ಚಾಮರಾಜನಗರ,ಮಾ.17: ಚಾಮರಾಜನಗರ ಲೋಕಸಭಾ ಕ್ಷೇತ್ರದ ಚುನಾವಣೆಗೆ ಏ. 26ರಂದು ಮತದಾನ ನಡೆಯಲಿದ್ದು ಸಿದ್ದತೆ ನಡೆದಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಶಿಲ್ಪಾ ನಾಗ್ ತಿಳಿಸಿದರು
ಸುದ್ದಿಗೋಷ್ಠಿಯಲ್ಲಿ ಚುನಾವಣೆ ಕುರಿತು ಮಾತನಾಡಿದ ಅವರು,ಚುನಾವಣಾ ಪ್ರಕ್ರಿಯೆಗೆ ಜಿಲ್ಲಾಡಳಿತದಿಂದ ಎಲ್ಲಾ ಸಿದ್ದತೆ ಕೈಗೊಳ್ಳಲಾಗಿದೆ ಎಂದು ಹೇಳಿದರು.
ಚಾಮರಾಜನಗರ ಲೋಕಸಭಾ ಕ್ಷೇತ್ರದ ಚುನಾವಣೆಗೆ ಮಾ. 28ರಂದು ಅಧಿಸೂಚನೆ ಹೊರಡಿಸಲಾಗುತ್ತದೆ. ನಾಮಪತ್ರ ಸಲ್ಲಿಸಲು ಏ. 4 ಕೊನೆಯ ದಿನ, ಏ. 5ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಏ. 8ರಂದು ಉಮೇದುವಾರಿಕೆ ಹಿಂತೆಗೆದುಕೊಳ್ಳಲು ಕಡೆಯ ದಿನ, ಏ. 26ರಂದು ಮತದಾನ ನಡೆಯಲಿದ್ದು, ಜೂ. 4ರಂದು ಮತ ಎಣಿಕೆ ಕಾರ್ಯ ನಡೆಯಲಿದೆ.
ಎಂದು ಹೇಳಿದರು.
ಚುನಾವಣೆ ನೀತಿ ಸಂಹಿತೆಯು ಈಗಾಗಲೇ ಜಾರಿಗೆ ಬಂದಿದ್ದು, ಜೂ. 6ರ ಚುನಾವಣಾ ಪ್ರಕ್ರಿಯೆಯು ಮುಕ್ತಾಯಗೊಳ್ಳುವವರೆಗೂ ಜಾರಿಯಲ್ಲಿರುತ್ತದೆ ಎಂದು ತಿಳಿಸಿದರು.
ನಗರದ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಾಣಧಿಕಾರಿಗಳ ಕಚೇರಿಯಲ್ಲಿ ನಾಮಪತ್ರ ಸ್ವೀಕರಿಸಲಾಗುತ್ತದೆ.
ಚಾಮರಾಜನಗರ ಲೋಕಸಭಾ ಕ್ಷೇತ್ರ (ಪ.ಜಾ) ವ್ಯಾಪ್ತಿಗೆ ಹನೂರು, ಕೊಳ್ಳೇಗಾಲ, ಚಾಮರಾಜನಗರ, ಗುಂಡ್ಲುಪೇಟೆ, ಹೆಚ್.ಡಿ. ಕೋಟೆ, ನಂಜನಗೂಡು, ವರುಣ, ಟಿ. ನರಸೀಪುರ ವಿಧಾನಸಭಾ ಕ್ಷೇತ್ರಗಳು ಒಳಪಡಲಿವೆ.
ಒಟ್ಟು 8 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ 8,69,389 ಪುರುಷರು, 8,88,113 ಮಹಿಳೆಯರು, ಇತರೆ 114 ಮತದಾರರು ಸೇರಿದಂತೆ ಒಟ್ಟು 17,57,616 ಮತದಾರರು ಚಾಮರಾಜನಗರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಇದ್ದಾರೆ.
ಒಟ್ಟು ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 2 ಸಾವಿರ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಚುನಾವಣೆಯಲ್ಲಿ ವಿದ್ಯುನ್ಮಾನ ಮತಯಂತ್ರಗಳನ್ನು ಉಪಯೋಗಿಸಲಾಗುತ್ತಿದ್ದು 1177 ಬ್ಯಾಲೆಟ್ ಯೂನಿಟ್, 1177 ಕಂಟ್ರೋಲ್ ಯೂನಿಟ್ ಹಾಗೂ 1276 ವಿ.ವಿ. ಪ್ಯಾಟ್ಸ್ ಗಳನ್ನು ಬಳಸಲಾಗುತ್ತಿದೆ ಎಂದು ಅವರು ಹೇಳಿದರು.
ಮತದಾರರ ಪಟ್ಟಿ ಹಾಗೂ ಚುನಾವಣಾ ವಿಷಯಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರು ತಮ್ಮ ಅಹವಾಲುಗಳನ್ನು ತಿಳಿಸಲು ಜಿಲ್ಲಾಧಿಕಾರಿಗಳ ಕಚೇರಿಯ ಕೊಠಡಿ ಸಂಖ್ಯೆ 104/1 ರಲ್ಲಿ ಮತದಾರರ ಸಹಾಯವಾಣಿ 1950 ಸ್ಥಾಪಿಸಲಾಗಿದೆ ಇಲ್ಲಿ ಎಲ್ಲಾ ಮಾಹಿತಿಯನ್ನು ಪಡೆಯಬಹುದಾಗಿದೆ ಎಂದು ಅವರು ಹೇಳಿದರು.
ಮತದಾನದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಯುವ ರಾಯಭಾರಿಗಳನ್ನಾಗಿ ಚಲನಚಿತ್ರ ನಟರಾದ ಕಾರ್ತಿಕ್ ಮಹೇಶ್ ಹಾಗೂ ಚಲನಚಿತ್ರ ನಟರು ಹಾಗೂ ನಿರ್ದೇಶಕರಾದ ನಾಗಭೂಷಣ್, ತೃತೀಯ ಲಿಂಗಿಗಳ ರಾಯಭಾರಿಯಾಗಿ ಸಮತಾ ಸೊಸೈಟಿಯ ಅಧ್ಯಕ್ಷರಾದ ದೀಪಾ ಬುದ್ದೆ ಅವರನ್ನು ನೇಮಕ ಮಾಡಲಾಗಿದೆ ಎಂದು ಶಿಲ್ಪಾ ನಾಗ್ ತಿಳಿಸಿದರು
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಆನಂದ್ ಪ್ರಕಾಶ್ ಮೀನಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪದ್ಮಿನಿ ಸಾಹು, ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತದ್ದರು.