ಬೆಂಗಳೂರು: ವಿಶೇಷ ಅಧಿವೇಶನವು ಮುಖ್ಯಮಂತ್ರಿಯವರ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಕುತಂತ್ರವಾಗಿದ್ದು, ರಾಜ್ಯದ ವಿದ್ಯುತ್ ಕ್ಷಾಮ, ಬರಗಾಲ ಮತ್ತು ಭ್ರಷ್ಟಾಚಾರವನ್ನು ಮುಚ್ಚಿಹಾಕಲು ಕಾಂಗ್ರೆಸ್ ಸರ್ಕಾರ ಯತ್ನಿಸುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ತೀವ್ರವಾಗಿ ಆಕ್ಷೇಪಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸರ್ಕಾರದ ಇಬ್ಬಂದಿ ನೀತಿ ಮತ್ತು ವೈಫಲ್ಯಗಳ ವಿರುದ್ಧ ಸದನದ ಒಳಗೆ ಹಾಗೂ ಹೊರಗೆ ತೀವ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.
ಪಾದಯಾತ್ರೆಗೆ ಹೆದರಿ ಅಧಿವೇಶನ; ಸ್ವಪಕ್ಷೀಯರಲ್ಲೇ ತೀವ್ರ ಅಸಮಾಧಾನ:
ಬರಗಾಲ ಮತ್ತು ಕಸ್ತೂರಿರಂಗನ್ ವರದಿ ವಿಚಾರವಾಗಿ ಯಾವುದೇ ರಾಜಕೀಯ ಮಾಡುತ್ತಿಲ್ಲ ಎಂದು ಮುಖ್ಯಮಂತ್ರಿಗಳು ಹೇಳುತ್ತಿದ್ದಾರೆ. ಆದರೆ, ಬಿಜೆಪಿ ಪಾದಯಾತ್ರೆ ನಡೆಸದೇ ಇದ್ದರೆ ಸರ್ಕಾರ ಈ ಅಧಿವೇಶನವನ್ನೇ ಕರೆಯುತ್ತಿರಲಿಲ್ಲ. ವಿರೋಧ ಪಕ್ಷದ ಹೋರಾಟದಿಂದ ವಿಚಲಿತರಾಗಿ ಸಿಎಂ ಈ ನಿರ್ಧಾರ ತಳೆದಿದ್ದಾರೆ. ಸರ್ಕಾರದ ವಿರುದ್ಧ ಸ್ವಪಕ್ಷೀಯ ಶಾಸಕರೇ ತಿರುಗಿಬಿದ್ದಿದ್ದು, ತಮ್ಮ ತಾಲೂಕನ್ನು ಬರಪೀಡಿತ ಎಂದು ಘೋಷಿಸದಿದ್ದರೆ ರಾಜೀನಾಮೆ ನೀಡುವುದಾಗಿ ಹಿರಿಯ ಶಾಸಕ ಎಚ್.ಕೆ. ಪಾಟೀಲ್ ಪತ್ರ ಬರೆದಿದ್ದಾರೆ. ಮುದ್ದೇಬಿಹಾಳದ ಶಾಸಕರು ಬರ ಘೋಷಣೆಯಲ್ಲಿ ಕೀಳು ರಾಜಕಾರಣ ನಡೆಯುತ್ತಿದೆ ಎಂದು ದೂರಿದ್ದಾರೆ. ಜೆಡಿಎಸ್ ಶಾಸಕರು ಕೂಡ ಇದೇ ವಿಷಯವಾಗಿ ಧರಣಿ ಕುಳಿತಿದ್ದರು ಎಂದು ವಿವರಿಸಿದರು.
ಬರ ಘೋಷಣೆಯಲ್ಲಿ ತಾರತಮ್ಯ; ರೈತರ ಸಾಲ ಮನ್ನಾಕ್ಕೆ ಆಗ್ರಹ:
ಕಸ್ತೂರಿರಂಗನ್ ವರದಿ ಜಾರಿಯಿಂದ ಕಾಡಂಚಿನ ಜನರಿಗೆ ಆಗುವ ಅನ್ಯಾಯ ತಪ್ಪಿಸಲು ತಕ್ಷಣವೇ ಪ್ರಾಯೋಗಿಕ ಜಮೀನು ಸಮೀಕ್ಷೆ (Physical Survey) ನಡೆಸಬೇಕು. ಬರ ಘೋಷಣೆಯಲ್ಲೂ ಸರ್ಕಾರ ರಾಜಕೀಯ ಮಾಡುತ್ತಿದ್ದು, ಬೆಂಗಳೂರು ಹೊರತುಪಡಿಸಿ ಬಿಜೆಪಿಯ ಉಳಿದ 44 ಶಾಸಕರ ಕ್ಷೇತ್ರಗಳ ಪೈಕಿ ಕೇವಲ 20 ತಾಲೂಕುಗಳನ್ನು ಮಾತ್ರ ಬರಪೀಡಿತ ಎಂದು ಘೋಷಿಸಿ ತಾರತಮ್ಯ ಎಸಗಲಾಗಿದೆ. ಶಿಕಾರಿಪುರ ಸೇರಿದಂತೆ ರಾಜ್ಯದ 190ಕ್ಕೂ ಹೆಚ್ಚು ತಾಲೂಕುಗಳನ್ನು ಬರಪೀಡಿತ ಎಂದು ತಕ್ಷಣ ಘೋಷಿಸಬೇಕು ಮತ್ತು ರೈತರ ಕೃಷಿ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು ಎಂದು ಒತ್ತಾಯಿಸಿದರು.
ವಿದ್ಯುತ್ ಖರೀದಿ ಲೋಪ ಮತ್ತು ರೈತರ ಸಂಕಷ್ಟ:
ರಾಜ್ಯಾದ್ಯಂತ ತೀವ್ರ ನೀರಿನ ಹಾಹಾಕಾರ ಮತ್ತು ವಿದ್ಯುತ್ ಕ್ಷಾಮ ಎದುರಾಗಿದೆ. ಹಿಂದೆ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ಛತ್ತೀಸ್‌ಗಢದಿಂದ ವಿದ್ಯುತ್ ಖರೀದಿಸಿ ತಂದು ಪರಿಸ್ಥಿತಿ ನಿಭಾಯಿಸಿದ್ದರು. ಆದರೆ ಪ್ರಸ್ತುತ ಸರ್ಕಾರ ಒಂದು ತಿಂಗಳ ಮುಂಚೆಯೇ ಕಾವೇರಿ ಕೊಳ್ಳದ ರೈತರಿಗೆ ಭತ್ತ ನಾಟಿ ಮಾಡದಂತೆ ಸೂಚಿಸಿ ಕೈ ತೊಳೆದುಕೊಂಡಿದೆ. ಗ್ರಾಮೀಣ ಭಾಗದಲ್ಲಿ 7-8 ಗಂಟೆಗಳ ಕಾಲ ತ್ರಿಫೇಸ್ ವಿದ್ಯುತ್ ನೀಡಲು ಸಾಧ್ಯವಾಗುತ್ತಿಲ್ಲ. ಮುಂಚಿತವಾಗಿಯೇ ವಿದ್ಯುತ್ ಖರೀದಿಸಿದ್ದರೆ ಯೂನಿಟ್‌ಗೆ 10-11 ರೂಪಾಯಿಗೆ ಸಿಗುತ್ತಿತ್ತು, ಈಗ 14-15 ರೂಪಾಯಿ ನೀಡಿ ದುಬಾರಿ ಖರೀದಿಗೆ ಮುಂದಾಗಿದೆ. ಸರ್ಕಾರಕ್ಕೆ ಕಳಕಳಿ ಇದ್ದರೆ ತಕ್ಷಣ ವಿದ್ಯುತ್ ಖರೀದಿಸಿ ಪೂರೈಸಲಿ ಎಂದರು.
ಖಾಲಿ ಖಜಾನೆ ಮತ್ತು ಇಲಾಖಾವಾರು ಭ್ರಷ್ಟಾಚಾರದ ಆರೋಪ:
ಕರಾವಳಿ ಭಾಗದ ಅಭಿವೃದ್ಧಿಗೆ 32,000 ಕೋಟಿ ರೂಪಾಯಿ ಪ್ಯಾಕೇಜ್ ಘೋಷಿಸಿರುವ ಸಿಎಂ, ಈ ಯೋಜನೆಗಳಿಗೆ ಹಣವನ್ನು ಎಲ್ಲಿಂದ ತರುತ್ತಾರೆ ಎಂದು ಪ್ರಶ್ನಿಸಿದರು. ಕೆಎಸ್‌ಆರ್‌ಟಿಸಿಯಲ್ಲಿ ನೌಕರರ ಸಂಬಳ ಬಾಕಿ ಉಳಿದಿದ್ದು ಬಸ್ ಸಂಚಾರ ಸ್ಥಗಿತಗೊಳಿಸುವ ಪರಿಸ್ಥಿತಿ ಬಂದಿದೆ ಎಂದು ಎಂಡಿ ಅವರೇ ಪತ್ರ ಬರೆದಿದ್ದಾರೆ. ಇತ್ತ ಶಿಕ್ಷಣ ಇಲಾಖೆಯಲ್ಲೂ ಭ್ರಷ್ಟಾಚಾರ ಮಿತಿ ಮೀರಿದ್ದು, ಶಾಲಾ ಮಕ್ಕಳಿಗೆ ವಿತರಿಸಲಾದ ಶೂ ಮತ್ತು ಸಾಕ್ಸ್ ಒಂದು ತಿಂಗಳೂ ಬಾಳಿಕೆ ಬರುತ್ತಿಲ್ಲ. ಸಚಿವ ಮಧು ಬಂಗಾರಪ್ಪ ಕೇವಲ ಪೊಳ್ಳು ಮಾತನಾಡುತ್ತಿದ್ದಾರೆ ಎಂದು ಆರೋಪಿಸಿದ ವಿಜಯೇಂದ್ರ, ಈ ಎಲ್ಲಾ ಜನವಿರೋಧಿ ನೀತಿಗಳನ್ನು ಸದನದಲ್ಲಿ ಗಂಭೀರವಾಗಿ ಪ್ರಸ್ತಾಪಿಸುವುದಾಗಿ ಸ್ಪಷ್ಟಪಡಿಸಿದರು.

