Sat. Aug 29th, 2026

ಬಳ್ಳಾರಿ ಜಿಲ್ಲೆಯ ಎಲ್ಲಾ ಶಾಸಕರು ರಾಜೀನಾಮೆ ನೀಡಿ ಕಣಕ್ಕಿಳಿಯಲಿ:ನಾಗೇಂದ್ರ ಸವಾಲಿಗೆ ಜನಾರ್ದನ ರೆಡ್ಡಿ ಪ್ರತಿ ಸವಾಲು

Share this with Friends

ಬಳ್ಳಾರಿ: “ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಜನತಾ ನ್ಯಾಯಾಲಯಕ್ಕೆ ಬನ್ನಿ” ಎಂದು ಕಾಂಗ್ರೆಸ್ ನಾಯಕ ಬಿ. ನಾಗೇಂದ್ರ ಅವರು ಹಾಕಿದ್ದ ಸವಾಲಿಗೆ ಗಂಗಾವತಿ ಶಾಸಕ ಹಾಗೂ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರು ಬಳ್ಳಾರಿಯಲ್ಲಿ ಶನಿವಾರ ತೀಕ್ಷ್ಣವಾಗಿ ತಿರುಗೇಟು ನೀಡಿದ್ದಾರೆ. “ನಾಗೇಂದ್ರ ಒಬ್ಬರೇ ಅಲ್ಲ, ತಾಕತ್ತಿದ್ದರೆ ಬಳ್ಳಾರಿ ಜಿಲ್ಲೆಯ ಕಾಂಗ್ರೆಸ್‌ನ ಎಲ್ಲಾ ಶಾಸಕರೂ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿ ಒಟ್ಟಿಗೆ ಚುನಾವಣಾ ಕಣಕ್ಕೆ ಬರಲಿ” ಎಂದು ಜನಾರ್ದನ ರೆಡ್ಡಿ ಭರ್ಜರಿ ಪ್ರತಿ ಸವಾಲು ಎಸೆದಿದ್ದಾರೆ.

ಬಳ್ಳಾರಿಯಲ್ಲಿ ತುರ್ತು ಪತ್ರಿಕಾಗೋಷ್ಠಿ ನಡೆಸಿದ ಅವರು, ಮಾಜಿ ಸಚಿವ ಬಿ. ನಾಗೇಂದ್ರ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವ ಸಂದರ್ಭದಲ್ಲಿ ಶ್ರೀರಾಮುಲು ಮತ್ತು ಜನಾರ್ದನ ರೆಡ್ಡಿ ಅವರಿಗೆ ಜನತಾ ನ್ಯಾಯಾಲಯ ಎದುರಿಸುವಂತೆ ನೀಡಿದ್ದ ಹೇಳಿಕೆಗೆ ಸಂಬಂಧಿಸಿದಂತೆ ವಾಗ್ದಾಳಿ ನಡೆಸಿದರು.

ಪಾದಯಾತ್ರೆ ಯಾವುದೇ ಕಾರಣಕ್ಕೂ ನಿಲ್ಲಲ್ಲ:

ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಬಹುಕೋಟಿ ಹಗರಣವನ್ನು ಉಲ್ಲೇಖಿಸಿ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ರೆಡ್ಡಿ, “ಈ ಹಗರಣದಿಂದ ರಾಜ್ಯದ ಬೊಕ್ಕಸಕ್ಕೆ ಭಾರಿ ನಷ್ಟ ಉಂಟಾಗಿದೆ. ಹಣದ ಅಕ್ರಮ ವಹಿವಾಟು ಹಾಗೂ ವಿವಿಧ ಚುನಾವಣೆಗಳಿಗೆ ಈ ಹಣ ಬಳಕೆಯಾಗಿರುವ ಬಗ್ಗೆ ಸೂಕ್ತ ತನಿಖೆಯಾಗಬೇಕು” ಎಂದು ಒತ್ತಾಯಿಸಿದರು. ನಾಗೇಂದ್ರ ಅವರ ರಾಜೀನಾಮೆಯಿಂದಲೇ ಎಲ್ಲವೂ ಮುಗಿದಿಲ್ಲ, ಬಿಜೆಪಿ ಹಮ್ಮಿಕೊಂಡಿರುವ ಪಾದಯಾತ್ರೆ ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಬಳ್ಳಾರಿ ಸಂಸದ ತುಕರಾಂ ಕೂಡ ರಾಜೀನಾಮೆ ನೀಡಲಿ:

ಪತ್ರಿಕಾಗೋಷ್ಠಿಯಲ್ಲಿ ಮತ್ತೊಂದು ಬಾಂಬ್ ಸಿಡಿಸಿದ ಜನಾರ್ದನ ರೆಡ್ಡಿ, ವಾಲ್ಮೀಕಿ ನಿಗಮದ ಲೂಟಿ ಹಣವನ್ನು ಲೋಕಸಭಾ ಚುನಾವಣೆಯಲ್ಲಿ ಬಳಸಿಕೊಳ್ಳಲಾಗಿದೆ ಎಂದು ಗಂಭೀರ ಆರೋಪ ಮಾಡಿದರು. ಈ ಹಿನ್ನೆಲೆಯಲ್ಲಿ ಕೇವಲ ನಾಗೇಂದ್ರ ಮಾತ್ರವಲ್ಲ, ಬಳ್ಳಾರಿಯ ನೂತನ ಸಂಸದ ಈ. ತುಕರಾಂ ಅವರು ಕೂಡ ತಕ್ಷಣವೇ ತಮ್ಮ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

ಭ್ರಷ್ಟಾಚಾರಕ್ಕೆ ಜಾತಿಯ ಬಣ್ಣ ಬಳಿಯಬೇಡಿ:

“ಸಚಿವ ಸ್ಥಾನದಿಂದ ಈ ಹಿಂದೆ ನಾಗೇಂದ್ರ ಅವರನ್ನು ಕೈಬಿಡಲಾಗಿತ್ತು, ಈಗ ಮತ್ತೆ ಅವರನ್ನು ಸಮರ್ಥಿಸಿಕೊಳ್ಳುವಾಗ ಕಾಂಗ್ರೆಸ್ ನಾಯಕರು ಜಾತಿಯ ವಿಚಾರವನ್ನು ಮುನ್ನೆಲೆಗೆ ತರುತ್ತಿದ್ದಾರೆ. ಭ್ರಷ್ಟಾಚಾರಕ್ಕೆ ಯಾವುದೇ ಜಾತಿಯ ಬಣ್ಣ ಬಳಿಯುವುದು ಸರಿಯಲ್ಲ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಸರ್ಕಾರದ ವಿರುದ್ಧ ಜನಾರ್ದನ ರೆಡ್ಡಿ ತೀವ್ರ ಆಕ್ರೋಶ ಹೊರಹಾಕಿದರು.

 


Share this with Friends

Related Post