ಬೆಂಗಳೂರು:ಕೈಗಾರಿಕೆ ಮತ್ತು ಗಣಿಗಾರಿಕೆ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಬಾಕಿ ಉಳಿದಿರುವ ಎಲ್ಲಾ ಅರಣ್ಯ ಇಲಾಖೆಯ ಅನುಮತಿ ಪ್ರಕರಣಗಳನ್ನು ಮುಂಬರುವ ಜುಲೈ 15ರ ಒಳಗಾಗಿ ಕಡ್ಡಾಯವಾಗಿ ಇತ್ಯರ್ಥಪಡಿಸಬೇಕು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ.
ವಿಧಾನಸೌಧದಲ್ಲಿ ಇಂದು (ಸೋಮವಾರ) ನಡೆದ ಅರಣ್ಯ ಇಲಾಖೆಯ ಉನ್ನತ ಮಟ್ಟದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕೈಗಾರಿಕೋದ್ಯಮಿಗಳು ಮತ್ತು ಗಣಿಗಾರಿಕೆ ಸಂಸ್ಥೆಗಳ ಬೇಜವಾಬ್ದಾರಿತನದ ವಿರುದ್ಧ ಆಕ್ರೋಶ ಹೊರಹಾಕಿದರು, “ಗಣಿಗಾರಿಕೆ ಸೇರಿದಂತೆ ವಿವಿಧ ಉದ್ದೇಶಗಳಿಗಾಗಿ ಸರ್ಕಾರದ ಭೂಮಿಯನ್ನು ಮಂಜೂರು ಮಾಡಿಸಿಕೊಂಡು, ವರ್ಷಗಟ್ಟಲೆ ಯಾವುದೇ ಚಟುವಟಿಕೆ ಆರಂಭಿಸದೆ ಖಾಲಿ ಬಿಡುವವರ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಿ. ಸರ್ಕಾರದ ಜಾಗವನ್ನು ಐದಾರು ವರ್ಷಗಳ ಕಾಲ ಬಳಸದೆ ಹಾಗೇ ಬಿಡುವುದರಿಂದ ರಾಜ್ಯದ ಬೊಕ್ಕಸಕ್ಕೆ ಯಾವುದೇ ಆದಾಯ ಬರುವುದಿಲ್ಲ. ಅಷ್ಟೇ ಅಲ್ಲದೆ, ವರ್ಷಗಳು ಉರುಳಿದಂತೆ ಯೋಜನೆಯ ಒಟ್ಟು ಮೌಲ್ಯ ಹಾಗೂ ಉತ್ಪಾದನಾ ವೆಚ್ಚವೂ ಹೆಚ್ಚಾಗುತ್ತದೆ. ಇಂತಹ ಅನಗತ್ಯ ವಿಳಂಬ ಧೋರಣೆಯನ್ನು ಇನ್ನು ಮುಂದೆ ಸಹಿಸುವುದಿಲ್ಲ” ಎಂದು ಎಚ್ಚರಿಸಿದರು.
ಅರಣ್ಯವಾಸಿಗಳ ಹಿತರಕ್ಷಣೆಗೆ ಮೊದಲ ಆದ್ಯತೆ:
ಅರಣ್ಯ ಪ್ರದೇಶಗಳಲ್ಲಿ ವಾಸಿಸುತ್ತಿರುವ ಬುಡಕಟ್ಟು ಹಾಗೂ ಸ್ಥಳೀಯ ಜನರ ಹಕ್ಕುಗಳ ಕುರಿತು ಕಳಕಳಿ ವ್ಯಕ್ತಪಡಿಸಿದ ಸಿಎಂ, “ಅರಣ್ಯವಾಸಿಗಳ ಸಾಂಪ್ರದಾಯಿಕ ಹಕ್ಕುಗಳನ್ನು ಯಾವುದೇ ಕಾರಣಕ್ಕೂ ಕಡೆಗಣಿಸಬಾರದು. ಸಣ್ಣಪುಟ್ಟ ತಾಂತ್ರಿಕ ನೆಪಗಳನ್ನು ಮುಂದಿಟ್ಟುಕೊಂಡು ಅವರಿಗೆ ಕಿರುಕುಳ ನೀಡಬಾರದು. ನಿಯಮಾವಳಿಗಳಿಗೆ ಒಳಪಟ್ಟು ಅವರಿಗೆ ಅಗತ್ಯವಿರುವ ಕುಡಿಯುವ ನೀರು, ರಸ್ತೆ ಸಂಪರ್ಕ ಮತ್ತು ವಿದ್ಯುತ್ ಸೇರಿದಂತೆ ಎಲ್ಲಾ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಮೊದಲ ಆದ್ಯತೆ ನೀಡಬೇಕು” ಎಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.
ವನ್ಯಜೀವಿ ಸಂರಕ್ಷಣೆ ಮತ್ತು ಹಸಿರೀಕರಣ:
ನಮ್ಮ ರಾಜ್ಯದ ಅರಣ್ಯ ಹಾಗೂ ಪ್ರಾಣಿ ಸಂಪತ್ತು ಅತ್ಯಂತ ಅಮೂಲ್ಯವಾಗಿದ್ದು, ವನ್ಯಜೀವಿಗಳ ಸಂರಕ್ಷಣೆ ಹೆಚ್ಚು ಪರಿಣಾಮಕಾರಿಯಾಗಿ ನಡೆಯಬೇಕು. ಮಾನವ ಹಾಗೂ ವನ್ಯಜೀವಿಗಳ ನಡುವಿನ ಸಂಘರ್ಷವನ್ನು ತಡೆಯಲು ಸೂಕ್ತ ತಾಂತ್ರಿಕ ಕ್ರಮಗಳನ್ನು ಕೈಗೊಳ್ಳಬೇಕು ಮತ್ತು ಅರಣ್ಯ ಒತ್ತುವರಿ ತೆರವು ಕಾರ್ಯ ಚುರುಕಾಗಬೇಕು ಎಂದು ಸೂಚಿಸಿದರು. ಇದರೊಂದಿಗೆ ಮುಂಗಾರು ಅವಧಿಯಲ್ಲಿ ನೆಡುತೋಪುಗಳ ನಿರ್ಮಾಣ ಹಾಗೂ ಸಾರ್ವಜನಿಕರಿಗೆ ಸಸಿಗಳನ್ನು ವಿತರಿಸುವ ಅಭಿಯಾನವನ್ನು ವ್ಯಾಪಕವಾಗಿ ಜಾರಿಗೊಳಿಸಲು ತಿಳಿಸಿದರು.
ಸಭೆಯಲ್ಲಿದ್ದ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ತುಷಾರ ಗಿರಿನಾಥ್ ಅವರು ಪ್ರತಿಕ್ರಿಯಿಸಿ, ಮುಖ್ಯಮಂತ್ರಿಗಳ ಸೂಚನೆಯಂತೆ ಬಾಕಿ ಇರುವ ಎಲ್ಲಾ ಹಳೆಯ ಅರಣ್ಯ ಅನುಮತಿ ಪ್ರಸ್ತಾವನೆಗಳನ್ನು ಜುಲೈ 15ರ ಒಳಗಾಗಿ ಪರಿಶೀಲಿಸಿ ವಿಲೇವಾರಿ ಮಾಡಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ಪ್ರಾಣಿ ಸಂಘರ್ಷಕ್ಕೆ ₹63 ಕೋಟಿಗೂ ಹೆಚ್ಚು ಪರಿಹಾರ ವಿತರಣೆ:
ಕಾಡುಪ್ರಾಣಿಗಳ ದಾಳಿಯಿಂದ ಉಂಟಾಗುವ ಹಾನಿಗೆ ಸರ್ಕಾರ ಸ್ಪಂದಿಸುತ್ತಿರುವ ಕುರಿತು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು. 2025-2026ನೇ ಸಾಲಿನಲ್ಲಿ ಬೆಳೆನಾಶ, ಜಾನುವಾರು ಜೀವಹಾನಿ, ಮಾನವ ಪ್ರಾಣ ಹಾನಿ, ಶಾಶ್ವತ ಮತ್ತು ಭಾಗಶಃ ಅಂಗವಿಕಲತೆ, ಸಾರ್ವಜನಿಕರ ಗಾಯ ಹಾಗೂ ಆಸ್ತಿನಾಶದ ಪರಿಹಾರಕ್ಕಾಗಿ ಒಟ್ಟು 6,306 ಲಕ್ಷ ರೂಪಾಯಿ (₹63.06 ಕೋಟಿ) ಪರಿಹಾರ ಧನವನ್ನು ವಿತರಿಸಲಾಗಿದೆ ಎಂದು ಅಧಿಕಾರಿಗಳು ವಿವರಿಸಿದರು.
ಕಾಡುಪ್ರಾಣಿ ತಡೆಗೆ ಹೊಸ ತಂತ್ರಜ್ಞಾನದ ಅಗತ್ಯ:
ಸಂಘರ್ಷ ತಡೆಗಾಗಿ ಪ್ರಸ್ತುತ ರೈಲ್ವೆ ಬ್ಯಾರಿಕೇಡ್, ಆನೆ ತಡೆ ಕಂದಕ ಮತ್ತು ಸೌರಶಕ್ತಿ ಚಾಲಿತ ತಂತಿ ಬೇಲಿಗಳನ್ನು ಅಳವಡಿಸಲಾಗುತ್ತಿದೆ. ಅಲ್ಲದೆ ಆನೆ ಕಾರ್ಯಪಡೆ, ಚಿರತೆ ಕಾರ್ಯಪಡೆಗಳು ಕಾರ್ಯನಿರ್ವಹಿಸುತ್ತಿದ್ದು, ಎಸ್‌ಎಂಎಸ್ ಹಾಗೂ ಡಿಜಿಟಲ್ ಬೋರ್ಡ್‌ಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಿಎಂ, “ಕಾಡುಪ್ರಾಣಿಗಳು ಸದ್ಯ ಇರುವ ಅಡೆತಡೆಗಳನ್ನು ದಾಟಲು ಬೇರೆ ಬೇರೆ ಮಾರ್ಗಗಳನ್ನು ಕಂಡುಕೊಳ್ಳುತ್ತಿವೆ. ಹಾಗಾಗಿ ನಮ್ಮ ಅಧಿಕಾರಿಗಳು ಕೇವಲ ಹಳೇ ಪದ್ಧತಿ ನೆಚ್ಚಿಕೊಳ್ಳದೆ ಹೊಸ ಮಾದರಿಗಳ ಬಗ್ಗೆ ಅಧ್ಯಯನ ನಡೆಸಬೇಕು” ಎಂದರು. ಅಲ್ಲದೆ, ಪ್ರಾಣಿಗಳ ಸಂಚಾರ ಮತ್ತು ಚಟುವಟಿಕೆಗಳ ಮೇಲೆ ನಿಗಾ ಇಡಲು ಥರ್ಮಲ್ ಡ್ರೋನ್ (Thermal Drone) ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲು ಸೂಚಿಸಿದರು.
ಖಾಲಿ ಹುದ್ದೆಗಳ ಭರ್ತಿ ಮತ್ತು ಪ್ರಮುಖ ಯೋಜನೆಗಳ ಅನುಮತಿ:
ಅರಣ್ಯ ಇಲಾಖೆಯ ಆಡಳಿತ ವ್ಯವಸ್ಥೆಯನ್ನು ಬಲಪಡಿಸಲು ವಿವಿಧ ಹಂತಗಳಲ್ಲಿ ಖಾಲಿ ಇರುವ ಹುದ್ದೆಗಳ ಸಮಗ್ರ ವಿವರಗಳನ್ನು ಪಡೆದ ಮುಖ್ಯಮಂತ್ರಿಗಳು, ಅತ್ಯಗತ್ಯವಾಗಿರುವ ಹುದ್ದೆಗಳ ಭರ್ತಿಗೆ ತಕ್ಷಣ ಕ್ರಮ ಕೈಗೊಳ್ಳುವಂತೆ ಚರ್ಚಿಸಿದರು. ಇದೇ ವೇಳೆ ರಾಜ್ಯದ ಪ್ರಮುಖ ಯೋಜನೆಗಳಾದ ಶರಾವತಿ ಪಂಪ್ ಸ್ಟೋರೇಜ್, ಗೋವಾ ತಮ್ನೇರ್, ಕಳಸಾ ಬಂಡೂರಿ ಹಾಗೂ ಬಿಡಿಎ ಪೆರಿಫೆರಲ್ ರಿಂಗ್ ರಸ್ತೆ (PRR) ಯೋಜನೆಗಳಿಗೆ ಸಂಬಂಧಿಸಿದಂತೆ ರಾಜ್ಯ ಮತ್ತು ಕೇಂದ್ರ ಅರಣ್ಯ ಇಲಾಖೆಗಳಲ್ಲಿ ಬಾಕಿ ಇರುವ ಅರಣ್ಯ ಅನುಮತಿ ಪ್ರಕ್ರಿಯೆಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.
ಈ ಮಹತ್ವದ ಸಭೆಯಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್, ಅಪರ ಮುಖ್ಯ ಕಾರ್ಯದರ್ಶಿಗಳಾದ ತುಷಾರ್ ಗಿರಿನಾಥ್, ರಿತೇಶ್ ಕುಮಾರ್ ಸಿಂಗ್, ಅಂಜುಮ್ ಪರ್ವೇಜ್, ಕರ್ನಾಟಕ ಅರಣ್ಯ ಪಡೆ ಮುಖ್ಯಸ್ಥರಾದ ಮೀನಾಕ್ಷಿ ನೇಗಿ ಹಾಗೂ ಸಿಎಂ ಆರ್ಥಿಕ ಸಲಹೆಗಾರ ಎಲ್.ಕೆ. ಅತೀಕ್ ಸೇರಿದಂತೆ ಹಲವು ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

