Tue. Jun 16th, 2026

ಸರ್ಕಾರಿ ಆಂಗ್ಲ ಮಾಧ್ಯಮ ವಿದ್ಯಾರ್ಥಿಗಳ ಭವಿಷ್ಯ ಸುರಕ್ಷಿತ: ಮಾಜಿ ಸಚಿವ ಮಧು ಬಂಗಾರಪ್ಪ ಅಭಯ

Share this with Friends

ಬೆಂಗಳೂರು: ರಾಜ್ಯದ ಸರ್ಕಾರಿ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಗಳಲ್ಲಿ ಏಳನೇ ತರಗತಿ ಮುಗಿಸಿ ಹೊರಬರುತ್ತಿರುವ ವಿದ್ಯಾರ್ಥಿಗಳ ಮುಂದಿನ ವಿದ್ಯಾಭ್ಯಾಸದ ಕುರಿತು ಸೃಷ್ಟಿಯಾಗಿರುವ ಗೊಂದಲಗಳಿಗೆ ತೆರೆ ಎಳೆದಿರುವ ಮಾಜಿ ಸಚಿವ ಮಧು ಬಂಗಾರಪ್ಪ, ಮಕ್ಕಳ ಭವಿಷ್ಯ ಅತಂತ್ರವಾಗದಂತೆ ಇಲಾಖೆಯು ಮೊದಲೇ ಪರ್ಯಾಯ ಸಿದ್ಧತೆಗಳನ್ನು ಮಾಡಿಕೊಂಡಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಈ ಕುರಿತು ಮಾಧ್ಯಮಗಳಿಗೆ‌ ಪ್ರತಿಕ್ರಿಯೆ ನೀಡಿದ‌ ಅವರು,ಗ್ರಾಮೀಣ ಮತ್ತು ಹಿಂದುಳಿದ ಭಾಗದ ಬಡ ವಿದ್ಯಾರ್ಥಿಗಳಿಗೆ ಗುಣಮಟ್ಟದ ಇಂಗ್ಲಿಷ್ ಶಿಕ್ಷಣ ನೀಡುವ ಉದ್ದೇಶದಿಂದ ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ವಿಭಾಗಗಳನ್ನು ಆರಂಭಿಸಲಾಗಿತ್ತು. ಪ್ರಸ್ತುತ 7ನೇ ತರಗತಿ ಮುಗಿಸಿ ಹೊರಬರುತ್ತಿರುವ ಸುಮಾರು 30 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಮುಂದಿನ 8ನೇ ತರಗತಿಯ ಪ್ರವೇಶಕ್ಕಾಗಿ ಸೂಕ್ತ ಪ್ರೌಢಶಾಲೆಗಳಿಲ್ಲದೆ ಪೋಷಕರಲ್ಲಿ ಆತಂಕ ಎದುರಾಗಿರುವುದು ನಮ್ಮ ಸರ್ಕಾರದ ಗಮನದಲ್ಲಿದೆ ಹಾಗಾಗಿ ಪೋಷಕರು ಆತಂಕಪಡಬೇಕಿಲ್ಲ ಎಂದರು.

ಇಲಾಖೆ ಕೈಗೊಂಡಿರುವ ಪ್ರಮುಖ ತೀರ್ಮಾನಗಳು:

ಶಾಲೆಗಳ ದರ್ಜೆ ಏರಿಕೆ: ವಿದ್ಯಾರ್ಥಿಗಳು ಪ್ರಸ್ತುತ ಕಲಿಯುತ್ತಿರುವ ಸರ್ಕಾರಿ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಗಳನ್ನೇ ತಕ್ಷಣದಿಂದ ಜಾರಿಗೆ ಬರುವಂತೆ 8ನೇ ತರಗತಿಯವರೆಗೆ ಮೇಲ್ದರ್ಜೆಗೆ ಏರಿಸಲು ಮತ್ತು ಅಲ್ಲಿಯೇ ಮುಂದುವರಿದ ತರಗತಿಗಳನ್ನು ಆರಂಭಿಸಲು ಅಧಿಕಾರಿಗಳಿಗೆ ಆದೇಶ ನೀಡಲಾಗಿದೆ.

ಸ್ಥಳೀಯ ಶಾಲೆಗಳಲ್ಲಿ ದಾಖಲಾತಿ: ಒಂದು ವೇಳೆ ಮೂಲ ಶಾಲೆಯಲ್ಲಿ ತಾಂತ್ರಿಕ ತೊಂದರೆಗಳಿದ್ದರೆ, ವಿದ್ಯಾರ್ಥಿಗಳ ಮನೆಯಿಂದ ಕೇವಲ 2 ಕಿಲೋಮೀಟರ್ ವ್ಯಾಪ್ತಿಯೊಳಗೆ ಲಭ್ಯವಿರುವ ಇತರ ಸರ್ಕಾರಿ ಆಂಗ್ಲ ಮಾಧ್ಯಮ ಪ್ರೌಢಶಾಲೆಗಳಲ್ಲಿ ಈ ಮಕ್ಕಳಿಗೆ ಯಾವುದೇ ಗೊಂದಲವಿಲ್ಲದೆ ಕಡ್ಡಾಯವಾಗಿ ಉಚಿತ ಪ್ರವೇಶ ಕಲ್ಪಿಸಲು ಕ್ರಮ ಕೈಗೊಳ್ಳಲಾಗಿದೆ.

ಶೈಕ್ಷಣಿಕ ವರ್ಷ ವ್ಯರ್ಥವಾಗುವುದಿಲ್ಲ: ಬಡ ಮತ್ತು ಮಧ್ಯಮ ವರ್ಗದ ಪೋಷಕರು ತಮ್ಮ ಮಕ್ಕಳ ಭವಿಷ್ಯದ ಬಗ್ಗೆ ಯಾವುದೇ ಆತಂಕ ಪಡುವ ಅಗತ್ಯವಿಲ್ಲ. ಪ್ರತಿಯೊಬ್ಬ ವಿದ್ಯಾರ್ಥಿಗೂ ಇಂಗ್ಲಿಷ್ ಮಾಧ್ಯಮದ ಮುಂದುವರಿದ ಶಿಕ್ಷಣ ಲಭ್ಯವಾಗುವಂತೆ ಮಾಡುವುದು ಸರ್ಕಾರದ ಜವಾಬ್ದಾರಿಯಾಗಿದೆ ಎಂದು ಮಾಜಿ ಸಚಿವರು ಭರವಸೆ ನೀಡಿದ್ದಾರೆ.

ಯೋಜನೆಯ ಹಿನ್ನೆಲೆ ಮತ್ತು ಇತಿಹಾಸ:

ಗ್ರಾಮೀಣ ಮತ್ತು ಹಿಂದುಳಿದ ಭಾಗದ ಬಡ ಹಾಗೂ ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಇಂಗ್ಲಿಷ್ ಶಿಕ್ಷಣ ನೀಡುವ ಉದ್ದೇಶದಿಂದ ರಾಜ್ಯ ಸರ್ಕಾರವು ಕಳೆದ 2018-19ನೇ ಶೈಕ್ಷಣಿಕ ಸಾಲಿನಲ್ಲಿ ಒಂದು ಮಹತ್ವದ ತೀರ್ಮಾನ ಕೈಗೊಂಡಿತ್ತು. ಪ್ರಾಯೋಗಿಕವಾಗಿ ರಾಜ್ಯದ ಸುಮಾರು 1,001 ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಒಂದನೇ ತರಗತಿಯಿಂದಲೇ ಆಂಗ್ಲ ಮಾಧ್ಯಮ ವಿಭಾಗಗಳನ್ನು ಆರಂಭಿಸಲಾಯಿತು.

ಖಾಸಗಿ ಶಾಲೆಗಳ ದುಬಾರಿ ಶುಲ್ಕ ಭರಿಸಲಾಗದ ಸಾವಿರಾರು ಪೋಷಕರು ತಮ್ಮ ಮಕ್ಕಳನ್ನು ಅತ್ಯಂತ ಆಸಕ್ತಿಯಿಂದ ಈ ಸರ್ಕಾರಿ ಇಂಗ್ಲಿಷ್ ಮಾಧ್ಯಮ ಶಾಲೆಗಳಿಗೆ ದಾಖಲಿಸಿದ್ದರು. ಅಂದಿನಿಂದ ಈ ಮಕ್ಕಳು ನಿರಂತರವಾಗಿ ಸರ್ಕಾರಿ ಶಾಲೆಗಳಲ್ಲೇ ಇಂಗ್ಲಿಷ್ ಮಾಧ್ಯಮದಲ್ಲಿ ವ್ಯಾಸಂಗ ಮಾಡುತ್ತಾ ಬಂದಿದ್ದಾರೆ.

ಪ್ರಸ್ತುತ ಎದುರಾಗಿರುವ ಗೊಂದಲವೇನು?

ಪ್ರಸ್ತುತ ಈ ಯೋಜನೆಯಡಿ ದಾಖಲಾಗಿದ್ದ ಸುಮಾರು 30 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಯಶಸ್ವಿಯಾಗಿ 7ನೇ ತರಗತಿ ಪೂರ್ಣಗೊಳಿಸಿ ಹೊರಬರುತ್ತಿದ್ದಾರೆ. ಆದರೆ, ಇವರು ಮುಂದಿನ 8ನೇ ತರಗತಿಯ ಮುಂದುವರಿದ ವಿದ್ಯಾಭ್ಯಾಸಕ್ಕಾಗಿ ಹೋಗಲು ರಾಜ್ಯದ ಬಹುತೇಕ ಸರ್ಕಾರಿ ಪ್ರೌಢಶಾಲೆಗಳಲ್ಲಿ ಆಂಗ್ಲ ಮಾಧ್ಯಮದ ವಿಭಾಗಗಳೇ ಲಭ್ಯವಿರಲಿಲ್ಲ. ಇದರಿಂದಾಗಿ ಮಕ್ಕಳ ಮುಂದಿನ ವಿದ್ಯಾಭ್ಯಾಸ ಅರ್ಧಕ್ಕೆ ನಿಲ್ಲುತ್ತದೆಯೇ ಅಥವಾ ಮತ್ತೆ ಕನ್ನಡ ಮಾಧ್ಯಮಕ್ಕೆ ಬದಲಾಗಬೇಕಾಗುತ್ತದೆಯೇ ಎಂಬ ತೀವ್ರ ಆತಂಕ ಪೋಷಕರಲ್ಲಿ ಮತ್ತು ವಿದ್ಯಾರ್ಥಿಗಳಲ್ಲಿ ಸೃಷ್ಟಿಯಾಗಿತ್ತು.

 

 


Share this with Friends

Related Post