Tue. Jun 16th, 2026

ಆರ್‌ಎಸ್‌ಎಸ್ ಪ್ರಶ್ನಿಸಲು ಕಾಂಗ್ರೆಸ್‌ಗೆ ಯೋಗ್ಯತೆಯಿಲ್ಲ: ಪ್ರಿಯಾಂಕ್ ಖರ್ಗೆ ವಿರುದ್ಧ ಆರ್. ಅಶೋಕ್ ತೀವ್ರ ವಾಗ್ದಾಳಿ

R.Ashok
Share this with Friends

ಬೆಂಗಳೂರು:ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಕಾನೂನುಬದ್ಧತೆ ಮತ್ತು ದೇಶನಿಷ್ಠೆಯನ್ನು ಪ್ರಶ್ನಿಸಿರುವ ಸಚಿವ ಪ್ರಿಯಾಂಕ್ ಖರ್ಗೆ ಅವರ ಹೇಳಿಕೆಗೆ ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಆರ್. ಅಶೋಕ್ ಅವರು ಸಾಮಾಜಿಕ ಜಾಲತಾಣದ ಮೂಲಕ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ದೇಶದ್ರೋಹಿಗಳ ರಕ್ಷಕರಿಗೆ ಹಾಗೂ ದೇಶ ವಿಭಜಕರ ಮಿತ್ರರಿಗೆ ಆರ್‌ಎಸ್‌ಎಸ್ ಅನ್ನು ಪ್ರಶ್ನಿಸುವ ಯಾವುದೇ ನೈತಿಕತೆ ಇಲ್ಲ” ಎಂದು ಅವರು ಕಡಕ್ ಆಗಿ ತಿರುಗೇಟು ನೀಡಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅಶೋಕ್,ಕೇವಲ ಅಧಿಕಾರದ ಹಪಾಹಪಿಯಿಂದಾಗಿ ದೇಶದ ವಿಭಜನೆಗೆ ಕಾರಣವಾದ ಮುಸ್ಲಿಂ ಲೀಗ್‌ನಂತಹ ಅತ್ಯಂತ ವಿಭಜನಕಾರಿ ಮತ್ತು ದೇಶವಿರೋಧಿ ಸಂಘಟನೆಯೊಂದಿಗೆ ಕಾಂಗ್ರೆಸ್ ಮೈತ್ರಿ ಮಾಡಿಕೊಂಡಿದೆ. ಅಂತಹ ಸಂಘಟನೆಯೊಂದಿಗೆ ಕೈಜೋಡಿಸಿ ಎರಡೆರಡು ರಾಜ್ಯಗಳಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ, ಕಳೆದ ನೂರು ವರ್ಷಗಳಿಂದ ನಿಸ್ವಾರ್ಥವಾಗಿ ಭಾರತಾಂಬೆಯ ಸೇವೆಯಲ್ಲಿ ತೊಡಗಿಸಿಕೊಂಡಿರುವ ರಾಷ್ಟ್ರಭಕ್ತ ಸಂಘಟನೆ ಆರ್‌ಎಸ್‌ಎಸ್ ಬಗ್ಗೆ ಮಾತನಾಡುವ ಅರ್ಹತೆ ಎಲ್ಲಿದೆ ಎಂದು ಅಶೋಕ್ ಪ್ರಶ್ನಿಸಿದ್ದಾರೆ.

ವಿಧಾನಸೌಧದ ಘಟನೆ ನೆನಪಿಸಿದ ಅಶೋಕ್

ಪ್ರಜಾಪ್ರಭುತ್ವದ ಪವಿತ್ರ ದೇಗುಲವಾದ ವಿಧಾನಸೌಧದ ಮುಂದೆಯೇ ದೇಶವಿರೋಧಿಗಳು ‘ಪಾಕಿಸ್ತಾನ್ ಜಿಂದಾಬಾದ್’ ಎಂದು ಅಟ್ಟಹಾಸದಿಂದ ಘೋಷಣೆ ಕೂಗಿದರೂ, ಸಚಿವ ಪ್ರಿಯಾಂಕ್ ಖರ್ಗೆ ಅವರು ಕಣ್ಣು-ಕಿವಿ ಮುಚ್ಚಿ ಕುಳಿತುಕೊಂಡಿದ್ದರು. ಯಾವುದೇ ಕಠಿಣ ಕ್ರಮ ಕೈಗೊಳ್ಳದೆ ಉದ್ಧಟತನದಿಂದ ಅವರ ರಕ್ಷಣೆಗೆ ನಿಂತ ಇಂತಹ ದೇಶದ್ರೋಹಿ ಮಾನಸಿಕತೆಯುಳ್ಳವರು, ಆರ್‌ಎಸ್‌ಎಸ್‌ನ ದೇಶನಿಷ್ಠೆಯನ್ನು ಪ್ರಶ್ನೆ ಮಾಡುತ್ತಿರುವುದು ಹಾಸ್ಯಾಸ್ಪದ ಮತ್ತು ನಾಚಿಕೆಗೇಡಿನ ಪರಮಾವಧಿ ಎಂದು ಕಿಡಿಕಾರಿದ್ದಾರೆ.

ಹೈಕಮಾಂಡ್ ಓಲೈಕೆ ಮತ್ತು ಸಿಎಂ ಹುದ್ದೆಯ ಆಸೆ

“ಮುಂದಿನ 2028ರ ವಿಧಾನಸಭಾ ಚುನಾವಣೆಯಲ್ಲಿ ತಾನೇ ಕಾಂಗ್ರೆಸ್‌ನ ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿ ಆಗಬೇಕೆಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಹಗಲುಗನಸು ಕಾಣುತ್ತಿದ್ದಾರೆ. ಅವರಿಗೆ ಸದ್ದಿಲ್ಲದಂತೆ ಸೆಡ್ಡು ಹೊಡೆಯಲು ಪ್ರಿಯಾಂಕ್ ಖರ್ಗೆ ಅವರು ಇಂತಹ ರಾಜಕೀಯ ತಂತ್ರಗಾರಿಕೆ ನಡೆಸುತ್ತಿದ್ದಾರೆ” ಎಂದು ಅಶೋಕ್ ಲೇವಡಿ ಮಾಡಿದ್ದಾರೆ. ದೆಹಲಿಯ ಗಾಂಧಿ ಹೈಕಮಾಂಡ್ ಅನ್ನು ಮೆಚ್ಚಿಸಿ ತಾನೇ ಮುಖ್ಯಮಂತ್ರಿ ಅಭ್ಯರ್ಥಿ ಆಗಬೇಕೆಂಬ ದುರಾಸೆಯಿಂದ ಪ್ರಿಯಾಂಕ್ ಖರ್ಗೆ ಆರ್‌ಎಸ್‌ಎಸ್ ಅನ್ನು ಬೆದರು ಬೊಂಬೆ ಮಾಡಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.

ಸಮಾಜದಲ್ಲಿ ವಿವಾದ ಸೃಷ್ಟಿಸುವ ಒಳಸಂಚು

ಸದಾ ಸಮಾಜದಲ್ಲಿ ಸೈದ್ಧಾಂತಿಕ ವಿವಾದಗಳನ್ನು ಸೃಷ್ಟಿಸಿ, ಪರಸ್ಪರರ ಮಧ್ಯೆ ಬಿರುಕು ಮೂಡಿಸಿ ತನ್ನ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಸಚಿವರು ಈ ಕುತಂತ್ರ ನಡೆಸುತ್ತಿದ್ದಾರೆ. ಆದರೆ ಇವರ ಈ ಒಳಸಂಚು ಪ್ರಜ್ಞಾವಂತ ಕನ್ನಡಿಗರಿಗೆ ಚೆನ್ನಾಗಿ ಅರ್ಥವಾಗುತ್ತದೆ ಎಂದು ಆರ್. ಅಶೋಕ್ ತೀವ್ರವಾಗಿ ವಾಗ್ದಾಳಿ ನಡೆಸಿದ್ದಾರೆ.

ಅಭಿವೃದ್ಧಿಯಲ್ಲಿ ಶೂನ್ಯ ಸಾಧನೆ ಮುಚ್ಚಿಡಲು ಪ್ರಿಯಾಂಕ್ ಖರ್ಗೆ ಆರ್‌ಎಸ್‌ಎಸ್ ಜಪ: 

ತಮಗೆ ಈವರೆಗೂ ವಹಿಸಿಕೊಡಲಾಗಿದ್ದ ಐಟಿ-ಬಿಟಿ, ಗ್ರಾಮೀಣಾಭಿವೃದ್ಧಿ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನ ಸೇರಿದಂತೆ ಪ್ರತಿಯೊಂದು ಇಲಾಖೆಯ ಜವಾಬ್ದಾರಿಯಲ್ಲೂ ಪ್ರಿಯಾಂಕ್ ಖರ್ಗೆ ಅವರು ಸಂಪೂರ್ಣವಾಗಿ ವಿಫಲರಾಗಿದ್ದಾರೆ. ಅಭಿವೃದ್ಧಿ ವಿಚಾರದಲ್ಲಿ ಶೂನ್ಯ ಸಾಧನೆ ಮಾಡಿರುವ ಇವರು, ಕರ್ನಾಟಕದ ಇತಿಹಾಸದಲ್ಲೇ ಅತ್ಯಂತ ‘ಅಟ್ಟರ್ ಫ್ಲಾಪ್’ ಸಚಿವ ಎನಿಸಿಕೊಂಡಿದ್ದಾರೆ ಎಂದು ಅಶೋಕ್ ಲೇವಡಿ ಮಾಡಿದ್ದಾರೆ.

ಗೃಹ ಇಲಾಖೆ ಬಳಸಿ ಹೈಕಮಾಂಡ್ ಗಮನ ಸೆಳೆಯುವ ಹಪಾಹಪಿ

ತಮ್ಮ ಇಲಾಖೆಗಳಲ್ಲಿ ಯಾವುದೇ ಸಾಧನೆ ಮಾಡದ ಸಚಿವರು, ಈಗ ಹೇಗಾದರೂ ಮಾಡಿ ಗೃಹ ಇಲಾಖೆಯನ್ನು ಬಳಸಿಕೊಂಡು ದೆಹಲಿ ಹೈಕಮಾಂಡ್ ಗಮನ ಸೆಳೆಯಬೇಕು ಎಂಬ ಹಪಾಹಪಿಗೆ ಬಿದ್ದಿದ್ದಾರೆ. ಅದಕ್ಕಾಗಿಯೇ ಅವರು ದಿನದ 24 ಗಂಟೆಯೂ ‘ಆರ್ ಎಸ್ಎಸ್ ಜಪ’ ಮಾಡುತ್ತಾ, ಏನಕೇನ ಪ್ರಕಾರೇನ ಮಾಧ್ಯಮಗಳಲ್ಲಿ ಮತ್ತು ಸೋಷಿಯಲ್ ಮೀಡಿಯಾಗಳಲ್ಲಿ ಸದಾ ಸುದ್ದಿಯಲ್ಲಿರಲು ಹತಾಶ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಆರ್. ಅಶೋಕ್ ಕಿಡಿಕಾರಿದ್ದಾರೆ.

ಜನತೆಯಿಂದ ತಕ್ಕ ಪಾಠ ನಿಶ್ಚಿತ

ಸಚಿವರ ಇಂತಹ ಸವಕಲು ರಾಜಕೀಯ ತಂತ್ರಗಳಿಗೆ ಹಾಗೂ ದೇಶವಿರೋಧಿ ಧೋರಣೆಗಳಿಗೆ ಕರ್ನಾಟಕದ ಪ್ರಬುದ್ಧ ಮತ್ತು ಪ್ರಜ್ಞಾವಂತ ಜನತೆ ಮುಂದಿನ ದಿನಗಳಲ್ಲಿ ಖಂಡಿತವಾಗಿಯೂ ತಕ್ಕ ಪಾಠ ಕಲಿಸಲಿದ್ದಾರೆ ಎಂದು ವಿರೋಧ ಪಕ್ಷದ ನಾಯಕರು ಎಚ್ಚರಿಸಿದ್ದಾರೆ.

 


Share this with Friends

Related Post