Tue. Aug 11th, 2026

ಬಿಜೆಪಿಯವರು ‘ಸಾಚಾ’ಗಳಲ್ಲ, ಮೊದಲು ತಮ್ಮ ತಟ್ಟೆಯಲ್ಲಿ ಬಿದ್ದಿರುವ ಕತ್ತೆ ನೋಡಲಿ: ಸಚಿವ ತಂಗಡಗಿ ವಾಗ್ದಾಳಿ

Share this with Friends

ಮುನಿರಾಬಾದ್ (ಕೊಪ್ಪಳ): “ಮಾಜಿ ಸಚಿವ ನಾಗೇಂದ್ರ ಅವರ ರಾಜೀನಾಮೆಗೆ ಆಗ್ರಹಿಸುತ್ತಿರುವ ಬಿಜೆಪಿ ನಾಯಕರು ತಾವೇನೋ ದೊಡ್ಡ ‘ಸಾಚಾ’ಗಳಂತೆ ವರ್ತಿಸುತ್ತಿದ್ದಾರೆ. ಬೇರೆಯವರನ್ನು ಟೀಕಿಸುವ ಮುನ್ನ ಅವರು ಮೊದಲು ತಮ್ಮ ತಟ್ಟೆಯಲ್ಲಿ ಬಿದ್ದಿರುವ ಕತ್ತೆಯನ್ನು ನೋಡಿಕೊಳ್ಳಲಿ” ಎಂದು ಕೊಪ್ಪಳ ಜಿಲ್ಲಾ ಉಸ್ತುವಾರಿ ಹಾಗೂ ಸಚಿವ ಶಿವರಾಜ್ ತಂಗಡಗಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಮುನಿರಾಬಾದ್‌ನಲ್ಲಿ ಮಂಗಳವಾರ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಅವರು, ನಾಗೇಂದ್ರ ಅವರ ವಿರುದ್ಧ ಕೇಳಿಬಂದಿರುವ ಜಾರಿ ನಿರ್ದೇಶನಾಲಯದ (ED) ಆರೋಪಗಳನ್ನು ಬಲವಾಗಿ ಸಮರ್ಥಿಸಿಕೊಂಡರು.

ಆರೋಪಕ್ಕೂ ಶಿಕ್ಷೆಗೂ ವ್ಯತ್ಯಾಸವಿದೆ:

“ನಾಗೇಂದ್ರ ಅವರ ಮೇಲಿರುವುದು ಕೇವಲ ಆರೋಪವಷ್ಟೇ, ಅದು ಇನ್ನು ನ್ಯಾಯಾಲಯದಲ್ಲಿ ಸಾಬೀತಾಗಿಲ್ಲ. ರಾಜಕೀಯದಲ್ಲಿ ಆರೋಪಕ್ಕೂ ಮತ್ತು ಅಪರಾಧ ಸಾಬೀತಾಗಿ ಶಿಕ್ಷೆಯಾಗುವುದಕ್ಕೂ ಬಹಳ ವ್ಯತ್ಯಾಸವಿದೆ. ಪ್ರಸ್ತುತ ಜಾಮೀನಿನ ಮೇಲೆ ಬಿಜೆಪಿಯ ಎಷ್ಟು ಜನ ನಾಯಕರು ಹೊರಗಿದ್ದಾರೆ ಎಂಬುದು ಇಡೀ ರಾಜ್ಯಕ್ಕೆ ತಿಳಿದಿದೆ. ಶಾಸಕ ಜನಾರ್ದನ ರೆಡ್ಡಿ ಅವರ ಪ್ರಕರಣ ಏನಾಗಿದೆ? ಅವರದ್ದೇ ಪಕ್ಷದ ಹಾಲಿ ಕೇಂದ್ರ ಗೃಹ ಸಚಿವರ ಮೇಲೆ ಈ ಹಿಂದೆ ಎಂತಹ ಗಂಭೀರ ಆರೋಪಗಳಿದ್ದವು ಮತ್ತು ಅವರು ಈಗ ಯಾವ ಉನ್ನತ ಹುದ್ದೆಯಲ್ಲಿದ್ದಾರೆ ಎಂಬುದನ್ನು ಬಿಜೆಪಿಗರು ಒಮ್ಮೆ ನೆನಪಿಸಿಕೊಳ್ಳಲಿ” ಎಂದು ಛೇಡಿಸಿದರು.

ವಿಧಾನಮಂಡಲ ಅಧಿವೇಶನದಲ್ಲಿ ಮಾತನಾಡಲು ವಿರೋಧ ಪಕ್ಷವಾದ ಬಿಜೆಪಿಗೆ ಯಾವುದೇ ಜನಪರ ಜ್ವಲಂತ ವಿಷಯಗಳಿಲ್ಲ. ಹೀಗಾಗಿ ಕೇವಲ ನಾಗೇಂದ್ರ ಅವರ ಪ್ರಕರಣವನ್ನು ಮುನ್ನೆಲೆಗೆ ತಂದು ಕಲಾಪವನ್ನು ವ್ಯರ್ಥ ಮಾಡಲು ಅವರು ಸಂಚು ರೂಪಿಸಿದ್ದಾರೆ ಎಂದು ದೂರಿದರು.

ಖಾತೆ ಹಂಚಿಕೆ ಸಿಎಂ ವಿವೇಚನೆ:

ಸಚಿವ ಸಂಪುಟದ ಖಾತೆ ಹಂಚಿಕೆ ವಿಳಂಬದ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ತಂಗಡಗಿ, “ಖಾತೆಗಳ ಹಂಚಿಕೆ ಕುರಿತು ನಮ್ಮ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಕಾಂಗ್ರೆಸ್ ಹೈಕಮಾಂಡ್ ಸೂಕ್ತ ನಿರ್ಧಾರ ಕೈಗೊಳ್ಳಲಿದೆ. ಪಕ್ಷ ನಮಗೆ ಯಾವುದೇ ಖಾತೆ ಜವಾಬ್ದಾರಿ ನೀಡಿದರೂ ಅದನ್ನು ಅತ್ಯಂತ ಪ್ರಾಮಾಣಿಕವಾಗಿ ನಿಭಾಯಿಸುತ್ತೇವೆ. ಇತ್ತೀಚೆಗೆ ನಾನು ದೆಹಲಿಗೆ ತೆರಳಿದ್ದು ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಧನ್ಯವಾದ ಅರ್ಪಿಸಲು ಮಾತ್ರ” ಎಂದು ಸ್ಪಷ್ಟಪಡಿಸಿದರು.

 

 


Share this with Friends

Related Post