ಬೆಂಗಳೂರು: ರಾಜ್ಯ ಸರ್ಕಾರದ ಸಂಪುಟ ಸೇರ್ಪಡೆ ಪ್ರಕ್ರಿಯೆಯಲ್ಲಿ ದೊಡ್ಡ ಮಟ್ಟದ ಹಣಕಾಸು ವ್ಯವಹಾರ ನಡೆಯುತ್ತಿದೆ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಗಂಭೀರ ಭ್ರಷ್ಟಾಚಾರದ ಆರೋಪ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಕೇಂದ್ರ ಸಚಿವರು; ಡಿ.ಕೆ. ಶಿವಕುಮಾರ್ ಸಂಪುಟದಲ್ಲಿ ಮಂತ್ರಿಯಾಗಲು ಮ್ಯಾನೇಜ್‌ಮೆಂಟ್ ಇಲ್ಲವೇ ಪೇಮೆಂಟ್ ಕೋಟಾದಲ್ಲಿ ಸಚಿವರಾಗಲು ದೊಡ್ಡ ಪ್ರಮಾಣದಲ್ಲಿ ಲಾಬಿ ನಡೆಯುತ್ತಿದೆ ಎಂದು ಆರೋಪಿಸಿದರು.
ಸಂಪುಟ ಆಕಾಂಕ್ಷಿಗಳಿಂದ ಸಿಎಂ ಡಿಕೆಶಿ ವಸೂಲಿ ಮಾಡುತ್ತಿದ್ದಾರೆ. ಹೈಕಮಾಂಡ್ ಗೆ ಕೊಡಬೇಕು ಎಂದು ಶಾಸಕರಿಂದ ಹಣ ಪೀಕುತ್ತಿರುವ ಮಾಹಿತಿ ಇದೆ. ಮ್ಯಾನೆಜ್‌ಮೆಂಟ್ ಕೋಟಾಕ್ಕೆ ಶೇಕಡ 5%, ಪೇಮೆಂಟ್ ಕೋಟಾಕ್ಕೆ 95% ಸೀಟುಗಳನ್ನು ನಿಗದಿಪಡಿಸಲಾಗಿದೆ ಎಂದು ಅವರು ಹೇಳಿದರು.
ಇಂತಹ ಪೇಮೆಂಟ್ ಸೀಟುಗಳನ್ನು ಪಡೆಯಲು ಯಾರು ಅರ್ಹರಿರುತ್ತಾರೋ ಅಂತಹವರು ಮಾತ್ರ ಮಂತ್ರಿಯಾಗಲು ಸಾಧ್ಯ ಎಂದು ಕುಮಾರಸ್ವಾಮಿ ಅವರು ವ್ಯಂಗ್ಯವಾಡಿದರು. ಇದಕ್ಕೆ ಹಾಕಿ ಸಂಪುಟ ವಿಸ್ತರಣೆ ವಿಳಂಬವಾಗುತ್ತಿದೆ ಎಂದು ಅವರು ಹೇಳಿದರು.
ವೃತ್ತಿಪರ ಕೋರ್ಸುಗಳಿಗೆ ಪ್ರವೇಶ ಪಡೆಯುವುದಕ್ಕೆ ಸರ್ಕಾರಿ ಮತ್ತು ಮ್ಯಾನೇಜ್ ಮೆಂಟ್ ಕೋಟಾ ಎಂದು ಇರುತ್ತದೆ. ಆ ಬಗ್ಗೆ ನಾನು ಕೇಳಿದ್ದೇನೆ. ಆದರೆ ಕರ್ನಾಟಕದಲ್ಲಿ ಸಂಪುಟ ಸೇರ್ಪಡೆಗೆ ಹೈಕಮಾಂಡ್ ಕೋಟಾ, ಮ್ಯಾನೇಜ್ಮೆಂಟ್ ಕೋಟಾ ಎಂದು ಶುರುವಾಗಿದೆ. ಮಂತ್ರಿ ಆಗಬೇಕಾದರೆ ಕಾಸು ಕೊಡಬೇಕು. ಎಗ್ಗಿಲ್ಲದೆ ವಸೂಲಿ ಮಾಡುತ್ತಿದ್ದಾರೆ ಎಂದು ಅವರು ಹೇಳಿದರು.

