Thu. Aug 27th, 2026

ಈ ವರ್ಷ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ ‘ಕಿಚ್ಚ’ ಸುದೀಪ್

Share this with Friends

ಬೆಂಗಳೂರು: ಕನ್ನಡ ಚಿತ್ರರಂಗದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಈ ವರ್ಷ ತಮ್ಮ ಜನ್ಮದಿನದ ಆಚರಣೆಯಿಂದ ದೂರ ಉಳಿಯಲು ನಿರ್ಧರಿಸಿದ್ದಾರೆ. ಸೆಪ್ಟೆಂಬರ್ 2 ರಂದು ಬರಲಿರುವ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳದಿರಲು ಬಲವಾದ ವೈಯಕ್ತಿಕ ಕಾರಣಗಳಿವೆ ಎಂದು ತಿಳಿಸಿರುವ ಅವರು, ಅಭಿಮಾನಿಗಳಿಗೆ ಸುದೀರ್ಘ ಹಾಗೂ ಭಾವುಕ ಪತ್ರವೊಂದನ್ನು ಬರೆದಿದ್ದಾರೆ.

ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ ಬರೋಬ್ಬರಿ 30 ವರ್ಷಗಳನ್ನು ಪೂರೈಸಿರುವ ಸುದೀಪ್, ಈ ಸುದೀರ್ಘ ಪಯಣದಲ್ಲಿ ತಮಗೆ ಬೆಂಬಲವಾಗಿ ನಿಂತ ಕೋಟ್ಯಂತರ ಅಭಿಮಾನಿಗಳಿಗೆ ಶಿರಬಾಗಿ ಕೃತಜ್ಞತೆ ಅರ್ಪಿಸಿದ್ದಾರೆ.

ಮನದ ಒಳದನಿ ಹಂಚಿಕೊಂಡ ಕಿಚ್ಚ:

“ಸೆಪ್ಟೆಂಬರ್ 2 ಎಂಬುದು ಕೇವಲ ಒಂದು ದಿನಾಂಕ ಅಷ್ಟೆ. ಅದನ್ನು 30 ವರ್ಷಗಳಿಂದ ದೊಡ್ಡ ಹಬ್ಬವನ್ನಾಗಿ ಪರಿವರ್ತಿಸಿದ್ದು ನಿಮ್ಮ ಅಪಾರ ಪ್ರೀತಿ. ಸಿನಿಮಾ ಇರಲಿ, ಬಿಗ್‌ಬಾಸ್ ಇರಲಿ ಅಥವಾ ಯಾವುದೇ ಕಾರ್ಯಕ್ರಮ ಇರಲಿ, ನೀವು ತೋರಿದ ಪ್ರೀತಿ ಅಪರಿಮಿತ. ಆದರೆ ಈ ವರ್ಷ ನನ್ನ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿಲ್ಲ. ಸಂಭ್ರಮಗಳನ್ನು ತೆರೆದ ಹೃದಯದಿಂದ ಆಚರಿಸಲು ಸಾಧ್ಯವಾಗದಿದ್ದರೆ, ಅದು ನನಗೆ ಸಂಭ್ರಮವೇ ಅಲ್ಲ” ಎಂದು ಪತ್ರದಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.

ಮನೆಯ ಬಳಿ ಬರಬೇಡಿ — ನಟನ ಮನವಿ:

ಹುಟ್ಟುಹಬ್ಬದ ದಿನದಂದು ಅಭಿಮಾನಿಗಳು ಯಾರೂ ತಮ್ಮ ಮನೆಯ ಬಳಿ ಬರಬಾರದು ಎಂದು ಸುದೀಪ್ ಮನವಿ ಮಾಡಿದ್ದಾರೆ. “ಅಂದು ಮನೆಯ ಬಳಿ ನಾನು ಯಾರಿಗೂ ಲಭ್ಯವಿರುವುದಿಲ್ಲ. ಸತ್ಕಾರಗಳು ಗದ್ದಲವಾಗಬಾರದು ಎಂಬುದು ನನ್ನ ಕೋರಿಕೆ. ನಿಮ್ಮ ನಿಮ್ಮ ಊರುಗಳಲ್ಲೇ ನೀವು ಮಾಡುವ ಒಳ್ಳೆಯ ಕೆಲಸಗಳೇ ನನಗೆ ಆಶೀರ್ವಾದ. ನೀವು ನೀಡುವ ಉಡುಗೊರೆಗಳು ಸಮಾಜಕ್ಕೆ ಸದ್ವಿನಿಯೋಗವಾಗಲಿ” ಎಂದು ಅವರು ಕೋರಿದ್ದಾರೆ.

“ಸಿಂಹ ಸುಮ್ಮನೆ ಕುಳಿತಿದೆ ಎಂದರೆ ಸುಸ್ತಾಗಿದೆ ಎಂದಲ್ಲ”:

ಚಿತ್ರರಂಗದಲ್ಲಿನ ತಮ್ಮ ಮುಂದಿನ ಹೆಜ್ಜೆಯ ಬಗ್ಗೆ ಪತ್ರದಲ್ಲಿ ಸುಳಿವು ನೀಡಿರುವ ಕಿಚ್ಚ, “ಸಿಂಹ ಸುಮ್ಮನೆ ಕುಳಿತಿದೆ ಎಂದರೆ ಸುಸ್ತಾಗಿದೆ ಅಂತಲ್ಲ, ಮುಂದಿನ ಬೇಟೆಗೆ ರೆಡಿ ಆಗ್ತಿದೆ ಎಂದರ್ಥ” ಎಂದು ತಮ್ಮದೇ ಶೈಲಿಯ ಪ್ರಸಿದ್ಧ ಸಿನಿಮಾ ಸಂಭಾಷಣೆಯನ್ನು ನೆನಪಿಸಿದ್ದಾರೆ. ಅಲ್ಲದೆ, “ಕನ್ನಡ ನನ್ನ ಸತ್ಯ.. ಕನ್ನಡದಿಂದ ನಾನು ನಿತ್ಯ. ನಿಮ್ಮನ್ನು ರಂಜಿಸುವ ವಿಷಯದಲ್ಲಿ ನಾನು ಯಾವತ್ತಿಗೂ ರಾಜಿ ಮಾಡಿಕೊಂಡವನಲ್ಲ, ಮುಂದೆ ಮಾಡಿಕೊಳ್ಳುವುದೂ ಇಲ್ಲ” ಎಂದು ಕನ್ನಡಿಗರ ಮೇಲಿನ ತಮ್ಮ ಭಕ್ತಿಯನ್ನು ಪುನರುಚ್ಚರಿಸಿದ್ದಾರೆ.

 


Share this with Friends

Related Post