Sun. Jul 26th, 2026

ಕೆಪಿಎಸ್‌ಸಿ ಪಶುವೈದ್ಯರ ನೇಮಕಾತಿ ಅಕ್ರಮ ಆರೋಪ: ಸಮಗ್ರ ತನಿಖೆಗೆ ಬಿ.ವೈ. ವಿಜಯೇಂದ್ರ ಆಗ್ರಹ

Share this with Friends

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ (KPSC) ಮೂಲಕ ನಡೆದಿರುವ 400 ಪಶುವೈದ್ಯಾಧಿಕಾರಿಗಳ ನೇಮಕಾತಿ ಪ್ರಕ್ರಿಯೆಯಲ್ಲಿ ಭಾರಿ ಭ್ರಷ್ಟಾಚಾರ ನಡೆದಿದೆ ಎಂಬ ಗಂಭೀರ ಆರೋಪ ಕೇಳಿಬಂದಿದ್ದು, ಈ ಬಗ್ಗೆ ಪಾರದರ್ಶಕ ತನಿಖೆ ನಡೆಸಿ ದೋಷಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಒತ್ತಾಯಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಆಡಿಯೋ ಸಂಭಾಷಣೆಯು ಇಡೀ ನೇಮಕಾತಿ ವ್ಯವಸ್ಥೆಯ ಲೋಪಗಳನ್ನು ಬಯಲಿಗೆಳೆದಿದೆ. ಉದ್ಯೋಗಾಕಾಂಕ್ಷಿಗಳಿಂದ ದೊಡ್ಡ ಮೊತ್ತದ ಹಣ ಪಡೆದು ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳನ್ನು ಕೊಡಿಸುವ ಆಮಿಷವೊಡ್ಡಲಾಗಿರುವ ಕೃತ್ಯವು ಲಕ್ಷಾಂತರ ಯುವಕರ ಭವಿಷ್ಯ ಹಾಗೂ ಆಯೋಗದ ವಿಶ್ವಾಸಾರ್ಹತೆಗೆ ತಂದಿರುವ ದೊಡ್ಡ ಧಕ್ಕೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಹಗರಣಕ್ಕೆ ಸಂಬಂಧಿಸಿದಂತೆ ದೂರು ಸಲ್ಲಿಕೆಯಾಗಿದ್ದರೂ ಎಫ್‌ಐಆರ್ ದಾಖಲಿಸಲು ತಡರಾತ್ರಿವರೆಗೂ ವಿಳಂಬ ಮಾಡಿರುವುದರ ಹಿಂದೆ ಹಲವು ಅನುಮಾನಗಳು ಮೂಡುತ್ತಿವೆ ಎಂದ ಅವರು, ಯಾರನ್ನೋ ರಕ್ಷಿಸುವ ತಂತ್ರದಂತೆ ಕಾಣುತ್ತಿದೆ ಎಂದು ಆರೋಪಿಸಿದರು.

ತಪ್ಪನ್ನು ಒಪ್ಪಿಕೊಂಡ ವಿಜಯೇಂದ್ರ; ಯಾರ ಅವಧಿಯ ನೇಮಕಾತಿಯಾದರೂ ಬೆಂಬಲವಿಲ್ಲ

ವಿದ್ಯಾರ್ಥಿಗಳ ಪ್ರತಿಭಟನೆಯ ಕುರಿತು ಮುಕ್ತವಾಗಿ ಮಾತನಾಡಿದ ಅವರು, “ಯುವಜನರು ಬೀದಿಗಿಳಿದು ಹೋರಾಟ ನಡೆಸುವಾಗ ನಾವು ಅದನ್ನು ಇನ್ನಷ್ಟು ಗಂಭೀರವಾಗಿ ಪರಿಗಣಿಸಬೇಕಾಗಿತ್ತು. ನಮ್ಮ ಕಡೆಯಿಂದಲೂ ಲೋಪಗಳಾಗಿವೆ ಎಂಬುದನ್ನು ನೇರವಾಗಿ ಒಪ್ಪಿಕೊಳ್ಳುತ್ತೇನೆ” ಎಂದರು. ಬಿಜೆಪಿ ಸರ್ಕಾರದ ಆಡಳಿತಾವಧಿಯಲ್ಲೇ ಕೆಪಿಎಸ್‌ಸಿ ಅಧ್ಯಕ್ಷರ ನೇಮಕವಾಗಿತ್ತು ಎಂಬ ಆಡಳಿತ ಪಕ್ಷದ ಟೀಕೆಗಳಿಗೆ ತಿರುಗೇಟು ನೀಡಿದ ಅವರು, ಯಾವ ಸರ್ಕಾರದ ಅವಧಿಯಲ್ಲಿ ಯಾರು ನೇಮಕವಾಗಿದ್ದಾರೆ ಎನ್ನುವುದು ಮುಖ್ಯವಲ್ಲ, ಅಕ್ರಮ ಎಲ್ಲಿಯೇ ನಡೆದಿದ್ದರೂ ಅದಕ್ಕೆ ಯಾರೂ ಬೆಂಬಲ ನೀಡಬಾರದು ಮತ್ತು ಹಗರಣದ ಬಗ್ಗೆ ಸಮಗ್ರ ತನಿಖೆಯಾಗಲೇಬೇಕು ಎಂದು ಒತ್ತಾಯಿಸಿದರು.

ಸಿ.ಟಿ. ರವಿ ಪ್ರಕರಣ ಹಾಗೂ ಸರ್ಕಾರದ ವಿರುದ್ಧ ಎಚ್ಚರಿಕೆ

ಹಿರಿಯ ನಾಯಕ ಸಿ.ಟಿ. ರವಿ ಅವರಿಗೆ ಕೇವಲ ನೋಟಿಸ್ ನೀಡುವ ಪ್ರಕ್ರಿಯೆಯಲ್ಲ, ಬದಲಿಗೆ ಅವರನ್ನು ಬಂಧಿಸಲು ಪೊಲೀಸರು ತೆರಳಿದ್ದರು ಎಂದು ವಿಜಯೇಂದ್ರ ಮಾಹಿತಿ ನೀಡಿದರು. ರಾಜಕೀಯ ದ್ವೇಷದ ಬಂಧನಗಳಿಗೆ ಮುಂದಾಗಿ ರಾಜ್ಯದ ಕಾನೂನು ಸುವ್ಯವಸ್ಥೆ ಹದಗೆಟ್ಟರೆ ಅದಕ್ಕೆ ಆಡಳಿತರೂಢ ಕಾಂಗ್ರೆಸ್ ಸರ್ಕಾರವೇ ನೇರ ಹೊಣೆಯಾಗಬೇಕಾಗುತ್ತದೆ ಎಂದು ಎಚ್ಚರಿಸಿದರು. ದೇಶದ್ರೋಹಿ ಘೋಷಣೆಗಳನ್ನು ಕೂಗಿದವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳದ ಸರ್ಕಾರ, ವಿರೋಧ ಪಕ್ಷಗಳ ಮುಖಂಡರನ್ನು ಗುರಿ ಮಾಡುತ್ತಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೆಪಿಎಸ್‌ಸಿ ಭ್ರಷ್ಟಾಚಾರದ ವಿರುದ್ಧ ಅಭ್ಯರ್ಥಿಗಳು ಮತ್ತು ವಿದ್ಯಾರ್ಥಿ ಸಂಘಟನೆಗಳು ಹಮ್ಮಿಕೊಂಡಿರುವ ಸೋಮವಾರ ಹಾಗೂ ಮಂಗಳವಾರದ ಬೃಹತ್ ಪ್ರತಿಭಟನೆಗಳಲ್ಲಿ ತಾವೂ ಖುದ್ದಾಗಿ ಭಾಗವಹಿಸುವುದಾಗಿ ಘೋಷಿಸಿದ ವಿಜಯೇಂದ್ರ, ಉದ್ಯೋಗಾಕಾಂಕ್ಷಿಗಳ ನ್ಯಾಯಯುತ ಹೋರಾಟಕ್ಕೆ ಬಿಜೆಪಿ ಎಲ್ಲಾ ರೀತಿಯ ಅಗತ್ಯ ನೆರವು ಒದಗಿಸಲಿದೆ ಎಂದು ಭರವಸೆ ನೀಡಿದರು.

 


Share this with Friends

Related Post