ಬೆಂಗಳೂರು: “ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಚುನಾವಣೆಯನ್ನು ಕಾಂಗ್ರೆಸ್ ಸರ್ಕಾರ ನಡೆಸುತ್ತೋ ಇಲ್ಲವೋ ಗೊತ್ತಿಲ್ಲ, ಆದರೆ ಬಿಜೆಪಿ ಮಾತ್ರ ಚುನಾವಣೆಗೆ ಸಂಪೂರ್ಣವಾಗಿ ಸಿದ್ಧವಾಗಿದೆ” ಎಂದು ವಿಧಾನಸಭೆಯ ವಿರೋಧಪಕ್ಷದ ನಾಯಕ ಆರ್. ಅಶೋಕ್ ಅವರು ಹೇಳಿದ್ದಾರೆ.
ಮಲ್ಲೇಶ್ವರದ ರಾಜ್ಯ ಬಿಜೆಪಿ ಕಾರ್ಯಾಲಯ ‘ಜಗನ್ನಾಥ ಭವನʼದಲ್ಲಿ ಇಂದು ನಡೆದ ಜಿಬಿಎ ಚುನಾವಣಾ ಉಸ್ತುವಾರಿಗಳ ಮಹತ್ವದ ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು,ಚುನಾವಣಾ ಸಿದ್ಧತೆಗಳ ಕುರಿತು ಮಾಹಿತಿ ನೀಡಿದ ಆರ್. ಅಶೋಕ್, “ಈಗಾಗಲೇ ಚುನಾವಣಾ ಉಸ್ತುವಾರಿಗಳ ಪಟ್ಟಿಯನ್ನು ಘೋಷಣೆ ಮಾಡಲಾಗಿದೆ. ಈ ಉಸ್ತುವಾರಿಗಳು ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಖುದ್ದಾಗಿ ಭೇಟಿ ನೀಡಲಿದ್ದಾರೆ. ಅಲ್ಲಿನ ಮತದಾರರ ಪಟ್ಟಿಯ ಪರಿಷ್ಕರಣೆ, ಸಂಭಾವ್ಯ ಅಭ್ಯರ್ಥಿಗಳ ಆಯ್ಕೆ ಮತ್ತು ಸ್ಥಳೀಯ ಸಮಸ್ಯೆಗಳ ಕುರಿತು ಸುದೀರ್ಘ ಚರ್ಚೆ ನಡೆಸಲಿದ್ದಾರೆ” ಎಂದರು. ಈಗಾಗಲೇ ನಾಲ್ಕೈದು ಸಭೆಗಳನ್ನು ನಡೆಸಲಾಗಿದ್ದು, ಐದೂ ಪಾಲಿಕೆಗಳನ್ನು ಗೆಲ್ಲಲು ಕ್ಷೇತ್ರಗಳ ಶಾಸಕರು ಪೂರ್ಣ ಪ್ರಮಾಣದಲ್ಲಿ ಶ್ರಮಿಸುತ್ತಿದ್ದಾರೆ. ಇದಕ್ಕಾಗಿ ಪ್ರತ್ಯೇಕ ಪ್ರಣಾಳಿಕೆ ಸಮಿತಿಯನ್ನು ರಚಿಸಲಾಗುವುದು ಎಂದು ಅವರು ತಿಳಿಸಿದರು.
ಮೂರು ವರ್ಷದಲ್ಲಿ ಬೆಂಗಳೂರಿಗೆ ದ್ರೋಹ:
ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ ಅವರು, “ಕಳೆದ ಮೂರು ವರ್ಷಗಳಲ್ಲಿ ಕಾಂಗ್ರೆಸ್ ಸರ್ಕಾರ ಬೆಂಗಳೂರಿಗೆ ಕೇವಲ ದ್ರೋಹ ಮತ್ತು ಅನ್ಯಾಯ ಮಾಡಿದೆ. ನಗರದ ಕಸದ ಸಮಸ್ಯೆ ನಿವಾರಿಸಲು ಇವರಿಂದ ಸಾಧ್ಯವಾಗಿಲ್ಲ, ರಸ್ತೆ ಗುಂಡಿಗಳನ್ನೂ ಮುಚ್ಚಿಲ್ಲ. ಸಾರ್ವಜನಿಕರ ಮೇಲೆ ತೆರಿಗೆ ಏರಿಕೆ ಮಾಡಿದ್ದು ಬಿಟ್ಟರೆ ಈ ಸರ್ಕಾರದ ಬೇರೆ ಯಾವುದೇ ಸಾಧನೆ ಇಲ್ಲ” ಎಂದು ಕಟುವಾಗಿ ಟೀಕಿಸಿದರು.
ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಸರ್ಕಾರದ ಕ್ಯಾತೆ:
ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯ ಬಗ್ಗೆ ಮಾತನಾಡಿದ ಅಶೋಕ್, “ರಾಜ್ಯ ಸರ್ಕಾರ ಈ ಪ್ರಕ್ರಿಯೆಗೆ ಸರಿಯಾದ ಅಧಿಕಾರಿಗಳನ್ನು ನೇಮಿಸಿಲ್ಲ. 25 ರಿಂದ 30 ಜನ ಬಿಎಲ್‌ಒಗಳು ಇರಬೇಕಾದ ಜಾಗದಲ್ಲಿ ಕೇವಲ 10 ರಿಂದ 11 ಅಧಿಕಾರಿಗಳನ್ನು ಮಾತ್ರ ನಿಯೋಜಿಸಲಾಗಿದೆ. ಸರ್ಕಾರ ಆರಂಭದಲ್ಲೇ ಏನಾದರೂ ಒಂದು ಕ್ಯಾತೆ ತೆಗೆದು ಈ ಪರಿಷ್ಕರಣೆ ಪ್ರಕ್ರಿಯೆಗೆ ಅಡ್ಡಿಪಡಿಸಲು ಯತ್ನಿಸುತ್ತಿದೆ” ಎಂದು ದೂರಿದರು.
ಬಾಂಗ್ಲಾದೇಶೀಯರ ಹೆಸರು ತೆಗೆಯಲು ಕಾಂಗ್ರೆಸ್‌ಗೆ ಇಷ್ಟವಿಲ್ಲ:
“ನಕಲಿ ಮತದಾರರನ್ನು ಹೊರದಬ್ಬಿ, ನೈಜ ಮತದಾರರಿಗೆ ಮಾತ್ರ ಅವಕಾಶ ಕಲ್ಪಿಸುವುದು ಈ ಪರಿಷ್ಕರಣೆಯ ಮುಖ್ಯ ಉದ್ದೇಶ. ಇದು ಡಾ. ಬಿ.ಆರ್. ಅಂಬೇಡ್ಕರ್ ಅವರು ನಮಗೆ ನೀಡಿದ ಪ್ರಜಾಪ್ರಭುತ್ವದ ಆಶಯವಾಗಿದೆ. ಆದರೆ, ಮತದಾರರ ಪಟ್ಟಿಯಿಂದ ಅಕ್ರಮ ಬಾಂಗ್ಲಾದೇಶೀಯರ ಹೆಸರುಗಳನ್ನು ತೆಗೆದುಹಾಕಲು ಕಾಂಗ್ರೆಸ್ ಸರ್ಕಾರಕ್ಕೆ ಇಷ್ಟವಿಲ್ಲ”ಅಲ್ಲದೆ ಬಿಎಲ್‍ಒಗಳು ಪಕ್ಷ ಚಿಹ್ನೆ ಇಟ್ಟುಕೊಂಡು ಪ್ರಚಾರ ಮಾಡುತ್ತಿದ್ದಾರೆ. ಇದು ತಪ್ಪು. ಕೂಡಲೇ ಚುನಾವಣಾ ಆಯೋಗ ಕ್ರಮ ಕೈಗೊಳ್ಳಬೇಕು ಎಂದು ಆರ್. ಅಶೋಕ್ ಗಂಭೀರ ಆರೋಪ ಮಾಡಿದರು.
ಬ್ರ್ಯಾಂಡ್ ಬೆಂಗಳೂರು ಹೆಸರಿನಲ್ಲಿ ತಾರತಮ್ಯದ ಬೆಂಗಳೂರು ಮಾಡುತ್ತಿದೆ:
“ಕಾಂಗ್ರೆಸ್‌ನವರು ಅಧಿಕಾರಕ್ಕೆ ಬರುವ ಮುನ್ನ ಬ್ರ್ಯಾಂಡ್ ಬೆಂಗಳೂರು ಮಾಡುವುದಾಗಿ ದೊಡ್ಡ ಮಾತುಗಳನ್ನಾಡಿದ್ದರು. ಆದರೆ ಈಗ ಬ್ರ್ಯಾಂಡ್ ಬೆಂಗಳೂರು ಮಾಡುವ ಬದಲು ತಾರತಮ್ಯದ ಬೆಂಗಳೂರು ಮಾಡುತ್ತಿದ್ದಾರೆ” ಎಂದು ಅಶೋಕ್ ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.ಕಾಂಗ್ರೆಸ್ ಸರ್ಕಾರವು ರಾಜಧಾನಿಯ ಅಭಿವೃದ್ಧಿ ಅನುದಾನ ಹಂಚಿಕೆಯಲ್ಲಿ ರಾಜಕೀಯ ಮಾಡುತ್ತಿದೆ ಎಂದು ದೂರಿದರು.
ಅಭಿವೃದ್ಧಿ ಕುಂಠಿತಕ್ಕೆ ಸರ್ಕಾರದ ನೀತಿ ಕಾರಣ:
ಕಾಂಗ್ರೆಸ್ ಶಾಸಕರಿರುವ ಸಣ್ಣ ಸಣ್ಣ ಕ್ಷೇತ್ರಗಳಿಗೆ ಕೋಟ್ಯಂತರ ರೂಪಾಯಿ ಅನುದಾನ ನೀಡಲಾಗುತ್ತಿದೆ. ಆದರೆ, ಭೌಗೋಳಿಕವಾಗಿ ದೊಡ್ಡದಾಗಿರುವ ಬಿಜೆಪಿ ಶಾಸಕರ ಕ್ಷೇತ್ರಗಳಿಗೆ ಅತ್ಯಂತ ಕಡಿಮೆ ಅನುದಾನ ನೀಡಿ ತಾರತಮ್ಯ ಎಸಗಲಾಗುತ್ತಿದೆ ಎಂದು ಅಶೋಕ್ ಆಕ್ರೋಶ ವ್ಯಕ್ತಪಡಿಸಿದರು. “ಬಿಜೆಪಿ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋದರೆ ಮಾತ್ರ ಬೆಂಗಳೂರಿನ ಸಮಗ್ರ ಅಭಿವೃದ್ಧಿ ಸಾಧ್ಯ. ಈಗಲೇ ಟೆಂಡರ್ ಪ್ರಕ್ರಿಯೆಗಳು ವಿಳಂಬವಾಗುತ್ತಿದ್ದು, ಒಂದು ವೇಳೆ ಸ್ಥಳೀಯ ಸಂಸ್ಥೆಗಳ ಚುನಾವಣೆ ಘೋಷಣೆಯಾಗಿ ನೀತಿ ಸಂಹಿತೆ ಜಾರಿಯಾದರೆ ಇಡೀ ಅಭಿವೃದ್ಧಿ ಕಾರ್ಯಗಳು ಸಂಪೂರ್ಣವಾಗಿ ಸ್ಥಗಿತಗೊಳ್ಳಲಿವೆ” ಎಂದು ಅವರು ಎಚ್ಚರಿಸಿದರು.
ಕಳೆದ 15 ವರ್ಷಗಳ ಲೆಕ್ಕ ಕೊಡಿ:
ಅನುದಾನ ಹಂಚಿಕೆಯಲ್ಲಿ ಪಾರದರ್ಶಕತೆ ಇರಬೇಕು ಎಂದು ಒತ್ತಾಯಿಸಿದ ಅವರು, “ಕಳೆದ ಹದಿನೈದು ವರ್ಷಗಳಲ್ಲಿ ಬೆಂಗಳೂರಿನ ಯಾವ ಯಾವ ಕ್ಷೇತ್ರಗಳಿಗೆ ಎಷ್ಟೆಷ್ಟು ಅನುದಾನ ನೀಡಲಾಗಿದೆ ಎಂಬ ಸಂಪೂರ್ಣ ಮಾಹಿತಿಯನ್ನು ಸರ್ಕಾರ ಬಹಿರಂಗಪಡಿಸಲಿ. ಆಗ ಬಿಜೆಪಿ ಸರ್ಕಾರವಿದ್ದಾಗ ಯಾರು ಎಷ್ಟು ಅನುದಾನ ಕೊಟ್ಟಿದ್ದಾರೆ ಮತ್ತು ಪ್ರಸ್ತುತ ಕಾಂಗ್ರೆಸ್ ಸರ್ಕಾರದಲ್ಲಿ ಎಲ್ಲಿ ತಾರತಮ್ಯ ನಡೆಯುತ್ತಿದೆ ಎಂಬ ಸತ್ಯ ಸಾರ್ವಜನಿಕರ ಮುಂದೆ ಬರಲಿದೆ” ಎಂದು ಸವಾಲು ಹಾಕಿದರು.
ಬಿಜೆಪಿಯಲ್ಲಿ ವೈಯಕ್ತಿಕ ನಿರ್ಧಾರಗಳಿಲ್ಲ – ಶಿಸ್ತು ಮುಖ್ಯ:
ಇದೇ ವೇಳೆ ಪಕ್ಷದ ಆಂತರಿಕ ವಿಚಾರಗಳು ಹಾಗೂ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ಕುರಿತಾದ ಡಿ.ವಿ. ಸದಾನಂದಗೌಡರ ಹೇಳಿಕೆಗಳ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಆರ್. ಅಶೋಕ್, “ನಮ್ಮದು ಸಾಮೂಹಿಕ ನೇತೃತ್ವದ ರಾಷ್ಟ್ರೀಯ ಪಕ್ಷ. ಇಲ್ಲಿ ಯಾರೋ ಒಬ್ಬರು ಹೇಳಿದ ತಕ್ಷಣ ಎಲ್ಲವೂ ನಡೆದುಬಿಡುವುದಿಲ್ಲ. ಸದಾನಂದಗೌಡರು ಈಗಾಗಲೇ ಆ ಹೇಳಿಕೆ ತಮ್ಮದಲ್ಲ ಎಂದು ಸ್ಪಷ್ಟಪಡಿಸಿದ್ದಾರೆ” ಎಂದರು. ಪಕ್ಷದಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ ಮತ್ತು ನಾವೆಲ್ಲರೂ ಒಂದಾಗಿಯೇ ಮುನ್ನಡೆಯಲಿದ್ದೇವೆ. ಪಕ್ಷದ ಆಂತರಿಕ ವಿಚಾರಗಳ ಬಗ್ಗೆ ಯಾರೂ ಬಹಿರಂಗವಾಗಿ ಮಾತನಾಡಬಾರದು ಎಂದು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದ್ದು, ಬಿಜೆಪಿಯಲ್ಲಿ ವ್ಯಕ್ತಿಗಿಂತ ಪಕ್ಷ ಮತ್ತು ಶಿಸ್ತು ಮುಖ್ಯ ಎಂದು ಅವರು ಸ್ಪಷ್ಟಪಡಿಸಿದರು.
ಪಕ್ಷದ ಬೆನ್ನಿಗೆ ಚೂರಿ ಹಾಕಿದವರಿಗೆ ರಾಜಕೀಯ ಅಂತ್ಯ ನಿಶ್ಚಿತ;
“ವಿಧಾನ ಪರಿಷತ್ ಚುನಾವಣೆಯಲ್ಲಿ ಯಾರ್ಯಾರು ಅಡ್ಡ ಮತದಾನ (Cross Voting) ಮಾಡಿದ್ದಾರೆ ಎಂಬ ಸತ್ಯ ಶೀಘ್ರದಲ್ಲೇ ಹೊರಬರಲಿದೆ. ಪಕ್ಷದ ವಿರುದ್ಧ ನಡೆದುಕೊಂಡು, ಬೆನ್ನಿಗೆ ಚೂರಿ ಹಾಕಿದವರ ರಾಜಕೀಯ ಜೀವನವನ್ನು ಅಂತ್ಯ ಮಾಡುತ್ತೇವೆ”. ಕಟ್ಟುನಿಟ್ಟಾಗಿ ಬುದ್ಧಿ ಕಲಿಸುತ್ತೇವೆ, ಈ ಬಗ್ಗೆ ಕೇಂದ್ರದ ಹಿರಿಯ ನಾಯಕರು ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದರು.
ಕಾಂಗ್ರೆಸ್‌ಗೆ ಆರ್ಥಿಕ ಬರಗಾಲ – ಅಭಿವೃದ್ಧಿ ಶೂನ್ಯ:
ರಾಜ್ಯ ಸರ್ಕಾರದ ಆರ್ಥಿಕ ಪರಿಸ್ಥಿತಿಯ ಕುರಿತು ವಾಗ್ದಾಳಿ ನಡೆಸಿದ ಅಶೋಕ್, “ರಾಜ್ಯದಲ್ಲಿ ಮಳೆ ಕೊರತೆಯಾಗಿರಬಹುದು, ಆದರೆ ಕಾಂಗ್ರೆಸ್ ಸರ್ಕಾರಕ್ಕೆ ಆರ್ಥಿಕ ಬರಗಾಲ ಆವರಿಸಿದೆ. ಇವರ ಬಳಿ ನೀಡಲು ಹಣವೇ ಇಲ್ಲ. ಮುಂದಿನ ಮೂರು ವರ್ಷಗಳೂ ಇವರು ಯಾವುದೇ ಕ್ಷೇತ್ರಕ್ಕೆ ಅನುದಾನ ಕೊಡುವುದಿಲ್ಲ. ಈ ಸರ್ಕಾರ ಜನರ ಪಾಲಿಗೆ ಸತ್ತು ಹೋಗಿದೆ” ಎಂದು ಆಕ್ರೋಶ ಹೊರಹಾಕಿದರು.
ಅಭಿವೃದ್ಧಿ ಬಿಟ್ಟು ಆರ್‌ಎಸ್ಎಸ್ ಜಪ:
“ಕಾಂಗ್ರೆಸ್ಸಿಗರು ರಾಜ್ಯದ ಪ್ರಗತಿ ಹಾಗೂ ಅಭಿವೃದ್ಧಿ ಬಗ್ಗೆ ಮಾತನಾಡುವುದನ್ನು ಬಿಟ್ಟು ಕೇವಲ ಆರ್‌ಎಸ್ಎಸ್ ಬಗ್ಗೆ ಮಾತನಾಡುತ್ತಿದ್ದಾರೆ” ಎಂದು ಅಶೋಕ್ ವ್ಯಂಗ್ಯವಾಡಿದರು. ಸಚಿವ ಪ್ರಿಯಾಂಕ್ ಖರ್ಗೆ ಅವರ ವಿರುದ್ಧ ವಾಗ್ದಾಳಿ ನಡೆಸಿದ ಅವರು, “ಪ್ರಿಯಾಂಕ್ ಖರ್ಗೆ ಅವರು ತಮ್ಮ ಇಲಾಖೆ ಹಾಗೂ ಸ್ವಕ್ಷೇತ್ರ ಚಿತ್ತಾಪುರದ ಪ್ರಗತಿ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ. ಅವರ ಕ್ಷೇತ್ರವೇ ಈಗ ಚಿತ್ರವಿಚಿತ್ರವಾಗಿದೆ. ಅದನ್ನು ಬಿಟ್ಟು ಜಗತ್ತಿನಾದ್ಯಂತ ಹರಡಿರುವ ಆರ್‌ಎಸ್ಎಸ್ ಅನ್ನು ನಿಷೇಧಿಸುವ ಬಗ್ಗೆ ಹಗಲುಗನಸು ಕಾಣುತ್ತಿದ್ದಾರೆ” ಎಂದು ಕಟುವಾಗಿ ಟೀಕಿಸಿದರು.
ಕಾಂಗ್ರೆಸ್ ಸಾಧನೆ ಶೂನ್ಯ – ಸವಾಲು:
ಕಾಂಗ್ರೆಸ್ ನಾಯಕರಿಗೆ ತಾಕತ್ತಿದ್ದರೆ ಅಭಿವೃದ್ಧಿ ವಿಷಯದ ಕುರಿತು ಬಹಿರಂಗ ಚರ್ಚೆಗೆ ಬರಲಿ ಎಂದು ಸವಾಲು ಹಾಕಿದ ಮಾಜಿ ಉಪಮುಖ್ಯಮಂತ್ರಿಗಳು, “ರಾಜ್ಯದಲ್ಲಿ ವಿಮಾನ ನಿಲ್ದಾಣಗಳು, ಮೆಟ್ರೋ ರೈಲು ಯೋಜನೆ ಹಾಗೂ ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಯನ್ನು ಜಾರಿಗೆ ತಂದಿದ್ದು ಬಿಜೆಪಿ ಸರ್ಕಾರ. ಆದರೆ ಈ ಕಾಂಗ್ರೆಸ್ ಸರ್ಕಾರದ ಸಾಧನೆ ಮಾತ್ರ ಸಂಪೂರ್ಣ ಶೂನ್ಯ” ಎಂದು ಲೇವಡಿ ಮಾಡಿದರು.

