Thu. Aug 6th, 2026

ಕಾರ್ಯಕರ್ತರ ಒತ್ತಡಕ್ಕೆ ಮಣಿದ ಯಶವಂತರಾಯಗೌಡ ಪಾಟೀಲ್:ಶಾಸಕ ಸ್ಥಾನದ ರಾಜೀನಾಮೆ ನಿರ್ಧಾರ ವಾಪಸ್ ಘೋಷಣೆ

Share this with Friends

ವಿಜಯಪುರ: ಜಿಲ್ಲೆಯ ಇಂಡಿ ವಿಧಾನಸಭಾ ಕ್ಷೇತ್ರದ ಶಾಸಕ ಯಶವಂತರಾಯಗೌಡ ಪಾಟೀಲ್ ಅವರು ತಮ್ಮ ಶಾಸಕ ಸ್ಥಾನಕ್ಕೆ ನೀಡಿದ್ದ ರಾಜೀನಾಮೆ ನಿರ್ಧಾರವನ್ನು ಅಧಿಕೃತವಾಗಿ ಹಿಂಪಡೆದಿದ್ದಾರೆ. ಇಲ್ಲಿನ ಪ್ರವಾಸಿ ಮಂದಿರದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಈ ಮಹತ್ವದ ನಿರ್ಧಾರ ಪ್ರಕಟಿಸಿದ್ದಾರೆ‌

ಭಾವನಾತ್ಮಕ ನಿರ್ಧಾರ:

ಸುದ್ದಿಗೋಷ್ಠಿಯಲ್ಲಿ ಮಾಧ್ಯಮ ಮಿತ್ರರೊಂದಿಗೆ ಮಾತನಾಡಿದ ಅವರು, “ನಾನು ಇಂದು ಶಾಸಕನಾಗಿ ಈ ಮಟ್ಟಕ್ಕೆ ಬೆಳೆಯಲು ನನ್ನ ಪ್ರೀತಿಯ ಕಾರ್ಯಕರ್ತರ ಅಪಾರ ಶ್ರಮ ಮತ್ತು ತ್ಯಾಗವೇ ಕಾರಣ. ಅಂತಹ ನನ್ನ ಸದಾಶಯದ ಕಾರ್ಯಕರ್ತರು ಒಕ್ಕೊರಲಿನಿಂದ ನನ್ನ ರಾಜೀನಾಮೆ ನಿರ್ಧಾರವನ್ನು ವಿರೋಧಿಸಿ, ಸ್ಥಾನದಲ್ಲಿ ಮುಂದುವರಿಯುವಂತೆ ಒತ್ತಾಯಿಸಿದಾಗ ಅವರ ಪ್ರೀತಿ ಮತ್ತು ನಂಬಿಕೆಯನ್ನು ಹುಸಿಗೊಳಿಸಲು ನನ್ನಿಂದ ಸಾಧ್ಯವಾಗಲಿಲ್ಲ” ಎಂದು ಭಾವುಕರಾಗಿ ನುಡಿದರು.

ಅಧಿಕಾರಕ್ಕಿಂತ ಜನಸೇವೆಯೇ ಮುಖ್ಯ:

ಸಚಿವ ಸ್ಥಾನದ ಲೆಕ್ಕಾಚಾರಗಳ ಕುರಿತು ಮಾತನಾಡಿದ ಶಾಸಕರು, “ನನಗೆ ಯಾವುದೇ ಸಚಿವ ಹುದ್ದೆಗಿಂತಲೂ ನನ್ನ ‘ಇಂಡಿ’ ಮತಕ್ಷೇತ್ರದ ಜನತೆ ನನ್ನ ಮೇಲಿಟ್ಟಿರುವ ಪ್ರೀತಿ ಹಾಗೂ ವಿಶ್ವಾಸವೇ ಅತಿ ದೊಡ್ಡದು. ಅಧಿಕಾರ ಹಿಡಿಯುವುದಕ್ಕಿಂತ ಜನರ ಸೇವೆಯೇ ನನಗೆ ಮುಖ್ಯವಾಗಿದೆ. ನನ್ನ ಕೊನೆಯುಸಿರಿರುವವರೆಗೂ ನನ್ನ ಕ್ಷೇತ್ರದ ಜನತೆಯ ಸೇವೆಗಾಗಿ ನಾನು ಸದಾ ಸಿದ್ಧ” ಎಂದು ಸ್ಪಷ್ಟಪಡಿಸಿದರು.

ಈ ನಿರ್ಧಾರದಿಂದಾಗಿ ಇಂಡಿ ಕ್ಷೇತ್ರದಲ್ಲಿ ಕಳೆದ ಕೆಲವು ದಿನಗಳಿಂದ ಮನೆಮಾಡಿದ್ದ ರಾಜಕೀಯ ಗೊಂದಲಗಳಿಗೆ ಸದ್ಯ ತೆರೆ ಬಿದ್ದಂತಾಗಿದೆ.

 

 


Share this with Friends

Related Post