ನವದೆಹಲಿ: ದೊಡ್ಡ ಮಟ್ಟದ ಸಾರ್ವಜನಿಕ ಸಜ್ಜುಗೊಳಿಸುವಿಕೆ ಹಾಗೂ ಗಣವೇಶಧಾರಿ ಪಥಸಂಚಲನಗಳನ್ನು “ಖಾಸಗಿ ಅಥವಾ ಅನೌಪಚಾರಿಕ ವ್ಯವಸ್ಥೆ” ಎಂದು ಪರಿಗಣಿಸಲು ಸಾಧ್ಯವಿಲ್ಲ. ಇದಕ್ಕೆ ಸಂಬಂಧಿಸಿದ ಆಡಳಿತಾತ್ಮಕ ಅನುಮತಿಗಳ ವಿವರಗಳನ್ನು ಒದಗಿಸಬೇಕು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ನೋಂದಣಿ, ಆರ್ಥಿಕ ಮೂಲ ಹಾಗೂ ಸಾರ್ವಜನಿಕ ಚಟುವಟಿಕೆಗಳ ಕಾನೂನುಬದ್ಧತೆಯನ್ನು ಪ್ರಶ್ನಿಸಿ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರಿಗೆ ಪತ್ರ ಬರೆದಿದ್ದನ್ನು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಸಮರ್ಥಿಸಿಕೊಂಡಿದ್ದಾರೆ.
ನವದೆಹಲಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶಾದ್ಯಂತ 60,000ಕ್ಕೂ ಹೆಚ್ಚು ದೈನಂದಿನ ಶಾಖೆಗಳು ಹಾಗೂ ಕೋಟ್ಯಂತರ ಸ್ವಯಂಸೇವಕರನ್ನು ಹೊಂದಿರುವ ಇಷ್ಟು ದೊಡ್ಡ ಸಂಘಟನೆಯು ಯಾವ ಕಾನೂನಿನ ಆಧಾರದ ಮೇಲೆ ಔಪಚಾರಿಕ ನೋಂದಣಿ (Registration) ಇಲ್ಲದೆ ಇಷ್ಟೊಂದು ವ್ಯಾಪಕವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಸಚಿವರು ಪ್ರಶ್ನಿಸಿದ್ದಾರೆ. ಸಾಮಾನ್ಯ ನಾಗರಿಕರು, ಎನ್‌ಜಿಒಗಳು, ಟ್ರಸ್ಟ್‌ಗಳು ಮತ್ತು ಕಾರ್ಮಿಕ ಸಂಘಟನೆಗಳು ಸರ್ಕಾರದ ನಿಯಮಾವಳಿಗಳ ಪ್ರಕಾರ ನೋಂದಣಿ ಮಾಡಿಕೊಳ್ಳುವುದು ಕಡ್ಡಾಯವಾಗಿರುವಾಗ ಆರ್‌ಎಸ್‌ಎಸ್‌ಗೆ ಮಾತ್ರ ಏಕೆ ವಿನಾಯಿತಿ ಎಂದು ಕೇಳಿದ್ದಾರೆ.
ಆರ್ಥಿಕ ಮತ್ತು ಆಸ್ತಿ ವಿವರಗಳ ಬಹಿರಂಗಕ್ಕೆ ಆಗ್ರಹ
ಸಂಘಟನೆಯ ಒಟ್ಟು ಆಸ್ತಿ ಎಷ್ಟು, ಅದಕ್ಕೆ ಬರುವ ದೇಣಿಗೆಯ ಮೂಲಗಳೇನು, ಆರ್ಥಿಕ ವೆಚ್ಚಗಳು ಹೇಗೆ ನಡೆಯುತ್ತವೆ ಮತ್ತು ಚಾಲ್ತಿಯಲ್ಲಿರುವ ತೆರಿಗೆ ಕಾನೂನುಗಳ ಪ್ರಕಾರ ತೆರಿಗೆ ಪಾವತಿಸಲಾಗುತ್ತಿದೆಯೇ ಎಂಬ ಸಂಪೂರ್ಣ ವಿವರಗಳನ್ನು ಸಾರ್ವಜನಿಕವಾಗಿ ಇಡಬೇಕು ಎಂದು ಪ್ರಿಯಾಂಕ್ ಖರ್ಗೆ ಒತ್ತಾಯಿಸಿದ್ದಾರೆ. ಆದಾಯ-ವೆಚ್ಚಗಳ ಪಾರದರ್ಶಕತೆ ಕಾಯ್ದುಕೊಳ್ಳುವುದು ಯಾವುದೇ ದೊಡ್ಡ ಸಂಸ್ಥೆಯ ಜವಾಬ್ದಾರಿಯಾಗಿದೆ ಎಂದಿದ್ದಾರೆ.
ಪಥಸಂಚಲನಗಳನ್ನು “ಖಾಸಗಿ ವ್ಯವಸ್ಥೆ” ಎನ್ನಲು ಸಾಧ್ಯವಿಲ್ಲ
ಆರ್‌ಎಸ್‌ಎಸ್‌ನ ಅಖಿಲ ಭಾರತೀಯ ಪ್ರತಿನಿಧಿ ಸಭೆಯ ವರದಿಯನ್ನೇ ಉಲ್ಲೇಖಿಸಿದ ಸಚಿವರು, ಕರ್ನಾಟಕವೊಂದರಲ್ಲೇ 4,127 ದೈನಂದಿನ ಶಾಖೆಗಳು, 1,389 ವಾರಾಂತರ ಸಭೆಗಳು ಹಾಗೂ 500ಕ್ಕೂ ಹೆಚ್ಚು ಪಥಸಂಚಲನಗಳು ಜರುಗುತ್ತಿವೆ. ಇಷ್ಟು ದೊಡ್ಡ ಮಟ್ಟದ ಸಾರ್ವಜನಿಕ ಸಜ್ಜುಗೊಳಿಸುವಿಕೆ ಹಾಗೂ ಗಣವೇಶಧಾರಿ ಪಥಸಂಚಲನಗಳನ್ನು “ಖಾಸಗಿ ಅಥವಾ ಅನೌಪಚಾರಿಕ ವ್ಯವಸ್ಥೆ” ಎಂದು ಪರಿಗಣಿಸಲು ಸಾಧ್ಯವಿಲ್ಲ. ಇದಕ್ಕೆ ಸಂಬಂಧಿಸಿದ ಆಡಳಿತಾತ್ಮಕ ಅನುಮತಿಗಳ ವಿವರಗಳನ್ನು ಒದಗಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ನೂರನೇ ವರ್ಷದಲ್ಲಿ ಪಾರದರ್ಶಕತೆ ತೋರಲಿ
“ಆರ್‌ಎಸ್‌ಎಸ್ ಸ್ಥಾಪನೆಯಾಗಿ 100ನೇ ವರ್ಷಕ್ಕೆ ಕಾಲಿಡುತ್ತಿರುವ ಈ ಸಂದರ್ಭದಲ್ಲಿ ಸಂಘಟನೆಯು ಕಾನೂನುಬದ್ಧವಾಗಿ ನೋಂದಾಯಿಸಿಕೊಂಡು, ಪಾರದರ್ಶಕತೆಯಿಂದ ಕಾರ್ಯನಿರ್ವಹಿಸುವುದೇ ದೇಶಕ್ಕೆ ನೀಡುವ ಅತ್ಯುತ್ತಮ ಕೊಡುಗೆಯಾಗಿದೆ” ಎಂದು ಪ್ರಿಯಾಂಕ್ ಖರ್ಗೆ ಆಭಿಪ್ರಾಯಪಟ್ಟರು. ದೇಶದ ಪ್ರತಿಯೊಂದು ಸಣ್ಣ ಸಂಘಟನೆಯೂ ನಿಯಮಗಳನ್ನು ಪಾಲಿಸುತ್ತಿರುವಾಗ ಆರ್‌ಎಸ್‌ಎಸ್ ಕೂಡ ತನ್ನ ಸಾರ್ವಜನಿಕ ಹೊಣೆಗಾರಿಕೆಯನ್ನು ಪ್ರದರ್ಶಿಸಬೇಕಿದೆ ಎಂದರು.
ಪ್ರಜಾಪ್ರಭುತ್ವದಲ್ಲಿ ಯಾರೂ ಕಾನೂನಿಗಿಂತ ಮಿಗಿಲಲ್ಲ
ನಮ್ಮ ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಯಾರೂ ಕೂಡ ಕಾನೂನಿಗಿಂತ ಮಿಗಿಲಲ್ಲ ಎಂದು ಪುನರುಚ್ಚರಿಸಿದ ಸಚಿವರು, ಇಷ್ಟು ದೊಡ್ಡ ಮಟ್ಟದ ಜನಬಲ ಮತ್ತು ಸಂಪನ್ಮೂಲ ಹೊಂದಿರುವ ಸಂಘಟನೆಯ ಆರ್ಥಿಕ ಪಾರದರ್ಶಕತೆ, ಸಾರ್ವಜನಿಕ ಹೊಣೆಗಾರಿಕೆ ಹಾಗೂ ದೇಶದ ಕಾನೂನುಗಳ ಪಾಲನೆಯ ಬಗ್ಗೆ ಪ್ರಶ್ನಿಸುವುದು ಪ್ರತಿಯೊಬ್ಬ ನಾಗರಿಕನ ಹಕ್ಕಾಗಿದೆ ಎಂದು ಪ್ರತಿಪಾದಿಸಿದರು.

