ಬೆಂಗಳೂರು: ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಬಹುಕೋಟಿ ಅಕ್ರಮ ಹಣ ವರ್ಗಾವಣೆ ಹಗರಣಕ್ಕೆ ಸಂಬಂಧಿಸಿದಂತೆ ಸಚಿವ ಸ್ಥಾನಕ್ಕೆ ಬಿ. ನಾಗೇಂದ್ರ ರಾಜೀನಾಮೆ ನೀಡಿದ ಬೆನ್ನಲ್ಲೇ, ಮಾಜಿ ಸಚಿವ ಬಿ. ಶ್ರೀರಾಮುಲು ಅವರು ನಾಗೇಂದ್ರಗೆ ನೇರ ಸವಾಲು ಹಾಕಿದ್ದಾರೆ. “ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ತಕ್ಷಣ ಹಗರಣ ಮುಚ್ಚಿಹೋಗುವುದಿಲ್ಲ, ತಪ್ಪು ಮಾಡಿಲ್ಲ ಎನ್ನುವುದಾದರೆ ತನಿಖೆಯನ್ನು ಸಂಪೂರ್ಣವಾಗಿ ಎದುರಿಸಿ ಸತ್ಯ ಸಾಬೀತುಪಡಿಸಲಿ” ಎಂದು ಅವರು ಸವಾಲು ಎಸೆದಿದ್ದಾರೆ.
ಮಲ್ಲೇಶ್ವರಂನಲ್ಲಿರುವ ಬಿಜೆಪಿ ರಾಜ್ಯ ಕಚೇರಿ ‘ಜಗನ್ನಾಥ ಭವನ’ದಲ್ಲಿ ಶನಿವಾರ ಜಂಟಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, 2028 ಕ್ಕೆ ನಾಗೇಂದ್ರ ಅವರು ಎಲ್ಲಿ ಸ್ಪರ್ಧಿಸುತ್ತಾರೋ ಅಲ್ಲೇ ಸ್ಪರ್ಧಿಸುತ್ತೇನೆ. ಇಡೀ ಸರ್ಕಾರವನ್ನೇ ವಜಾ ಮಾಡಲಿ. ಎಲ್ಲಾ ಕಡೆ ಚುನಾವಣೆ ನಡೆಯಲಿ. ಇಂದೇ ಜನತಾ ನ್ಯಾಯಾಲಯಕ್ಕೆ ಹೋಗೋಣ ಎಂದು ಸವಾಲು ಎಸೆದರು.
ನಾಗೇಂದ್ರಗೆ ಶ್ರೀರಾಮುಲು ಹಾಕಿದ ಸವಾಲುಗಳು:
ರಾಜೀನಾಮೆ ಕೇವಲ ಆರಂಭ: “ವಾಲ್ಮೀಕಿ ನಿಗಮದ ಹಣ ಲೂಟಿ ಹಗರಣದಲ್ಲಿ ಸಚಿವ ನಾಗೇಂದ್ರ ಅವರ ರಾಜೀನಾಮೆ ಕೇವಲ ಆರಂಭವಷ್ಟೇ. ರಾಜೀನಾಮೆ ಕೊಟ್ಟ ತಕ್ಷಣವೇ ಕ್ಲೀನ್ ಚೀಟ್ ಸಿಗುವುದಿಲ್ಲ. ಬಡ ಪರಿಶಿಷ್ಟ ಪಂಗಡಗಳ (ST) ಕಲ್ಯಾಣಕ್ಕಾಗಿ ಮೀಸಲಿಟ್ಟಿದ್ದ ಕೋಟ್ಯಂತರ ರೂಪಾಯಿಗಳನ್ನು ಅಕ್ರಮವಾಗಿ ವರ್ಗಾವಣೆ ಮಾಡಿರುವುದು ಈಗಾಗಲೇ ಜಾರಿ ನಿರ್ದೇಶನಾಲಯದ (ED) ತನಿಖೆಯಲ್ಲಿ ಬಹಿರಂಗವಾಗಿದೆ. ಧೈರ್ಯವಿದ್ದರೆ ನಾಗೇಂದ್ರ ಅವರು ಕಾನೂನು ಪ್ರಕ್ರಿಯೆಯನ್ನು ಎದುರಿಸಲಿ” ಎಂದು ಸವಾಲು ಹಾಕಿದರು.
ಲೂಟಿಯಾದ ಹಣ ಮರಳಿ ಬರಲಿ: ಹಗರಣದ ಸಂಪೂರ್ಣ ಸತ್ಯಾಸತ್ಯತೆ ಹೊರಬರುವವರೆಗೆ ಮತ್ತು ಲೂಟಿಯಾದ ಸಾರ್ವಜನಿಕರ ಪ್ರತಿ ಪೈಸೆಯೂ ಮರಳಿ ಸಿಗುವವರೆಗೆ ಬಿಜೆಪಿ ಹೋರಾಟ ನಿಲ್ಲುವುದಿಲ್ಲ ಎಂದು ಶ್ರೀರಾಮುಲು ಗುಡುಗಿದರು.
ವ್ಯಾಲಿಡಿಟಿ ಮುಗಿದಿದೆ:
ನಾಗೇಂದ್ರ ಸಿನಿಮಾ ಚೆನ್ನಾಗಿ ನಡೆಯುತ್ತವೆ. ವಿರೋಧ ಪಕ್ಷ ಜವಾಬ್ದಾರಿ ನಿರ್ವಹಿಸಿದೆ. ನಿಮ್ಮ ಕಾಂಗ್ರೆಸ್ ಪಕ್ಷ ಉಳಿಸಿಕೊಳ್ಳಲಿಲ್ಲ. ಸೂಟ್‍ಕೇಸ್ ಕೊಡ್ತಿದ್ದರು ಮಂತ್ರಿ ಮಾಡಿದರು. ಆ ಸೂಟ್ ಕೇಸ್‍ದು ಅವಧಿ ಮುಗಿದಿದೆ. ವ್ಯಾಲಿಡಿಟಿ ಮುಗಿದ ಕಾರಣ ಸಚಿವ ಸ್ಥಾನದಿಂದ ತೆಗೆದು ಹಾಕಿದರು. ಹಗರಣದ ಹಣವನ್ನು ಬೇರೆ ಬೇರೆ ಕಡೆ ಹಂಚಿದ್ದರಿಂದ ಹಣದ ತೂಕ ಕಡಿಮೆಯಾಗಿ ಸಚಿವ ಸ್ಥಾನದಿಂದ ಹೊರ ಹಾಕಿದರು ಎಂದು ವ್ಯಂಗ್ಯವಾಡಿದರು.
ದಲಿತ ನಾಯಕ ಕೆ.ಎನ್.ರಾಜಣ್ಣ ಅವರನ್ನೂ ಸಚಿವ ಸ್ಥಾನದಿಂದ ತೆಗೆದರು. ಅವರನ್ನೂ ಬಲಿಪಶು ಮಾಡಿದರು. ಆಗ ಇಲ್ಲದ ಮೊಸಳೆ ಕಣ್ಣೀರು, ನಾಟಕ, ದಲಿತರ ಮೇಲಿನ ಅಭಿಮಾನ ಈಗ ಯಾಕೆ ಎಂದು ಪ್ರಶ್ನಿಸಿದರು.
ಕಾಂಗ್ರೆಸ್‍ಗೆ ಒತ್ತೆ ಇಡುವ ಕೆಲಸ:
ನಾಗೇಂದ್ರ ಪಕ್ಷದ ಆಸ್ತಿ ಎಂದು ಸಿಎಂ ಹೇಳಿದ್ದಾರೆ. ನಾಗೇಂದ್ರ ಕಾಂಗ್ರೆಸ್ ಪಕ್ಷದ ಆಸ್ತಿ, ಸೋನಿಯಾ, ರಾಹುಲ್, ಪ್ರಿಯಾಂಕ, ಕೆಪಿಸಿಸಿ ಆಸ್ತಿ ಆಗಿದ್ದಾರೆ. ಜನರ ಹಣವನ್ನು ಕಾಂಗ್ರೆಸ್‍ಗೆ ಒತ್ತೆ ಇಡುವ ಕೆಲಸವನ್ನು ನಾಗೇಂದ್ರ ಮಾಡಿದ್ದಾರೆ. ಇಂದು ನಾಗೇಂದ್ರ ಅವರು ಮನೆ ಹೋಗಿದ್ದಾರೆ. ಮುಂದಿನ ಚುನಾವಣೆಯಲ್ಲಿ ಇಡೀ ಕಾಂಗ್ರೆಸ್ ಪಕ್ಷ ಮನೆಗೆ ಹೋಗಲಿದೆ. ಅದನ್ನು ಬಿಜೆಪಿ ಮಾಡಲಿದೆ ಎಂದರು.
ರಿಜೆಕ್ಟೆಡ್ ಪೀಸ್ ಮತ್ತೆ ಮಂತ್ರಿ:
ಸಿದ್ದರಾಮಯ್ಯ ಅವರು ನಾಗೇಂದ್ರ ಅವರನ್ನು ರಿಜೆಕ್ಟ್ ಮಾಡಿದ್ದರು. ಅವರು ರಿಜೆಕ್ಟೆಡ್ ಪೀಸ್. ಅವರ ಮೇಲೆ ಹಲವಾರು ಪ್ರಕರಣ ಇದ್ದರೂ ಡಿ ಕೆ ಶಿವಕುಮಾರ ಅವರು ಸಚಿವರಾಗಿ ಮಾಡಿದರು ಎಂದರು.
ಬಿಜೆಪಿಗೆ ಬರುವಂತೆ ಕೆ.ಎನ್. ರಾಜಣ್ಣಗೆ ಆಹ್ವಾನ:
ಇದೇ ವೇಳೆ ಕಾಂಗ್ರೆಸ್ ಪಕ್ಷದಲ್ಲಿ ಅಸಮಾಧಾನಗೊಂಡಿರುವ ಹಿರಿಯ ನಾಯಕ ಕೆ.ಎನ್. ರಾಜಣ್ಣ ಹಾಗೂ ಅವರ ಪುತ್ರ, ಎಂಎಲ್‌ಸಿ ರಾಜೇಂದ್ರ ರಾಜಣ್ಣ ಅವರಿಗೆ ಬಿಜೆಪಿಗೆ ಬರುವಂತೆ ಶ್ರೀರಾಮುಲು ಬಹಿರಂಗ ಆಹ್ವಾನ ನೀಡಿದರು. “ವಾಲ್ಮೀಕಿ ಸಮುದಾಯ ಮತ್ತು ಅದರ ಪ್ರಮುಖ ನಾಯಕರು ನಮ್ಮೊಂದಿಗಿದ್ದಾರೆ. ನೀವು ಬಿಜೆಪಿಗೆ ಬಂದರೆ ನಾನು, ಶಿವನಗೌಡ ನಾಯಕ, ರಾಜುಗೌಡ ಸೇರಿದಂತೆ ನಮ್ಮೆಲ್ಲಾ ನಾಯಕರು ಗೌರವಯುತವಾಗಿ ಪಕ್ಷಕ್ಕೆ ಸ್ವಾಗತಿಸುತ್ತೇವೆ” ಎಂದು ಮುಕ್ತ ಇಂಗಿತ ವ್ಯಕ್ತಪಡಿಸಿದರು.
ಪಾದಯಾತ್ರೆ ರೂಟ್ ಮ್ಯಾಪ್:
ಸೆಪ್ಟೆಂಬರ್ 1 ರಂದು ಲಿಂಗಸಗೂರಿನಿಂದ ಆರಂಭವಾಗಲಿರುವ ಬಿಜೆಪಿ ಪಾದಯಾತ್ರೆ ಸೆಪ್ಟೆಂಬರ್ 10 ರಂದು ಬಳ್ಳಾರಿಯಲ್ಲಿ ಮುಕ್ತಾಯವಾಗಲಿದೆ. ಒಂಬತ್ತು ವಿಧಾನಸಭಾ ಕ್ಷೇತ್ರಗಳಲ್ಲಿ ಪಾದಯಾತ್ರೆ ಹಾದು ಬರಲಿದೆ.ಲಿಂಗಸಗೂರಿನಲ್ಲಿ ಬೃಹತ್ ಸಮಾವೇಶ ನಡೆಸಿ ಪಾದಯಾತ್ರೆಗೆ ಚಾಲನೆ ನೀಡಲಾಗುವುದು. ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಶಿ, ಎಚ್.ಡಿ ಕುಮಾರಸ್ವಾಮಿ, ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ವಿರೋಧಪಕ್ಷದ ನಾಯಕರಾದ ಆರ್.ಅಶೋಕ್, ಛಲವಾದಿ ನಾರಾಯಣಸ್ವಾಮಿ ಸೇರಿದಂತೆ ಹಲವು ಮುಖಂಡರು ಈ ವೇಳೆ ಹಾಜರಿರಲಿದ್ದಾರೆ ಎಂದು ಹೇಳಿದರು. ಮಸ್ಕಿ, ಸಿಂಧನೂರು, ಕಾರಟಗಿ, ಗಂಗಾವತಿ, ಕಂಪ್ಲಿ, ಸಂಡೂರು, ಬಳ್ಳಾರಿ ಗ್ರಾಮಾಂತರ ಕ್ಷೇತ್ರದ ಮೂಲಕ ಸಾಗುವ ಪಾದಯಾತ್ರೆ ಬಳ್ಳಾರಿ ನಗರದಲ್ಲಿ ಸಮಾರೋಪಗೊಳ್ಳಲಿದೆ ಎಂದರು.

