ಬೆಂಗಳೂರು: ರಾಜಧಾನಿ ಸಿಲಿಕಾನ್ ಸಿಟಿಯಲ್ಲಿ ನಿಯಮ ಗಾಳಿಗೆ ತೂರಿ ಕಾನೂನುಬಾಹಿರವಾಗಿ ಸಂಚರಿಸುತ್ತಿದ್ದ ಖಾಸಗಿ ವೈಟ್ ಬೋರ್ಡ್ ಬೈಕ್ ಟ್ಯಾಕ್ಸಿಗಳ ವಿರುದ್ಧ ಸಾರಿಗೆ ಇಲಾಖೆ (RTO) ಅಧಿಕಾರಿಗಳು ಇಂದು ಭಾರಿ ಪ್ರಮಾಣದ ಸೀಜ್ ಕಾರ್ಯಾಚರಣೆ ತೀವ್ರಗೊಳಿಸಿದ್ದಾರೆ. ಮೆಜೆಸ್ಟಿಕ್, ಕೆ.ಆರ್. ಪುರಂ, ಇಂದಿರಾನಗರ ಸೇರಿದಂತೆ ಪ್ರಮುಖ ರೈಲ್ವೆ ಮತ್ತು ಮೆಟ್ರೋ ನಿಲ್ದಾಣಗಳ ಬಳಿ ನಿಯಮ ಉಲ್ಲಂಘಿಸಿ ಓಡಾಡುತ್ತಿದ್ದ ನೂರಾರು ಬೈಕ್ ಟ್ಯಾಕ್ಸಿಗಳನ್ನು ಇಲಾಖೆ ವಶಕ್ಕೆ ಪಡೆದಿದೆ.
ಖುದ್ದಾಗಿ ಸ್ಪಾಟ್‌ನಲ್ಲೇ ನಿಂತು ಹಿಡಿದುಕೊಡುತ್ತಿರುವ ಆಟೋ ಚಾಲಕರು:
ಇಂದಿನ ಕಾರ್ಯಾಚರಣೆಯ ಪ್ರಮುಖ ಹೈಲೈಟ್ ಎಂದರೆ ಆಟೋ ಚಾಲಕರೇ ನೇರವಾಗಿ ರಸ್ತೆಗಿಳಿದಿರುವುದು. ರಾಪಿಡೋ, ಓಲಾ ಹಾಗೂ ಉಬರ್ ಆಪ್‌ಗಳ ಮೂಲಕ ವೈಟ್ ಬೋರ್ಡ್ ಬೈಕ್‌ಗಳಲ್ಲಿ ಪ್ರಯಾಣಿಕರನ್ನು ಪಿಕ್ಅಪ್ ಮಾಡಿಕೊಳ್ಳುತ್ತಿದ್ದ ಸವಾರರನ್ನು ಆಟೋ ಚಾಲಕರು ಸ್ಥಳದಲ್ಲೇ ಹಿಡಿದು ಸಾರಿಗೆ ಅಧಿಕಾರಿಗಳಿಗೆ ಒಪ್ಪಿಸುತ್ತಿದ್ದಾರೆ. “ನಾವು ಲಕ್ಷಾಂತರ ರೂಪಾಯಿ ಸಾಲ ಮಾಡಿ, ಕಮರ್ಷಿಯಲ್ ಪರ್ಮಿಟ್ ಪಡೆದು ಜೀವನ ನಡೆಸುತ್ತಿದ್ದೇವೆ. ಆದರೆ ಈ ಅಕ್ರಮ ಬೈಕ್ ಟ್ಯಾಕ್ಸಿಗಳಿಂದಾಗಿ ನಮ್ಮ ಹೊಟ್ಟೆಯ ಮೇಲೆ ಹೊಡೆದಂತಾಗಿದೆ” ಎಂದು ಆಟೋ ಚಾಲಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಿತ್ತಾಟ, ಹೈಡ್ರಾಮಾ ಮತ್ತು ದಂಡದ ಬಿಸಿ:
ನಗರದ ಪ್ರಮುಖ ಜಂಕ್ಷನ್‌ಗಳಲ್ಲಿ ಬೈಕ್ ಟ್ಯಾಕ್ಸಿ ಸವಾರರು ಮತ್ತು ಆಟೋ ಚಾಲಕರ ನಡುವೆ ತೀವ್ರ ವಾಕ್ಸಮರ ಮತ್ತು ನೂಕಾಟ-ತೂಕಾಟಗಳು ನಡೆದು ಹೈಡ್ರಾಮಾ ಸೃಷ್ಟಿಯಾಗಿದೆ. ಸ್ಥಳಕ್ಕೆ ಧಾವಿಸುತ್ತಿರುವ ಆರ್ಟಿಒ ಜಾಗೃತ ದಳದ ಅಧಿಕಾರಿಗಳು, ಮೋಟಾರು ವಾಹನ ಕಾಯ್ದೆ ಉಲ್ಲಂಘನೆಯಡಿ ದ್ವಿಚಕ್ರ ವಾಹನಗಳನ್ನು ಸ್ಥಳದಲ್ಲೇ ಸೀಜ್ ಮಾಡಿ ಕಠಿಣ ಕಾನೂನು ಕ್ರಮ ಕೈಗೊಳ್ಳುತ್ತಿದ್ದಾರೆ. ಖಾಸಗಿ ನೋಂದಣಿಯ ವಾಹನಗಳನ್ನು ವಾಣಿಜ್ಯ ಉದ್ದೇಶಕ್ಕೆ ಬಳಸುವಂತಿಲ್ಲ ಹಾಗೂ ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದಲೂ ಇವು ಅಪಾಯಕಾರಿ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

