Mon. Jun 22nd, 2026

ಪ್ರಯಾಣಿಕರ ಸುರಕ್ಷತೆಯೇ ಪರಮ ಆದ್ಯತೆ: ನೈಋತ್ಯ ರೈಲ್ವೆಯಿಂದ ಮಾನ್ಸೂನ್ ಮಾಸ್ಟರ್ ಪ್ಲಾನ್!

Share this with Friends

ಹುಬ್ಬಳ್ಳಿ: ಮುಂಬರುವ ಮಳೆಗಾಲದ ಅವಧಿಯಲ್ಲಿ ರೈಲುಗಳ ಸುರಕ್ಷಿತ ಹಾಗೂ ಸುಗಮ ಸಂಚಾರವನ್ನು ಖಚಿತಪಡಿಸಿಕೊಳ್ಳಲು ನೈಋತ್ಯ ರೈಲ್ವೆಯು ವಲಯದಾದ್ಯಂತ ಸಮಗ್ರ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ. 2026ರ ಜೂನ್ 1ರಿಂದ ಅಕ್ಟೋಬರ್ 31ರವರೆಗಿನ ಮುಂಗಾರು ಅವಧಿಯನ್ನು ಗಮನದಲ್ಲಿಟ್ಟುಕೊಂಡು ಈ ವಿಶೇಷ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದ್ದು, ಸ್ಥಳೀಯ ಹವಾಮಾನಕ್ಕೆ ಅನುಗುಣವಾಗಿ ಬೆಂಗಳೂರು ಮತ್ತು ಮೈಸೂರು ವಿಭಾಗಗಳ ಕೆಲವು ಮಾರ್ಗಗಳಲ್ಲಿ ಈ ಸುರಕ್ಷತಾ ಅವಧಿಯನ್ನು ನವೆಂಬರ್ ಮಧ್ಯದವರೆಗೆ ವಿಸ್ತರಿಸಲಾಗಿದೆ.

ನೈಜ-ಸಮಯದ ಮೇಲ್ವಿಚಾರಣೆಗೆ ತಂತ್ರಜ್ಞಾನದ ಸ್ಪರ್ಶ

ಪ್ರವಾಹದ ಇತಿಹಾಸವಿರುವ ವಲಯದ 15 ಪ್ರಮುಖ ಸೇತುವೆಗಳಲ್ಲಿ ನೀರಿನ ಮಟ್ಟವನ್ನು ನಿರಂತರವಾಗಿ ಗಮನಿಸಲು ಹೈಟೆಕ್ ‘ವಾಟರ್ ಲೆವೆಲ್ ಮಾನಿಟರಿಂಗ್ ಇನ್ಸ್ಟ್ರುಮೆಂಟ್ಸ್’ (WLMI) ಅಳವಡಿಸಲಾಗಿದೆ. ಇವು ನೀರಿನ ಮಟ್ಟ ಅಪಾಯದ ಗೆರೆ ದಾಟಿದ ತಕ್ಷಣ ಅಧಿಕಾರಿಗಳಿಗೆ ಸ್ವಯಂಚಾಲಿತ ಎಸ್‌ಎಂಎಸ್ (SMS) ಮೂಲಕ ಎಚ್ಚರಿಕೆ ರವಾನಿಸಲಿವೆ. ನೀರು ನಿಲ್ಲುವ ಸಂಭವವಿರುವ 48 ರಸ್ತೆ ಕೆಳ ಸೇತುವೆಗಳನ್ನು (RUB) ಗುರುತಿಸಲಾಗಿದ್ದು, ಸಿಸಿಟಿವಿ ಕ್ಯಾಮೆರಾಗಳ ಮೂಲಕ ‘ಬ್ರಿಡ್ಜ್ ಮ್ಯಾನೇಜ್‌ಮೆಂಟ್ ಸಿಸ್ಟಮ್’ ಅಡಿ 24×7 ನಿಗಾ ಇರಿಸಲಾಗಿದೆ. ಮೈಸೂರು–ಅರಸೀಕೆರೆ ಮಾರ್ಗದ ಸಾಗರಕಟ್ಟೆ ಬಳಿ ತೀವ್ರ ಗಾಳಿಯ ವೇಗವನ್ನು ಅಳೆಯಲು ‘ಅನಿಮೋಮೀಟರ್’ ಸ್ಥಾಪಿಸಲಾಗಿದೆ. 52 ಮಳೆ ಮಾಪನ ಕೇಂದ್ರಗಳು ಹಾಗೂ ಹವಾಮಾನ ಇಲಾಖೆಯ ಮುನ್ಸೂಚನೆಗಳನ್ನು ಆಧರಿಸಿ ಹುಬ್ಬಳ್ಳಿಯ ಕೇಂದ್ರ ನಿಯಂತ್ರಣ ಕಚೇರಿಯು ನಿರಂತರ ಮೇಲ್ವಿಚಾರಣೆ ನಡೆಸುತ್ತಿದೆ.

ಘಾಟ್ ಪ್ರದೇಶಗಳಲ್ಲಿ ತೀವ್ರ ನಿಗಾ ಹಾಗೂ ರಕ್ಷಣಾತ್ಮಕ ಕಾಮಗಾರಿ

ಭೂಕುಸಿತ ಹಾಗೂ ಹಳಿಗಳ ಮೇಲೆ ಬಂಡೆಗಳು ಉರುಳುವ ಆತಂಕವಿರುವ ದುರ್ಬಲ ಘಾಟ್ ಪ್ರದೇಶಗಳಲ್ಲಿ ನೈಋತ್ಯ ರೈಲ್ವೆಯು ತೀವ್ರ ಮುನ್ನೆಚ್ಚರಿಕೆ ವಹಿಸಿದೆ. ಹಳಿಗಳ ತ್ವರಿತ ಪುನಃಸ್ಥಾಪನೆಗಾಗಿ ಹುಬ್ಬಳ್ಳಿ ಹಾಗೂ ಮೈಸೂರು ವಿಭಾಗದ ಏಳು ಪ್ರಮುಖ ಸ್ಥಳಗಳಲ್ಲಿ ಬಂಡೆಗಳು ಹಾಗೂ ಮರಳು ಚೀಲಗಳನ್ನು ಮುಂಜಾಗ್ರತೆಯಾಗಿ ಶೇಖರಿಸಿಡಲಾಗಿದೆ. ಇದರೊಂದಿಗೆ ಜೆಸಿಬಿ ಅಗೆಯುವ ಯಂತ್ರಗಳು ಹಾಗೂ ಕಂಪ್ರೆಸರ್‌ಗಳನ್ನು ಸನ್ನದ್ಧ ಸ್ಥಿತಿಯಲ್ಲಿಡಲಾಗಿದೆ. ರೈಲ್ವೆ ಇಳಿಜಾರು ಪ್ರದೇಶಗಳ ಸುರಕ್ಷತೆಗಾಗಿ ಸಾಯಿಲ್ ನೈಲಿಂಗ್ (ಮಣ್ಣಿನ ನೈಲಿಂಗ್), ಬಂಡೆಗಳ ಅಳವಡಿಕೆ ಹಾಗೂ ರಿಟೈನಿಂಗ್ ಗೋಡೆಗಳ ನಿರ್ಮಾಣದಂತಹ ಸುಧಾರಿತ ತಾಂತ್ರಿಕ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಸುರಂಗ ಮಾರ್ಗಗಳ ಪ್ರವೇಶ ದ್ವಾರಗಳನ್ನು ವಿಸ್ತರಿಸುವ ಮೂಲಕ ಬಂಡೆಗಳು ನೇರವಾಗಿ ಹಳಿಗೆ ಬೀಳದಂತೆ ತಡೆಯಲಾಗಿದ್ದು, ನೀರು ಸರಾಗವಾಗಿ ಹರಿದು ಹೋಗಲು ಪಕ್ಕದ ಚರಂಡಿ ಹಾಗೂ ಕ್ಯಾಚ್-ವಾಟರ್ ಡ್ರೈನ್‌ಗಳನ್ನು ಸಂಪೂರ್ಣವಾಗಿ ಹೂಳೆತ್ತಿ ಸ್ವಚ್ಛಗೊಳಿಸಲಾಗಿದೆ.

ನಿರಂತರ ಗಸ್ತು ಹಾಗೂ ವೈದ್ಯಕೀಯ ರೈಲುಗಳ ನಿಯೋಜನೆ

ಅಪಾಯದ ಮುನ್ಸೂಚನೆ ಇರುವ ಸೂಕ್ಷ್ಮ ಪ್ರದೇಶಗಳಲ್ಲಿ ಹಗಲು-ರಾತ್ರಿ ಕಾವಲುಗಾರರನ್ನು ನೇಮಿಸಿ ಪೆಟ್ರೋಲಿಂಗ್ ವ್ಯವಸ್ಥೆಯನ್ನು ತೀವ್ರಗೊಳಿಸಲಾಗಿದೆ. ಹಠಾತ್ ಪ್ರವಾಹ ಅಥವಾ ಜಲಮೂಲಗಳು ಒಡೆಯುವ ಭೀತಿಯನ್ನು ತಗ್ಗಿಸಲು ಸ್ಥಳೀಯ ಆಡಳಿತದೊಂದಿಗೆ ಜಂಟಿ ಸಮೀಕ್ಷೆ ನಡೆಸಲಾಗಿದೆ. ಇದಲ್ಲದೆ, ಯಾವುದೇ ಅನಿರೀಕ್ಷಿತ ಅವಘಡ ಸಂಭವಿಸಿದರೆ ತಕ್ಷಣವೇ ಸ್ಪಂದಿಸಲು ಮತ್ತು ವೈದ್ಯಕೀಯ ನೆರವು ನೀಡಲು ಅತ್ಯಾಧುನಿಕ ‘ಸಹಾಯಕ ವೈದ್ಯಕೀಯ ಪರಿಹಾರ ರೈಲುಗಳು’ (MRV) ಹಾಗೂ ‘ಸ್ವಯಂ ಚಾಲಿತ ಅಪಘಾತ ಪರಿಹಾರ ರೈಲುಗಳನ್ನು’ (SPART) ಆಯಕಟ್ಟಿನ ಜಾಗಗಳಲ್ಲಿ ನಿಯೋಜಿಸಲಾಗಿದೆ ಎಂದು ನೈಋತ್ಯ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಡಾ. ಮಂಜುನಾಥ್ ಕನಮಡಿ ತಿಳಿಸಿದ್ದಾರೆ.

 


Share this with Friends

Related Post