ಬೆಂಗಳೂರು:ತಾವು ಬೆಂಗಳೂರಿನಲ್ಲೇ ಹುಟ್ಟಿ ಬೆಳೆದಿದ್ದರೂ ಮತದಾರರ ಪಟ್ಟಿಯಿಂದ ಹೆಸರು ಕೈಬಿಡಲಾಗಿದೆ ಎಂಬ ನಟ ಪ್ರಕಾಶ್ ರಾಜ್ ಅವರ ಆರೋಪಕ್ಕೆ ಬೆಂಗಳೂರು ಕೇಂದ್ರ ನಗರ ಪಾಲಿಕೆಯ ಅಪರ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಆಯುಕ್ತರಾದ ಜಗದೀಶ್ ಜಿ. ಅವರು ಅಧಿಕೃತ ಪ್ರತ್ರಿಕಾ ಹೇಳಿಕೆ ಮೂಲಕ ಸ್ಪಷ್ಟನೆ ನೀಡಿದ್ದಾರೆ. ನಟ ಪ್ರಕಾಶ್ ರಾಜ್ ಅವರ ಹೆಸರು ಮತದಾರರ ಪಟ್ಟಿಯಿಂದ ತಾಂತ್ರಿಕವಾಗಿ ಡಿಲೀಟ್ ಆಗಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಮಹಜರ್ ನಡೆಸಿ ‘ಸ್ಥಳಾಂತರ’ ಎಂದು ಗುರುತು:
ಅಧಿಕೃತ ಮಾಹಿತಿ ಪ್ರಕಾರ, ಶಾಂತಿನಗರ ವಿಧಾನಸಭಾ ಕ್ಷೇತ್ರದ ಭಾಗ ಸಂಖ್ಯೆ 1 ರ ಕ್ರಮ ಸಂಖ್ಯೆ 970 ರಲ್ಲಿ ಪ್ರಕಾಶ್ ರಾಜ್ ಅವರ ಹೆಸರು ಈಗಲೂ ನೋಂದಾಯಿತವಾಗಿದೆ. ಇತ್ತೀಚೆಗೆ ಮತದಾರರ ಪಟ್ಟಿ ಪರಿಷ್ಕರಣೆ ನಿಯಮಗಳ ಅನ್ವಯ ಬೂತ್ ಮಟ್ಟದ ಅಧಿಕಾರಿಗಳು (BLO) ಮನೆ-ಮನೆಗೆ ತೆರಳಿ ಪರಿಶೀಲನೆ ನಡೆಸಿದ್ದರು. ಈ ವೇಳೆ ಪ್ರಕಾಶ್ ರಾಜ್ ಅವರು ತಮ್ಮ ನೋಂದಾಯಿತ ವಿಳಾಸವಾದ ವಿಠಲ್ ಮಲ್ಯ ರಸ್ತೆಯ ಗಾರ್ಡನ್ ಅಪಾರ್ಟ್‌ಮೆಂಟ್‌ನಲ್ಲಿ ವಾಸವಿಲ್ಲದಿರುವುದು ಬೆಳಕಿಗೆ ಬಂದಿದೆ.
4 ವರ್ಷಗಳಿಂದ ಹಳೆಯ ವಿಳಾಸದಲ್ಲಿ ವಾಸವಿಲ್ಲ:
ಸದರಿ ಅಪಾರ್ಟ್‌ಮೆಂಟ್‌ನ ಮಾಲೀಕರು ಮತ್ತು ಪ್ರಾಪರ್ಟಿ ಮ್ಯಾನೇಜರ್ ಅವರನ್ನು ಅಧಿಕಾರಿಗಳು ವಿಚಾರಿಸಿದಾಗ, ನಟ ಪ್ರಕಾಶ್ ರಾಜ್ ಅವರು ಕಳೆದ ನಾಲ್ಕು ವರ್ಷಗಳಿಂದ ಅಲ್ಲಿ ವಾಸವಾಗಿಲ್ಲ ಮತ್ತು ಸದ್ಯ ಆ ಜಾಗದಲ್ಲಿ ಬೇರೆ ಬಾಡಿಗೆದಾರರು ಇದ್ದಾರೆ ಎಂಬ ವಿಷಯ ದೃಢಪಟ್ಟಿದೆ. ನೆರೆಹೊರೆಯವರ ಹೇಳಿಕೆಗಳ ಆಧಾರದ ಮೇಲೆ ನಿಯಮಾವಳಿಗಳ ಪ್ರಕಾರ ‘ಮಹಜರ್’ ಸಿದ್ಧಪಡಿಸಲಾಗಿದ್ದು, ಭಾರತೀಯ ಚುನಾವಣಾ ಆಯೋಗದ ಕಾನೂನು ಮತ್ತು ಮಾರ್ಗಸೂಚಿಗಳ ಅನ್ವಯ ಅವರ ಹೆಸರಿನ ಮುಂದೆ ‘ಸ್ಥಳಾಂತರಗೊಂಡಿದೆ (Shifted)’ ಎಂದು ನಮೂದಿಸಲಾಗಿದೆ ಎಂದು ಜಗದೀಶ್ ಜಿ. ತಿಳಿಸಿದ್ದಾರೆ.
ಪ್ರಕಾಶ್ ರಾಜ್ ಆರೋಪ ಸತ್ಯಕ್ಕೆ ದೂರ:
ಮತದಾರರ ಪಟ್ಟಿಯಿಂದ ಹೆಸರು ಕೈಬಿಡಲಾಗಿದೆ ಎಂಬ ನಟ ಪ್ರಕಾಶ್ ರಾಜ್ ಅವರ ಆರೋಪಗಳು ಸಂಪೂರ್ಣವಾಗಿ ಸತ್ಯಕ್ಕೆ ದೂರವಾಗಿವೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಸ್ವತಃ ತಾವೇ ನಟ ಪ್ರಕಾಶ್ ರಾಜ್ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿ ಗೊಂದಲಕ್ಕೆ ತೆರೆ ಎಳೆದಿರುವುದಾಗಿ ಅವರು ತಿಳಿಸಿದ್ದಾರೆ.
ಬೇರೆ ವಿಳಾಸದಲ್ಲಿ ವಾಸವಿರುವುದು ಒಪ್ಪಿಕೊಂಡ ನಟ:
ಅಧಿಕೃತ ಪ್ರಕಟಣೆಯ ಪ್ರಕಾರ, ಅಧಿಕಾರಿಗಳೊಂದಿಗೆ ನಡೆದ ದೂರವಾಣಿ ಸಂಭಾಷಣೆಯಲ್ಲಿ ನಟ ಪ್ರಕಾಶ್ ರಾಜ್ ಅವರು ತಾವು ಹಳೆಯ ದಾಖಲಾತಿಯಲ್ಲಿದ್ದ ವಿಠಲ್ ಮಲ್ಯ ರಸ್ತೆಯ ವಿಳಾಸದಲ್ಲಿ ವಾಸವಿಲ್ಲ ಎಂಬ ನೈಜ ಅಂಶವನ್ನು ಒಪ್ಪಿಕೊಂಡಿದ್ದಾರೆ. ಆದರೆ, ತಾವು ಸದ್ಯ ಶಾಂತಿನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲೇ ಬರುವ ಬೇರೊಂದು ಹೊಸ ವಿಳಾಸದಲ್ಲಿ ವಾಸವಿರುವುದಾಗಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ನಮೂನೆ-6 ಸಲ್ಲಿಸಲು ಅಧಿಕಾರಿಗಳ ಸಲಹೆ:
ಹೊಸ ವಿಳಾಸದ ಹಿನ್ನೆಲೆಯಲ್ಲಿ, ಪ್ರಸ್ತುತ ಅವರು ವಾಸವಿರುವ ಭಾಗದ ಬೂತ್ ಮಟ್ಟದ ಅಧಿಕಾರಿಗಳ (BLO) ಮೂಲಕ ಹೊಸದಾಗಿ ‘ನಮೂನೆ-6’ (Form-6) ಅರ್ಜಿಯನ್ನು ಸಲ್ಲಿಸುವಂತೆ ನಟ ಪ್ರಕಾಶ್ ರಾಜ್ ಅವರಿಗೆ ಸೂಚಿಸಲಾಗಿದೆ. ಭಾರತೀಯ ಚುನಾವಣಾ ಆಯೋಗದ ಮಾರ್ಗಸೂಚಿಗಳು ಮತ್ತು ನಿಯಮಾವಳಿಗಳ ಅನುಸಾರವೇ ಮುಂದಿನ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಜಗದೀಶ್ ಜಿ. ಅವರು ತಮ್ಮ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದ್ದಾರೆ.

