Sat. Aug 29th, 2026

ಸರ್ಕಾರಿ ಶಾಲಾ ಮಕ್ಕಳಿಗಾಗಿ ಉಚಿತ ‘ಸ್ಪೋಕನ್ ಇಂಗ್ಲಿಷ್’ ತರಗತಿ: ₹1,967.87 ಲಕ್ಷ ಅನುದಾನ ಮಂಜೂರು ಮಾಡಿದ ಸರ್ಕಾರ!

Share this with Friends

ಬೆಂಗಳೂರು: ಸರ್ಕಾರಿ ಶಾಲಾ ವಿದ್ಯಾರ್ಥಿಗಳಲ್ಲಿ ಇಂಗ್ಲಿಷ್ ಭಾಷಾ ಪ್ರಾವೀಣ್ಯತೆಯನ್ನು ಮತ್ತು ಸಂವಹನ ಕೌಶಲ್ಯವನ್ನು ಹೆಚ್ಚಿಸುವ ಮಹತ್ತರ ಉದ್ದೇಶದಿಂದ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು 2026-27ನೇ ಶೈಕ್ಷಣಿಕ ಸಾಲಿನಲ್ಲಿ ಹೊಸ ಯೋಜನೆಯೊಂದನ್ನು ಜಾರಿಗೆ ತರುತ್ತಿದೆ. ರಾಜ್ಯದ ಒಟ್ಟು 1,919 ಆಯ್ದ ಸರ್ಕಾರಿ ಶಾಲೆಗಳಲ್ಲಿ “ಸ್ಪೋಕನ್ ಇಂಗ್ಲಿಷ್” ವಿಶೇಷ ಕಾರ್ಯಕ್ರಮವನ್ನು ಆರಂಭಿಸಲು ಸರ್ಕಾರ ಅನುಮತಿ ನೀಡಿದೆ.

ವಿದ್ಯಾರ್ಥಿಗಳು ಜಾಗತಿಕ ಮಟ್ಟದಲ್ಲಿ ಸ್ಪರ್ಧಿಸಲು ಅನುವಾಗುವಂತೆ ಈ ಸಮಗ್ರ ಇಂಗ್ಲಿಷ್ ಭಾಷಾ ಕಲಿಕಾ ಯೋಜನೆಯನ್ನು ರೂಪಿಸಲಾಗಿದ್ದು, ಮುಂದಿನ ತಿಂಗಳಿನಿಂದಲೇ ತರಗತಿಗಳು ಆರಂಭವಾಗಲಿವೆ.

ಯಾವೆಲ್ಲಾ ಶಾಲೆಗಳಿಗೆ ಇದು ಅನ್ವಯ?:

ರಾಜ್ಯದಲ್ಲಿರುವ ಪ್ರಮುಖ ಕರ್ನಾಟಕ ಪಬ್ಲಿಕ್ ಶಾಲೆಗಳು (KPS), ಪಿಎಂ ಶ್ರೀ (PM SHRI) ಕೆಪಿಎಸ್ ಶಾಲೆಗಳು, ಅವುಗಳ ಸಂಯೋಜಿತ ಘಟಕ ಶಾಲೆಗಳು ಹಾಗೂ ದ್ವಿಭಾಷಾ (ಕನ್ನಡ-ಇಂಗ್ಲಿಷ್) ಮಾಧ್ಯಮ ಶಾಲೆಗಳ 1 ರಿಂದ 10ನೇ ತರಗತಿಯವರೆಗಿನ ಎಲ್ಲಾ ವಿದ್ಯಾರ್ಥಿಗಳಿಗೆ ಈ ಕಾರ್ಯಕ್ರಮ ಅನ್ವಯಿಸಲಿದೆ.

6 ತಿಂಗಳ ವಿಶೇಷ ತರಬೇತಿ ಅವಧಿ:

ಈ ಮಹತ್ವದ ಸ್ಪೋಕನ್ ಇಂಗ್ಲಿಷ್ ಯೋಜನೆಯು ಒಟ್ಟು ಆರು ತಿಂಗಳ ಅವಧಿಯದ್ದಾಗಿದ್ದು, ಸೆಪ್ಟೆಂಬರ್ 2026 ರಿಂದ ಆರಂಭಗೊಂಡು ಫೆಬ್ರವರಿ 2027 ರವರೆಗೆ ನಿರಂತರವಾಗಿ ಜಾರಿಯಲ್ಲಿರಲಿದೆ.

₹1,967.87 ಲಕ್ಷ ಭಾರಿ ಅನುದಾನ:

ಯೋಜನೆಯ ಯಶಸ್ವಿ ಅನುಷ್ಠಾನ ಮತ್ತು ಧನಸಹಾಯಕ್ಕಾಗಿ ಸಮಗ್ರ ಶಿಕ್ಷಣ ಕರ್ನಾಟಕ (SSK) ಸಂಸ್ಥೆಯ ವಾರ್ಷಿಕ ಕ್ರಿಯಾ ಯೋಜನೆ ಮತ್ತು ಆಯವ್ಯಯದಡಿ ಮೀಸಲಿಡಲಾದ ಒಟ್ಟು ₹1,967.87 ಲಕ್ಷ ಅನುದಾನವನ್ನು ಬಳಸಿಕೊಳ್ಳಲು ರಾಜ್ಯ ಸರ್ಕಾರವು ಆಡಳಿತಾತ್ಮಕ ಅನುಮೋದನೆ ನೀಡಿದೆ.

ಸ್ಥಳೀಯವಾಗಿ ಅತಿಥಿ ಶಿಕ್ಷಕರ ನೇಮಕ:

ಶಾಲೆಗಳಲ್ಲಿ ಮಕ್ಕಳಿಗೆ ವ್ಯವಸ್ಥಿತವಾಗಿ ಇಂಗ್ಲಿಷ್ ಸಂವಹನ ಹೇಳಿಕೊಡಲು ಸ್ಥಳೀಯ ಮಟ್ಟದಲ್ಲೇ ಅರ್ಹ ಮತ್ತು ಕಾರ್ಯನಿರತ ಅತಿಥಿ ಶಿಕ್ಷಕರನ್ನು (Guest Teachers) ತಾತ್ಕಾಲಿಕವಾಗಿ ನೇಮಿಸಿಕೊಳ್ಳಲು ನಿರ್ಧರಿಸಲಾಗಿದೆ. ಆಯಾ ಶಾಲೆಗಳ ಶಾಲಾ ಅಭಿವೃದ್ಧಿ ಮತ್ತು ಮೇಲ್ವಿಚಾರಣಾ ಸಮಿತಿಗಳಿಗೆ (SDMC) ಈ ಶಿಕ್ಷಕರನ್ನು ನಿಯೋಜಿಸುವ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿ ಸರ್ಕಾರ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಈ ಉಪಕ್ರಮದಿಂದಾಗಿ ಬಡ ಮತ್ತು ಗ್ರಾಮೀಣ ಭಾಗದ ಸರ್ಕಾರಿ ಶಾಲಾ ಮಕ್ಕಳ ಇಂಗ್ಲಿಷ್ ಭಾಷೆಯ ಭಯ ದೂರವಾಗಲಿದ್ದು, ಅವರ ಆತ್ಮವಿಶ್ವಾಸ ಹೆಚ್ಚಲು ನೆರವಾಗಲಿದೆ.

 

 


Share this with Friends

Related Post