Wed. Aug 12th, 2026

ಪರಪ್ಪನ ಅಗ್ರಹಾರ ಜೈಲಿನಲ್ಲಿ ಭದ್ರತಾ ಲೋಪ: ಪ್ರಜ್ವಲ್ ರೇವಣ್ಣ ಸೆಲ್‌ನಲ್ಲಿ ಮೊಬೈಲ್, ಪೆನ್ ಡ್ರೈವ್ ಜಪ್ತಿ!

Share this with Friends

ಸಾಂದರ್ಭಿಕ ಚಿತ್ರ

ಬೆಂಗಳೂರು: ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಮೇಲೆ ಸಿಸಿಬಿ (CCB) ಪೊಲೀಸರು ನಡೆಸಿದ ಹಠಾತ್ ದಾಳಿಯ ಸಂದರ್ಭದಲ್ಲಿ, ಅತ್ಯಾಚಾರ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರ ಬ್ಯಾರಕ್‌ನಲ್ಲಿ ಆಂಡ್ರಾಯ್ಡ್ ಮೊಬೈಲ್ ಫೋನ್ ಸೇರಿದಂತೆ ಹಲವು ನಿಷೇಧಿತ ವಸ್ತುಗಳು ಪತ್ತೆಯಾಗಿವೆ.

ಬಟ್ಟೆಗಳ ನಡುವೆ ಅಡಗಿಸಿಟ್ಟಿದ್ದ ಫೋನ್:

ಉನ್ನತ ಪೊಲೀಸ್ ಅಧಿಕಾರಿಗಳ ನಿರ್ದೇಶನದ ಮೇರೆಗೆ ಸಿಸಿಬಿ ಎನ್‌ಸಿಬಿ (NCB) ವಿಭಾಗದ ಪೊಲೀಸರು ಜೈಲಿನ ಸೆಕ್ಯೂರಿಟಿ ವಿಭಾಗದಲ್ಲಿ ಸುಮಾರು 5 ಗಂಟೆಗಳ ಕಾಲ ಸುದೀರ್ಘ ಶೋಧ ಕಾರ್ಯಾಚರಣೆ ನಡೆಸಿದ್ದರು. ಈ ವೇಳೆ ಪ್ರಜ್ವಲ್ ರೇವಣ್ಣ ಹಾಗೂ ಸಹಕೈದಿ ಪ್ರತಾಪ್ ರೈ ಇದ್ದ ಕೊಠಡಿ ಸಂಖ್ಯೆ 4ರಲ್ಲಿ ತಪಾಸಣೆ ನಡೆಸಿದಾಗ ಬಟ್ಟೆಗಳ ಮಧ್ಯೆ ಬಚ್ಚಿಟ್ಟಿದ್ದ ತಿಳಿ ನೀಲಿ ಬಣ್ಣದ ರೆಡ್ಮಿ 5G ಆಂಡ್ರಾಯ್ಡ್ ಮೊಬೈಲ್, ಚಾರ್ಜರ್, ಸ್ಯಾನ್‌ಡಿಸ್ಕ್ ಪೆನ್ ಡ್ರೈವ್ ಮತ್ತು ಒಂದು ನೋಟ್‌ಬುಕ್ ಪತ್ತೆಯಾಗಿದೆ.

ಸೋಷಿಯಲ್ ಮೀಡಿಯಾ, ಒಟಿಟಿ ಅಪ್ಲಿಕೇಶನ್‌ಗಳ ಬಳಕೆ:

ವಶಪಡಿಸಿಕೊಳ್ಳಲಾದ ಮೊಬೈಲ್ ಫೋನ್ ಪರಿಶೀಲಿಸಿದಾಗ ಅದರಲ್ಲಿ ಫೇಸ್‌ಬುಕ್, ವಾಟ್ಸಾಪ್, ಇನ್‌ಸ್ಟಾಗ್ರಾಮ್ ಸೇರಿದಂತೆ ನೆಟ್‌ಫ್ಲಿಕ್ಸ್ ಮತ್ತು ಪ್ರೈಮ್ ವಿಡಿಯೋ ಆಪ್‌ಗಳನ್ನು ಇನ್‌ಸ್ಟಾಲ್ ಮಾಡಿರುವುದು ಕಂಡುಬಂದಿದೆ. ಈ ಆಪ್‌ಗಳಿಗೆ ಪಾಸ್‌ವರ್ಡ್ ಹಾಕಲಾಗಿದ್ದು, ವಿಚಾರಣೆ ವೇಳೆ ಇಬ್ಬರೂ ಕೈದಿಗಳು ತಮಗೆ ಪಾಸ್‌ವರ್ಡ್ ತಿಳಿದಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ಆದರೆ, ತಾವು ಸಂಬಂಧಿಕರು ಮತ್ತು ವಕೀಲರೊಂದಿಗೆ ಮಾತನಾಡಲು ಈ ಫೋನ್ ಬಳಸುತ್ತಿರುವುದಾಗಿ ಪ್ರಜ್ವಲ್ ರೇವಣ್ಣ ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಸಿಸ್ಟೆಂಟ್ ಸೂಪರಿಂಟೆಂಡೆಂಟ್ ಅಮಾನತು, ಎಫ್‌ಐಆರ್ ದಾಖಲು:

ಜೈಲಿನೊಳಗೆ ಮೊಬೈಲ್ ಪತ್ತೆಯಾದ ಹಿನ್ನೆಲೆಯಲ್ಲಿ ಕರ್ತವ್ಯ ಲೋಪದ ಆರೋಪದ ಮೇಲೆ ಜೈಲಿನ ಅಸಿಸ್ಟೆಂಟ್ ಸೂಪರಿಂಟೆಂಡೆಂಟ್ ಈರಣ್ಣ ರಂಗಾಪುರ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ. ಕೇಂದ್ರ ಕಾರಾಗೃಹದ ಸೂಪರಿಂಟೆಂಡೆಂಟ್‌ಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಲಾಗಿದೆ. ಸದ್ಯ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರತಾಪ್ ರೈ (A1) ಹಾಗೂ ಪ್ರಜ್ವಲ್ ರೇವಣ್ಣ (A2) ವಿರುದ್ಧ ಹೊಸ ಎಫ್‌ಐಆರ್ (FIR No. 319/2026) ದಾಖಲಿಸಿ ತನಿಖೆ ಮುಂದುವರಿಸಲಾಗಿದೆ.

 

 


Share this with Friends

Related Post