Sun. Aug 2nd, 2026

ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿ ಪರೀಕ್ಷೆ ಯಶಸ್ವಿ

Share this with Friends

ಬೆಂಗಳೂರು: ಬಹುನಿರೀಕ್ಷಿತ ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿ ಪರೀಕ್ಷೆಯನ್ನು ರಾಜ್ಯದಾದ್ಯಂತ ಇಂದು ಅತ್ಯಂತ ಯಶಸ್ವಿಯಾಗಿ ನಡೆಸಲಾಯಿತು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ಅವರು ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಅತಿ ಹೆಚ್ಚು 149 ಪರೀಕ್ಷಾ ಕೇಂದ್ರಗಳು ಸೇರಿದಂತೆ ರಾಜ್ಯದ ಒಟ್ಟು 884 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಸುಗಮವಾಗಿ ನಡೆಯಿತು ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಉಳಿಕೆ ಮೂಲ ವೃಂದದ ಅಭ್ಯರ್ಥಿಗಳಿಗೆ ಬೆಳಗಿನ ಅವಧಿಯಲ್ಲಿ ಹಾಗೂ ಕಲ್ಯಾಣ ಕರ್ನಾಟಕ ವೃಂದದ ಅಭ್ಯರ್ಥಿಗಳಿಗೆ ಸಂಜೆ ಅವಧಿಯಲ್ಲಿ ಪರೀಕ್ಷೆ ನಡೆಸಲಾಯಿತು.

ಉಳಿಕೆ ಮೂಲ ವೃಂದದ 3,77,861 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದು, ಅವರಲ್ಲಿ ಶೇ 92.52 ರಷ್ಟು ಮಂದಿ ಪರೀಕ್ಷೆಗೆ ಹಾಜರಾಗಿದ್ದರು. ಕಲ್ಯಾಣ ಕರ್ನಾಟಕ ವೃಂದದ 76,676 ಅಭ್ಯರ್ಥಿಗಳ ಪೈಕಿ ಶೇ. 94 ರಷ್ಟು ಮಂದಿ ಪರೀಕ್ಷೆಗೆ ಹಾಜರಾಗಿದ್ದರು ಎಂದು‌ ಅವರು ತಿಳಿಸಿದ್ದಾರೆ.

ಪರೀಕ್ಷೆಯಲ್ಲಿ ಯಾವುದೇ ರೀತಿಯ ಅಕ್ರಮಗಳಿಗೆ ಅವಕಾಶವಾಗದಂತೆ ತಂತ್ರಜ್ಞಾನದ ಗರಿಷ್ಠ ಬಳಕೆ ಮಾಡಿಕೊಳ್ಳಲಾಯಿತು. ಎಲ್ಲಾ ಪರೀಕ್ಷಾ ಕೇಂದ್ರಗಳು ಹಾಗೂ ಪರೀಕ್ಷಾ ಕೊಠಡಿಗಳ ಮೇಲೆ ವೆಬ್ ಕಾಸ್ಟಿಂಗ್ ಮೂಲಕ ನಿರಂತರ ನಿಗಾ ವಹಿಸುವ ವ್ಯವಸ್ಥೆ ಮಾಡಲಾಗಿತ್ತು ಎಂದು ಅವರು ವಿವರಿಸಿದ್ದಾರೆ.

ಬೆಂಗಳೂರು ಸೇರಿದಂತೆ ಕಲಬುರಗಿ, ಯಾದಗಿರಿ, ರಾಯಚೂರು, ಬೀದರ್, ಬಳ್ಳಾರಿ, ವಿಜಯನಗರ ಮತ್ತು ಕೊಪ್ಪಳ ಜಿಲ್ಲೆಗಳ ಪರೀಕ್ಷಾ ಕೇಂದ್ರಗಳ ಮೇಲೂ ಕೆಇಎ ಕಚೇರಿಯಲ್ಲಿರುವ ಕಮಾಂಡ್ ಸೆಂಟರ್ ಮೂಲಕ ನೇರ ನಿಗಾ ವಹಿಸಲಾಯಿತು ಎಂದು ತಿಳಿಸಿದರು.

ಕಾಂಪೌಂಡ್ ಹಾರಿ ಹೋದ ಅಭ್ಯರ್ಥಿಗಳು: ವರದಿ ಕೇಳಿದ ಕೆಇಎ

ವಿಜಯಪುರ ಜಿಲ್ಲೆಯ ತಿಕೋಟಾದ ಶಾರದಾಂಭಾ ಪಿಯು ಕಾಲೇಜು ಪರೀಕ್ಷಾ ಕೇಂದ್ರದಲ್ಲಿ ಒಎಂಆರ್ ಉತ್ತರ ಪತ್ರಿಕೆ ಮತ್ತು ಪ್ರಶ್ನೆ ಪತ್ರಿಕೆಯ ಕ್ರಮ ಸಂಖ್ಯೆಗಳು ಹೊಂದಾಣಿಕೆ ಆಗುತ್ತಿಲ್ಲ ಎಂದು ಗೊಂದಲ ಸೃಷ್ಟಿಸಿದ ಕೆಲ‌ ಅಭ್ಯರ್ಥಿಗಳು ತಮ್ಮ ಬಳಿ ಇದ್ದ ಒಎಂಆರ್ ಮತ್ತು ಪ್ರಶ್ನೆ ಪತ್ರಿಕೆ ಸಮೇತ ಕಾಂಪೌಂಡ್ ಹಾರಿ ಹೊರ ನಡೆದಿದ್ದು, ಈ ಬಗ್ಗೆ ಜಿಲ್ಲಾಧಿಕಾರಿಗಳಿಂದ ವರದಿ ಕೇಳಲಾಗಿದೆ ಎಂದು ಪ್ರಸನ್ನ‌ ತಿಳಿಸಿದ್ದಾರೆ.

ಕೆಇಎ ನಿಯಮ ಪ್ರಕಾರ ಪ್ರಶ್ನೆ ಪತ್ರಿಕೆ‌ ಮತ್ತು ಒಎಂಆರ್ ಉತ್ತರ ಪತ್ರಿಕೆಗಳ ಕ್ರಮ ಸಂಖ್ಯೆ ಹೊಂದಾಣಿಕೆ ಆಗಬೇಕೆಂದೇನೂ ಇಲ್ಲ. ಈ ಬಗ್ಗೆ ಸ್ಥಳೀಯ ಸಿಬ್ಬಂದಿ ಮನದಟ್ಟು ಮಾಡಿದರೂ ಕೆಲವರು ಗೊಂದಲ ಸೃಷ್ಟಿಸಿದ್ದಾರೆ ಎಂದು ಅವರು ಹೇಳಿದರು.

ನಿಯಮ ಪ್ರಕಾರ ಪರೀಕ್ಷೆ ಮುಗಿದ‌ ನಂತರವೇ ಅಭ್ಯರ್ಥಿಗಳು ಕೇಂದ್ರದಿಂದ ಹೊರ ಹೋಗಬೇಕು. ಆದರೆ ಈ ಕೇಂದ್ರದಲ್ಲಿ ಕೆಲವರು ಪರೀಕ್ಷೆ ಆರಂಭವಾದ ಅರ್ಧ ಗಂಟೆಯಲ್ಲೇ ಒಎಂಆರ್ ಉತ್ತರ ಪತ್ರಿಕೆ ಹಾಗೂ ಪ್ರಶ್ನೆ ಪತ್ರಿಕೆಯೊಂದಿಗೆ ಪರೀಕ್ಷಾ ಕೇಂದ್ರದಿಂದ ಹೊರ ನಡೆದಿದ್ದಾರೆ. ಅದೂ ಕಾಂಪೌಂಡ್ ಹಾರಿ ಓಡಿ ಹೋಗಿದ್ದು, ಇದು ಕಾನೂನು ಪ್ರಕಾರ ಅಪರಾಧ ಎಂದು ಅವರು ಹೇಳಿದ್ದಾರೆ.

ಏನೇ ತಕರಾರು ಇದ್ದರೂ ಪರೀಕ್ಷಾ ಕೇಂದ್ರದೊಳಗೆ ಇದ್ದೇ ಅಭ್ಯರ್ಥಿಗಳು ಅಲ್ಲಿನ ಪ್ರಾಂಶುಪಾಲರು ಅಥವಾ‌ ಮೇಲಧಿಕಾರಿಗಳನ್ನು‌ ಕೇಳಬೇಕಿತ್ತು. ಪ್ರಶ್ನೆ ಪತ್ರಿಕೆ ಕೊಡುವುದು ತಡ ಆಗಿದ್ದರೆ ಹೆಚ್ಚುವರಿ ಸಮಯಕ್ಕೆ ಬೇಡಿಕೆ ಸಲ್ಲಿಸಬೇಕಿತ್ತು. ಅದು ಬಿಟ್ಟು ಪರೀಕ್ಷಾ ಸಾಮಾಗ್ರಿ ತೆಗೆದುಕೊಂಡು ಕಾಂಪೌಂಡ್ ಹಾರಿ ಓಡಿ‌ಹೋಗಿದ್ದು ಯಾವ ಉದ್ದೇಶಕ್ಕೆ ಎಂದು ಪ್ರಸನ್ನ ಅವರು ಪ್ರಶ್ನಿಸಿದ್ದಾರೆ.

ನ್ಯಾಯಸಮ್ಮತವಾದ ಪರೀಕ್ಷೆ ನಡೆಸಬೇಕೆನ್ನುವ ಉದ್ದೇಶದಿಂದ ಮಾನ್ಯ ಮುಖ್ಯಮಂತ್ರಿ ಹಾಗೂ ಗೃಹ ಸಚಿವರು ಮೂರುವರೆ ಗಂಟೆ ಅಧಿಕಾರಿಗಳ ಸಭೆ ನಡೆಸಿ, ಸೂಚನೆಗಳನ್ನು ನೀಡಿದ್ದರು. ಅಲ್ಲದೆ, ಪರೀಕ್ಷೆಯನ್ನು ವಿವಾದಗಳು ಇಲ್ಲದೆ ಸುಗಮವಾಗಿ‌ ನಡೆಸಲು ಪ್ರಾಧಿಕಾರ ಕೂಡ ಅವಿರತ ಶ್ರಮ ಹಾಕಿತ್ತು. ಇದ್ಯಾವುದನ್ನೂ ಲೆಕ್ಕಿಸದೆ ವಿನಾಕಾರಣ ಸಾಮಾಜಿಕ ಮಾಧ್ಯಮದಲ್ಲಿ ಸುಳ್ಳು ಸುದ್ದಿ ಹಬ್ಬಿಸಿದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಅವರು ಎಚ್ವರಿಕೆ ನೀಡಿದ್ದಾರೆ.

ಕಷ್ಟ‌ಪಟ್ಟು‌ ಓದುವ ಅಭ್ಯರ್ಥಿಗಳಿಗೆ ಅನ್ಯಾಯ ಆಗಬಾರದು ಹಾಗೂ ಅಂತಹವರು ಸರ್ಕಾರಿ ವ್ಯವಸ್ಥೆಯ ಭಾಗವಾಗಬೇಕು ಎನ್ನುವುದು ಸರ್ಕಾರ ಮತ್ತು ಪ್ರಾಧಿಕಾರದ ಉದ್ದೇಶ. ಆದರೆ ಈ ರೀತಿ ಗೊಂದಲ ಸೃಷ್ಟಿಸುವವರ ಉದ್ದೇಶ ಏನು ಎನ್ನುವುದು ತನಿಖೆ ಮೂಲಕ‌ ಗೊತ್ತಾಗಬೇಕು ಎಂದು ಹೇಳಿದರು.

ಇಷ್ಟರ‌‌‌ ನಡುವೆಯೂ ತಿಕೋಟಾ ಕೇಂದ್ರದಲ್ಲಿ 120 ಅಭ್ಯರ್ಥಿಗಳು ಯಶಸ್ವಿಯಾಗಿ ಪರೀಕ್ಷೆ ಬರೆದಿದ್ದಾರೆ ಎಂದು‌ ಅವರು ವಿವರಿಸಿದರು.

ಒಎಂಆರ್ ಪ್ರತಿ ಸ್ಕ್ಯಾನ್:

ಪಾರದರ್ಶಕತೆಯ ಭಾಗವಾಗಿ ಪರೀಕ್ಷೆ ಮುಕ್ತಾಯವಾದ ತಕ್ಷಣವೇ ಒಎಂಆರ್ ಉತ್ತರ ಪತ್ರಿಕೆಗಳನ್ನು ಸ್ಕ್ಯಾನ್ ಮಾಡಿ ಕೆಇಎ ವೆಬ್ ಸೈಟ್ ಗೆ ಅಪ್ ಲೋಡ್ ಮಾಡುವ ಕೆಲಸ ಆರಂಭಿಸಲಾಗಿದೆ.

ಬೆಂಗಳೂರು, ಕಲಬುರಗಿ, ಹುಬ್ಬಳ್ಳಿ, ಮೈಸೂರು, ದಾವಣಗೆರೆ, ವಿಜಯಪುರ ಹಾಗೂ ರಾಯಚೂರು ನಗರಗಳಲ್ಲಿ ಒಎಂಆರ್ ಸ್ಕ್ಯಾನಿಂಗ್‌ಗೆ ವಿಶೇಷ ವ್ಯವಸ್ಥೆ ಮಾಡಿದ್ದು, ಸಂಜೆ 7 ಗಂಟೆವರೆಗೆ ಬೆಳಗಿನ ಪರೀಕ್ಷೆಯ 20 ಜಿಲ್ಲೆಗಳ ಒಎಂಅರ್ ಪ್ರತಿಗಳನ್ನು ವೆಬ್ ಸೈಟ್ ಗೆ ಅಪ್ ಲೋಡ್ ಮಾಡುವ ಕೆಲಸ ಪೂರ್ಣಗೊಳಿಸಲಾಗಿದೆ. ಉಳಿದ ಜಿಲ್ಲೆಗಳ ಒಎಂಆರ್ ಪ್ರತಿಗಳನ್ನು ಸ್ಕ್ಯಾನ್ ಮಾಡುವ ಕೆಲಸ ಪ್ರಗತಿಯಲ್ಲಿದೆ ಎಂದು ವಿವರಿಸಿದರು.


Share this with Friends

Related Post