Mon. Jun 22nd, 2026

ಬಿಡದಿ ಟೌನ್‌ಶಿಪ್‌ಗೆ ಕೃಷಿ ಭೂಮಿ ವಶಕ್ಕೆ ಬ್ರೇಕ್ ಹಾಕಿ: ಸರ್ಕಾರದ ವಿರುದ್ಧ ಸಿಎಸ್ ಮೆಟ್ಟಿಲೇರಿದ ಜೆಡಿಎಸ್

Share this with Friends

ಬೆಂಗಳೂರು: ಬಿಡದಿ ಮತ್ತು ಹಾರೋಹಳ್ಳಿ ಹೋಬಳಿ ವ್ಯಾಪ್ತಿಯ ಫಲವತ್ತಾದ ಕೃಷಿ ಭೂಮಿಯನ್ನು ಟೌನ್‌ಶಿಪ್ ನಿರ್ಮಾಣದ ಹೆಸರಿನಲ್ಲಿ ವಶಪಡಿಸಿಕೊಳ್ಳುವ ಸರ್ಕಾರದ ಕ್ರಮವನ್ನು ಕೈಬಿಡಬೇಕೆಂದು ಆಗ್ರಹಿಸಿ ಜೆಡಿಎಸ್ ನಿಯೋಗವು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಮನವಿ ಸಲ್ಲಿಸಿದೆ.

ಜೆಡಿಎಸ್ ಗ್ರೇಟರ್ ಬೆಂಗಳೂರು ಘಟಕದ ಅಧ್ಯಕ್ಷ ಹೆಚ್.ಎಂ. ರಮೇಶ್ ಗೌಡ ಅವರ ನೇತೃತ್ವದಲ್ಲಿ ಮುಖ್ಯ ಕಾರ್ಯದರ್ಶಿಗಳನ್ನು ಭೇಟಿ ಮಾಡಿದ ನಿಯೋಗವು, ರಿಯಲ್ ಎಸ್ಟೇಟ್ ಉದ್ದೇಶಗಳಿಗಾಗಿ ನೀರಾವರಿ ಆಧಾರಿತ ಕೃಷಿ ಭೂಮಿಯನ್ನು ಕಸಿದುಕೊಳ್ಳುತ್ತಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿತು.

ಸಣ್ಣ ರೈತರಿಗೆ ಸಂಕಷ್ಟ:

ಈಗಾಗಲೇ ಮೊದಲ ಹಂತದಲ್ಲಿ 498 ಎಕರೆಗೂ ಹೆಚ್ಚು ಭೂಸ್ವಾಧೀನಕ್ಕೆ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಇದರಿಂದ ಸುಮಾರು 750 ಕೃಷಿಕ ಕುಟುಂಬಗಳು ಬೀದಿಪಾಲಾಗುವ ಭೀತಿಯಲ್ಲಿದ್ದು, ಇದರಲ್ಲಿ ಶೇ. 81 ರಷ್ಟು ಮಂದಿ ಸಣ್ಣ ಮತ್ತು ಅತಿ ಸಣ್ಣ ಹಿಡುವಳಿದಾರರಾಗಿದ್ದಾರೆ. ಕೇವಲ ಅರ್ಧ ಅಥವಾ ಕಾಲು ಎಕರೆ ಭೂಮಿ ನಂಬಿ ಬದುಕುತ್ತಿರುವ ಇಂತಹ ಶ್ರಮಜೀವಿಗಳನ್ನು ಒಕ್ಕಲೆಬ್ಬಿಸುವುದು ಅಮಾನವೀಯ ಎಂದು ರಮೇಶ್ ಗೌಡ ಟೀಕಿಸಿದರು. ಮುಂದಿನ ತಿಂಗಳು ಸುಮಾರು 7,481 ರಿಂದ 9,600 ಎಕರೆ ಭೂಮಿಯನ್ನು ವಶಪಡಿಸಿಕೊಳ್ಳಲು ಸರ್ಕಾರ ಮುಂದಾಗಿದ್ದು, ರೈತರ ಇಚ್ಛೆಗೆ ವಿರುದ್ಧವಾಗಿ ನ್ಯಾಯಾಲಯದಲ್ಲಿ ಪರಿಹಾರ ಜಮೆ ಮಾಡಿ ಭೂಮಿ ಕಸಿಯುವ ಹುನ್ನಾರ ನಡೆದಿದೆ ಎಂದು ಅವರು ಆತಂಕ ಹೊರಹಾಕಿದರು.

ಹೈನುಗಾರಿಕೆಗೆ ಭಾರಿ ಹೊಡೆತ:

ಭೂಸ್ವಾಧೀನಕ್ಕೆ ಒಳಪಡುತ್ತಿರುವ ಈ ಪ್ರದೇಶವು ಹೈನುಗಾರಿಕೆಯಲ್ಲಿ ಅತ್ಯಂತ ಸಮೃದ್ಧವಾಗಿದ್ದು, ಬೆಂಗಳೂರು ಡೇರಿಗೆ ಮಾಸಿಕ ಸುಮಾರು 6 ಲಕ್ಷ ಲೀಟರ್ ಹಾಲು ಪೂರೈಕೆಯಾಗುತ್ತಿದೆ. ಒಂದು ವೇಳೆ ಈ ಜಾಗ ರಿಯಲ್ ಎಸ್ಟೇಟ್ ಕುಳಗಳ ಪಾಲಾದರೆ ಹಾಲಿನ ಉತ್ಪಾದನೆ ಸಂಪೂರ್ಣ ಕುಂಠಿತಗೊಳ್ಳಲಿದೆ ಎಂದು ನಿಯೋಗವು ಸರ್ಕಾರದ ಗಮನ ಸೆಳೆದಿದೆ.

 

 


Share this with Friends

Related Post