆಗಳಲ್ಲಿ ಅತ್ಯಂತ ವೇಗವಾಗಿ ಅನುಷ್ಠಾನಗೊಳ್ಳುತ್ತಿದೆ.

ಕಳೆದ ವಾರ ಅಂದಾಜು 2,46,000 ರಷ್ಟಿದ್ದ ಒಟ್ಟು ನೋಂದಾಯಿತ ಉದ್ಯೋಗಿಗಳ ಸಂಖ್ಯೆ ಪ್ರಸ್ತುತ ವಾರದಲ್ಲಿ 3,01,034 ಕ್ಕೆ ಏರಿಕೆಯಾಗಿದೆ. ಇದು ಕೇವಲ ಒಂದೇ ವಾರದಲ್ಲಿ ಶೇಕಡಾ 25% ಕ್ಕಿಂತಲೂ ಹೆಚ್ಚು (55,000ಕ್ಕೂ ಅಧಿಕ ಹೊಸ ಸೇರ್ಪಡೆ) ಬೆಳವಣಿಗೆಯಾಗಿದೆ. ಇದೇ ಅವಧಿಯಲ್ಲಿ, ಆ್ಯಪ್ ಮೂಲಕ ಪ್ರತಿದಿನ ದಾಖಲಾಗುವ ದೈನಂದಿನ ಹಾಜರಾತಿ ಸಂಖ್ಯೆಯು ಸಹ 1,85,308 ರಿಂದ 2,32,612 ಕ್ಕೆ ಜಿಗಿದಿದ್ದು, ಸಕ್ರಿಯ ಬಳಕೆಯಲ್ಲಿ ಶೇಕಡಾ 25% ರಷ್ಟು ಭಾರಿ ಏರಿಕೆ ದಾಖಲಾಗಿದೆ.

ಪ್ರಸ್ತುತ 42 ಇಲಾಖೆಗಳ 4,78,522 ನೌಕರರನ್ನು ಈ ವ್ಯವಸ್ಥೆಗೆ ಒಳಪಡಿಸಲಾಗಿದ್ದು, ಈ ಪೈಕಿ 3.01 ಲಕ್ಷಕ್ಕೂ  ಹೆಚ್ಚು ಉದ್ಯೋಗಿಗಳು ಈಗಾಗಲೇ ನೋಂದಾಯಿಸಿಕೊಂಡಿದ್ದಾರೆ. ಕೇವಲ ಒಂದೇ ವಾರದಲ್ಲಿ ನೋಂದಣಿ ಪ್ರಕ್ರಿಯೆಯಲ್ಲಿ ಶೇಕಡಾ 25 ರಷ್ಟು ಅಭೂತಪೂರ್ವ ಪ್ರಗತಿ ಕಂಡುಬಂದಿದೆ.

ಶಾಲಾ ಶಿಕ್ಷಣ ಇಲಾಖೆ: ಒಟ್ಟು 1,76,055 ಉದ್ಯೋಗಿಗಳಲ್ಲಿ ಈಗಾಗಲೇ 1,68,252 ನೌಕರರು ನೋಂದಾಯಿಸಿಕೊಂಡಿದ್ದು, 1,41,800ಕ್ಕೂ ಹೆಚ್ಚು ದೈನಂದಿನ ಚೆಕ್-ಇನ್‌ಗಳೊಂದಿಗೆ ಮೊದಲ ಸ್ಥಾನದಲ್ಲಿದೆ

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ: 66,969 ನೋಂದಣಿ ಹಾಗೂ 54,400ಕ್ಕೂ ಹೆಚ್ಚು ದೈನಂದಿನ ಹಾಜರಾತಿಯೊಂದಿಗೆ ಎರಡನೇ ಸ್ಥಾನದಲ್ಲಿದೆ.

​ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಶಾಲಾ ಶಿಕ್ಷಣ ಇಲಾಖೆಗಳಲ್ಲಿ ಪ್ರಾಯೋಗಿಕವಾಗಿ ಯಶಸ್ವಿಯಾದ ನಂತರ, ಶಾಲಾ ಶಿಕ್ಷಣ ಇಲಾಖೆಯ ಸಿಬ್ಬಂದಿ ಇದನ್ನು ಸಕ್ರಿಯವಾಗಿ ಬಳಸುತ್ತಿದ್ದಾರೆ. ಇನ್ನುಳಿದ ಹಲವು ಇಲಾಖೆಗಳು ಈಗಾಗಲೇ ಶೇಕಡಾ 90 ಕ್ಕಿಂತ ಹೆಚ್ಚು ನೋಂದಣಿ ಮೈಲಿಗಲ್ಲನ್ನು ದಾಟಿವೆ.

ಇತರ ಇಲಾಖೆಗಳು: ಪದವಿ ಪೂರ್ವ ಮಂಡಳಿ, ಆಯುಷ್ (AYUSH), ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಮತ್ತು ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಗಳು ಈಗಾಗಲೇ 90% ಕ್ಕಿಂತ ಹೆಚ್ಚು ನೋಂದಣಿ ಗುರಿಯನ್ನು ಯಶಸ್ವಿಯಾಗಿ ತಲುಪಿವೆ.

“ಮುಖ್ಯಮಂತ್ರಿಗಳು, ಮುಖ್ಯ ಕಾರ್ಯದರ್ಶಿಗಳು ಮತ್ತು ಜಿಲ್ಲಾ ಮಟ್ಟದಲ್ಲಿ ಡಿಸಿ/ಸಿಇಒಗಳು ದಿನನಿತ್ಯ ಈ ವ್ಯವಸ್ಥೆಯ ಡ್ಯಾಶ್‌ಬೋರ್ಡ್ ಅನ್ನು ಮೇಲ್ವಿಚಾರಣೆ ಮಾಡುತ್ತಿದ್ದಾರೆ. ಕಚೇರಿ ಅವಧಿಯಲ್ಲಿ ಅಧಿಕಾರಿಗಳು ಸಾರ್ವಜನಿಕರಿಗೆ ಸಿಗದಿರುವ ಬಗ್ಗೆ ನಾಗರಿಕರು ನೀಡುವ ಪ್ರತಿಕ್ರಿಯೆ (Feedback) ಈ ಸುಶಾಸನದ ಗುರಿಯನ್ನು ತಲುಪಲು ಪ್ರಮುಖ ಪಾತ್ರ ವಹಿಸಲಿದೆ.”

ಸಾರ್ವಜನಿಕರಿಗೆ ಸಿಗಲಿದೆ ಉತ್ತಮ ಸೇವೆ:

ಸಾರ್ವಜನಿಕ ಸೇವೆಗೆ ಹೊಸ ವೇಗ

​ಮೊಬೈಲ್ ಮೂಲಕವೇ ಹಾಜರಾತಿ ದಾಖಲಿಸುವ ಸೌಲಭ್ಯ ಇರುವುದರಿಂದ ಕಚೇರಿಗಳ ಮುಂಭಾಗದಲ್ಲಿ ಬಯೋಮೆಟ್ರಿಕ್‌ಗಾಗಿ ಸಾಲಿನಲ್ಲಿ ನಿಲ್ಲುವುದು ತಪ್ಪಿದೆ ಎಂದು ಸರ್ಕಾರಿ ನೌಕರರು ಸಂತಸ ವ್ಯಕ್ತಪಡಿಸಿದ್ದಾರೆ.

​”ಕರ್ತವ್ಯ ಆ್ಯಪ್ ಪ್ರತಿಯೊಬ್ಬ ಸರ್ಕಾರಿ ನೌಕರನೂ ತನ್ನ ಜವಾಬ್ದಾರಿಯನ್ನು ಹೆಮ್ಮೆ, ಶಿಸ್ತು ಮತ್ತು ನಿರ್ದಿಷ್ಟ ಉದ್ದೇಶದೊಂದಿಗೆ ನಿರ್ವಹಿಸಲು ಶಕ್ತಿ ತುಂಬುತ್ತಿದೆ”.

​ಅಂತಿಮವಾಗಿ, ಕಚೇರಿಗಳಲ್ಲಿ ಅಧಿಕಾರಿಗಳ ಭೌತಿಕ ಲಭ್ಯತೆ ಮತ್ತು ವಿಶ್ವಾಸಾರ್ಹತೆಯನ್ನು ಖಾತರಿಪಡಿಸುವ ಮೂಲಕ ಸಾರ್ವಜನಿಕರಿಗೆ ಸಿಗುವ ಸೇವೆಗಳು ಇನ್ನು ಮುಂದೆ ಹೆಚ್ಚು ಸುಲಭ ಹಾಗೂ ತಡೆರಹಿತವಾಗಲಿವೆ. ಈ ಮೂಲಕ ಕರ್ನಾಟಕವು ಡಿಜಿಟಲ್ ಆಡಳಿತ ಮತ್ತು ನಾಗರಿಕ ಕೇಂದ್ರಿತ ಸುಧಾರಣೆಯಲ್ಲಿ ದೇಶದಲ್ಲೇ ಮುಂಚೂಣಿ ರಾಜ್ಯವಾಗಿ ಹೊರಹೊಮ್ಮಿದೆ ಎಂದು ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Share this with Friends

Related Post