ಬೆಂಗಳೂರು: ಎಸ್‌ಐಆರ್ (SIR) ಪ್ರಕ್ರಿಯೆಗೆ ಸಂಬಂಧಿಸಿದಂತೆ ಸರ್ಕಾರದ ಮೇಲೆ ಕೇಳಿಬರುತ್ತಿರುವ ಆರೋಪಗಳನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕಟುವಾಗಿ ತಳ್ಳಿಹಾಕಿದ್ದಾರೆ. ಸಾರ್ವಜನಿಕರ ಮತದಾನದ ಹಕ್ಕನ್ನು ರಕ್ಷಿಸಲು ಸರ್ಕಾರ ಕೇವಲ ಜಾಗೃತಿ ಮೂಡಿಸುತ್ತಿದೆಯೇ ವಿನಃ ಇದರಲ್ಲಿ ಯಾವುದೇ ರಾಜಕೀಯ ಹಸ್ತಕ್ಷೇಪವಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಬಡವರು ಮತ್ತು ಅಲ್ಪಸಂಖ್ಯಾತ ಸಮುದಾಯಗಳನ್ನು ಮತದಾನದ ಹಕ್ಕಿನಿಂದ ವಂಚಿಸುವುದು ವಿರೋಧ ಪಕ್ಷಗಳ ಹಿಡನ್ ಅಜೆಂಡಾ ಆಗಿದೆ ಎಂದು ಅವರು ಆಪಾದಿಸಿದ್ದಾರೆ.
ವಿಧಾನಸೌಧದ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಸ್‌ಐಆರ್ ಪ್ರಕ್ರಿಯೆಯ ವೇಳಾಪಟ್ಟಿಯ ಬಗ್ಗೆ ತಮಗೂ ಭಿನ್ನಾಭಿಪ್ರಾಯಗಳಿದ್ದು, ಈ ಕುರಿತು ಈಗಾಗಲೇ ನ್ಯಾಯಾಲಯದಲ್ಲಿ ವಾದ ಮಂಡಿಸಲಾಗಿದೆ ಎಂದರು. ಅಗತ್ಯ ಬಿದ್ದರೆ ವೇಳಾಪಟ್ಟಿಯ ವಿರುದ್ಧ ಮತ್ತೊಮ್ಮೆ ಕೋರ್ಟ್ ಮೊರೆ ಹೋಗುವುದಾಗಿ ತಿಳಿಸಿದ ಅವರು, ನಾಗರಿಕರ ಮತದಾನದ ಹಕ್ಕನ್ನು ಉಳಿಸಲು ಚುನಾವಣಾ ಆಯೋಗದ ನಿಯಮಾವಳಿಗಳ ಅಡಿಯಲ್ಲೇ ಸರ್ಕಾರ ಸಹಕರಿಸುತ್ತಿದೆ ಎಂದು ಸಮರ್ಥಿಸಿಕೊಂಡರು. ದೇಶದ ಬೇರೆ ಯಾವುದೇ ರಾಜ್ಯದಲ್ಲೂ ಈ ಮಟ್ಟಿಗೆ ಚುನಾವಣಾ ಪ್ರಕ್ರಿಯೆಗೆ ಪೂರಕ ಸಹಕಾರ ನೀಡುತ್ತಿಲ್ಲ ಎಂದು ಅವರು ಪ್ರತಿಪಾದಿಸಿದರು.
ಚುನಾವಣಾ ಆಯೋಗದ ಮಾರ್ಗದರ್ಶನದಂತೆಯೇ ಎಲ್ಲಾ ರಾಜಕೀಯ ಪಕ್ಷಗಳು ಬೂತ್ ಮಟ್ಟದ ಏಜೆಂಟರನ್ನು (BLA) ನೇಮಕ ಮಾಡಿಕೊಂಡಿದ್ದು, ಅಧಿಕಾರಿಗಳು ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಡಿಕೆಶಿ ವಿವರಿಸಿದರು. ಸರ್ಕಾರದ ಜಾಗೃತಿ ಅಭಿಯಾನವನ್ನು ಕಂಡು ವಿರೋಧ ಪಕ್ಷಗಳು ಭೀತಿಗೊಳಗಾಗಿವೆ. ಆಯೋಗದ ಮೇಲಿನ ಅಪನಂಬಿಕೆಯಿಂದಾಗಿ ಪ್ರಕ್ರಿಯೆಯನ್ನು ರದ್ದುಗೊಳಿಸುವಂತೆ ಒತ್ತಾಯಿಸುತ್ತಿದ್ದು, ಅಂತಿಮ ನಿರ್ಧಾರವನ್ನು ಚುನಾವಣಾ ಆಯೋಗವೇ ತೆಗೆದುಕೊಳ್ಳಲಿದೆ ಎಂದು ಅವರು ಹೇಳಿದರು.
ಅಕ್ರಮ ವಲಸಿಗರ ಹೆಸರಲ್ಲಿ ವಿರೋಧ ಪಕ್ಷಗಳ ರಾಜಕಾರಣ:
ರಾಜ್ಯದಲ್ಲಿ ಬಡವರು ಮತ್ತು ಸಾಮಾನ್ಯ ಜನರ ಮತದಾನದ ಹಕ್ಕನ್ನು ರಕ್ಷಿಸಲು ಸರ್ಕಾರ ಪ್ರಾಮಾಣಿಕವಾಗಿ ಶ್ರಮಿಸುತ್ತಿದೆ ಎಂದ ಸಿಎಂ ಅಕ್ರಮ ಬಾಂಗ್ಲಾ ವಲಸಿಗರ ನೆಪವಿಟ್ಟುಕೊಂಡು ರಾಜಕೀಯ ಮಾಡುತ್ತಿರುವ ವಿರೋಧ ಪಕ್ಷಗಳ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ್ದಾರೆ. ರಾಜ್ಯದಲ್ಲಿ ಈಗಾಗಲೇ ಸುಮಾರು 4.50 ಕೋಟಿ ನಾಗರಿಕರು ಜಾತಿ ಪ್ರಮಾಣಪತ್ರಗಳನ್ನು ಪಡೆದಿದ್ದು, ಇವುಗಳನ್ನು ಆನ್‌ಲೈನ್ ಮೂಲಕ ಸುಲಭವಾಗಿ ಡೌನ್‌ಲೋಡ್ ಮಾಡಿಕೊಳ್ಳಲು ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು. ನಿವಾಸ ದೃಢೀಕರಣ ಪತ್ರ ನೀಡುವ ಅಧಿಕಾರವನ್ನು ಉಪ ತಹಶೀಲ್ದಾರ್‌ಗೆ ವಹಿಸಲಾಗಿದೆ ಮತ್ತು ಯಾರಿಗೂ ಸಿಗದ 2002ರ ಹಳೆಯ ಮತಪತ್ರದ ದಾಖಲೆಗಳನ್ನು ಆನ್‌ಲೈನ್‌ನಲ್ಲಿ ಲಭ್ಯವಾಗುವಂತೆ ಮಾಡಲಾಗಿದೆ ಎಂದು ವಿವರಿಸಿದರು.
ಬಿಜೆಪಿ ನಾಯಕರು ಕೇವಲ ಅಕ್ರಮ ಬಾಂಗ್ಲಾ ವಲಸಿಗರ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ದೂರಿದ ಡಿಕೆಶಿ, ನಿಮ್ಮದೇ ಆಡಳಿತ ಅವಧಿಯಲ್ಲಿ ಅಧಿಕಾರವಿದ್ದಾಗ ಅವರನ್ನು ದೇಶದಿಂದ ಹೊರಹಾಕಲು ಯಾರು ತಡೆದಿದ್ದರು ಎಂದು ನೇರವಾಗಿ ಪ್ರಶ್ನಿಸಿದರು.
ಕೇಂದ್ರದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ದೇಶದ ಜನರಿಗಾಗಿ ಆಹಾರ ಭದ್ರತಾ ಕಾಯ್ದೆ ತಂದರು. ಆದರೆ ಬಿಜೆಪಿ ಆಡಳಿತವಿರುವ ಬಿಹಾರ ಮತ್ತು ಪಶ್ಚಿಮ ಬಂಗಾಳದಲ್ಲಿ ಮತದಾನದ ಹಕ್ಕು ಇಲ್ಲದವರಿಗೆ ಆಹಾರ ಪೂರೈಕೆ ಮಾಡುವುದಿಲ್ಲ ಎಂದು ಆದೇಶ ಹೊರಡಿಸಲಾಗಿದೆ ಎಂದು ಕಿಡಿಕಾರಿದರು. ರಾಜ್ಯದ ಬಡವರ ಆಸರೆಗಾಗಿ ತಾವು ಜಾರಿಗೆ ತಂದಿರುವ ಐದು ಗ್ಯಾರಂಟಿ ಯೋಜನೆಗಳನ್ನು ಬಿಜೆಪಿಯವರು ಬೇರೆ ರಾಜ್ಯಗಳಲ್ಲಿ ನಕಲು ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಇದೇ ಮೊದಲ ಬಾರಿಗೆ ಪ್ರತಿ ಬೂತ್ ಮಟ್ಟದಲ್ಲಿ ಜನರಿಗೆ ನೆರವಾಗಲು ಸಹಾಯ ಕೇಂದ್ರಗಳನ್ನು ತೆರೆಯಲಾಗಿದ್ದು, ವಿರೋಧ ಪಕ್ಷಗಳು ಟೀಕಿಸುವ ಬದಲು ಅಭಿನಂದನೆ ಸಲ್ಲಿಸಬೇಕು ಎಂದರು. ಚುನಾವಣೆ ಪ್ರಕ್ರಿಯೆಯಲ್ಲಿ ಬೂತ್ ಮಟ್ಟದ ಏಜೆಂಟರನ್ನು (BLA) ನೇಮಿಸಲು ಕಾನೂನಿನಲ್ಲಿ ಅವಕಾಶವಿದೆ. ರಾಜಕೀಯವಾಗಿ ಟೀಕೆ ಮಾಡುವವರ ನಾಲಿಗೆಗೆ ಎಲುಬಿಲ್ಲ, ಅವರ ಟೀಕೆಗಳು ಸಾಯುತ್ತವೆ ಆದರೆ ಸರ್ಕಾರದ ಜನಪರ ಕೆಲಸಗಳು ಉಳಿಯುತ್ತವೆ ಎಂದು ಅವರು ತಿರುಗೇಟು ನೀಡಿದರು.

