Sat. Aug 1st, 2026

ಯುಜಿ ನೀಟ್ ಕೌನ್ಸೆಲಿಂಗ್: ಆ.4 ರಿಂದ ದಾಖಲೆ ಪರಿಶೀಲನೆ ಆರಂಭ; ಸ್ಲಾಟ್ ಬುಕ್ಕಿಂಗ್ ಕಡ್ಡಾಯ!

Share this with Friends

ಬೆಂಗಳೂರು: ವೈದ್ಯಕೀಯ, ದಂತ ವೈದ್ಯಕೀಯ (Dental) ಹಾಗೂ ಆಯುಷ್ (AYUSH) ಕೋರ್ಸ್‌ಗಳ ಪ್ರವೇಶಾತಿಗೆ ಸಂಬಂಧಿಸಿದಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ಮಹತ್ವದ ಪ್ರಕಟಣೆ ಹೊರಡಿಸಿದೆ. ಹೊಸದಾಗಿ ಅರ್ಜಿ ಸಲ್ಲಿಸಿರುವ ಹಾಗೂ ಇದುವರೆಗೆ ವೆರಿಫಿಕೇಶನ್ ಮಾಡಿಸಿಕೊಳ್ಳದ ಅಭ್ಯರ್ಥಿಗಳಿಗೆ ಆಗಸ್ಟ್ 4 ರಿಂದ 8 ರವರೆಗೆ ದಾಖಲೆ ಪರಿಶೀಲನೆ ಪ್ರಕ್ರಿಯೆ ನಡೆಯಲಿದೆ.

ದಾಖಲೆ ಪರಿಶೀಲನೆಗೆ ಹಾಜರಾಗುವ ಅಭ್ಯರ್ಥಿಗಳು ಆಗಸ್ಟ್ 2 ರಂದು ಪ್ರಾಧಿಕಾರ ಬಿಡುಗಡೆ ಮಾಡುವ ಅಧಿಕೃತ ಲಿಂಕ್ ಮೂಲಕ ಕಡ್ಡಾಯವಾಗಿ ಸ್ಲಾಟ್ ಬುಕ್ ಮಾಡಿಕೊಳ್ಳಬೇಕಿರುತ್ತದೆ. ಸ್ಲಾಟ್ ಬುಕ್ ಮಾಡಿದ ಸಮಯಕ್ಕೆ ಸರಿಯಾಗಿ ಕೆಇಎ ಕಚೇರಿಗೆ ಅಗತ್ಯ ಮೂಲ ದಾಖಲೆಗಳೊಂದಿಗೆ ಹಾಜರಾಗಬೇಕು ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ತಿಳಿಸಿದ್ದಾರೆ.

ಯಾರಿಗೆಲ್ಲ ದಾಖಲೆ ಪರಿಶೀಲನೆ ಇರಲಿದೆ?

ಎನ್‌ಆರ್‌ಐ ಮತ್ತು ವಿದೇಶಿ ಅಭ್ಯರ್ಥಿಗಳು: ಎನ್‌ಆರ್‌ಐ ವಾರ್ಡ್, ಎನ್‌ಆರ್‌ಐ (NRI) ಮತ್ತು ಫಾರೀನ್ ನ್ಯಾಷನಲ್ಸ್ ವರ್ಗಗಳ ಅಡಿಯಲ್ಲಿ ಸೀಟು ಕ್ಲೇಮ್ ಮಾಡಿರುವ ಅಭ್ಯರ್ಥಿಗಳು ಹಾಜರಾಗಬೇಕು.

ಸಿಇಟಿ ನೋಂದಾಯಿತ ಅಭ್ಯರ್ಥಿಗಳು: ಸಿಇಟಿ ಮೂಲಕ ನೋಂದಣಿ ಮಾಡಿಕೊಂಡಿದ್ದರೂ, ಇದುವರೆಗೆ ಪರಿಶೀಲನಾ ಸ್ಲಿಪ್ ಡೌನ್‌ಲೋಡ್ ಮಾಡಿಕೊಳ್ಳದ ಅಭ್ಯರ್ಥಿಗಳು (ಕನ್ನಡ ಮಾಧ್ಯಮ, ಗ್ರಾಮೀಣ, ಭಾಷಾ ಅಥವಾ ಧಾರ್ಮಿಕ ಅಲ್ಪಸಂಖ್ಯಾತ ಕೋಟಾ ಕ್ಲೇಮ್ ಮಾಡಿರುವವರು) ಬರಬೇಕು.

ಹೊಸದಾಗಿ ನೋಂದಾಯಿಸಿದವರು: ಹೊಸದಾಗಿ ಅರ್ಜಿ ಸಲ್ಲಿಸಿ ಕನ್ನಡ, ಗ್ರಾಮೀಣ ಹಾಗೂ ಮೈನಾರಿಟಿ ಕೋಟಾ ಕ್ಲೇಮ್ ಮಾಡಿರುವ ಅಭ್ಯರ್ಥಿಗಳಿಗೂ ಪರಿಶೀಲನೆ ಇರಲಿದೆ.

ಸೇಂಟ್ ಜಾನ್ಸ್ ಮೆಡಿಕಲ್ ಕಾಲೇಜು ಅಭ್ಯರ್ಥಿಗಳಿಗೆ ಸೂಚನೆ

ಸೇಂಟ್ ಜಾನ್ಸ್ ಮೆಡಿಕಲ್ ಕಾಲೇಜಿನಲ್ಲಿ ಕ್ಯಾಟಗರಿ-2 ರಿಂದ ಕ್ಯಾಟಗರಿ-8 ರವರೆಗೆ ಸೀಟು ಕ್ಲೇಮ್ ಮಾಡಿರುವ ಎಲ್ಲಾ ಅಭ್ಯರ್ಥಿಗಳು ಕೋರಮಂಗಲದಲ್ಲಿರುವ ಅದೇ ಕಾಲೇಜಿನ ಆವರಣದಲ್ಲಿ ಆಗಸ್ಟ್ 4 ರಿಂದ 8 ರವರೆಗೆ ನಡೆಯುವ ದಾಖಲೆ ಪರಿಶೀಲನೆಗೆ ಹಾಜರಾಗಬೇಕು. ಆದರೆ, ಕ್ಯಾಟಗರಿ RC-1 ಮತ್ತು ಕ್ಯಾಟಗರಿ RC-9 ಅಡಿಯಲ್ಲಿ ಬರುವ ಅಭ್ಯರ್ಥಿಗಳು ಈ ಪರಿಶೀಲನೆಗೆ ಬರುವ ಅಗತ್ಯವಿರುವುದಿಲ್ಲ ಎಂದು ಪ್ರಾಧಿಕಾರ ಸ್ಪಷ್ಟಪಡಿಸಿದೆ.

ಅರ್ಹ ಅಭ್ಯರ್ಥಿಗಳು ತಮ್ಮ ಕ್ಲೇಮ್‌ಗೆ ಪೂರಕವಾದ ಎಲ್ಲಾ ಅಸಲಿ (Original) ದಾಖಲೆಗಳು ಮತ್ತು ಅವುಗಳ ಜೆರಾಕ್ಸ್ ಪ್ರತಿಗಳೊಂದಿಗೆ ನಿಗದಿತ ಸಮಯಕ್ಕೆ ಹಾಜರಿರಬೇಕು. ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಕೆಇಎ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬಹುದಾಗಿದೆ.

 


Share this with Friends

Related Post