Sat. Aug 29th, 2026

ಸರ್ಕಾರಿ ಶಾಲಾ ಸಾಧಕರಿಗೆ ಬಂಪರ್ ಕೊಡುಗೆ: ಗರಿಷ್ಠ ಅಂಕ ಪಡೆದ SSLC ವಿದ್ಯಾರ್ಥಿಗಳಿಗೆ ₹50,000 ನಗದು ಪುರಸ್ಕಾರ!

Share this with Friends

ಬೆಂಗಳೂರು: ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಲ್ಲಿ ಸ್ಪರ್ಧಾತ್ಮಕ ಮನೋಭಾವನೆ ಹೆಚ್ಚಿಸಲು ಮತ್ತು ಉನ್ನತ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಲು ರಾಜ್ಯ ಸರ್ಕಾರವು ಭಾರಿ ಕೊಡುಗೆಯೊಂದನ್ನು ಪ್ರಕಟಿಸಿದೆ. 2025-26 ನೇ ಸಾಲಿನ ಎಸ್‌ಎಸ್‌ಎಲ್‌ಸಿ (SSLC) ವಾರ್ಷಿಕ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ರಾಜ್ಯದ ಸುಮಾರು 800 ಅರ್ಹ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ತಲಾ 50,000 ರೂಪಾಯಿಗಳ ನಗದು ಪ್ರಶಸ್ತಿ ನೀಡಲು ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.

ಸರ್ಕಾರದ ‘ವಿದ್ಯಾರ್ಥಿ ಪ್ರೇರಣಾ ಉಪಕ್ರಮ’ ಯೋಜನೆಯಡಿ ಈ ನಗದು ಬಹುಮಾನವನ್ನು ವಿತರಿಸಲಾಗುತ್ತಿದ್ದು, ಇದಕ್ಕಾಗಿ ಒಟ್ಟು 325.00 ಲಕ್ಷ ರೂ.ಗಳ ಭಾರಿ ಅನುದಾನವನ್ನು ಮಂಜೂರು ಮಾಡಲಾಗಿದೆ.

ಆಯ್ಕೆ ಪ್ರಕ್ರಿಯೆ ಮತ್ತು ಮಾನದಂಡಗಳು ಹೀಗಿವೆ:

ಶೈಕ್ಷಣಿಕ ಜಿಲ್ಲಾವಾರು ಆಯ್ಕೆ: ಪ್ರತಿ ಶೈಕ್ಷಣಿಕ ಜಿಲ್ಲೆಯ ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡಿ, ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಗಳಿಸಿದ ಮೊದಲ 3 ವಿದ್ಯಾರ್ಥಿಗಳನ್ನು ಈ ನಗದು ಪುರಸ್ಕಾರಕ್ಕೆ ಆಯ್ಕೆ ಮಾಡಲಾಗುತ್ತದೆ.

ಶೈಕ್ಷಣಿಕ ಬ್ಲಾಕ್‌ವಾರು ಆಯ್ಕೆ: ಜಿಲ್ಲಾ ಮಟ್ಟದ ಆಯ್ಕೆಯಿಂದ ಹೊರಗುಳಿದು, ಪ್ರತಿ ಶೈಕ್ಷಣಿಕ ಬ್ಲಾಕ್ (ತಾಲ್ಲೂಕು) ಮಟ್ಟದಲ್ಲಿ ಗರಿಷ್ಠ ಅಂಕ ಪಡೆದ ಅಗ್ರ 3 ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಈ ಯೋಜನೆಯ ಲಾಭ ಸಿಗಲಿದೆ.

ಒಟ್ಟು ಫಲಾನುಭವಿಗಳು: ಈ ಎರಡೂ ಮಾನದಂಡಗಳ ಅಡಿಯಲ್ಲಿ ಇಡೀ ರಾಜ್ಯಾದ್ಯಂತ ಒಟ್ಟು 800 ರಷ್ಟು ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಪ್ರೋತ್ಸಾಹಧನ ನೀಡಲಾಗುತ್ತದೆ.

ರಾಜ್ಯ ಸರ್ಕಾರವು ಈ ಯೋಜನೆಯ ಸಂಪೂರ್ಣ ಜವಾಬ್ದಾರಿಯನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಗೆ (KSEAB) ವಹಿಸಿದೆ. ಮಂಡಳಿಗೆ ಅನುಮೋದನೆಗೊಂಡಿರುವ 325 ಲಕ್ಷ ರೂ.ಗಳ ಅನುದಾನವನ್ನು ಬಳಸಿಕೊಂಡು ಯಾವುದೇ ವಿಳಂಬವಿಲ್ಲದೆ ಅರ್ಹ ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ನೇರವಾಗಿ ನಗದು ಪುರಸ್ಕಾರದ ಮೊತ್ತವನ್ನು ತಲುಪಿಸುವಂತೆ ಸರ್ಕಾರ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಸರ್ಕಾರದ ಈ ನಿರ್ಧಾರದಿಂದ ಗ್ರಾಮೀಣ ಹಾಗೂ ಬಡ ಹಿನ್ನೆಲೆಯ ಸರ್ಕಾರಿ ಶಾಲಾ ಮಕ್ಕಳ ಶೈಕ್ಷಣಿಕ ಪ್ರಗತಿಗೆ ದೊಡ್ಡ ಬಲ ಸಿಕ್ಕಂತಾಗಿದೆ.

 

 


Share this with Friends

Related Post