Sat. Jul 11th, 2026

ಡಿ.ಕೆ.ಶಿವಕುಮಾರ್ ‘ಮುಖವಾಡದ ಸಿಎಂ’, ರಾಜ್ಯಕ್ಕೆ ನಾಮ ಹಾಕುತ್ತಿದ್ದಾರೆ: ಆರ್.ಅಶೋಕ್ ತೀವ್ರ ವ್ಯಂಗ್ಯ!

Share this with Friends

ಮೈಸೂರು: “ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕೇವಲ ಮುಖವಾಡದ ಮುಖ್ಯಮಂತ್ರಿಯಾಗಿದ್ದಾರೆ. ಅವರು ಇಡೀ ರಾಜ್ಯಕ್ಕೆ ನಾಮ ಹಾಕುವ ಕೆಲಸ ಮಾಡುತ್ತಿದ್ದಾರೆ,” ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ತೀವ್ರವಾಗಿ ಟೀಕಿಸಿದ್ದಾರೆ.

ಮೈಸೂರಿನ ಜಿ.ಕೆ. ಮೈದಾನದಲ್ಲಿ ಕಾಯಕ ಸಮುದಾಯಗಳ ಒಕ್ಕೂಟದ ವತಿಯಿಂದ ಆಯೋಜಿಸಲಾಗಿದ್ದ ವಿಧಾನ ಪರಿಷತ್ ನೂತನ ಸದಸ್ಯ ರಘು ಆರ್. ಕೌಟಲ್ಯ ಅವರ ಅಭಿನಂದನಾ ಸಮಾರಂಭ ಹಾಗೂ ಜಿಜೆಪಿ ಕೃತಜ್ಞತಾ ಸಮಾವೇಶದಲ್ಲಿ ಮಾತನಾಡಿದ ಅವರು, ದೇಶದಲ್ಲಿ ಲಕ್ಷಾಂತರ ಬಾಂಗ್ಲಾದೇಶ ಮತ್ತು ಪಾಕಿಸ್ತಾನದ ನುಸುಳುಕೋರರು ಇದ್ದು, ಸರ್ಕಾರದ ಸೌಲಭ್ಯಗಳನ್ನು ಪಡೆಯುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.

“ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಅವರು ಕೇವಲ ಮೂರು ಸಾವಿರ ರೂಪಾಯಿಗೆ ಬಾಂಗ್ಲಾದೇಶದವರಿಗೆ ಎಲ್ಲಾ ಸೌಲಭ್ಯಗಳನ್ನು ಒದಗಿಸಿದ್ದರು. ಅದೇ ಮಾದರಿಯಲ್ಲಿ ಈಗ ಕರ್ನಾಟಕದಲ್ಲೂ ಬಾಂಗ್ಲಾದೇಶದವರನ್ನು ಮತದಾರರ ಪಟ್ಟಿಗೆ ಸೇರಿಸಲು ವ್ಯವಸ್ಥಿತ ಹುನ್ನಾರ ನಡೆಯುತ್ತಿದೆ. ಇದಕ್ಕಾಗಿಯೇ ಅವರಿಗೆ ಶಾಶ್ವತ ನಿವಾಸಿ ಪತ್ರ ನೀಡಲು ಸರ್ಕಾರ ಮುಂದಾಗಿದೆ. ಇದನ್ನು ತಕ್ಷಣವೇ ಕೈಬಿಡಬೇಕು,” ಎಂದು ಅವರು ಒತ್ತಾಯಿಸಿದರು. ಪೌರತ್ವ ನೀಡುವ ಸಂಪೂರ್ಣ ಅಧಿಕಾರ ಕೇಂದ್ರ ಸರ್ಕಾರಕ್ಕೆ ಮಾತ್ರ ಇದೆ ಎಂದು ಅವರು ಇದೇ ವೇಳೆ ನೆನಪಿಸಿದರು.

“ಡಿ.ಕೆ. ಎಂದರೆ ಟೆಂಡರ್ ರಾಜಕಾರಣ”

ಡಿ.ಕೆ. ಶಿವಕುಮಾರ್ ಅವರ ಹೆಸರನ್ನು ಉಲ್ಲೇಖಿಸಿ ಲೇವಡಿ ಮಾಡಿದ ಅಶೋಕ್, “ಡಿ.ಕೆ. ಎಂದರೆ ಟೆಂಡರ್ ಎಂದರ್ಥ. ತಾವು ಅಧಿಕಾರದಲ್ಲಿ ಇರುವುದು ಕೆಲವೇ ದಿನಗಳಾದರೂ, ಹಲವು ವರ್ಷಗಳ ಅವಧಿಯ ದೊಡ್ಡ ದೊಡ್ಡ ಟೆಂಡರ್‌ಗಳನ್ನು ಕರೆಯುತ್ತಿದ್ದಾರೆ. ಅವರು ಉಪಮುಖ್ಯಮಂತ್ರಿಯಾಗಿರುವುದೇ ಟೆಂಡರ್ ಆಧಾರದ ಮೇಲೆ. ಈ ಹಿಂದೆ ರಾಹುಲ್ ಗಾಂಧಿ ಅವರು ಟೆಂಡರ್ ಹಾಕಿದ್ದರು, ಈಗ ಡಿ.ಕೆ. ಶಿವಕುಮಾರ್ ಆ ಟೆಂಡರ್ ಹಿಡಿದಿದ್ದಾರೆ,” ಎಂದು ಗಂಭೀರ ಆರೋಪ ಮಾಡಿದರು.

ಹಿಂದುಳಿದ ವರ್ಗಗಳಿಗೆ ಬಿಜೆಪಿ ಮನ್ನಣೆ

ನೂತನ ಎಂಎಲ್‌ಸಿ ರಘು ಕೌಟಲ್ಯ ಅವರಿಗೆ ವಿಧಾನ ಪರಿಷತ್‌ನಲ್ಲಿ ಅವಕಾಶ ನೀಡಿರುವುದನ್ನು ಸಮರ್ಥಿಸಿದ ಅಶೋಕ್, ಸಮಾಜದ ಅತ್ಯಂತ ಹಿಂದುಳಿದ ಮತ್ತು ಕಾಯಕ ಸಮುದಾಯಗಳನ್ನು ಗುರುತಿಸಿ ಅವರಿಗೆ ರಾಜಕೀಯ ಪ್ರಾತಿನಿಧ್ಯ ನೀಡುವುದೇ ಭಾರತೀಯ ಜನತಾ ಪಾರ್ಟಿಯ ಮುಖ್ಯ ಉದ್ದೇಶವಾಗಿದೆ ಎಂದು ತಿಳಿಸಿದರು.

ಅಹಿಂದ ಹೆಸರಲ್ಲಿ ಅಧಿಕಾರ ಅನುಭವಿಸಿ ಸಣ್ಣ ಜಾತಿಗಳನ್ನು ಕಾಂಗ್ರೆಸ್ ಕೈಬಿಟ್ಟಿತು: ಛಲವಾದಿ ನಾರಾಯಣಸ್ವಾಮಿ  “ರಾಜ್ಯದಲ್ಲಿ ಅಹಿಂದ ಜಪ ಮಾಡಿಕೊಂಡು ಅಧಿಕಾರ ಹಿಡಿದವರು ಕೇವಲ ರಾಜಕೀಯ ಸುಖ ಉಂಡು ಹೋದರೇ ಹೊರತು, ಅಹಿಂದ ವ್ಯಾಪ್ತಿಯಲ್ಲಿ ಬರುವ ಸಣ್ಣ ಸಣ್ಣ ಶ್ರಮಜೀವಿ ಸಮುದಾಯಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದರು,” ಎಂದು ವಿಧಾನ ಪರಿಷತ್ತಿನ ವಿರೋಧಪಕ್ಷದ ನಾಯಕರಾದ ಛಲವಾದಿ ನಾರಾಯಣಸ್ವಾಮಿ ದೂರಿದರು. “ಮೈಸೂರು ನಗರಕ್ಕೆ ಜಾಗತಿಕ ಮಟ್ಟದ ಮೆರುಗು ನೀಡಿದವರು ನಾಲ್ವಡಿ ಕೃಷ್ಣರಾಜೇಂದ್ರ ಒಡೆಯರ್. ಅವರ ರಾಜವಂಶದ ಕೊಡುಗೆಯನ್ನು ನಾಡು ಎಂದಿಗೂ ಮರೆಯಲು ಸಾಧ್ಯವಿಲ್ಲ. ಕಾಯಕ ಸಮುದಾಯಗಳು ಈ ದೇಶದ ನಿಜವಾದ ಶ್ರಮಜೀವಿಗಳು. ಕಾಯಕವಿಲ್ಲದೆ ಸಮಾಜದ ಉಳಿವು ಸಾಧ್ಯವಿಲ್ಲ, ಹೀಗಾಗಿ ಆಡಳಿತ ನಡೆಸುವ ಸರ್ಕಾರಗಳು ಇಂತಹ ಶ್ರಮಿಕ ವರ್ಗಕ್ಕೆ ಉದ್ಯೋಗಾವಕಾಶಗಳನ್ನು ಸೃಷ್ಟಿಸಬೇಕು,” ಎಂದು ಒತ್ತಾಯಿಸಿದರು.

ಪ್ರಧಾನಿ ನರೇಂದ್ರ ಮೋದಿ ಅವರು ಇಂತಹ ಕಾಯಕ ಸಮುದಾಯಗಳನ್ನು ತಮ್ಮದೇ ಸ್ವಂತ ಕುಟುಂಬದಂತೆ ಭಾವಿಸಿ, ಅವರ ಆರ್ಥಿಕ ಪ್ರಗತಿಗಾಗಿ ವಿಶೇಷ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ ಎಂದು ಶ್ಲಾಘಿಸಿದರು.

“ದಲಿತ ಮುಖಂಡರನ್ನು ಕಾಂಗ್ರೆಸ್ ಮಧ್ಯರಾತ್ರಿ ಹೊರದಬ್ಬಿತ್ತು”

ಸ್ವಾತಂತ್ರ್ಯ ತಂದುಕೊಟ್ಟೆವು ಎಂದು ಬೀಗುವ ಕಾಂಗ್ರೆಸ್ ಪಕ್ಷವು ಎಂದಿಗೂ ಸಣ್ಣ ಸಮುದಾಯಗಳನ್ನು ಗುರುತಿಸುವ ಕೆಲಸ ಮಾಡಲಿಲ್ಲ ಎಂದು ಟೀಕಿಸಿದ ಅವರು, ತಳ ಸಮುದಾಯದ ಮುಖಂಡರಿಗೆ ಕಾಂಗ್ರೆಸ್ ಮಾಡಿದ ಅನ್ಯಾಯಗಳನ್ನು ಪಟ್ಟಿ ಮಾಡಿದರು:

ಶ್ರೀನಿವಾಸ ಪ್ರಸಾದ್: “ತಳ ಸಮುದಾಯದಿಂದ ಬಂದು ವಿಧಾನಸಭೆಯಲ್ಲಿ ಗರ್ಜಿಸುತ್ತಿದ್ದ ಧೀಮಂತ ನಾಯಕ ಶ್ರೀನಿವಾಸ ಪ್ರಸಾದ್ ಅವರನ್ನು ಯಾವುದೇ ತಪ್ಪಿಲ್ಲದಿದ್ದರೂ ಕಾಂಗ್ರೆಸ್ ಪಕ್ಷವು ಮಧ್ಯರಾತ್ರಿ ಮಂತ್ರಿಮಂಡಲದಿಂದ ಹೊರದಬ್ಬಿತ್ತು.”

ಅಂಬರೀಶ್ ಹಾಗೂ ಬಸವಲಿಂಗಪ್ಪ: ಮಂಡ್ಯದ ಗಂಡು ಅಂಬರೀಶ್ ಮತ್ತು ದಲಿತರ ಧ್ವನಿಯಾಗಿದ್ದ ಬಿ. ಬಸವಲಿಂಗಪ್ಪ ಅವರಂತಹ ಹಿರಿಯ ನಾಯಕರನ್ನು ಕಾಂಗ್ರೆಸ್ ಕಡೆಗಣಿಸಿ, ಅವಮಾನಿಸಿ ಹೊರಹಾಕಿತು ಎಂದು ಆರೋಪಿಸಿದರು.

ದಲಿತರ ಹಣ ದುರುಪಯೋಗ: ಹೋರಾಟಕ್ಕೆ ಕರೆ

“ದಲಿತರ ಕಲ್ಯಾಣಕ್ಕಾಗಿ ಹಣ ಮೀಸಲಿಡುವುದಾಗಿ ಘೋಷಿಸಿದ ಕಾಂಗ್ರೆಸ್, ಈಗ ಆ ಹಣವನ್ನು ಸಮುದಾಯಕ್ಕೆ ತಲುಪಿಸದೆ ವಂಚಿಸುತ್ತಿದೆ ಮತ್ತು ಶೋಷಣೆ ಮಾಡುತ್ತಿದೆ. ದಲಿತರು ಈ ರಾಜಕೀಯ ತಂತ್ರವನ್ನು ಅರ್ಥಮಾಡಿಕೊಳ್ಳಬೇಕು. ದಲಿತರ ಹಕ್ಕಿನ ಹಣವನ್ನು ನುಂಗಿರುವ ಈ ಸರ್ಕಾರದ ವಿರುದ್ಧ ಈಗ ದಲಿತ ಮುಖಂಡರು ಒಗ್ಗಟ್ಟಾಗಿ ಬೀದಿಗಿಳಿದು ಹೋರಾಟ ಮಾಡಬೇಕಿದೆ,” ಎಂದು ಛಲವಾದಿ ನಾರಾಯಣಸ್ವಾಮಿ ಕರೆ ನೀಡಿದರು.

ರಘು ಕೌಟಲ್ಯ ಅವರು ಸಮಾಜದ ಜನಸಾಮಾನ್ಯರ ಪರವಾಗಿ ಹಲವು ವರ್ಷಗಳಿಂದ ಹೋರಾಟ ಮಾಡಿಕೊಂಡು ಬಂದ ಹಿನ್ನೆಲೆಯುಳ್ಳವರಾಗಿದ್ದು, ಅವರನ್ನು ಗುರುತಿಸಿ ಬಿಜೆಪಿ ಮೇಲ್ಮನೆಗೆ ಕಳುಹಿಸಿದೆ ಎಂದು ಅವರು ಹರ್ಷ ವ್ಯಕ್ತಪಡಿಸಿದರು.

 

 


Share this with Friends

Related Post