Tue. Aug 11th, 2026

ಆಗಸ್ಟ್ 14 ಕ್ಕೆ ವಿಧಾನಸಭಾಧ್ಯಕ್ಷರ ಚುನಾವಣೆ ನಿಗದಿ: ರಾಜ್ಯಪಾಲರ ಆದೇಶ; ಆ.13 ನಾಮಪತ್ರ ಸಲ್ಲಿಕೆಗೆ ಕೊನೆ ದಿನ

Share this with Friends

ಬೆಂಗಳೂರು: ಕರ್ನಾಟಕ ವಿಧಾನಸಭೆಯ ನೂತನ ಸಭಾಧ್ಯಕ್ಷರ (Speaker) ಆಯ್ಕೆಗಾಗಿ ಮುಂಬರುವ ಆಗಸ್ಟ್ 14 ರ ಶುಕ್ರವಾರದಂದು ಚುನಾವಣೆ ನಡೆಸಲು ಮಾನ್ಯ ರಾಜ್ಯಪಾಲರು ದಿನಾಂಕ ನಿಗದಿಪಡಿಸಿದ್ದಾರೆ ಎಂದು ವಿಧಾನಸಭೆಯ ಕಾರ್ಯದರ್ಶಿ ಎಂ.ಕೆ. ವಿಶಾಲಾಕ್ಷಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕರ್ನಾಟಕ ವಿಧಾನಸಭೆಯ ಕಾರ್ಯವಿಧಾನ ಮತ್ತು ನಡವಳಿಕೆಯ ನಿಯಮ 7(1) ರ ಅಡಿಯಲ್ಲಿ ರಾಜ್ಯಪಾಲರು ಈ ಆದೇಶ ಹೊರಡಿಸಿದ್ದು, ಚುನಾವಣೆ ಪ್ರಕ್ರಿಯೆಯ ಸಂಪೂರ್ಣ ವಿವರಗಳನ್ನು ಪ್ರಕಟಿಸಲಾಗಿದೆ.

ನಾಮಪತ್ರ ಸಲ್ಲಿಕೆ ನಿಯಮಗಳು:

ವಿಧಾನಸಭೆಯ ಯಾವುದೇ ಒಬ್ಬ ಸದಸ್ಯರು ಮತ್ತೊಬ್ಬ ಸದಸ್ಯರ ಹೆಸರನ್ನು ಸಭಾಧ್ಯಕ್ಷ ಸ್ಥಾನಕ್ಕೆ ಆರಿಸುವಂತೆ ಲಿಖಿತ ರೂಪದ ಪ್ರಸ್ತಾವನೆಯ ಸೂಚನಾ ಪತ್ರವನ್ನು ಕಾರ್ಯದರ್ಶಿಯವರಿಗೆ ಸಲ್ಲಿಸಬಹುದಾಗಿದೆ.

ಈ ಸೂಚನಾ ಪತ್ರಕ್ಕೆ ಮೂರನೇ ಸದಸ್ಯರೊಬ್ಬರ ಅನುಮೋದನೆ (ಸೆಕೆಂಡರ್) ಕಡ್ಡಾಯವಾಗಿದೆ.

ಇದರೊಂದಿಗೆ, ಸಭಾಧ್ಯಕ್ಷ ಸ್ಥಾನಕ್ಕೆ ಯಾರ ಹೆಸರನ್ನು ಸೂಚಿಸಲಾಗಿದೆಯೋ, ಅವರು ತಾವು ಈ ಹುದ್ದೆಗೆ ಚುನಾಯಿತರಾದಲ್ಲಿ ಜವಾಬ್ದಾರಿ ನಿರ್ವಹಿಸಲು ಸಿದ್ಧರಿದ್ದೇವೆ ಎಂದು ಒಪ್ಪಿಗೆ ಸೂಚಿಸುವ ಲಿಖಿತ ಪ್ರಕಟಣೆಯನ್ನು ನಾಮಪತ್ರದ ಜೊತೆಗೆ ಲಗತ್ತಿಸಬೇಕಾಗುತ್ತದೆ.

ಆಗಸ್ಟ್ 13 ಮಧ್ಯಾಹ್ನ 12 ಗಂಟೆ ಕೊನೆಯ ಸಮಯ:

ಅಭ್ಯರ್ಥಿ, ಹೆಸರನ್ನು ಸೂಚಿಸುವವರು ಅಥವಾ ಅನುಮೋದಕರು ಖುದ್ದಾಗಿ ಹಾಜರಿದ್ದು ಈ ಸೂಚನಾ ಪತ್ರವನ್ನು ವಿಧಾನಸಭೆಯ ಕಾರ್ಯದರ್ಶಿಯವರಿಗೆ ತಲುಪಿಸಬೇಕಾಗುತ್ತದೆ. ನಾಮಪತ್ರ ಸಲ್ಲಿಕೆಗೆ ಆಗಸ್ಟ್ 13 ರ ಗುರುವಾರ ಮಧ್ಯಾಹ್ನ 12.00 ಗಂಟೆಯ ಒಳಗೆ ಸಮಯ ನಿಗದಿಪಡಿಸಲಾಗಿದ್ದು, ಆಸಕ್ತರು ಅದಕ್ಕೂ ಮುನ್ನವೇ ಖುದ್ದಾಗಿ ಸಲ್ಲಿಕೆ ಮಾಡಬೇಕೆಂದು ಪ್ರಕಟಣೆಯಲ್ಲಿ ಸ್ಪಷ್ಟಪಡಿಸಲಾಗಿದೆ.

 


Share this with Friends

Related Post