Thu. Jul 23rd, 2026

ಸೆಮಿಕಂಡಕ್ಟರ್, ಡೀಪ್-ಟೆಕ್‌ನಲ್ಲಿ ಕರ್ನಾಟಕ ನಂ.1: ಡಿಸೆಂಬರ್‌ಗೆ 200 ಎಕರೆ ವಿಸ್ತೀರ್ಣದ ನೂತನ ಪಾರ್ಕ್ ಆರಂಭ

Share this with Friends

ಬೆಂಗಳೂರು: ರಾಜ್ಯದ ಕೈಗಾರಿಕಾ ಪ್ರಗತಿ ಮತ್ತು ತಾಂತ್ರಿಕ ಕ್ರಾಂತಿಗೆ ಹೊಸ ವೇಗ ನೀಡುವ ನಿಟ್ಟಿನಲ್ಲಿ ಈ ವರ್ಷದ ಡಿಸೆಂಬರ್ ತಿಂಗಳೊಳಗೆ ಕ್ವಿನ್ ಸಿಟಿ (KHIR City) ಹಂತ-1ರಲ್ಲಿ 200 ಎಕರೆ ವಿಸ್ತಾರದ ಬೃಹತ್ ಸೆಮಿಕಂಡಕ್ಟರ್ ಪಾರ್ಕ್ ಕಾರ್ಯಾಚರಣೆ ಆರಂಭಿಸಲಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಪ್ರಕಟಿಸಿದ್ದಾರೆ.

ಬೆಂಗಳೂರು ಅಂತಾರಾಷ್ಟ್ರೀಯ ಪ್ರದರ್ಶನ ಕೇಂದ್ರದಲ್ಲಿ ಗುರುವಾರ ಆರಂಭವಾದ 15ನೇ ವರ್ಷದ ವ್ಯೂಹಾತ್ಮಕ ವಿದ್ಯುನ್ಮಾನ ಸಮಾವೇಶದಲ್ಲಿ (SES 2026) ಅವರು ಈ ವಿಷಯ ತಿಳಿಸಿದರು.

ರಾಜ್ಯ ಸರ್ಕಾರವು ಸದ್ಯದಲ್ಲೇ ಜಾರಿಗೆ ತರಲಿರುವ ‘2026-2031ರ ನೂತನ ವೈಮಾಂತರಿಕ್ಷ ಮತ್ತು ರಕ್ಷಣಾ ನೀತಿ’ಯಲ್ಲಿ ಆಧುನಿಕ ಎಲೆಕ್ಟ್ರಾನಿಕ್ ಸಮರ ಸಾಧನಗಳು, ಎಂಬೆಡೆಡ್ ತಂತ್ರಾಂಶ, ಇ-ವಿಟಾಲ್ (eVTOL) ಸಾಧನಗಳು ಮತ್ತು ಬಾಹ್ಯಾಕಾಶ ಪೇಲೋಡ್‌ಗಳನ್ನು ಗಮನದಲ್ಲಿಟ್ಟುಕೊಂಡು ಸಮಗ್ರ ಕ್ಲಸ್ಟರ್‌ಗಳನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಸಚಿವರು ವಿವರಿಸಿದರು. ಈಗಾಗಲೇ ಈ ವಲಯಗಳಲ್ಲಿ 23 ಸಾವಿರ ಕೋಟಿ ರೂ. ಹೂಡಿಕೆಗೆ ಅನುಮೋದನೆ ನೀಡಲಾಗಿದ್ದು, ಇದರಿಂದ 3,500ಕ್ಕೂ ಹೆಚ್ಚು ಕೌಶಲ್ಯಭರಿತ ಎಂಜಿನಿಯರಿಂಗ್ ಹುದ್ದೆಗಳು ಸೃಷ್ಟಿಯಾಗಲಿವೆ. ಅಪ್ಲೈಡ್ ಮೆಟೀರಿಯಲ್ಸ್ ಇಂಡಿಯಾ (4,851 ಕೋಟಿ ರೂ.), ಲ್ಯಾಮ್ ರೀಸರ್ಚ್ (15,901 ಕೋಟಿ ರೂ.) ಮತ್ತು ಭಾರತ್ ಸೆಮಿ ಸಿಸ್ಟಮ್ಸ್ (2,342 ಕೋಟಿ ರೂ.) ಸಂಸ್ಥೆಗಳು ಇಲ್ಲಿ ಬಂಡವಾಳ ಹೂಡುತ್ತಿವೆ.

ಚಿಪ್ ವಿನ್ಯಾಸದ ಜಾಗತಿಕ ಕೇಂದ್ರ ಬೆಂಗಳೂರು

ಕರ್ನಾಟಕವು ಸಂಶೋಧನೆ, ಡೀಪ್-ಟೆಕ್ ವಿನ್ಯಾಸ ಮತ್ತು ಎಕ್ವಿಪ್ಮೆಂಟ್ ಎಂಜಿನಿಯರಿಂಗ್ ಕ್ಷೇತ್ರಗಳಲ್ಲಿ ದೇಶದಲ್ಲೇ ಮುಂಚೂಣಿಯಲ್ಲಿದೆ. ರಾಜಧಾನಿ ಬೆಂಗಳೂರಿನಲ್ಲಿ ಪ್ರಸ್ತುತ 100ಕ್ಕೂ ಹೆಚ್ಚು ಅತ್ಯಾಧುನಿಕ ಚಿಪ್ ವಿನ್ಯಾಸ ಸಂಸ್ಥೆಗಳು ಹಾಗೂ 3 ನ್ಯಾನೋಮೀಟರ್ ವಿನ್ಯಾಸ ಕೇಂದ್ರಗಳು ಸಕ್ರಿಯವಾಗಿವೆ. ಕಂಪನಿಗಳು ಕೇವಲ ಉತ್ಪಾದನೆಗೆ ಸೀಮಿತವಾಗದೆ, ವಿನ್ಯಾಸ, ಸಂಶೋಧನೆ ಹಾಗೂ ಪರೀಕ್ಷೆಗಳನ್ನು ಇಲ್ಲೇ ನಡೆಸಬೇಕು. ‘ಸೆಮಿಕಂಡಕ್ಟರ್ ಮಿಷನ್ 2.0’ ಅನ್ನು ಯಶಸ್ವಿಗೊಳಿಸಲು ಉದ್ಯಮಿಗಳು ಮುಂದೆ ಬರಬೇಕು ಎಂದು ಅವರು ಕರೆ ನೀಡಿದರು.

ಇದೇ ವೇದಿಕೆಯಲ್ಲಿ ಸಚಿವರು ‘ಎಲ್ಸೀನಾ ವರದಿ-26’ ಮತ್ತು ಕರ್ನಲ್ ಲಾಕ್ಯಾಜೀತ್ ಸಿಂಗ್ ಚವ್ಹಾಣ್ ಬರೆದಿರುವ ‘ವಿಂಗ್ಸ್ ಆಫ್ ಅಸ್ತ್ರ’ ಪುಸ್ತಕವನ್ನು ಬಿಡುಗಡೆ ಮಾಡಿದರು. ಕಾರ್ಯಕ್ರಮದಲ್ಲಿ ಸಿ-ಡಾಟ್ ಸಿಇಒ ಡಾ. ರಾಜಕುಮಾರ್ ಉಪಾಧ್ಯಾಯ, ಬಿಇಎಲ್ ಸಿಇಒ ಮನೋಜ್ ಜೈನ್, ಡಿಆರ್‌ಡಿಒ ಮಹಾನಿರ್ದೇಶಕ ಡಾ. ಬಿ ಕೆ ದಾಸ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

 

 


Share this with Friends

Related Post