ಬೆಂಗಳೂರು: ಸ್ಯಾಂಡಲ್‌ವುಡ್‌ನ ಹಿರಿಯ ಹಾಗೂ ಜನಪ್ರಿಯ ನಟ ರಮೇಶ್ ಅರವಿಂದ್ ಅವರು ಇಂದು (ಜುಲೈ 7) ತಮ್ಮ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದಾರೆ. ಈ ವಿಶೇಷ ದಿನದಂದು ತಮ್ಮ ಅಧಿಕೃತ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಪತ್ನಿ ಅರ್ಚನಾ ಅವರೊಂದಿಗೆ ಇರುವ ಸುಂದರ ಚಿತ್ರವನ್ನು ಹಂಚಿಕೊಂಡಿರುವ ಅವರು, ತಮ್ಮ ದಾಂಪತ್ಯ ಜೀವನದ ಯಶಸ್ಸಿನ ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ.
ಏರಿಳಿತಗಳ ನಡುವೆಯೂ ಮುಂದುವರಿದ ಪಯಣ:
“ಇಂದು ನಾವು ಜೊತೆಯಾಗಿ ಸಾಗುತ್ತಿರುವ ದಾಂಪತ್ಯ ಜೀವನದ ಮತ್ತೊಂದು ವರ್ಷಕ್ಕೆ ಕಾಲಿಡುತ್ತಿದ್ದೇವೆ” ಎಂದು ಪೋಸ್ಟ್ ಆರಂಭಿಸಿರುವ ರಮೇಶ್ ಅರವಿಂದ್, ತಮ್ಮ ವೈವಾಹಿಕ ಬದುಕನ್ನು ‘ರೋಲರ್ ಕೋಸ್ಟರ್’ ಪಯಣಕ್ಕೆ ಹೋಲಿಸಿದ್ದಾರೆ. “ನಮ್ಮ ಈ ಜಂಟಿ ಪಯಣ ಯಶಸ್ವಿಯಾಗಿ ಸಾಗಲು ಪತ್ನಿಯ ಕೊನೆಯಿಲ್ಲದ ಕಾಳಜಿ ಹಾಗೂ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳನ್ನು ದೊಡ್ಡದು ಮಾಡದೆ ನಿಭಾಯಿಸುವ ನನ್ನ ಸ್ವಭಾವವೇ ಕಾರಣ” ಎಂದು ಅವರು ಬರೆದುಕೊಂಡಿದ್ದಾರೆ.
ಸಂಬಂಧ ಗಟ್ಟಿಗೊಳಿಸುವ ಸೂತ್ರ:
ಜೀವನದಲ್ಲಿ ಸದಾ ಸಂತೋಷ, ನಗು ಮಾತ್ರವಲ್ಲದೆ ಅಪರೂಪಕ್ಕೆ ಕಣ್ಣೀರು, ಸಣ್ಣಪುಟ್ಟ ನಿರಾಶೆಗಳೂ ಬರುತ್ತವೆ. ಆದರೆ ನಾವು ತಕ್ಷಣವೇ ನಮ್ಮ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸಿ (Repair), ಉತ್ಸಾಹ ತುಂಬಿ (Recharge), ಹೊಸತನದೊಂದಿಗೆ (Refresh) ಮತ್ತೆ ಹಳೆಯ ಸುವರ್ಣ ದಿನಗಳಿಗೆ ಮರಳುತ್ತೇವೆ ಎಂದು ರಮೇಶ್ ಅರವಿಂದ್ ವಿವರಿಸಿದ್ದಾರೆ. ಸದ್ಯ ಇವರ ಈ ಅರ್ಥಪೂರ್ಣ ಪೋಸ್ಟ್‌ಗೆ ಚಿತ್ರರಂಗದ ಗಣ್ಯರು ಹಾಗೂ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಶುಭಾಶಯಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ.

