Fri. Nov 1st, 2024

ವಸ್ತುಪ್ರದರ್ಶನದಲ್ಲಿ ವರ್ಷವಿಡೀ ಚಟುವಟಿಕೆಗೆ ಚಿಂತನೆ:ಅಯೂಬ್ ಖಾನ್

Share this with Friends

ಮೈಸೂರು, ಮಾ.13: ಕರ್ನಾಟಕ ವಸ್ತು ಪ್ರದರ್ಶನದಲ್ಲಿ ವರ್ಷಪೂರ್ತಿ
ಚಟುವಟಿಕೆ ಹಮ್ಮಿಕೊಳ್ಳುವ ಚಿಂತನೆ ಇದೆ ಎಂದು ಪ್ರಾಧಿಕಾರದ ಅಧ್ಯಕ್ಷ ಆಯೂಬ್ ಖಾನ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ದಸರಾ ಸಂದರ್ಭದಲ್ಲಿ ಮಾತ್ರ ವಸ್ತುಪ್ರದರ್ಶನ ಮೂರ್ನಾಲ್ಕು ತಿಂಗಳುಗಳಿಗೆ ಸೀಮಿತವಾಗಿದ್ದು ವರ್ಷಪೂರ್ತಿ ಚಟುವಟಿಕೆಯಿಂದಿರಲು ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ ಎಂದು ಹೇಳಿದರು.

ಇನ್ನು ಮುಂದೆ ಮೈಸೂರಿನ ಇತರೆ ಸ್ಥಳಗಳಲ್ಲಿ ನಡೆಯುವ ವಸ್ತುಪ್ರದರ್ಶನಗಳು ಪ್ರಾಧಿಕಾರದ ಆವರಣದಲ್ಲೇ ಆಯೋಜಿಸಲು ನಿಯಮ ರೂಪಿಸುವಂತೆ ಹಾಗೂ ಬೇರೆ ಬೇರೆ ಮೈದಾನಗಳಲ್ಲಿ ವಸ್ತು ಪ್ರದರ್ಶನ ನಡೆಸಲು ಪರವಾನಾಗಿ ನೀಡಬಾರದೆಂದು ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಿದ್ದೇವೆ ಎಂದು ತಿಳಿಸಿದರು.

ಯಾರೇ ಆಗಲಿ ವಸ್ತು ಪ್ರದರ್ಶನದ ಮಳಿಗೆಗಳನ್ನು ವಸ್ತು ಪ್ರದರ್ಶನ ಪ್ರಧಿಕಾರದ ಅವರಣದಲ್ಲಿಯೇ ಇಡಬೇಕು. ಅದಕ್ಕೆ ಬೇಕಾಗುವ ಎಲ್ಲಾ ಸೌಲಭ್ಯಗಳನ್ನು ಒದಗಿಸುವ ಜವಾಬ್ದಾರಿ ಪ್ರಾಧಿಕಾರದ್ದಾಗಿದೆ ಎಂದು ಭರವಸೆ ನೀಡಿದರು.

ಆಟದ ಮೈದಾನಗಳನ್ನು ಬಳಸಿಕೊಂಡು ಪ್ರದರ್ಶನ ಆಯೋಜಿಸುವುದರಿಂದ ಕ್ರೀಡಾರ್ಥಿಗಳಿಗೆ, ಪಾರ್ಕಿಂಗ್ ವ್ಯವಸ್ಥೆಗೆ, ಕುಡಿಯುವ ನೀರು, ಟ್ರಾಫಿಕ್ ಇತ್ಯಾದಿ ಮೂಲಭೂತ ಸಮಸ್ಯೆಗಳು ಎದುರಾಗುತ್ತವೆ. ಹಾಗಾಗಿ ನಮ್ಮ ವಸ್ತು ಪ್ರದರ್ಶನ ಆವರಣದಲ್ಲೇ ಎಲ್ಲಾ ಅನುಕೂಲಗಳು ಇರುವುದರಿಂದ ಇನ್ನು ಮುಂದೆ ಯಾವುದೇ ವಸ್ತು ಪ್ರದರ್ಶನವೇ ಆಗಲಿ ಪ್ರದರ್ಶನದ ಆವರಣದಲ್ಲಿಯೇ ಏರ್ಪಡಬೇಕು ಎಂದು ಸೂಚ್ಯವಾಗಿ ಹೇಳಿದರು.

ವಸ್ತು ಪ್ರದರ್ಶನದ ‘ಎ’ ಬ್ಲಾಕ್ ಅನ್ನು ಹೆರಿಟೇಜ್ ವಿನ್ಯಾಸ ಮಾಡಿ, ಪ್ರಸ್ತುತ ಇರುವ ಫೌಂಟೈನ್ ಅನ್ನು ಮ್ಯೂಸಿಕಲ್ ಫೌಂಟೈನ್ ಮಾಡಲಾಗುತ್ತದೆ.

ಮಾರ್ಚ್,ಏಪ್ರಿಲ್ ತಿಂಗಳಲ್ಲಿ ಬೇಸಿಗೆ ಶಿಬಿರವನ್ನು ಏರ್ಪಡಿಸಲಾಗಿದ್ದು, ಆಸಕ್ತರಿಂದ ಅರ್ಜಿಗಳು ದಾಖಲಾಗುತ್ತಿವೆ ಎಂದು ತಿಳಿಸಿದರು.

ದೇಶದಾದ್ಯಂತ ಯೂನಿಟಿ ಮಾಲ್ ಸ್ಥಾಪಿಸಲು ಕೇಂದ್ರ ಸರ್ಕಾರವು ಅನುಧಾನ ಬಿಡುಗಡೆ ಮಾಡಿದ್ದು ಅದರಲ್ಲಿ ರಾಜ್ಯಕ್ಕೆ 193 ಕೋಟಿ ಬಿಡುಗಡೆಯಾಗಿದೆ. ಇದರಿಂದ ಬೆಂಗಳೂರಿನಲ್ಲಿ ಯೂನಿಟಿ ಮಾಲ್ ಸ್ಥಾಪಿಸಬೇಕು ಎಂಬ ಚಿಂತನೆಗಳಿದ್ದು, ಮುಖ್ಯ ಮಂತ್ರಿ ಸಿದ್ದರಾಮಯ್ಯನವರ ಆಶಯದಂತೆ ಮೈಸೂರಿನಲ್ಲೇ ಯೂನಿಟಿ ಮಾಲ್ ಸ್ಥಾಪಿಸಲು ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡಲಾಗುವುದು ಎಂದು ಆಯೂಬ್ ಖಾನ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಪ್ರಾಧಿಕಾರದ ಸಿಇಒ ರಾಜೇಶ್ ಗೌಡ ಉಪಸ್ಥಿತರಿದ್ದರು.


Share this with Friends

Related Post