Sat. Aug 29th, 2026

ಗೃಹಲಕ್ಷ್ಮಿ ಫಲಾನುಭವಿಗಳ ಮರು ಪರಿಶೀಲನೆಗೆ ಸರ್ಕಾರದ ಆದೇಶ: ಬಯೋಮೆಟ್ರಿಕ್, ಮುಖ ದೃಢೀಕರಣ ಕಡ್ಡಾಯ

Share this with Friends

ಬೆಂಗಳೂರು: ರಾಜ್ಯ ಸರ್ಕಾರದ ಅತ್ಯಂತ ಮಹತ್ವಾಕಾಂಕ್ಷಿ ಗ್ಯಾರಂಟಿ ಯೋಜನೆಗಳಲ್ಲೊಂದಾದ ‘ಗೃಹಲಕ್ಷ್ಮಿ’ ಯೋಜನೆಯಡಿ ಅನರ್ಹ ಫಲಾನುಭವಿಗಳನ್ನು ಪಟ್ಟಿಯಿಂದ ತೆಗೆದುಹಾಕಲು ಮತ್ತು ಅರ್ಹರಿಗೆ ಸಕಾಲದಲ್ಲಿ ಸೌಲಭ್ಯ ಒದಗಿಸಲು ಸರ್ಕಾರ ಭಾರಿ ನಿರ್ಧಾರ ಕೈಗೊಂಡಿದೆ. ಯೋಜನೆಯಡಿ ನೋಂದಾಯಿತರಾಗಿರುವ ಎಲ್ಲಾ ಫಲಾನುಭವಿಗಳ ಒಟ್ಟಾರೆ ಮರು ಪರಿಶೀಲನೆಯನ್ನು ಬಯೋಮೆಟ್ರಿಕ್ ಅಥವಾ ಮುಖ ದೃಢೀಕರಣದ (Facial Authentication) ಮೂಲಕ ನಡೆಸಲು ಸರ್ಕಾರ ಆಡಳಿತಾತ್ಮಕ ಅನುಮೋದನೆ ನೀಡಿ ಅಧಿಕೃತ ಆದೇಶ ಹೊರಡಿಸಿದೆ.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಪ್ರಸ್ತಾವನೆಯನ್ನು ಪುರಸ್ಕರಿಸಿರುವ ಸರ್ಕಾರ, ಈ ಬೃಹತ್ ಮರು ಪರಿಶೀಲನಾ ಪ್ರಕ್ರಿಯೆಯನ್ನು ಒಟ್ಟು 20.00 ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ ನಿರ್ವಹಿಸಲು ಸಚಿವ ಸಂಪುಟದ ಅನುಮೋದನೆ ಮೇರೆಗೆ ಆದೇಶಿಸಿದೆ.

ಮರು ಪರಿಶೀಲನೆಗೆ ಕಾರಣಗಳೇನು?:

ಗೃಹಲಕ್ಷ್ಮಿ ಯೋಜನೆ ಪ್ರಾರಂಭವಾದ 2023ರ ಆಗಸ್ಟ್‌ನಿಂದ ಇಲ್ಲಿಯವರೆಗೆ ಒಟ್ಟು 1.24 ಕೋಟಿ ಫಲಾನುಭವಿಗಳಿಗೆ 32 ಕಂತುಗಳಲ್ಲಿ ಒಟ್ಟು 76,951.13 ಕೋಟಿ ರೂ. ಧನಸಹಾಯವನ್ನು ಯಶಸ್ವಿಯಾಗಿ ಪಾವತಿಸಲಾಗಿದೆ. ಆದರೆ, ಕಳೆದ ಮೂರು ವರ್ಷಗಳಲ್ಲಿ ಅನೇಕ ಫಲಾನುಭವಿಗಳು ಮರಣ ಹೊಂದಿರುವ, ಬೇರೆಡೆಗೆ ವಲಸೆ ಹೋಗಿರುವ ಪ್ರಕರಣಗಳು ವರದಿಯಾಗಿವೆ. ಇದರೊಂದಿಗೆ, ಯೋಜನೆಯ ಫಲಾನುಭವಿಗಳು ಅಥವಾ ಅವರ ಪತಿಯಂದಿರು ಆದಾಯ ತೆರಿಗೆ (IT) ಪಾವತಿ ಹಾಗೂ ಜಿಎಸ್‌ಟಿ ರಿಟರ್ನ್ಸ್ ಸಲ್ಲಿಸಲು ಪ್ರಾರಂಭಿಸಿರುವ ಪ್ರಕರಣಗಳು ಬೆಳಕಿಗೆ ಬಂದಿರುವುದರಿಂದ ಈ ಒಟ್ಟಾರೆ ಮರು ಪರಿಶೀಲನೆ ಅತ್ಯಗತ್ಯವಾಗಿದೆ ಎಂದು ಸರ್ಕಾರ ತಿಳಿಸಿದೆ.

ಆಗಸ್ಟ್ 30 ರಿಂದ ಮನೆ-ಮನೆ ಸಮೀಕ್ಷೆ ಆರಂಭ:

ಈ ಪರಿಶೀಲನಾ ಪ್ರಕ್ರಿಯೆಯು ದಿನಾಂಕ: 30.08.2026 ರಿಂದ ಪ್ರಾರಂಭಗೊಂಡು ಒಂದು ತಿಂಗಳೊಳಗೆ ಪೂರ್ಣಗೊಳ್ಳಲಿದೆ. ಎಲೆಕ್ಟ್ರಾನಿಕ್ ಡೆಲಿವರಿ ಆಫ್ ಸಿಟಿಜನ್ಸ್ ಸರ್ವಿಸಸ್ (EDCS) ಅಭಿವೃದ್ಧಿಪಡಿಸಿರುವ ಪ್ರತ್ಯೇಕ ವೆಬ್ ಮತ್ತು ಮೊಬೈಲ್ ಅಪ್ಲಿಕೇಶನ್ ಮೂಲಕ ಈ ಸಮೀಕ್ಷೆ ನಡೆಯಲಿದೆ. ಇದಕ್ಕಾಗಿ ಗ್ರಾಮೀಣ ಮತ್ತು ನಗರ ಪ್ರದೇಶಗಳ ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯರು, ಅಂಗನವಾಡಿ ಕಾರ್ಯಕರ್ತೆಯರು, ಗ್ರಾಮ ಪಂಚಾಯತ್ ಸಿಬ್ಬಂದಿ, ಕಂದಾಯ ನಿರೀಕ್ಷಕರು ಮತ್ತು ಬಿಲ್ ಕಲೆಕ್ಟರ್‌ಗಳನ್ನು ಗಣತಿದಾರರನ್ನಾಗಿ ನಿಯೋಜಿಸಲಾಗುತ್ತಿದೆ.

ಮನೆ ಭೇಟಿ ಮತ್ತು ಛಾಯಾಚಿತ್ರ ಸಾಕ್ಷ್ಯ ಕಡ್ಡಾಯ:

ಮನೆ-ಮನೆ ಪರಿಶೀಲನೆ: ಗಣತಿದಾರರು ಪ್ರತಿಯೊಬ್ಬ ಫಲಾನುಭವಿಯ ಮನೆಗೆ ಕಡ್ಡಾಯವಾಗಿ ಭೇಟಿ ನೀಡಿ ಮುದ್ರಿತ ಗಣತಿ ನಮೂನೆಯನ್ನು ವಿತರಿಸಿ, ಸ್ಥಳದಲ್ಲೇ ಭರ್ತಿ ಮಾಡಿಕೊಂಡು ಹಿಂಪಡೆಯಲಿದ್ದಾರೆ. ಯಾವುದೇ ಕಾರಣಕ್ಕೂ ಮನೆ ಭೇಟಿಯನ್ನು ತಪ್ಪಿಸುವಂತಿಲ್ಲ.

ಜಿಪಿಎಸ್ ಮತ್ತು ಫೋಟೋ ಪುರಾವೆ: ಸಮೀಕ್ಷೆಯ ವೇಳೆ ಮೊಬೈಲ್ ಆಪ್ ಮೂಲಕ ಫಲಾನುಭವಿಯ ಛಾಯಾಚಿತ್ರವನ್ನು ಸೆರೆಹಿಡಿಯಲಾಗುತ್ತದೆ. ಈ ವೇಳೆ ಅಪ್ಲಿಕೇಶನ್ ಸ್ವಯಂಚಾಲಿತವಾಗಿ ಮನೆಯ ಜಿಪಿಎಸ್ (GPS) ನಿರ್ದೇಶಾಂಕಗಳನ್ನು ದಾಖಲಿಸಿಕೊಳ್ಳಲಿದೆ.

ಫಲಾನುಭವಿ ಗೈರಾದರೆ?: ಒಂದು ವೇಳೆ ಫಲಾನುಭವಿಯು ಮನೆಯಲ್ಲಿ ಲಭ್ಯವಿಲ್ಲದಿದ್ದರೆ ಕುಟುಂಬದ ಇತರ ಸದಸ್ಯರ ಫೋಟೋ ಅಥವಾ ಮನೆಯ ಛಾಯಾಚಿತ್ರವನ್ನು ಭೇಟಿಯ ಪುರಾವೆಯಾಗಿ ಸೆರೆಹಿಡಿಯಲಾಗುತ್ತದೆ. ಮರಣ, ವಲಸೆ ಅಥವಾ ಸ್ಥಳಾಂತರಗೊಂಡ ಪ್ರಕರಣಗಳನ್ನು ಆಪ್‌ನಲ್ಲಿ ಸ್ಪಷ್ಟವಾಗಿ ನಮೂದಿಸಲಾಗುತ್ತದೆ.

ಬಯೋಮೆಟ್ರಿಕ್‌ಗೆ ಪರ್ಯಾಯ ಮಾರ್ಗಗಳು:

ಮನೆ ಭೇಟಿಯ ವೇಳೆ ಮುಖ ದೃಢೀಕರಣ (Facial Authentication) ವಿಫಲವಾದರೆ, ಫಲಾನುಭವಿಗಳು ಹತ್ತಿರದ ನ್ಯಾಯಬೆಲೆ ಅಂಗಡಿ, ಕರ್ನಾಟಕ ಒನ್, ಗ್ರಾಮ ಒನ್, ಬೆಂಗಳೂರು ಒನ್ ಅಥವಾ ಬಾಪೂಜಿ ಸೇವಾ ಕೇಂದ್ರಗಳಿಗೆ (CSC) ಭೇಟಿ ನೀಡಿ ತಮ್ಮ ಬಯೋಮೆಟ್ರಿಕ್ ದೃಢೀಕರಣವನ್ನು ಪೂರ್ಣಗೊಳಿಸಬಹುದು.

ಇದಲ್ಲದೆ, ಫಲಾನುಭವಿಗಳು ಜುಲೈ 1, 2026ರ ನಂತರ ಪಡಿತರ ಸಂಗ್ರಹಣೆಗಾಗಿ ನ್ಯಾಯಬೆಲೆ ಅಂಗಡಿಗಳಲ್ಲಿ ಈಗಾಗಲೇ ನೀಡಿರುವ ಬಯೋಮೆಟ್ರಿಕ್ ದೃಢೀಕರಣ ದತ್ತಾಂಶವನ್ನೂ ಸಹ ಬಳಸಿಕೊಳ್ಳಲು ಸರ್ಕಾರ ನಿರ್ಧರಿಸಿದೆ.

 

 

 


Share this with Friends

Related Post