Fri. Aug 14th, 2026

ಬೆಂಗಳೂರಿಗರಿಗೆ ಬಿಗ್ ಶಾಕ್: ಇನ್ಮುಂದೆ ಮನೆ ಮುಂದೆ ಕಾರು ನಿಲ್ಲಿಸಿದರೆ ವರ್ಷಕ್ಕೆ 25,000 ರೂಪಾಯಿವರೆಗೆ ಪಾರ್ಕಿಂಗ್ ಶುಲ್ಕ!

Share this with Friends

ಬೆಂಗಳೂರು: ಸಿಲಿಕಾನ್ ಸಿಟಿಯ ರಸ್ತೆಗಳಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ವಾಹನ ದಟ್ಟಣೆಗೆ ಮುಕ್ತಿ ಹಾಡಲು ಬಿಬಿಎಂಪಿ ಮತ್ತು ಸಾರಿಗೆ ಇಲಾಖೆಯು ಅತ್ಯಂತ ಕಠಿಣವಾದ ನೂತನ ಪಾರ್ಕಿಂಗ್ ನೀತಿಯನ್ನು (Greater Bengaluru Area Parking Rules, 2026) ಜಾರಿಗೆ ತರಲು ಸಜ್ಜಾಗಿದೆ. ನಗರಾಭಿವೃದ್ಧಿ ಇಲಾಖೆಯು ಆಗಸ್ಟ್ 11ರಂದು ಈ ಹೊಸ ಕರಡು ನಿಯಮಾವಳಿಗಳನ್ನು ಪ್ರಕಟಿಸಿದ್ದು, ಇದರ ಅನ್ವಯ ಇನ್ನುಮುಂದೆ ಸ್ವಂತ ಗ್ಯಾರೇಜ್ ಇಲ್ಲದೆ ಮನೆ ಮುಂದಿನ ಸಾರ್ವಜನಿಕ ರಸ್ತೆಗಳಲ್ಲಿ ವಾಹನ ನಿಲ್ಲಿಸುವವರಿಂದ ಭಾರೀ ಮೊತ್ತದ ವಾರ್ಷಿಕ ಪರ್ಮಿಟ್ ಶುಲ್ಕ ವಸೂಲಿ ಮಾಡಲು ಪ್ರಸ್ತಾಪಿಸಲಾಗಿದೆ.

ಪ್ರಸ್ತುತ ಈ ಕರಡು ನೀತಿಯ ಕುರಿತು ಸಾರ್ವಜನಿಕರ ಸಲಹೆ ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಲು 30 ದಿನಗಳ ಕಾಲಾವಕಾಶ ನೀಡಲಾಗಿದ್ದು, ಅದರ ನಂತರ ಈ ನಿಯಮ ಅಧಿಕೃತವಾಗಿ ಜಾರಿಗೆ ಬರಲಿದೆ.

ಯಾವ ವಾಹನಕ್ಕೆ ಎಷ್ಟು ವಾರ್ಷಿಕ ಶುಲ್ಕ?

ಸ್ವಂತ ಕಂಪೌಂಡ್ ಇಲ್ಲದೆ ಮನೆ ಮುಂದಿನ ರಸ್ತೆಗಳಲ್ಲಿ ರಾತ್ರಿ ವೇಳೆ ಕಾಯಂ ಆಗಿ ವಾಹನ ನಿಲ್ಲಿಸುವ ಮಾಲೀಕರು ವರ್ಷಕ್ಕೊಮ್ಮೆ ಕಡ್ಡಾಯವಾಗಿ ಪಾಲಿಕೆಯಿಂದ ‘ಪಾರ್ಕಿಂಗ್ ಪರ್ಮಿಟ್’ ಪಡೆಯಬೇಕಾಗುತ್ತದೆ. ಇದಕ್ಕೆ ನಿಗದಿಪಡಿಸಲಾಗಿರುವ ಸಂಭಾವ್ಯ ವಾರ್ಷಿಕ ದರ ಪಟ್ಟಿ ಹೀಗಿದೆ:

ಸಣ್ಣ ಕಾರುಗಳು (Small Cars): ವಾರ್ಷಿಕ ₹15,000

ಮಧ್ಯಮ ಕಾರುಗಳು/ಸೆಡಾನ್ (Sedans): ವಾರ್ಷಿಕ ₹20,000

ದೊಡ್ಡ ವಾಹನಗಳು/ಎಸ್‌ಯುವಿ (SUVs): ವಾರ್ಷಿಕ ₹25,000

ಗಂಟೆ ಆಧಾರಿತ ರಸ್ತೆ ಬದಿಯ ಪಾರ್ಕಿಂಗ್ ದರ (On-Street Charges):

ನಗರದ ರಸ್ತೆಗಳನ್ನು ಅವುಗಳ ದಟ್ಟಣೆಗೆ ಅನುಗುಣವಾಗಿ ಎ, ಬಿ ಮತ್ತು ಸಿ ಎಂದು ಮೂರು ಪ್ರಮುಖ ವರ್ಗಗಳಾಗಿ ವಿಂಗಡಿಸಲಾಗಿದ್ದು, ಸಾರ್ವಜನಿಕ ರಸ್ತೆ ಬದಿಯಲ್ಲಿ ನಿಲ್ಲಿಸುವ ವಾಹನಗಳಿಗೆ ಗಂಟೆಯ ಆಧಾರದ ಮೇಲೆ ಕೆಳಗಿನಂತೆ ಶುಲ್ಕ ವಿಧಿಸಲು ನಿರ್ಧರಿಸಲಾಗಿದೆ:

Category ‘A’ ವಲಯ (ಅತಿ ಹೆಚ್ಚು ದಟ್ಟಣೆಯ ರಸ್ತೆ): ದ್ವಿಚಕ್ರ ವಾಹನಗಳಿಗೆ ಗಂಟೆಗೆ ₹40 ಹಾಗೂ ಕಾರುಗಳಿಗೆ ₹80.

Category ‘B’ ವಲಯ (ಮಧ್ಯಮ ದಟ್ಟಣೆಯ ರಸ್ತೆ): ದ್ವಿಚಕ್ರ ವಾಹನಗಳಿಗೆ ಗಂಟೆಗೆ ₹30 ಹಾಗೂ ಕಾರುಗಳಿಗೆ ₹60.

Category ‘C’ ವಲಯ (ವಸತಿ ಪ್ರದೇಶದ ರಸ್ತೆಗಳು): ದ್ವಿಚಕ್ರ ವಾಹನಗಳಿಗೆ ಗಂಟೆಗೆ ₹20 ಹಾಗೂ ಕಾರುಗಳಿಗೆ ₹40.
(ಗಮನಿಸಿ: ವಾಹನಗಳನ್ನು 2 ಗಂಟೆಗಿಂತ ಹೆಚ್ಚು ಅವಧಿ ನಿಲ್ಲಿಸಿದರೆ ಈ ನಿಗದಿತ ದರಗಳು ಮತ್ತಷ್ಟು ದ್ವಿಗುಣಗೊಳ್ಳುತ್ತವೆ).

ಮಾಸಿಕ ಪಾಸ್ ಹಾಗೂ ಆಫ್-ಸ್ಟ್ರೀಟ್ ಪಾರ್ಕಿಂಗ್:

ರಸ್ತೆ ಬದಿಯನ್ನು ಹೊರತುಪಡಿಸಿ, ಸರ್ಕಾರಿ ನಿಗಮಗಳ ಅಥವಾ ಬಿಬಿಎಂಪಿಯ ನಿಗದಿತ ಮಲ್ಟಿಲೆವೆಲ್ ಪಾರ್ಕಿಂಗ್ ಸಂಕೀರ್ಣಗಳಲ್ಲಿ ವಾಹನ ನಿಲ್ಲಿಸುವವರಿಗಾಗಿ ಮಾಸಿಕ ಪಾಸ್ ವ್ಯವಸ್ಥೆಯನ್ನು ತರಲಾಗುತ್ತಿದೆ. ಇದರಲ್ಲಿ ವಲಯಗಳ ಆಧಾರದ ಮೇಲೆ ದ್ವಿಚಕ್ರ ವಾಹನಗಳಿಗೆ ₹1,000 ದಿಂದ ₹2,000 ಹಾಗೂ ಕಾರುಗಳಿಗೆ ₹2,000 ದಿಂದ ₹4,000 ವರೆಗೆ ಮಾಸಿಕ ಶುಲ್ಕವಿರಲಿದೆ. ಆದರೆ, ರಾತ್ರಿ 8 ಗಂಟೆಯಿಂದ ಬೆಳಗ್ಗೆ 8 ಗಂಟೆಯ ಅವಧಿಯಲ್ಲಿ ಈ ಆಫ್-ಸ್ಟ್ರೀಟ್ ಪಾರ್ಕಿಂಗ್ ಬಳಸುವ ಸವಾರರಿಗೆ ಮಾಸಿಕ ದರದಲ್ಲಿ ಶೇ. 50 ರಷ್ಟು ವಿಶೇಷ ರಿಯಾಯಿತಿ ನೀಡಲು ಪ್ರಸ್ತಾಪಿಸಲಾಗಿದೆ.

ನೋ-ಪಾರ್ಕಿಂಗ್ ವಲಯಗಳು ಕಡ್ಡಾಯ:

ಮೆಟ್ರೋ ಮತ್ತು ಪ್ರಮುಖ ಬಸ್ ನಿಲ್ದಾಣಗಳ ಸುತ್ತಲಿನ 150 ರಿಂದ 500 ಮೀಟರ್ ವ್ಯಾಪ್ತಿ, ಪ್ರಮುಖ ಟ್ರಾಫಿಕ್ ಸಿಗ್ನಲ್‌ಗಳ 50 ಮೀಟರ್ ವ್ಯಾಪ್ತಿ ಹಾಗೂ ನಗರದ ಎಲ್ಲಾ ಫುಟ್‌ಪಾತ್‌ಗಳ ಮೇಲೆ ಪಾರ್ಕಿಂಗ್ ಅನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

ಈ ನೂತನ ನಿಯಮದ ವಿರುದ್ಧ ಸಾರ್ವಜನಿಕ ವಲಯ ಹಾಗೂ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳಿಂದ (RWA) ತೀವ್ರ ಆಕ್ರೋಶ ವ್ಯಕ್ತವಾಗುತ್ತಿದ್ದು, ಈಗಾಗಲೇ ಭಾರೀ ರೋಡ್ ಟ್ಯಾಕ್ಸ್ ಮತ್ತು ಪ್ರಾಪರ್ಟಿ ಟ್ಯಾಕ್ಸ್ ಕಟ್ಟುವ ನಮಗೆ ಇದು ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ಸಾರ್ವಜನಿಕರು ದೂರಿದ್ದಾರೆ. ಆದರೆ, ನಗರದ ಸುವ್ಯವಸ್ಥಿತ ಸಂಚಾರಕ್ಕೆ ಇದು ಅನಿವಾರ್ಯ ಎಂದು ಸಾರಿಗೆ ಇಲಾಖೆಯ ತಜ್ಞರು ಸಮರ್ಥಿಸಿಕೊಂಡಿದ್ದಾರೆ.

 


Share this with Friends

Related Post