Sat. Jul 25th, 2026

ಕೇಂದ್ರದಲ್ಲಿ ನೀಟ್ ಕಿಚ್ಚಿಗೆ ಪ್ರಧಾನ್ ಔಟ್; ರಾಜ್ಯದಲ್ಲಿ ಅಲರ್ಟ್ ಆದ ಡಿಕೆಶಿ: ಪೇಪರ್ ಲೀಕ್ ಆದರೆ ಡಿಸಿಗಳೇ ಹೊಣೆ ಎಂದು ಖಡಕ್ ವಾರ್ನಿಂಗ್!

Share this with Friends

ಚಿತ್ರದುರ್ಗ: ದೇಶಾದ್ಯಂತ ಭಾರಿ ವಿವಾದ ಸೃಷ್ಟಿಸಿದ್ದ ನೀಟ್ (NEET) ಪರೀಕ್ಷಾ ಅಕ್ರಮಗಳ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ರಾಜೀನಾಮೆ ನೀಡಿದ ಬೆನ್ನಲ್ಲೇ, ಇತ್ತ ಕರ್ನಾಟಕ ರಾಜ್ಯ ಸರ್ಕಾರವೂ ಪರೀಕ್ಷಾ ಅಕ್ರಮಗಳ ವಿರುದ್ಧ ಅತ್ಯಂತ ಕಠಿಣ ನಿಲುವು ತಳೆದಿದೆ. “ರಾಜ್ಯದಲ್ಲಿ ಯಾವುದೇ ನೇಮಕಾತಿ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯಾದರೆ ಅಥವಾ ಅಕ್ರಮಗಳು ನಡೆದರೆ ಅದಕ್ಕೆ ಆಯಾ ಜಿಲ್ಲಾಧಿಕಾರಿಗಳೇ (DC) ನೇರ ಹೊಣೆ” ಎಂದು ಸಿಎಂ ಡಿ.ಕೆ. ಶಿವಕುಮಾರ್ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ.

ಚಿತ್ರದುರ್ಗದ ಮುರುಘಾ ಮಠದ ಅನುಭವ ಮಂಟಪದಲ್ಲಿ ಶನಿವಾರ ನಡೆದ ಬೆಂಗಳೂರು ವಿಭಾಗ ಮಟ್ಟದ ಪ್ರಗತಿ ಪರಿಶೀಲನಾ ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೇಂದ್ರದ ಪರೀಕ್ಷಾ ಲೋಪದೋಷಗಳನ್ನು ಉಲ್ಲೇಖಿಸಿ ಅಧಿಕಾರಿಗಳಿಗೆ ಖಡಕ್ ಸಂದೇಶ ರವಾನಿಸಿದರು.

‘ನೀಟ್ ಹಗರಣ’ ಎಲ್ಲರ ಕಣ್ಣಮುಂದಿರಲಿ!

ಕೇಂದ್ರ ಸರ್ಕಾರದಲ್ಲಿ ನಡೆದ ರಾಜಕೀಯ ಬೆಳವಣಿಗೆಗಳು ಮತ್ತು ವಿದ್ಯಾರ್ಥಿಗಳ ಹೋರಾಟದ ತೀವ್ರತೆಯನ್ನು ನೆನಪಿಸಿದ ಡಿ.ಕೆ. ಶಿವಕುಮಾರ್, “ನೀಟ್ ಹಗರಣದಲ್ಲಿ ದೇಶಾದ್ಯಂತ ಏನಾಯಿತು ಎಂಬುದು ಇಡೀ ದೇಶದ ಗಮನದಲ್ಲಿದೆ. ಪರೀಕ್ಷಾ ಅಕ್ರಮಗಳು ಇಡೀ ವ್ಯವಸ್ಥೆಯನ್ನೇ ಕಲುಷಿತಗೊಳಿಸುತ್ತವೆ. ನಮ್ಮ ರಾಜ್ಯದಲ್ಲಿ ಇಂತಹ ಯಾವುದೇ ದುರ್ಘಟನೆಗಳು ಮರುಕಳಿಸದಂತೆ ಅಧಿಕಾರಿಗಳು ಹದ್ದಿನ ಕಣ್ಣಿಡಬೇಕು” ಎಂದು ಆದೇಶಿಸಿದರು.

70 ಸಾವಿರ ಹುದ್ದೆಗಳ ನೇಮಕಾತಿಗೆ ಹೈಟೆಕ್ ಭದ್ರತೆ:

ರಾಜ್ಯದಲ್ಲಿ ಸದ್ಯದಲ್ಲೇ ಸುಮಾರು 70 ಸಾವಿರಕ್ಕೂ ಹೆಚ್ಚು ಖಾಲಿ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳುವ ಬೃಹತ್ ನೇಮಕಾತಿ ಪರ್ವ ಆರಂಭವಾಗುತ್ತಿದೆ ಎಂದು ತಿಳಿಸಿದ ಅವರು, ಸುರಕ್ಷತೆಗಾಗಿ ಹೊಸ ಮಾರ್ಗಸೂಚಿಗಳನ್ನು ಪ್ರಕಟಿಸಿದರು:

ಕಡ್ಡಾಯ ಸಿಸಿಟಿವಿ: ನೇಮಕಾತಿ ಪರೀಕ್ಷೆ ನಡೆಯುವ ಪ್ರತಿಯೊಂದು ಕೇಂದ್ರಗಳಲ್ಲೂ ಕಡ್ಡಾಯವಾಗಿ ಸಿಸಿಟಿವಿ (CCTV) ಕ್ಯಾಮೆರಾಗಳನ್ನು ಅಳವಡಿಸಬೇಕು.

ಪ್ರಕ್ರಿಯೆಯ ಸಂಪೂರ್ಣ ರೆಕಾರ್ಡಿಂಗ್: ಪ್ರಶ್ನೆ ಪತ್ರಿಕೆ ತಯಾರಿಕೆ, ಅದರ ಸಾಗಣೆ ಮತ್ತು ಪರೀಕ್ಷಾ ಕೇಂದ್ರಗಳಿಗೆ ತಲುಪಿಸಿ ಹಂಚಿಕೆ ಮಾಡುವವರೆಗಿನ ಪ್ರತಿಯೊಂದು ಹಂತವೂ ಕಡ್ಡಾಯವಾಗಿ ವಿಡಿಯೋ ದಾಖಲೆಯಾಗಬೇಕು.

ಪ್ರಶ್ನೆ ಪತ್ರಿಕೆಗೆ ಅತ್ಯುನ್ನತ ಮಟ್ಟದ ಭದ್ರತೆ ಒದಗಿಸದಿದ್ದರೆ ಮತ್ತು ಯಾವುದೇ ಸಣ್ಣ ಲೋಪ ಕಂಡುಬಂದರೂ ಸಂಬಂಧಪಟ್ಟ ಹಿರಿಯ ಅಧಿಕಾರಿಗಳು ಕಠಿಣ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಅವರು ಸ್ಪಷ್ಟಪಡಿಸಿದರು.

 


Share this with Friends

Related Post