ಬೆಂಗಳೂರು: ವಿಜಯಪುರ ಜಿಲ್ಲೆಯ ರೈಲ್ವೆ ಸಂಪರ್ಕವನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಜಿಲ್ಲಾ ಕೇಂದ್ರದಲ್ಲಿ ಹೊಸ ಕೋಚ್ ಡಿಪೋ ಸ್ಥಾಪಿಸಲು ಮತ್ತು ರೈಲು ನಿಲ್ದಾಣದಲ್ಲಿ ಹೆಚ್ಚುವರಿ ದ್ವಾರವನ್ನು ನಿರ್ಮಿಸಲು ಒತ್ತಾಯಿಸಿ ಮೂಲಸೌಕರ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ ಬಿ ಪಾಟೀಲ ಅವರು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಮತ್ತು ಸಹಾಯಕ ಸಚಿವ ವಿ. ಸೋಮಣ್ಣ ಅವರಿಗೆ ಪತ್ರ ಬರೆದಿದ್ದಾರೆ.
ಹಿಂದೆ ವಿಜಯಪುರ ರೈಲ್ವೆ ನಿಲ್ದಾಣದ ಆವರಣದಲ್ಲಿದ್ದ ಗೂಡ್ಸ್ ಶೆಡ್ ಅನ್ನು ಪ್ರಸ್ತುತ ಅಲಿಯಾಬಾದ್ಗೆ ವರ್ಗಾಯಿಸಲಾಗಿದೆ. ಇದರಿಂದಾಗಿ ರೈಲ್ವೆ ನಿಲ್ದಾಣದ ಬಳಿ ಸಾಕಷ್ಟು ಖಾಲಿ ಜಾಗ ಲಭ್ಯವಿದ್ದು, ಕೋಚ್ ಡಿಪೋ ನಿರ್ಮಾಣಕ್ಕೆ ಭೂಮಿಯ ಕೊರತೆ ಎದುರಾಗುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಇಲ್ಲಿ ಡಿಪೋ ಆರಂಭವಾದರೆ ಇದನ್ನು ಪ್ರಮುಖ ರೈಲು ನಿರ್ವಹಣಾ ಕೇಂದ್ರವನ್ನಾಗಿ (Maintenance Hub) ಅಭಿವೃದ್ಧಿಪಡಿಸಬಹುದು. ಇದರಿಂದ ವಿಜಯಪುರ ಸೇರಿದಂತೆ ಇಡೀ ಉತ್ತರ ಕರ್ನಾಟಕ ಭಾಗಕ್ಕೆ ರೈಲು ಸಂಚಾರ ವ್ಯವಸ್ಥೆಯನ್ನು ಮತ್ತಷ್ಟು ವಿಸ್ತರಿಸಲು ಅನುಕೂಲವಾಗುತ್ತದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ವಿಜಯಪುರವು ವಿಶ್ವಪ್ರಸಿದ್ಧ ಪ್ರವಾಸಿ ತಾಣವಾಗಿದ್ದು, ಐತಿಹಾಸಿಕ ಸ್ಮಾರಕಗಳನ್ನು ವೀಕ್ಷಿಸಲು ವರ್ಷವಿಡೀ ದೇಶ-ವಿದೇಶಗಳಿಂದ ಲಕ್ಷಾಂತರ ಪ್ರವಾಸಿಗರು ಆಗಮಿಸುತ್ತಾರೆ. ವಿಶೇಷವಾಗಿ ಹಬ್ಬಗಳು, ರಜೆ ದಿನಗಳು ಮತ್ತು ವಾರಾಂತ್ಯದಲ್ಲಿ ಇಲ್ಲಿನ ರೈಲು ನಿಲ್ದಾಣದಲ್ಲಿ ಪ್ರಯಾಣಿಕರ ದಟ್ಟಣೆ ಹೆಚ್ಚಿರುತ್ತದೆ. ಈ ಜನದಟ್ಟಣೆಯನ್ನು ನಿಯಂತ್ರಿಸಲು ಮತ್ತು ಪ್ರಯಾಣಿಕರ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಲು ನಿಲ್ದಾಣದಲ್ಲಿ ಮತ್ತೊಂದು ಆಗಮನ ಹಾಗೂ ನಿರ್ಗಮನ ದ್ವಾರವನ್ನು (Entry/Exit Gate) ಶೀಘ್ರದಲ್ಲೇ ಅಭಿವೃದ್ಧಿಪಡಿಸಬೇಕು ಎಂದು ಸಚಿವರು ಮನವಿ ಮಾಡಿದ್ದಾರೆ. ಮುಂಬರುವ ತಿಂಗಳುಗಳಲ್ಲಿ ಬೆಂಗಳೂರು ಮತ್ತು ವಿಜಯಪುರ ನಡುವೆ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಸೇವೆ ಆರಂಭವಾಗಲಿದ್ದು, ವಿಜಯಪುರದಲ್ಲಿ ಕೋಚ್ ಡಿಪೋ ಸ್ಥಾಪನೆಯಾದರೆ ಈ ಹೈಸ್ಪೀಡ್ ರೈಲಿನ ನಿರ್ವಹಣೆ ಕಾರ್ಯವೂ ಅತ್ಯಂತ ಸುಲಭವಾಗಲಿದೆ ಎಂದು ಎಂ ಬಿ ಪಾಟೀಲ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

