ಬೆಂಗಳೂರು: ರಾಜ್ಯದ ಗ್ರಾಮೀಣ ಭಾಗಗಳಲ್ಲಿರುವ ಕುಡಿಯುವ ನೀರಿನ ಮೂಲಭೂತ ಸೌಕರ್ಯಗಳನ್ನು ವೈಜ್ಞಾನಿಕವಾಗಿ ನಿರ್ವಹಿಸಲು ಮತ್ತು ಕಾಮಗಾರಿಗಳಲ್ಲಿ ಪಾರದರ್ಶಕತೆ ತರಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಹೊಸ ತಂತ್ರಜ್ಞಾನಕ್ಕೆ ಚಾಲನೆ ನೀಡಿದೆ.
ವಿಧಾನಸೌಧದಲ್ಲಿ ಇಲಾಖೆಯ ಸಚಿವರಾದ ಈಶ್ವರ ಬಿ. ಖಂಡ್ರೆ ಅವರು ಜಿಐಎಸ್ (GIS) ತಂತ್ರಜ್ಞಾನ ಆಧಾರಿತ ‘ಜಲ ಆಸ್ತಿ’ (Jala Asthi) ಮೊಬೈಲ್ ಮತ್ತು ವೆಬ್ ಆಪ್ಲಿಕೇಶನ್ ಅನ್ನು ಲೋಕಾರ್ಪಣೆಗೊಳಿಸಿದ್ದಾರೆ.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಚಿವ ಈಶ್ವರ ಖಂಡ್ರೆ,”ರಾಜ್ಯದ ಗ್ರಾಮೀಣ ಭಾಗಗಳಲ್ಲಿರುವ ಪ್ರತಿಯೊಂದು ಸಾರ್ವಜನಿಕ ಜಲ ಆಸ್ತಿಯನ್ನು ಜಿಯೋ ಟ್ಯಾಗ್ ಮಾಡುವ ಮೂಲಕ ಇಲಾಖೆಯ ಆಡಳಿತದಲ್ಲಿ ಸಂಪೂರ್ಣ ಪಾರದರ್ಶಕತೆ ತರಲಾಗುವುದು” ಎಂದರು.
“ಗ್ರಾಮೀಣ ನೀರು ಸರಬರಾಜು ಯೋಜನೆಗಳಲ್ಲಿ ಕೇವಲ ಕಾಗದದ ಮೇಲೆ ಕಾಮಗಾರಿಗಳನ್ನು ಸೃಷ್ಟಿಸಿ, ನಕಲಿ ಬಿಲ್ಗಳನ್ನು ಪಡೆದು ಸರ್ಕಾರದ ಹಣ ಪೋಲು ಮಾಡುವ ಜಾಲಕ್ಕೆ ಈ ಆ್ಯಪ್ ಮೂಲಕ ಶಾಶ್ವತ ಬ್ರೇಕ್ ಬೀಳಲಿದೆ. ಇನ್ನು ಮುಂದೆ ಪ್ರತಿಯೊಂದು ಬೋರ್ವೆಲ್, ಓವರ್ಹೆಡ್ ಟ್ಯಾಂಕ್, ಶುದ್ಧ ಕುಡಿಯುವ ನೀರಿನ ಘಟಕ (RO Plant) ಮತ್ತು ಕೈ ಪಂಪ್ಗಳ ನಿಖರವಾದ ಲೈವ್ ಮಾಹಿತಿ ಸರ್ಕಾರದ ಬಳಿ ಇರಲಿದೆ” ಎಂದರು.
ಸೆಪ್ಟೆಂಬರ್ ಅಂತ್ಯಕ್ಕೆ ಗಡುವು:
“ರಾಜ್ಯದಲ್ಲಿ ಸದ್ಯ 3 ಲಕ್ಷಕ್ಕೂ ಅಧಿಕ ಜಲ ಆಸ್ತಿಗಳಿದ್ದು, ಇವೆಲ್ಲವನ್ನೂ ಮುಂಬರುವ ಸೆಪ್ಟೆಂಬರ್ ಅಂತ್ಯದೊಳಗೆ ಕಡ್ಡಾಯವಾಗಿ ಡಿಜಟಲೀಕರಣಗೊಳಿಸಲು ಇಲಾಖೆಗೆ ಗಡುವು ನೀಡಲಾಗಿದೆ. ಈಗಾಗಲೇ ಮೊದಲ ಹಂತದ ಪ್ರಾಯೋಗಿಕ ಪರಿಶೀಲನೆಯಲ್ಲಿ 70 ಸಾವಿರಕ್ಕೂ ಹೆಚ್ಚು ಜಲ ಸ್ವತ್ತುಗಳನ್ನು ಯಶಸ್ವಿಯಾಗಿ ಆ್ಯಪ್ನಲ್ಲಿ ದಾಖಲಿಸಲಾಗಿದೆ” ಎಂದು ಮಾಹಿತಿ ನೀಡಿದರು.
ಅಧಿಕಾರಿಗಳೇ ನೇರ ಹೊಣೆ:
“ಡಿಜಿಟಲ್ ದಾಖಲಾತಿಯಲ್ಲಿ ಯಾವುದೇ ತಪ್ಪು ಮಾಹಿತಿ ಅಥವಾ ಲೋಪದೋಷಗಳು ಕಂಡುಬಂದಲ್ಲಿ ಇಲಾಖೆಯ ಎಂಜಿನಿಯರ್ಗಳು ಮತ್ತು ಸಂಬಂಧಪಟ್ಟ ಗುತ್ತಿಗೆದಾರರನ್ನೇ ನೇರ ಹೊಣೆಗಾರರನ್ನಾಗಿ ಮಾಡಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು. ಈ ನಿಟ್ಟಿನಲ್ಲಿ ಮೂರು ಹಂತದ ಕಠಿಣ ತಪಾಸಣಾ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ” ಎಂದು ಸಚಿವರು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಯೋಜನೆಯ ವಿವರ:
ಗ್ರಾಮೀಣ ನೀರು ಸರಬರಾಜು ಯೋಜನೆಗಳಲ್ಲಿ ನಡೆಯುವ ನಕಲಿ ಬಿಲ್ಗಳ ಹಾವಳಿಗೆ ಮುಕ್ತಿ ಹಾಡುವುದು ಮತ್ತು ಸಾರ್ವಜನಿಕ ಆಸ್ತಿಗಳ ನೈಜ ಸ್ಥಿತಿಯನ್ನು ಪತ್ತೆಹಚ್ಚುವುದು ಈ ತಂತ್ರಜ್ಞಾನದ ಪ್ರಮುಖ ಉದ್ದೇಶವಾಗಿದೆ.
ಕಡ್ಡಾಯ ಜಿಯೋ ಟ್ಯಾಗಿಂಗ್ ವ್ಯವಸ್ಥೆ
ಈ ನೂತನ ವ್ಯವಸ್ಥೆಯಡಿ ಹಳ್ಳಿಗಳಲ್ಲಿರುವ ಬೋರ್ವೆಲ್ಗಳು, ಓವರ್ಹೆಡ್ ಟ್ಯಾಂಕ್ಗಳು, ತೆರೆದ ಬಾವಿಗಳು, ಪಂಪ್ ಹೌಸ್ಗಳು, ಜಲ ಶುದ್ಧೀಕರಣ ಘಟಕಗಳು (RO Plants), ಸಮತೋಲಿತ ಕೆರೆಗಳು ಹಾಗೂ ಕೈ ಪಂಪ್ಗಳನ್ನು ಕಡ್ಡಾಯವಾಗಿ ಜಿಯೋ ಟ್ಯಾಗ್ ಮಾಡಲಾಗುತ್ತದೆ. ಮೊದಲ ಹಂತದಲ್ಲೇ ಈಗಾಗಲೇ 70 ಸಾವಿರಕ್ಕೂ ಹೆಚ್ಚು ಜಲ ಸ್ವತ್ತುಗಳ ಡಿಜಿಟಲ್ ದಾಖಲೀಕರಣ ಪೂರ್ಣಗೊಂಡಿದೆ. ಪ್ರಸ್ತುತ ಚಾಲ್ತಿಯಲ್ಲಿರುವ ಮತ್ತು ಮುಂದಿನ ದಿನಗಳಲ್ಲಿ ಕೈಗೆತ್ತಿಕೊಳ್ಳುವ ಎಲ್ಲಾ ಹೊಸ ಕಾಮಗಾರಿಗಳಿಗೂ ಇದು ಅನ್ವಯವಾಗಲಿದೆ.
3 ಹಂತದ ಕಟ್ಟುನಿಟ್ಟಿನ ಪರಿಶೀಲನೆ
ಡಿಜಿಟಲ್ ದಾಖಲೆಗಳ ನಿಖರತೆಯನ್ನು ಖಚಿತಪಡಿಸಿಕೊಳ್ಳಲು ಸರ್ಕಾರ ಮೂರು ಹಂತದ ತಪಾಸಣಾ ನಿಯಮವನ್ನು ಜಾರಿಗೆ ತಂದಿದೆ:
ಮೊದಲ ಹಂತ: ಇಲಾಖೆಯ ಸಹಾಯಕ ಎಂಜಿನಿಯರ್ಗಳು (AE) ಮತ್ತು ಕಿರಿಯ ಎಂಜಿನಿಯರ್ಗಳು (JE) ಪ್ರತಿಯೊಂದು ಜಲ ಆಸ್ತಿ ಇರುವ ಸ್ಥಳಕ್ಕೆ ಖುದ್ದಾಗಿ ಭೇಟಿ ನೀಡಿ ಶೇ. 100 ರಷ್ಟು ಜಿಯೋ ಟ್ಯಾಗಿಂಗ್ ಪರಿಶೀಲನೆ ನಡೆಸಿ ಆ್ಯಪ್ನಲ್ಲಿ ಅಪ್ಲೋಡ್ ಮಾಡಬೇಕು.
ಎರಡನೇ ಹಂತ: ಸಹಾಯಕ ಕಾರ್ಯಪಾಲಕ ಎಂಜಿನಿಯರ್ಗಳು (AEE) ಶೇ. 5 ರಷ್ಟು ಆಸ್ತಿಗಳನ್ನು ಯಾದೃಚ್ಛಿಕವಾಗಿ (Random) ಮರುಪರಿಶೀಲಿಸುತ್ತಾರೆ. ಈ ಹಂತದಲ್ಲಿ ಏನಾದರೂ ಲೋಪದೋಷಗಳು ಕಂಡುಬಂದಲ್ಲಿ ಸಂಬಂಧಪಟ್ಟ ಎಂಜಿನಿಯರ್ಗಳು ಮತ್ತು ಗುತ್ತಿಗೆದಾರರನ್ನೇ ನೇರ ಹೊಣೆಗಾರರನ್ನಾಗಿ ಮಾಡಲಾಗುತ್ತದೆ.
ಮೂರನೇ ಹಂತ: ಉನ್ನತ ಅಧಿಕಾರಿಗಳ ಮಟ್ಟದಲ್ಲಿ ಒಟ್ಟಾರೆ ಪ್ರಗತಿ ಮತ್ತು ದತ್ತಾಂಶಗಳ ನಿಖರತೆಯ ಉಸ್ತುವಾರಿ ನಡೆಯಲಿದೆ.
ಹಣ ಪೋಲಾಗುವುದಕ್ಕೆ ಬ್ರೇಕ್
ಈ ಡಿಜಿಟಲ್ ತಂತ್ರಜ್ಞಾನದಿಂದಾಗಿ ಇಲಾಖೆಗೆ ಲೈವ್ ಡೇಟಾ ಲಭ್ಯವಾಗಲಿದ್ದು, ಗ್ರಾಮೀಣ ಜನರಿಗೆ ನಿರಂತರವಾಗಿ ಶುದ್ಧ ಕುಡಿಯುವ ನೀರು ಪೂರೈಸಲು ಸಹಕಾರಿಯಾಗಲಿದೆ. ಕಾಮಗಾರಿಗಳು ಕೇವಲ ಕಾಗದದ ಮೇಲೆ ಸೃಷ್ಟಿಯಾಗಿ ಸರ್ಕಾರದ ಹಣ ಪೋಲಾಗುವುದನ್ನು ತಡೆಯಲು ಈ ಆ್ಯಪ್ ಮೈಲಿಗಲ್ಲಾಗಲಿದೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.

