Thu. Aug 6th, 2026

ಆಗಸ್ಟ್ 14ರಂದು ಸಭಾಪತಿ ಸ್ಥಾನಕ್ಕೆ ಹೊರಟ್ಟಿ ರಾಜೀನಾಮೆ: ಸಿಎಂ ನಿವಾಸದಲ್ಲಿ ಮಹತ್ವದ ಸಭೆ

Share this with Friends

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ತೀವ್ರ ನಾಟಕೀಯ ಬೆಳವಣಿಗೆಗಳು ನಡೆಯುತ್ತಿದ್ದು, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ಅಧಿಕೃತವಾಗಿ ನಿರ್ಧರಿಸಿದ್ದಾರೆ. ಮುಂಬರುವ ಆಗಸ್ಟ್ 14ರಂದು ನಡೆಯಲಿರುವ ಸದನದ ಕಲಾಪದಲ್ಲಿಯೇ ಅವರು ಅಧಿಕೃತವಾಗಿ ಸಭಾಪತಿ ಹುದ್ದೆಯಿಂದ ಕೆಳಗಿಳಿಯಲಿದ್ದಾರೆ. ಈ ಪ್ರಮುಖ ನಿರ್ಧಾರದ ಬೆನ್ನಲ್ಲೇ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನಿವಾಸದಲ್ಲಿ ಉನ್ನತ ಮಟ್ಟದ ರಾಜಕೀಯ ಸಭೆ ನಡೆದಿದೆ.

ಸಿಎಂ ನಿವಾಸದಲ್ಲಿ ಸಂಧಾನ ಸಭೆ:

ಮುಖ್ಯಮಂತ್ರಿ ಲ ಡಿ.ಕೆ. ಶಿವಕುಮಾರ್ ಅವರ ಅಧಿಕೃತ ನಿವಾಸದಲ್ಲಿ ಸಭಾಪತಿ ಬಸವರಾಜ ಹೊರಟ್ಟಿ ಅವರೊಂದಿಗೆ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅವರು ಮಹತ್ವದ ಸಭೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಸರ್ಕಾರದ ಹಲವು ಪ್ರಮುಖ ಸಚಿವರು ಹಾಗೂ ಶಾಸಕರು ಉಪಸ್ಥಿತರಿದ್ದರು. ಸಭಾಪತಿಗಳ ಬದಲಾವಣೆಯ ಪ್ರಕ್ರಿಯೆಯು ಯಾವುದೇ ಅಸಮಾಧಾನಕ್ಕೆ ಎಡೆಮಾಡಿಕೊಡದಂತೆ ಸುಗಮವಾಗಿ ನಡೆಯಬೇಕು ಎಂಬ ನಿಟ್ಟಿನಲ್ಲಿ ಆಡಳಿತ ಪಕ್ಷದ ಮುಖಂಡರು ಹೊರಟ್ಟಿ ಅವರೊಂದಿಗೆ ಸುದೀರ್ಘ ಸಮಾಲೋಚನೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಸಿಎಂ ಕರೆ ಹಾಗೂ ಹೊರಟ್ಟಿ ಬೇಸರ:

ವಿಧಾನ ಪರಿಷತ್ತಿನಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸ್ಪಷ್ಟ ಬಹುಮತ ದೊರೆತಿರುವ ಹಿನ್ನೆಲೆಯಲ್ಲಿ, ಆಡಳಿತ ಪಕ್ಷವು ಮೇಲ್ಮನೆಯ ಸಾರಥ್ಯವನ್ನು ವಹಿಸಿಕೊಳ್ಳಲು ಮುಂದಾಗಿದೆ. ಇತ್ತೀಚೆಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಹೊರಟ್ಟಿ ಅವರಿಗೆ ದೂರವಾಣಿ ಕರೆ ಮಾಡಿ, ಕಾಂಗ್ರೆಸ್ ಪಕ್ಷದಿಂದ ಹೊಸ ಸಭಾಪತಿ ಅಭ್ಯರ್ಥಿಯನ್ನು ಅಂತಿಮಗೊಳಿಸಿರುವುದರಿಂದ ಉಂಟಾಗಬಹುದಾದ ರಾಜಕೀಯ ಮುಜುಗುರವನ್ನು ತಪ್ಪಿಸಲು ಸ್ವಯಂಪ್ರೇರಿತರಾಗಿ ರಾಜೀನಾಮೆ ನೀಡುವಂತೆ ಕೋರಿದ್ದರು.

ಬದಲಾದ ರಾಜಕೀಯ ಪರಿಸ್ಥಿತಿಗೆ ಪ್ರತಿಕ್ರಿಯಿಸಿರುವ ಹೊರಟ್ಟಿ ಅವರು, “ನನ್ನ ಸುದೀರ್ಘ ರಾಜಕೀಯ ಜೀವನದಲ್ಲಿ ಯಾವುದೇ ಭ್ರಷ್ಟಾಚಾರದ ಆರೋಪಗಳಿಲ್ಲ. ಸದನದಲ್ಲಿ ಅವಿಶ್ವಾಸ ನಿರ್ಣಯ ಎದುರಿಸಿ ನನ್ನ ಆತ್ಮಗೌರವ ಹಾಗೂ ಸ್ಥಾನದ ಘನತೆಗೆ ಧಕ್ಕೆ ತಂದುಕೊಳ್ಳಲು ಇಷ್ಟವಿಲ್ಲದ ಕಾರಣ ರಾಜೀನಾಮೆ ನೀಡುತ್ತಿದ್ದೇನೆ” ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸಲೀಂ ಅಹಮದ್ ಮುಂದಿನ ಸಭಾಪತಿ:

ಕಾಂಗ್ರೆಸ್ ಹೈಕಮಾಂಡ್ ಈಗಾಗಲೇ ಹಿರಿಯ ನಾಯಕ ಸಲೀಂ ಅಹಮದ್ ಅವರನ್ನು ವಿಧಾನ ಪರಿಷತ್ತಿನ ಮುಂದಿನ ಸಭಾಪತಿ ಹುದ್ದೆಯ ಅಭ್ಯರ್ಥಿಯನ್ನಾಗಿ ಅಂತಿಮಗೊಳಿಸಿದೆ. 8 ಬಾರಿ ಎಂ.ಎಲ್.ಸಿ ಆಗಿ ಆಯ್ಕೆಯಾಗಿರುವ ಹೊರಟ್ಟಿ ಅವರ ಅಧಿಕಾರಾವಧಿ 2028ರ ಜುಲೈ ವರೆಗೆ ಇತ್ತಾದರೂ, ಪ್ರಸಕ್ತ ರಾಜಕೀಯ ಲೆಕ್ಕಾಚಾರ ಹಾಗೂ ಕರ್ನಾಟಕ ಕಾಂಗ್ರೆಸ್‌ನ ಒಳಜಗಳಗಳ ಹಿನ್ನೆಲೆಯಲ್ಲಿ ಅವರು ಅವಧಿಗೂ ಮುನ್ನವೇ ಸಭಾಪತಿ ಪೀಠದಿಂದ ಇಳಿಯಬೇಕಾಗಿದೆ.


Share this with Friends

Related Post