Tue. Aug 11th, 2026

ಒಂದು ತಿಂಗಳಲ್ಲಿ ‘ಅಲೆಮಾರಿ ಮತ್ತು ಆದಿವಾಸಿ ಆಯೋಗ’ ರಚನೆ: ಸಿಎಂ ಡಿ.ಕೆ. ಶಿವಕುಮಾರ್ ಭರವಸೆ

Share this with Friends

ಬೆಂಗಳೂರು: “ರಾಜ್ಯದಲ್ಲಿ ಅಲೆಮಾರಿ ಮತ್ತು ಆದಿವಾಸಿ ಆಯೋಗವನ್ನು ರಚಿಸಬೇಕು ಎಂದು ಸಮುದಾಯದ ಮುಖಂಡರು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದು, ನಮ್ಮ ಚುನಾವಣಾ ಪ್ರಣಾಳಿಕೆಯ ಭರವಸೆಯಂತೆ ಇನ್ನು ಒಂದು ತಿಂಗಳ ಒಳಗೆ ಈ ಆಯೋಗವನ್ನು ಅಸ್ತಿತ್ವಕ್ಕೆ ತರಲಾಗುವುದು” ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭರವಸೆ ನೀಡಿದ್ದಾರೆ.

ಅಂಬೇಡ್ಕರ್ ಭವನದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ವಿಶ್ವ ಆದಿವಾಸಿ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ನಾವು ಮೂಲತಃ ಆದಿವಾಸಿಗಳೇ:

“ನಾವೆಲ್ಲರೂ ಮೂಲತಃ ಆದಿವಾಸಿಗಳೇ ಆಗಿದ್ದು, ಇದರಲ್ಲಿ ಯಾವುದೇ ಅನುಮಾನವಿಲ್ಲ. ನಾಗರಿಕತೆ ಬೆಳೆದಂತೆ ನಾವಿಂದು ಸೂಟು-ಬೂಟು ಧರಿಸುತ್ತಿದ್ದೇವಷ್ಟೇ. ಮನುಷ್ಯ ಹುಟ್ಟಿದಾಗ ಬಟ್ಟೆ, ಹೆಸರು, ಅಧಿಕಾರ ಅಥವಾ ಕುರ್ಚಿ ಯಾವುದೂ ಇರುವುದಿಲ್ಲ. ಪ್ರಕೃತಿಯ ಮಡಿಲಿನಲ್ಲಿ ಬದುಕುತ್ತಿರುವ ನೀವು ನಿಜವಾದ ಭಾಗ್ಯವಂತರು. ನಾವು ಎಷ್ಟೇ ದೊಡ್ಡ ವ್ಯಕ್ತಿಗಳಾಗಿ ಬೆಳೆದರೂ ಅಂತಿಮವಾಗಿ ಪ್ರಕೃತಿಯೊಂದಿಗೇ ಬದುಕಲು ಬಯಸುತ್ತೇವೆ” ಎಂದು ಮುಖ್ಯಮಂತ್ರಿಗಳು ಮಾರ್ಮಿಕವಾಗಿ ನುಡಿದರು.

ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡಿ, ಮೂಲ ಕಸುಬು ಮರೆಯಬೇಡಿ:

ಆದಿವಾಸಿಗಳ ಬದುಕಿನಲ್ಲಿ ಸಕಾರಾತ್ಮಕ ಬದಲಾವಣೆ ತರಲು ಸರ್ಕಾರವು ಶಿಕ್ಷಣ ಸೇರಿದಂತೆ ಅನೇಕ ಮಹತ್ತರ ಯೋಜನೆಗಳನ್ನು ಜಾರಿಗೆ ತಂದಿದೆ. ಹಿಂದೆ ಯುಪಿಎ ಸರ್ಕಾರವಿದ್ದಾಗ ಐತಿಹಾಸಿಕ ‘ಅರಣ್ಯ ಹಕ್ಕು ಕಾಯ್ದೆ’ಯನ್ನು ತರಲಾಗಿತ್ತು ಎಂಬುದನ್ನು ಅವರು ಸ್ಮರಿಸಿದರು. “ಆದಿವಾಸಿ ಸಮುದಾಯದವರು ತಮ್ಮ ಮಕ್ಕಳಿಗೆ ಕಡ್ಡಾಯವಾಗಿ ಉನ್ನತ ಶಿಕ್ಷಣ ಕೊಡಿಸಿ ಅವರನ್ನು ಪ್ರಜ್ಞಾವಂತರನ್ನಾಗಿ ಮಾಡಬೇಕು. ಆದರೆ, ವಿದ್ಯಾವಂತರಾದ ತಕ್ಷಣ ನಿಮ್ಮ ಮೂಲ ತತ್ವ, ಸಂಸ್ಕೃತಿ ಮತ್ತು ಕಸುಬನ್ನು ಮಾತ್ರ ಎಂದಿಗೂ ಕೈಬಿಡಬೇಡಿ. ಬೇರು ಗಟ್ಟಿಯಾಗಿದ್ದರೆ ಮಾತ್ರ ಮರದಿಂದ ಹಣ್ಣು ಪಡೆಯಲು ಸಾಧ್ಯ” ಎಂದು ಕಿವಿಮಾತು ಹೇಳಿದರು.

ಹಿಂದುಳಿದ ವರ್ಗಗಳ ಮುಖಂಡರಾದ ಸಿ.ಎಸ್. ದ್ವಾರಕನಾಥ್ ಅವರು ಸಮುದಾಯದ ಪರವಾಗಿ ಸಲ್ಲಿಸಿರುವ ಮನವಿಗಳಿಗೆ ಸ್ಪಂದಿಸಿರುವ ಸರ್ಕಾರ, ಈಗಾಗಲೇ ಆದಿವಾಸಿಗಳ ಆವಾಸಸ್ಥಾನಗಳನ್ನು ಕಂದಾಯ ಗ್ರಾಮಗಳನ್ನಾಗಿ ಘೋಷಿಸಿ ಹಕ್ಕುಪತ್ರ ಹಾಗೂ ಮನೆಗಳನ್ನು ವಿತರಿಸಿದೆ. ಮುಂದಿನ ದಿನಗಳಲ್ಲೂ ಸಮುದಾಯಕ್ಕೆ ಸಿಗಬೇಕಾದ ಎಲ್ಲಾ ಸೌಲತ್ತುಗಳನ್ನು ನೀಡಲು ಸರ್ಕಾರ ಬದ್ಧವಾಗಿದೆ ಎಂದು ಸಿಎಂ ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದರು.

ನೊಂದು ಬೆಂದ ಸಮಾಜಕ್ಕೆ ಶಕ್ತಿ ತುಂಬುವುದು ಸರ್ಕಾರದ ಕರ್ತವ್ಯ: 

“ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎಂಬ ತತ್ವದಡಿ ನಮ್ಮ ಸರ್ಕಾರ ಕೆಲಸ ಮಾಡುತ್ತಿದೆ. ಸಮಾಜದಲ್ಲಿ ನೊಂದು ಬೆಂದಿರುವ ದುರ್ಬಲ ವರ್ಗಗಳಿಗೆ ಆರ್ಥಿಕ ಹಾಗೂ ಸಾಮಾಜಿಕ ಶಕ್ತಿ ತುಂಬುವುದು ನಮ್ಮ ಪರಮ ಕರ್ತವ್ಯವಾಗಿದೆ”. ನಗರ ಪ್ರದೇಶದ ವಿದ್ಯಾರ್ಥಿಗಳಿಗೆ ಗ್ರಾಮೀಣ ಬದುಕಿನ ನೈಜ ಪರಿಚಯ ಮಾಡಿಕೊಡಲು ಕನಿಷ್ಠ ಮೂರು ದಿನಗಳ ಕಾಲ ಹಳ್ಳಿಗಳಲ್ಲಿ ವಾಸ್ತವ್ಯ ಹೂಡುವ ಹೊಸ ಯೋಜನೆಯನ್ನು ಜಾರಿಗೆ ತರಲಾಗುವುದು ಎಂದು ಪ್ರಕಟಿಸಿದರು.

ಮೂಲಭೂತ ಸೌಕರ್ಯ ಒದಗಿಸಲು ಬದ್ಧ:

ಹಿಂದೆ ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಅವರು ಆದಿವಾಸಿಗಳ ಕೈಯಿಂದಲೇ ಅಣೆಕಟ್ಟುಗಳನ್ನು ಉದ್ಘಾಟನೆ ಮಾಡಿಸಿ ಸಮುದಾಯಕ್ಕೆ ಗೌರವ ನೀಡಿದ್ದರು ಎಂಬುದನ್ನು ಸ್ಮರಿಸಿದ ಸಿಎಂ, “ಸರ್ಕಾರ ಮತ್ತು ಆದಿವಾಸಿಗಳ ನಡುವೆ ಭಕ್ತ ಮತ್ತು ಭಗವಂತನ ಪವಿತ್ರ ಬಾಂಧವ್ಯವಿದೆ. ಆದಿವಾಸಿ ಸಮುದಾಯದ ಜನರಿಗೆ ಗುಣಮಟ್ಟದ ಶಿಕ್ಷಣ, ವಸತಿ, ಭೂಮಿ, ಆಹಾರ ಹಾಗೂ ಉದ್ಯೋಗದ ಭದ್ರತೆ ಒದಗಿಸಲು ನಮ್ಮ ಸರ್ಕಾರ ಬದ್ಧವಾಗಿದೆ. ನಾವು ನೀಡಿರುವ ಐದು ಗ್ಯಾರಂಟಿ ಯೋಜನೆಗಳು ಇಂತಹ ಹಿಂದುಳಿದ ವರ್ಗಗಳಿಗೆ ದೊಡ್ಡ ಆಸರೆಯಾಗಿವೆ” ಎಂದರು.

ಮತದಾನದ ಹಕ್ಕು ಕಾಪಾಡಿಕೊಳ್ಳಿ:

ಯಾವುದೇ ಕಾರಣಕ್ಕೂ ಆದಿವಾಸಿಗಳಲ್ಲಿ ಕೀಳರಿಮೆ ಬೇಡ, ನಿಮ್ಮ ಮೂಲ ಸಂಸ್ಕೃತಿಯನ್ನು ಹೆಮ್ಮೆಯಿಂದ ಜಗತ್ತಿಗೆ ಪರಿಚಯಿಸಿ ಎಂದು ಧೈರ್ಯ ತುಂಬಿದ ಮುಖ್ಯಮಂತ್ರಿಗಳು, ಸದ್ಯ ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಪ್ರತಿಯೊಬ್ಬರೂ ಸಕ್ರಿಯವಾಗಿ ಭಾಗವಹಿಸಿ ತಮ್ಮ ಮತದಾನದ ಹಕ್ಕನ್ನು ಕಡ್ಡಾಯವಾಗಿ ಕಾಪಾಡಿಕೊಳ್ಳಬೇಕು ಎಂದು ಕರೆ ನೀಡಿದರು. ಆದಿವಾಸಿಗಳಿಗೆ ಜಾತಿ ಹಾಗೂ ವಾಸಸ್ಥಳ ದೃಢೀಕರಣ ಪತ್ರಗಳನ್ನು ಸುಲಭವಾಗಿ ತಲುಪಿಸಲು ಸರ್ಕಾರ ವಿಶೇಷ ಮುತುವರ್ಜಿ ವಹಿಸಿದೆ ಎಂದು ಅವರು ತಿಳಿಸಿದರು


Share this with Friends

Related Post