Fri. Jul 31st, 2026

ಬೆಂಗಳೂರಿನಲ್ಲಿ ಆಸ್ಟ್ರೇಲಿಯಾದ ಕಾನ್ಸುಲೇಟ್ ಜನರಲ್ ಕಚೇರಿ, ನ್ಯೂಸೌತ್ ವೇಲ್ಸ್ ವಿಶ್ವವಿದ್ಯಾಲಯದ ಕ್ಯಾಂಪಸ್ ಆರಂಭ

Share this with Friends

ಬೆಂಗಳೂರು: ಕರ್ನಾಟಕದ ಉನ್ನತ ಶಿಕ್ಷಣ, ದ್ವಿಪಕ್ಷೀಯ ಬಾಂಧವ್ಯ ಮತ್ತು ಕೈಗಾರಿಕಾ ಕ್ಷೇತ್ರಕ್ಕೆ ಭಾರಿ ಜಾಗತಿಕ ಉತ್ತೇಜನ ಸಿಕ್ಕಿದೆ. ಆಸ್ಟ್ರೇಲಿಯಾದ ಸುಸಜ್ಜಿತ ಕಾನ್ಸುಲೇಟ್ ಜನರಲ್ ಕಚೇರಿ ಹಾಗೂ ಜಗತ್ತಿನ ಅಗ್ರ 20 ವಿಶ್ವವಿದ್ಯಾಲಯಗಳಲ್ಲಿ ಒಂದಾಗಿರುವ ಪ್ರತಿಷ್ಠಿತ ‘ನ್ಯೂಸೌತ್ ವೇಲ್ಸ್ ವಿಶ್ವವಿದ್ಯಾಲಯ’ದ (UNSW) ನೂತನ ಬೆಂಗಳೂರು ಕ್ಯಾಂಪಸ್ ಎರಡಕ್ಕೂ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರಾದ ಎಂ.ಬಿ. ಪಾಟೀಲ್ ಅವರು ಶುಕ್ರವಾರ ಅಧಿಕೃತವಾಗಿ ಚಾಲನೆ ನೀಡಿದರು.

ಆಸ್ಟ್ರೇಲಿಯಾ ಕಾನ್ಸುಲೇಟ್ ಜನರಲ್ ಕಚೇರಿ ಉದ್ಘಾಟನೆ:

ವಿಶ್ವವಿದ್ಯಾಲಯದ ಕ್ಯಾಂಪಸ್ ಉದ್ಘಾಟನೆಗೂ ಮುನ್ನ ಸಚಿವ ಎಂ.ಬಿ. ಪಾಟೀಲ್ ಅವರು ನಗರದ ಕನ್ನಿಂಗ್ಹ್ಯಾಮ್ ರಸ್ತೆಯಲ್ಲಿ ನೂತನವಾಗಿ ನಿರ್ಮಿಸಿರುವ ಆಸ್ಟ್ರೇಲಿಯಾದ ಕಾನ್ಸುಲೇಟ್ ಜನರಲ್ ಕಚೇರಿಯನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಆಸ್ಟ್ರೇಲಿಯಾ ದೇಶವು ತನ್ನ ರಾಜತಾಂತ್ರಿಕ ಕಚೇರಿಗೆ ಬೆಂಗಳೂರನ್ನು ಆಯ್ಕೆ ಮಾಡಿಕೊಂಡಿರುವುದು ಶ್ಲಾಘನೀಯ ಎಂದರು.

ಈಗಾಗಲೇ ರಾಜ್ಯ ರಾಜಧಾನಿಯಲ್ಲಿ ಆಸ್ಟ್ರೇಲಿಯಾದ 40ಕ್ಕೂ ಹೆಚ್ಚು ಪ್ರಮುಖ ಕಂಪನಿಗಳು ನೆಲೆಯೂರಿವೆ. ಹೊಸ ಕಚೇರಿಯ ಆರಂಭದಿಂದಾಗಿ ಎರಡು ದೇಶಗಳ ನಡುವಿನ ಆರ್ಥಿಕ ಮತ್ತು ಶೈಕ್ಷಣಿಕ ದ್ವಿಪಕ್ಷೀಯ ಬಾಂಧವ್ಯವು ದೀರ್ಘಕಾಲೀನ ದೃಷ್ಟಿಕೋನದೊಂದಿಗೆ ಮತ್ತಷ್ಟು ಗಟ್ಟಿಯಾಗಲಿದ್ದು, ಹೆಚ್ಚಿನ ಹೂಡಿಕೆ ಹಾಗೂ ತಾಂತ್ರಿಕ ನಾವೀನ್ಯತೆ ರಾಜ್ಯಕ್ಕೆ ಹರಿದುಬರಲಿದೆ ಎಂದು ಸಚಿವರು ಭರವಸೆ ವ್ಯಕ್ತಪಡಿಸಿದರು.

ಮಾನ್ಯತಾ ಟೆಕ್ ಪಾರ್ಕ್‌ನಲ್ಲಿ ಹೈಟೆಕ್ ಕ್ಯಾಂಪಸ್:

ಇದೇ ವೇಳೆ ಹೆಬ್ಬಾಳದ ಸಮೀಪವಿರುವ ಮಾನ್ಯತಾ ಟೆಕ್ ಪಾರ್ಕ್‌ನಲ್ಲಿ ವಿಶ್ವವಿದ್ಯಾಲಯದ ಕ್ಯಾಂಪಸ್ ಉದ್ಘಾಟಿಸಿ ಮಾತನಾಡಿದ ಸಚಿವರು, ಕರ್ನಾಟಕದ ಯುವಜನರು ತಮ್ಮ ಮನೆಯ ಹತ್ತಿರದಲ್ಲೇ ಜಾಗತಿಕ ಗುಣಮಟ್ಟದ ಉನ್ನತ ಶಿಕ್ಷಣ ಪಡೆಯಲು ಈ ಕ್ಯಾಂಪಸ್ ಲಭ್ಯವಾಗಲಿದೆ ಎಂದರು. ಇದು ರಾಜ್ಯದಲ್ಲಿ ತನ್ನ ಅಧಿಕೃತ ಕ್ಯಾಂಪಸ್ ತೆರೆಯುತ್ತಿರುವ 6ನೇ ಪ್ರಮುಖ ವಿದೇಶಿ ವಿಶ್ವವಿದ್ಯಾಲಯವಾಗಿದೆ.

ಪ್ರಸಕ್ತ ಸಾಲಿನಲ್ಲಿ ಈ ಕ್ಯಾಂಪಸ್‌ನಲ್ಲಿ ಬಿಜಿನೆಸ್, ಕಂಪ್ಯೂಟರ್ ಸೈನ್ಸ್, ಡೇಟಾ ಸೈನ್ಸ್ ಮತ್ತು ಡಿಸಿಷನ್ಸ್ ವಿಷಯಗಳಲ್ಲಿ ಪದವಿ ಕೋರ್ಸ್‌ಗಳನ್ನು ಹಾಗೂ ಸೈಬರ್ ಸೆಕ್ಯುರಿಟಿ ವಿಷಯದಲ್ಲಿ ಒಂದು ವರ್ಷದ ಅವಧಿಯ ಸ್ನಾತಕೋತ್ತರ ಪದವಿ ಕೋರ್ಸ್ ಅನ್ನು ಆರಂಭಿಸಲಾಗುತ್ತಿದೆ. ಆರಂಭಿಕ ಹಂತದಲ್ಲಿ ಪ್ರತಿ ಕೋರ್ಸ್‌ಗೆ ತಲಾ 30 ವಿದ್ಯಾರ್ಥಿಗಳಿಗೆ ಮಾತ್ರ ಪ್ರವೇಶಾವಕಾಶ ಕಲ್ಪಿಸಲಾಗಿದೆ.

ಗಣ್ಯರ ಉಪಸ್ಥಿತಿ:

ಈ ಎರಡೂ ಉನ್ನತ ಮಟ್ಟದ ಕಾರ್ಯಕ್ರಮಗಳಲ್ಲಿ ಆಸ್ಟ್ರೇಲಿಯಾದ ಅಂತರರಾಷ್ಟ್ರೀಯ ಶಿಕ್ಷಣ ಸಚಿವರಾದ ಜೂಲಿಯನ್ ಹಿಲ್, ಭಾರತದಲ್ಲಿರುವ ಆಸ್ಟ್ರೇಲಿಯನ್ ಹೈಕಮಿಷನರ್ ಫಿಲಿಫ್ ಗ್ರೀನ್, ಕೈಗಾರಿಕಾ ಇಲಾಖೆ ಆಯುಕ್ತರಾದ ಖುಷ್ಬು ಗೋಯಲ್, ಬೆಂಗಳೂರಿನಲ್ಲಿರುವ ಕಾನ್ಸುಲ್ ಜನರಲ್ ಹಿಲರಿ ಮೆಗಿಚಿ ಹಾಗೂ ನ್ಯೂಸೌತ್ ವೇಲ್ಸ್ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಆ್ಯಟಿಲಾ ಬ್ರಂಗ್ಸ್ ಸೇರಿದಂತೆ ಹಲವು ಅಂತರರಾಷ್ಟ್ರೀಯ ರಾಜತಾಂತ್ರಿಕ ಗಣ್ಯರು ಭಾಗವಹಿಸಿದ್ದರು.

 

 


Share this with Friends

Related Post