ಹೊಸದೆಹಲಿ: ದೇಶದ ಯುವ ಸಮೂಹವನ್ನು ಬಲಿಪಡೆಯುತ್ತಿರುವ ಮಾದಕ ದ್ರವ್ಯ ಜಾಲದ ಬೆನ್ನುಲುಬು ಮುರಿಯಲು ಕೇಂದ್ರ ಸರ್ಕಾರ ಈಗ ಬಿಗಿಯಾದ ಮಾಸ್ಟರ್ ಪ್ಲಾನ್ ಸಿದ್ಧಪಡಿಸಿದೆ. ನವದೆಹಲಿಯಲ್ಲಿ ಆಯೋಜಿಸಲಾಗಿದ್ದ ನಾರ್ಕೋ-ಕೋಆರ್ಡಿನೇಷನ್ ಸೆಂಟರ್ (NCORD) ಉನ್ನತ ಮಟ್ಟದ 10ನೇ ಮಹತ್ವದ ಸಭೆಯಲ್ಲಿ ಪಾಲ್ಗೊಂಡಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು, ಮಾದಕ ದ್ರವ್ಯ ಮುಕ್ತ ಭಾರತದ ಗುರಿ ತಲುಪಲು ‘ನಾರ್ಕೋಟಿಕ್ಸ್ ಕಂಟ್ರೋಲ್ ವಿಷನ್ ಡಾಕ್ಯುಮೆಂಟ್’ ಅನ್ನು ಅಧಿಕೃತವಾಗಿ ಬಿಡುಗಡೆ ಮಾಡಿದರು.
ಪ್ರಧಾನಿ ನರೇಂದ್ರ ಮೋದಿ ಅವರ ಡ್ರಗ್ಸ್ ಮುಕ್ತ ಭಾರತದ ಕನಸನ್ನು ಸಾಕಾರಗೊಳಿಸಲು ಈ ವಿಷನ್ ಡಾಕ್ಯುಮೆಂಟ್ ಅತ್ಯಂತ ಪ್ರಮುಖ ದಿಕ್ಸೂಚಿಯಾಗಲಿದೆ. ಅಂತರರಾಷ್ಟ್ರೀಯ ಮತ್ತು ದೇಶೀಯ ಡ್ರಗ್ ಕಾರ್ಟೆಲ್‌ಗಳ ಕಪಿಮುಷ್ಟಿಯಿಂದ ಭಾರತದ ಯುವ ಪೀಳಿಗೆಯನ್ನು ರಕ್ಷಿಸಲು ಮುಂದಿನ ಮೂರು ವರ್ಷಗಳ ಅವಧಿಗೆ ಅನ್ವಯವಾಗುವಂತೆ ಈ ಕಟ್ಟುನಿಟ್ಟಿನ ಮಾರ್ಗಸೂಚಿಯನ್ನು ಸಿದ್ಧಪಡಿಸಲಾಗಿದೆ ಎಂದು ಅಮಿತ್ ಶಾ ಮಾಹಿತಿ ನೀಡಿದರು.
ಅತ್ಯಾಧುನಿಕ ತಂತ್ರಜ್ಞಾನದ ಆಸ್ತ್ರ
ಮಾದಕ ದ್ರವ್ಯಗಳ ಅಕ್ರಮ ಸಾಗಾಟ ಮತ್ತು ಮಾರಾಟ ಜಾಲವನ್ನು ಸಂಪೂರ್ಣವಾಗಿ ಪತ್ತೆಹಚ್ಚಲು, ಹತ್ತಿಕ್ಕಲು ಮತ್ತು ಬೇರುಸಹಿತ ನಾಶಪಡಿಸಲು ಈ ಹೊಸ ನೀತಿಯಲ್ಲಿ ವಿಶೇಷ ಆದ್ಯತೆ ನೀಡಲಾಗಿದೆ. ಇದಕ್ಕಾಗಿ ಕೇವಲ ಸಾಂಪ್ರದಾಯಿಕ ತನಿಖಾ ವಿಧಾನಗಳನ್ನಷ್ಟೇ ನೆಚ್ಚಿಕೊಳ್ಳದೆ, ಆಧುನಿಕ ತಂತ್ರಜ್ಞಾನ, ಅತ್ಯಾಧುನಿಕ ಗುಪ್ತಚರ ಮಾಹಿತಿ ವ್ಯವಸ್ಥೆ ಮತ್ತು ನೆಟ್‌ವರ್ಕ್ ಕೇಂದ್ರಿತ ಕಾರ್ಯಾಚರಣೆಯನ್ನು ಅಳವಡಿಸಿಕೊಳ್ಳಲಾಗುತ್ತಿದೆ. ಈ ಮೂಲಕ ಕಳ್ಳಸಾಗಣೆದಾರರ ಡಿಜಿಟಲ್ ಜಾಲಕ್ಕೂ ಬ್ರೇಕ್ ಬೀಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
₹6,000 ಕೋಟಿ ಮೌಲ್ಯದ ಡ್ರಗ್ಸ್ ಧ್ವಂಸ
ಇದೇ ಸಭೆಯಲ್ಲಿ ಗೃಹ ಸಚಿವರು ದೇಶದ ಇತಿಹಾಸದಲ್ಲೇ ಅತ್ಯಂತ ದೊಡ್ಡ ಮಟ್ಟದ ಮಾದಕ ದ್ರವ್ಯ ನಾಶಪಡಿಸುವ ‘ಆನ್‌ಲೈನ್ ಡ್ರಗ್ಸ್ ವಿಲೇವಾರಿ ಪಾಕ್ಷಿಕ ಅಭಿಯಾನ’ಕ್ಕೆ ಚಾಲನೆ ನೀಡಿದರು. ಈ ವಿಶೇಷ ಎರಡು ವಾರಗಳ ಜಾಗೃತಿ ಮತ್ತು ಕಾರ್ಯಾಚರಣೆಯಡಿಯಲ್ಲಿ ದೇಶಾದ್ಯಂತ ಜಪ್ತಿ ಮಾಡಲಾಗಿರುವ ಬರೋಬ್ಬರಿ 2,09,500 ಕಿಲೋಗ್ರಾಂ ತೂಕದ ಮಾದಕ ಪದಾರ್ಥಗಳನ್ನು ಸಂಪೂರ್ಣವಾಗಿ ನಾಶಪಡಿಸುವ ಗುರಿ ಹೊಂದಲಾಗಿದೆ. ಇದರ ಅಂತರರಾಷ್ಟ್ರೀಯ ಮಾರುಕಟ್ಟೆ ಮೌಲ್ಯ ಸುಮಾರು 6,000 ಕೋಟಿ ರೂಪಾಯಿಗಿಂತಲೂ ಅಧಿಕ ಎಂದು ಅಂದಾಜಿಸಲಾಗಿದೆ.
ಕರಾವಳಿ ಮತ್ತು ಗಡಿ ಭಾಗದಲ್ಲಿ ಕಣ್ಗಾವಲು ತೀವ್ರ
ಮಾದಕ ದ್ರವ್ಯ ನಿಯಂತ್ರಣ ಮಂಡಳಿ (NCB) ಯ ಕಚೇರಿ ಮತ್ತು ಕಾರ್ಯಾಚರಣೆಯ ವ್ಯಾಪ್ತಿಯನ್ನು ದೇಶದ ಗಡಿ ಭಾಗಗಳಿಗೂ ವಿಸ್ತರಿಸಲಾಗುತ್ತಿದೆ. ಇದರ ಭಾಗವಾಗಿ ಅಮಿತ್ ಶಾ ಅವರು ಅಸ್ಸಾಂನ ಗುವಾಹಟಿಯಲ್ಲಿ ಎನ್‌ಸಿಬಿಯ ನೂತನ ವಲಯ ಕಚೇರಿಯನ್ನು ಮತ್ತು ಜಮ್ಮುವಿನಲ್ಲಿ ಸುಸಜ್ಜಿತವಾದ ಹೊಸ ಕಚೇರಿ ಕಟ್ಟಡವನ್ನು ಡಿಜಿಟಲ್ ವೇದಿಕೆಯ ಮೂಲಕ ಉದ್ಘಾಟಿಸಿದರು. ಈ ಹೊಸ ಮೂಲಸೌಕರ್ಯಗಳು ಗಡಿ ಭಾಗದ ಮೂಲಕ ದೇಶದೊಳಗೆ ನುಸುಳುವ ಮಾದಕ ದ್ರವ್ಯಗಳಿಗೆ ತಡೆ ಒಡ್ಡಲು ಭದ್ರತಾ ಪಡೆಗಳಿಗೆ ಹೆಚ್ಚಿನ ಶಕ್ತಿ ತುಂಬಲಿವೆ.

