ಬೆಂಗಳೂರು: ರಾಜ್ಯಾದ್ಯಂತ ಹಮ್ಮಿಕೊಳ್ಳಲಾಗಿರುವ ‘ವಿಶೇಷ ಸಮಗ್ರ ಮತದಾರರ ಪಟ್ಟಿ ಪರಿಷ್ಕರಣೆ (SIR)-2026’ ಕಾರ್ಯಕ್ರಮವನ್ನು ಕಾಲಮಿತಿಯೊಳಗೆ ಯಶಸ್ವಿಯಾಗಿ ಪೂರ್ಣಗೊಳಿಸಲು, ಚುನಾವಣಾ ಕರ್ತವ್ಯದಲ್ಲಿರುವ ಸಿಬ್ಬಂದಿಗೆ ದೈನಂದಿನ ಬಯೋಮೆಟ್ರಿಕ್ ಹಾಗೂ ಮೊಬೈಲ್ ಆ್ಯಪ್ ಹಾಜರಾತಿಯಿಂದ ತಾತ್ಕಾಲಿಕ ವಿನಾಯಿತಿ ನೀಡುವಂತೆ ಮುಖ್ಯ ಚುನಾವಣಾಧಿಕಾರಿಗಳು ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದು ವಿನಂತಿಸಿದ್ದಾರೆ.
ಕ್ಷೇತ್ರ ಕಾರ್ಯಕ್ಕೆ ಕಡ್ಡಾಯ ಹಾಜರಾತಿ ಅಡ್ಡಿ:
ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ರಾಜ್ಯದಲ್ಲಿ ಸದ್ಯ ಮತದಾರರ ಪಟ್ಟಿ ಪರಿಷ್ಕರಣೆಯ ಕ್ಷೇತ್ರ ಮಟ್ಟದ ತುರ್ತು ಕಾರ್ಯಗಳು ಪ್ರಗತಿಯಲ್ಲಿವೆ. ಇದಕ್ಕಾಗಿ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಬೂತ್ ಮಟ್ಟದ ಅಧಿಕಾರಿಗಳನ್ನು (BLOs) ನಿಯೋಜಿಸಲಾಗಿದೆ. ಈ ಸಿಬ್ಬಂದಿಗಳು ಪ್ರತಿದಿನ ಮನೆ-ಮನೆಗೆ ಭೇಟಿ ನೀಡಿ ಭೌತಿಕ ಪರಿಶೀಲನೆ, ಹೊಸ ಮತದಾರರ ನೋಂದಣಿ ಹಾಗೂ ನಮೂನೆಗಳ ವಿತರಣೆ ಮತ್ತು ಸಂಗ್ರಹಣೆಯಂತಹ ಕ್ಷೇತ್ರ ಕಾರ್ಯಗಳಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ.
ಆದರೆ, ಇಲಾಖೆಯ ನಿಯಮಾವಳಿಗಳ ಪ್ರಕಾರ ಸಿಬ್ಬಂದಿಗಳು ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ತಮ್ಮ ಮೂಲ ಕಚೇರಿಗಳಿಗೆ ಭೇಟಿ ನೀಡಿ ಬಯೋಮೆಟ್ರಿಕ್ ಅಥವಾ ‘ಕರ್ತವ್ಯ ಆ್ಯಪ್’ ಮೂಲಕ ಹಾಜರಾತಿ ದಾಖಲಿಸುವುದು ಕಡ್ಡಾಯವಾಗಿದೆ. ಕ್ಷೇತ್ರ ಕಾರ್ಯದ ಒತ್ತಡದ ನಡುವೆ ಕಚೇರಿಗಳಿಗೆ ಅಲೆದಾಡುವುದು ಪ್ರಾಯೋಗಿಕವಾಗಿ ತೀವ್ರ ಕಠಿಣವಾಗಿದ್ದು, ಇದು ಚುನಾವಣಾ ಕೆಲಸಗಳ ಪ್ರಗತಿಯ ಮೇಲೂ ನಕಾರಾತ್ಮಕ ಪರಿಣಾಮ ಬೀರುತ್ತಿದೆ ಎಂದು ಸಿಬ್ಬಂದಿಗಳು ಅಳಲು ತೋಡಿಕೊಂಡಿದ್ದಾರೆ.
ಪರ್ಯಾಯ ವ್ಯವಸ್ಥೆಗೆ ಪ್ರಸ್ತಾವನೆ:
ಕ್ಷೇತ್ರ ಕಾರ್ಯದ ಸುಗಮ ನಿರ್ವಹಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು, ಮತದಾರರ ಪಟ್ಟಿ ಪರಿಷ್ಕರಣೆ (SIR)-2026ರ ಅವಧಿ ಮುಗಿಯುವವರೆಗೆ ಅಧಿಕಾರಿಗಳು ಮತ್ತು ಬಿ.ಎಲ್.ಓ.ಗಳಿಗೆ ದೈನಂದಿನ ಕಚೇರಿ ಹಾಜರಾತಿಯಿಂದ ತಾತ್ಕಾಲಿಕ ವಿನಾಯಿತಿ ನೀಡಲು ಕೋರಲಾಗಿದೆ. ಈ ಅವಧಿಯಲ್ಲಿ ಸಿಬ್ಬಂದಿಗಳ ಇಲಾಖಾ ಹಾಜರಾತಿಯನ್ನು, ಸಂಬಂಧಪಟ್ಟ ಮತದಾರರ ನೋಂದಣಾಧಿಕಾರಿಗಳು (EROs) ನೀಡುವ ಪ್ರಮಾಣಪತ್ರದ ಆಧಾರದ ಮೇಲೆ ಪರಿಗಣಿಸಲು ಸೂಕ್ತ ಪರ್ಯಾಯ ವ್ಯವಸ್ಥೆ ಕಲ್ಪಿಸುವಂತೆ ಪ್ರಸ್ತಾವನೆಯಲ್ಲಿ ಉಲ್ಲೇಖಿಸಲಾಗಿದೆ.
ಈ ಕುರಿತು ರಾಜ್ಯದ ಎಲ್ಲಾ ಇಲಾಖಾ ಮುಖ್ಯಸ್ಥರು, ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳಿಗೆ ಅಗತ್ಯ ಆದೇಶ ಹೊರಡಿಸುವಂತೆ ಮುಖ್ಯ ಚುನಾವಣಾಧಿಕಾರಿ ವಿ. ಅನ್ಬುಕುಮಾರ್ ಅವರು ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಮನವಿ ಮಾಡಿದ್ದಾರೆ.

