Fri. Aug 7th, 2026

ವೈದ್ಯಕೀಯ, ಡೆಂಟಲ್, ಫಾರ್ಮಸಿ ಸೀಟು ಆಕಾಂಕ್ಷಿಗಳಿಗೆ ಕೆಇಎ ಮಹತ್ವದ ಪ್ರಕಟಣೆ: ಇಂದಿನಿಂದಲೇ ‘ಆಪ್ಷನ್ ಎಂಟ್ರಿ’ ಆರಂಭ!

Share this with Friends

ಬೆಂಗಳೂರು:ರಾಜ್ಯದಲ್ಲಿ ವೈದ್ಯಕೀಯ (Medical), ದಂತ ವೈದ್ಯಕೀಯ (Dental) ಮತ್ತು ಫಾರ್ಮಸಿ (Pharmacy) ಕೋರ್ಸ್‌ಗಳ ಪ್ರವೇಶಾತಿಗಾಗಿ ಕಾಯುತ್ತಿದ್ದ ವಿದ್ಯಾರ್ಥಿಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ಮಹತ್ವದ ಸುದ್ದಿ ನೀಡಿದೆ. ಈ ಕೋರ್ಸ್‌ಗಳ ಪ್ರವೇಶಕ್ಕೆ ಇಚ್ಛೆ/ಆಯ್ಕೆಗಳನ್ನು (Options) ದಾಖಲಿಸುವ ಪ್ರಕ್ರಿಯೆಯನ್ನು ಪ್ರಾಧಿಕಾರವು ಇಂದಿನಿಂದಲೇ ಅಧಿಕೃತವಾಗಿ ಆರಂಭಿಸಿದೆ.

ಅರ್ಹ ಅಭ್ಯರ್ಥಿಗಳು ತಮ್ಮ ಆದ್ಯತಾ ಕ್ರಮದ ಪ್ರಕಾರ ಆಗಸ್ಟ್ 13ರವರೆಗೆ ಆಪ್ಷನ್ಸ್ ದಾಖಲಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್. ಪ್ರಸನ್ನ ತಿಳಿಸಿದ್ದಾರೆ. ಇದೇ ಮೊದಲ ಬಾರಿಗೆ, ಈಗಾಗಲೇ ಎಂಜಿನಿಯರಿಂಗ್ ಸೇರಿದಂತೆ ಇತರೆ ಸಿಇಟಿ ಕೋರ್ಸ್‌ಗಳ ಪ್ರವೇಶಕ್ಕೆ ಆಪ್ಷನ್ಸ್ ದಾಖಲಿಸಿದ್ದ ಅಭ್ಯರ್ಥಿಗಳು ಕೂಡ ಈಗ ಹೊಸದಾಗಿ ವೈದ್ಯಕೀಯ ಕೋರ್ಸ್‌ಗಳ ಆಪ್ಷನ್ಸ್ ದಾಖಲಿಸಲು, ಹಳೆಯದನ್ನು ಮಾರ್ಪಡಿಸಲು ಅಥವಾ ಸಂಪೂರ್ಣವಾಗಿ ತೆಗೆದುಹಾಕಲು ವಿಶೇಷ ಅವಕಾಶ ನೀಡಲಾಗಿದೆ ಎಂದಿದ್ದಾರೆ.

ಸೀಟ್ ಮ್ಯಾಟ್ರಿಕ್ಸ್ ಪ್ರಕಟ – ಎಚ್ಚರಿಕೆಯ ಸಲಹೆ:

ವೈದ್ಯಕೀಯ, ದಂತ ವೈದ್ಯಕೀಯ ಮತ್ತು ಫಾರ್ಮಸಿ ಕೋರ್ಸ್‌ಗಳ ಸೀಟ್ ಮ್ಯಾಟ್ರಿಕ್ಸ್ ಹಾಗೂ ಆಯಾ ಕಾಲೇಜುಗಳ ಶುಲ್ಕದ ವಿವರಗಳನ್ನು ಕೆಇಎ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. ವಿದ್ಯಾರ್ಥಿಗಳು ಇವುಗಳನ್ನು ಕೂಲಂಕಷವಾಗಿ ಪರಿಶೀಲಿಸಿದ ನಂತರವೇ ಅತ್ಯಂತ ಎಚ್ಚರಿಕೆಯಿಂದ ತಮ್ಮ ಆಪ್ಷನ್ಸ್‌ಗಳನ್ನು ದಾಖಲಿಸಬೇಕು ಎಂದು ನಿರ್ದೇಶಕರು ಸಲಹೆ ನೀಡಿದ್ದಾರೆ. ಪ್ರಸ್ತುತ ಆಯುಷ್ ಕೋರ್ಸ್‌ಗಳ ಸೀಟ್ ಮ್ಯಾಟ್ರಿಕ್ಸ್ ಬಾರದೇ ಇರುವುದರಿಂದ ಆ ಕೋರ್ಸ್‌ಗಳಿಗೆ ಆಪ್ಷನ್ ದಾಖಲಿಸಲು ಸದ್ಯಕ್ಕೆ ಅವಕಾಶವಿರುವುದಿಲ್ಲ ಎಂದಿದ್ದಾರೆ.

ಆಗಸ್ಟ್‌ 19 ಕ್ಕೆ ತಾತ್ಕಾಲಿಕ ಫಲಿತಾಂಶ – ಪ್ರಮುಖ ನಿಯಮಗಳು:

ವೈದ್ಯಕೀಯ ಕೋರ್ಸ್‌ನ ಮೊದಲ ಸುತ್ತಿನ ಮತ್ತು ಎಂಜಿನಿಯರಿಂಗ್ ಸೇರಿದಂತೆ ಇತರೆ ಸಿಇಟಿ ಕೋರ್ಸ್‌ಗಳ ಎರಡನೇ ಸುತ್ತಿನ ಸೀಟು ಹಂಚಿಕೆಯನ್ನು ಏಕಕಾಲದಲ್ಲಿ ಮಾಡಲಾಗುತ್ತಿದ್ದು, ಇದರ ತಾತ್ಕಾಲಿಕ ಫಲಿತಾಂಶವನ್ನು ಆಗಸ್ಟ್ 19 ರಂದು ಬೆಳಿಗ್ಗೆ 10:00 ಗಂಟೆಗೆ ಪ್ರಕಟಿಸಲಾಗುವುದು ಎಂದಿದ್ದಾರೆ.

ಯುಜಿ ನೀಟ್ (UG-NEET): ಮೊದಲನೇ ಸುತ್ತಿನ ಸೀಟು ಹಂಚಿಕೆಯಾಗಿರುವುದರಿಂದ ವಿದ್ಯಾರ್ಥಿಗಳಿಗೆ ಒಟ್ಟು ನಾಲ್ಕು ಚಾಯ್ಸ್ (Choices) ಇರುತ್ತವೆ ಎಂದರು.

ಯುಜಿಸಿಇಟಿ (UGCET – ಎಂಜಿನಿಯರಿಂಗ್/ಕೃಷಿ): ಎರಡನೇ ಸುತ್ತಿನ ಸೀಟು ಹಂಚಿಕೆಯ ಫಲಿತಾಂಶ ಪ್ರಕಟವಾದ ನಂತರ ವಿದ್ಯಾರ್ಥಿಗಳಿಗೆ ಕೇವಲ ಚಾಯ್ಸ್-1 ಮತ್ತು ಚಾಯ್ಸ್-4 ಆಯ್ಕೆಗೆ ಮಾತ್ರ ಅವಕಾಶವಿರುತ್ತದೆ. ಕೆಲವು ಕಠಿಣ ಷರತ್ತುಗಳ ಅನ್ವಯವಷ್ಟೇ 3ನೇ ಸುತ್ತಿನ ಸೀಟು ಹಂಚಿಕೆಯಲ್ಲಿ ಭಾಗವಹಿಸಲು ಅವಕಾಶ ನೀಡಲಾಗುತ್ತದೆ ಎಂದರು.

ದಾಖಲೆ ಪರಿಶೀಲನೆಗೆ ಶನಿವಾರವೂ ಅವಕಾಶ:

ಇದುವರೆಗೂ ಯಾವುದೇ ಕಾರಣಗಳಿಂದಾಗಿ ತಮ್ಮ ಮೂಲ ದಾಖಲೆಗಳನ್ನು ಪರಿಶೀಲನೆ ಮಾಡಿಸಿಕೊಳ್ಳದ ಅಭ್ಯರ್ಥಿಗಳು ಶನಿವಾರ (ನಾಳೆ) ಕೂಡ ಬೆಂಗಳೂರಿನ ಕೆಇಎ ಕಚೇರಿಗೆ ನೇರವಾಗಿ ಭೇಟಿ ನೀಡಿ ಪರಿಶೀಲನೆ ಮಾಡಿಸಿಕೊಳ್ಳಬಹುದು. ದಾಖಲೆಗಳ ಪರಿಶೀಲನೆ ಮುಗಿದ ನಂತರವೇ ವೆರಿಫಿಕೇಷನ್ ಸ್ಲಿಪ್ ಡೌನ್‌ಲೋಡ್ ಮಾಡಿಕೊಂಡು ಆಪ್ಷನ್ಸ್ ದಾಖಲಿಸಲು ಸಾಧ್ಯವಾಗುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.

ಚಾಯ್ಸ್-4 ದಾಖಲಿಸಿ ಪ್ರಕ್ರಿಯೆಯಿಂದ ಹೊರ ನಡೆದಿರುವ ಹಾಗೂ ಮೊದಲ ಸುತ್ತಿನಲ್ಲಿ ಸೀಟು ಹಂಚಿಕೆಯಾದ ಮೇಲೂ ಚಾಯ್ಸ್ ದಾಖಲಿಸದೆ ಸುಮ್ಮನಿರುವ ಅಭ್ಯರ್ಥಿಗಳು ಕೂಡ ₹750 ಪಾವತಿಸಿ ಪುನಃ ಪ್ರಕ್ರಿಯೆಯೊಳಗೆ ಬರುವುದಕ್ಕೆ ಅವಕಾಶ ನೀಡಲಾಗಿದೆ ಎಂದು ಅವರು ಹೇಳಿದರು.

 


Share this with Friends

Related Post