ಬೆಂಗಳೂರು: ವೈದ್ಯಕೀಯ, ದಂತ ವೈದ್ಯಕೀಯ ಮತ್ತು ಆಯುಷ್ ಕೋರ್ಸ್ ಗಳ ಸರ್ಕಾರಿ, ಮ್ಯಾನೇಜ್ಮೆಂಟ್, ಎನ್ ಆರ್ ಐ ಸೇರಿದಂತೆ ಎಲ್ಲ ರೀತಿಯ ಸೀಟುಗಳನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕವೇ ಹಂಚಿಕೆ ಮಾಡಲಿದ್ದು, ಈ ವಿಷಯದಲ್ಲಿ ಯಾವುದೇ ಗೊಂದಲ ಬೇಡ ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ಅವರು ತಿಳಿಸಿದ್ದಾರೆ.
ಕೆಲವರು ಸರ್ಕಾರಿ ಕೋಟಾದ ಸೀಟು ಹೊರತುಪಡಿಸಿ ಇತರ ಸೀಟುಗಳನ್ನು ಕೊಡಿಸುವುದಾಗಿ ನಂಬಿಸುವ ಪ್ರಯತ್ನಗಳ ಬಗ್ಗೆ ದೂರುಗಳು ಬರುತ್ತಿದ್ದು ಈ ಬಗ್ಗೆ ಎಚ್ಚರ ವಹಿಸಿ ಎಂದು ಅವರು ಸಲಹೆ ನೀಡಿದ್ದಾರೆ.
ವೈದ್ಯಕೀಯ ಕಾಲೇಜಿನ ಆಡಳಿತ ಮಂಡಳಿಗೆ ಮ್ಯಾನೇಜ್ಮೆಂಟ್ ಮತ್ತು ಎನ್ ಆರ್ ಐ ಸೀಟುಗಳ ಶುಲ್ಕ ನಿಗದಿಪಡಿಸುವ ಅಧಿಕಾರ ಇದೆ. ಆದರೆ ಸೀಟು ಹಂಚಿಕೆಗೆ ಅದಕ್ಕೆ ಅವಕಾಶ ಇಲ್ಲ. ಅದೇನಿದ್ದರೂ ಕೆಇಎ ಮೂಲಕವೇ ಆಗಲಿದೆ. ಇದರ ನಡುವೆಯೂ ಸೀಟು ಕೊಡಿಸುತ್ತೇವೆ ಎಂದು ಯಾರಾದರು ಹೇಳಿದರೆ ಅದರ ಹಿಂದೆ ಮೋಸದ ಉದ್ದೇಶ ಇರುತ್ತದೆ ಎಂದು ಅವರು ಹೇಳಿದ್ದಾರೆ.
ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಶೇ 15ರಷ್ಟು ಸೀಟುಗಳನ್ನು ಮಾತ್ರ ಎನ್ ಎಂ ಸಿ ಮೂಲಕ ಹಂಚಿಕೆ ಮಾಡಲಾಗುತ್ತದೆ. ಉಳಿದ ಶೇ 85ರಷ್ಟು ಸೀಟುಗಳನ್ನು ಕೆಇಎ ಮೂಲಕ ಹಂಚಿಕೆ ಮಾಡಲಾಗುತ್ತದೆ. ಹಾಗೆಯೇ ಖಾಸಗಿ ವೈದ್ಯಕೀಯ ಕಾಲೇಜುಗಳ/ ಖಾಸಗಿ ವಿಶ್ವವಿದ್ಯಾಲಯಗಳ ಶೇ 100 ರಷ್ಟು ಸೀಟುಗಳನ್ನು ಕೆಇಎ ಮೂಲಕವೇ ಹಂಚಿಕೆ ಮಾಡಲಾಗುತ್ತದೆ. ಕೆಲವು ಡೀಮ್ಡ್ ವಿಶ್ವವಿದ್ಯಾಲಯಗಳ ಅಲ್ಪ ಪ್ರಮಾಣದ ಸೀಟು ಬಿಟ್ಟು ಉಳಿದ ಎಲ್ಲವನ್ನೂ ಎನ್ ಎಂ ಸಿ ಮೂಲಕವೇ ಹಂಚಿಕೆಯಾಗುತ್ತದೆ ಎಂದು ಅವರು ವಿವರಿಸಿದರು.
ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ ನಡೆಸಿದ ನೀಟ್ ಪರೀಕ್ಷೆ ಯಲ್ಲಿ ಅಭ್ಯರ್ಥಿಗಳು ಗಳಿಸಿರುವ ರಾಂಕ್ ಆಧಾರದ ಮೇಲೆ ಕೆಇಎ ಮೂಲಕವೇ ಸೀಟು ಹಂಚಿಕೆಯಾಗಲಿದೆ. ಈ ವಿಷಯದಲ್ಲಿ ಯಾವುದೇ ಗೊಂದಲ ಬೇಡ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.
ಸದ್ಯ ನೀಟ್ ಫಲಿತಾಂಶ ಪ್ರಕಟವಾಗಿದ್ಧು, ಅದರ ಮಾಹಿತಿ ಕೆಇಎಗೆ ಲಭ್ಯವಾದ ನಂತರ ನೀಟ್ ರೋಲ್ ನಂಬರ್ ಅನ್ನು ಸಿಇಟಿ ಅರ್ಜಿ ಜತೆ ಜೋಡಿಸಲು ಲಿಂಕ್ ಬಿಡುಗಡೆ ಮಾಡಲಾಗುವುದು. ಆ ಬಳಿಕ ಅಭ್ಯರ್ಥಿಗಳ ನೀಟ್ ರಾಂಕ್ ಜೋಡಣೆ ಆಗಲಿದೆ. ಅದರ ನಂತರ ವೆರಿಫಿಕೇಷನ್ ಸ್ಲಿಪ್ ಡೌನ್‌ಲೋಡ್ ಮಾಡಿಕೊಳ್ಳಬೇಕು ಎಂದು ಅವರು ವಿವರಿಸಿದರು.
ಎನ್ಎಂಸಿ ಸೀಟು ಹಂಚಿಕೆಯ ವೇಳಾಪಟ್ಟಿ ಪ್ರಕಟಿಸಿದ ನಂತರವೇ ರಾಜ್ಯದ ವೈದ್ಯಕೀಯ ಕೌನ್ಸೆಲಿಂಗ್ ಪ್ರಕ್ರಿಯೆ ನಡೆಯಲಿದೆ. ಎನ್ ಎಂಸಿಯೇ ಯಾವ ದಿನಾಂಕಗಳಂದು ರಾಜ್ಯಗಳು ಕೌನ್ಸೆಲಿಂಗ್ ಮಾಡಬೇಕು ಎನ್ನುವ ವೇಳಾಪಟ್ಟಿ ನೀಡಲಿದೆ. ಅಲ್ಲಿಯವರೆಗೂ ಪೋಷಕರು/ವಿದ್ಯಾರ್ಥಿಗಳು ತಮ್ಮ ರಾಂಕ್ ಗೆ ಹಿಂದಿನ ವರ್ಷಗಳಲ್ಲಿ ಎಲ್ಲೆಲ್ಲಿ ಸೀಟು ಹಂಚಿಕೆಯಾಗಿದೆ ಎಂಬುದರ ಮಾಹಿತಿಯನ್ನು ಕೆಇಎ ಬೋಟ್ ಮೂಲವೂ ಪಡೆಯಬಹುದು ಎಂದು ಅವರು ಹೇಳಿದರು.
ನೀಟ್ ಫಲಿತಾಂಶದ ವಿವರ ಬಂದ ನಂತರ ರಾಜ್ಯದ ವಿಳಾಸ ಇರುವ ಅಭ್ಯರ್ಥಿಗಳ ರಾಂಕ್ ಪಟ್ಟಿಯನ್ನು ಆರೋಹಣ ಕ್ರಮದಲ್ಲಿ ಪ್ರಕಟಿಸಲಾಗುತ್ತದೆ ಎಂದು ಅವರು ಹೇಳಿದ್ದಾರೆ.
ಇದುವರೆಗೂ ವೈದ್ಯಕೀಯ ಕೋರ್ಸ್ ಸಲುವಾಗಿ ಅರ್ಜಿಯನ್ನೇ ಸಲ್ಲಿಸದವರಿಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ನಂತರ ಅಂತಹವರ ದಾಖಲೆ ಪರಿಶೀಲನೆ ಕೂಡ ನಡೆಯಲಿದ್ದು, ಸದ್ಯದಲ್ಲೇ ವೇಳಾಪಟ್ಟಿ ಪ್ರಕಟಿಸಲಾಗುವುದು ಎಂದರು.
ಫಾರ್ಮಸಿ ಕೋರ್ಸ್ ಗಳಿಗೆ ಸಂಬಂಧಿಸಿದಂತೆ ಸೀಟ್ ಮ್ಯಾಟ್ರಿಕ್ಸ್ ಇನ್ನೂ ಬಂದಿಲ್ಲ. ಬಂದ ನಂತರ ಎರಡನೇ ಸುತ್ತಿನ ಸೀಟು ಹಂಚಿಕೆಗೂ ಮುನ್ನ ಈ ಕೋರ್ಸ್ ಗಳಿಗೂ ಆಪ್ಷನ್ಸ್ ದಾಖಲಿಸಲು ಅವಕಾಶ ನೀಡಲಾಗುವುದು ಎಂದು ಹೇಳಿದರು.
ವೈದ್ಯಕೀಯ ಹಾಗೂ ಫಾರ್ಮಸಿ ಕೋರ್ಸ್ ಗಳಿಗೆ ಪ್ರವೇಶ ಪಡೆಯಲು ಇಚ್ಛಿಸುವವರು ಮೊದಲ ಸುತ್ತಿನಲ್ಲಿ ಯಾವುದೇ ಕೋರ್ಸ್ ನ ಸೀಟು ಹಂಚಿಕೆಯಾಗಿದ್ದರೂ ಚಾಯ್ಸ್-2 ಹಾಕಿ ನಂತರ ಸುತ್ತಿನಲ್ಲಿ ಭಾಗವಹಿಸಿ ಎಂದೂ ಪ್ರಸನ್ನ ಅವರು ಸಲಹೆ ನೀಡಿದರು.

