Tue. Sep 22nd, 2026

ಯುಕೆಪಿ ನಿವೇಶನ ಹಂಚಿಕೆ ಅಕ್ರಮ: ತಪ್ಪಿತಸ್ಥರನ್ನು ಮುಲಾಜಿಲ್ಲದೆ ಜೈಲಿಗಟ್ಟಲು ಚಲುವರಾಯಸ್ವಾಮಿ ಸೂಚನೆ!

Share this with Friends

ಬೆಂಗಳೂರು: ಕೃಷ್ಣಾ ಮೇಲ್ದಂಡೆ ಯೋಜನೆ (UKP) ಹಂತ-1 ಮತ್ತು 2ರ ಮುಳುಗಡೆ ಸಂತ್ರಸ್ತರಿಗೆ ನಿವೇಶನ ಹಂಚಿಕೆ ಮಾಡುವಲ್ಲಿ ನಡೆದಿರುವ ಬೃಹತ್ ಅವ್ಯವಹಾರಗಳಿಗೆ ಸಂಬಂಧಿಸಿದಂತೆ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಜಲಸಂಪನ್ಮೂಲ ಸಚಿವ ಎನ್. ಚಲುವರಾಯಸ್ವಾಮಿ ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ.

ವಿಕಾಸಸೌಧದಲ್ಲಿ ಮಂಗಳವಾರ ನಡೆದ ಉನ್ನತ ಮಟ್ಟದ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಈ ಹಗರಣಕ್ಕೆ ಸಂಬಂಧಿಸಿದ ಸಿಐಡಿ ತನಿಖೆಯನ್ನು ತೀವ್ರಗೊಳಿಸುವಂತೆ ಹಾಗೂ ಅಕ್ರಮದಲ್ಲಿ ಭಾಗಿಯಾಗಿರುವವರನ್ನು ತಕ್ಷಣವೇ ಜೈಲಿಗಟ್ಟುವಂತೆ ಗುಡುಗಿದ್ದಾರೆ.

ನಕಲಿ ದಾಖಲೆ ಸೃಷ್ಟಿ; ಅಧಿಕಾರಿಗಳಿಗೆ ತರಾಟೆ:

ಕೋಲ್ಹಾರ ಪುನರ್ವಸತಿ ಕೇಂದ್ರಕ್ಕೆ ಸಂಬಂಧಿಸಿದಂತೆ ನಡೆದಿರುವ ಅಕ್ರಮಗಳ ಕುರಿತು ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡ ಸಚಿವರು, “ಒಬ್ಬನೇ ವ್ಯಕ್ತಿಗೆ ಎರಡು-ಮೂರು ನಿವೇಶನಗಳನ್ನು ನೀಡಿರುವುದು ಹಾಗೂ ನಕಲಿ ದಾಖಲೆಗಳನ್ನು ಸೃಷ್ಟಿಸಿ ಅನರ್ಹರಿಗೆ ಭೂಮಿ ಮಂಜೂರು ಮಾಡಿರುವುದು ಗಂಭೀರ ಅಪರಾಧ. ತಪ್ಪು ಮಾಡಿದ ಪ್ರತಿಯೊಬ್ಬರ ಮೇಲೂ ತಕ್ಷಣವೇ ಎಫ್‌ಐಆರ್ (FIR) ದಾಖಲಿಸಿ ಕಾನೂನು ಕ್ರಮ ಜರುಗಿಸಬೇಕು. ಇಲಾಖೆಯಲ್ಲಿ ಪ್ರತಿಯೊಂದಕ್ಕೂ ಉತ್ತರದಾಯಿತ್ವ ಇರಬೇಕು” ಎಂದು ತಾಕೀತು ಮಾಡಿದರು.

ಅಕ್ಟೋಬರ್ ಅಂತ್ಯದೊಳಗೆ ಸಮಸ್ಯೆ ಇತ್ಯರ್ಥಕ್ಕೆ ಗಡುವು:

ಅರ್ಹ ಫಲಾನುಭವಿಗಳಿಗೆ ಹಕ್ಕುಪತ್ರಗಳನ್ನು ವಿತರಿಸಲು ಅಡ್ಡಿಯಾಗಿರುವ ಇ-ಆಸ್ತಿ ತಾಂತ್ರಿಕ ಗೊಂದಲಗಳನ್ನು ಅಕ್ಟೋಬರ್ ಅಂತ್ಯದೊಳಗೆ ಸಂಪೂರ್ಣವಾಗಿ ಇತ್ಯರ್ಥಪಡಿಸಬೇಕು ಎಂದು ಸಚಿವರು ಗಡುವು ವಿಧಿಸಿದ್ದಾರೆ. ಈ ಬಿಕ್ಕಟ್ಟು ನಿವಾರಣೆಗೆ ಮುಂದಿನ 15 ದಿನಗಳಲ್ಲಿ ವಿಶೇಷ ಮಂಡಳಿ (Board) ರಚಿಸಲಾಗುವುದು ಎಂದು ಭರವಸೆ ನೀಡಿದ ಅವರು, ಅಭಿವೃದ್ಧಿಪಡಿಸಲಾದ ಬಡಾವಣೆಗಳ ನಕ್ಷೆ ಹಾಗೂ ಅಲ್ಲಿನ ಮೂಲಸೌಕರ್ಯಗಳ ಕುರಿತು 3 ದಿನಗಳ ಒಳಗಾಗಿ ಸಮಗ್ರ ವರದಿ ಸಲ್ಲಿಸುವಂತೆ ಸೂಚಿಸಿದರು.

ತಿಂಗಳೊಳಗೆ ಕೆಲಸ ಮುಗಿಸದಿದ್ದರೆ ಇಒ ಅಮಾನತು?:

ಸಭೆಯಲ್ಲಿ ಕೋಲ್ಹಾರ ಭಾಗದ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಯನ್ನು (EO) ನೇರವಾಗಿ ತರಾಟೆಗೆ ತೆಗೆದುಕೊಂಡ ಚಲುವರಾಯಸ್ವಾಮಿ, “ಸಂತ್ರಸ್ತರ ಇಷ್ಟು ವರ್ಷಗಳ ಹಳೆಯ ಸಮಸ್ಯೆಯನ್ನು ಬಗೆಹರಿಸಲು ನಿಮಗೇಕೆ ಸಾಧ್ಯವಾಗಿಲ್ಲ? ಪ್ರಾದೇಶಿಕ ಆಯುಕ್ತರೊಂದಿಗೆ ಸಮನ್ವಯ ಸಾಧಿಸಿ ತಕ್ಷಣ ತಾಂತ್ರಿಕ ತೊಡಕುಗಳನ್ನು ನಿವಾರಿಸಿ. ಮುಂದಿನ ಒಂದು ತಿಂಗಳೊಳಗೆ ಸಮಸ್ಯೆ ಇತ್ಯರ್ಥವಾಗದಿದ್ದರೆ ನಿಮ್ಮ ವಿರುದ್ಧ ಕಠಿಣ ಶಿಸ್ತುಕ್ರಮ ಕೈಗೊಳ್ಳಲಾಗುವುದು” ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ. ಗ್ರಾಮ ಪಂಚಾಯಿತಿ ಹಾಗೂ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಹಕ್ಕುಪತ್ರಗಳ ವಿತರಣೆಯನ್ನು ಪಾರದರ್ಶಕವಾಗಿ ನಡೆಸಲು ಸ್ಪಷ್ಟ ನಿರ್ದೇಶನ ನೀಡಲಾಗಿದೆ.

ವಿಡಿಯೋ ಕರೆ ಮೂಲಕ ಸೂಚನೆ:

ಸಭೆಯ ಮಧ್ಯೆಯೇ ವಿಡಿಯೋ ಕರೆ ಮೂಲಕ ಪ್ರಾದೇಶಿಕ ಆಯುಕ್ತೆ ಜಾನಕಿ ಅವರೊಂದಿಗೆ ಮಾತನಾಡಿದ ಸಚಿವರು, “ತಕ್ಷಣವೇ ಸಿಐಡಿ ಜೊತೆ ಮಾತನಾಡಿ ಲಿಖಿತ ಪತ್ರ ಬರೆಯಿರಿ. ಈವರೆಗಿನ ತನಿಖೆಯ ಪ್ರಗತಿ ಪರಿಶೀಲಿಸಿ. ಅಕ್ರಮ ಎಸಗಿದವರು ಮತ್ತು ಅವರಿಗೆ ಸಹಕರಿಸಿದ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಿ. ಅನಧಿಕೃತವಾಗಿ ನಿವೇಶನ ಪಡೆದುಕೊಂಡಿರುವವರಿಂದ ಆದಷ್ಟು ಬೇಗ ಜಾಗ ತೆರವುಗೊಳಿಸಿ” ಎಂದು ನಿರ್ದೇಶಿಸಿದರು.

“ನಾರಾಯಣಪುರ ವ್ಯಾಪ್ತಿಯಲ್ಲಿನ ಅರ್ಹರಿಗೆ ಕೋಲ್ಹಾರದಲ್ಲಿ ನಿವೇಶನ ನೀಡಿದರೆ ಹೇಗೆ?” ಎಂದು ಕೆಂಡಾಮಂಡಲಗೊಂಡ ಸಚಿವರು, “ಕಳೆದ 15 ವರ್ಷಗಳಿಂದ ಇಂತಹ ಸಮಸ್ಯೆಗಳನ್ನು ಜೀವಂತವಾಗಿಟ್ಟಿದ್ದೀರಿ. ಅಕ್ಟೋಬರ್ ಅಂತ್ಯದೊಳಗೆ ಯಾವುದೇ ದೂರನ್ನು ಹೊತ್ತು ಶಾಸಕ ಶಿವಾನಂದ ಪಾಟೀಲ್ ಅವರು ನನ್ನ ಬಳಿ ಬರುವಂತಾಗಬಾರದು. ಅಪ್ಪಿತಪ್ಪಿ ಶಾಸಕರು ಇದೇ ಸಮಸ್ಯೆಗಳನ್ನು ಹಿಡಿದುಕೊಂಡು ಬಂದರೆ ಅಧಿಕಾರಿಗಳೇ ನೇರ ಹೊಣೆ ಹೊರಬೇಕಾಗುತ್ತದೆ ಹಾಗೂ ಮನೆಗೆ ಹೋಗಬೇಕಾಗುತ್ತದೆ” ಎಂದು ಎಚ್ಚರಿಸಿದರು.

ಬೋರ್ಡ್ ಸಭೆ ಕಡ್ಡಾಯ:

ಮುಂದಿನ ಒಂದು ತಿಂಗಳೊಳಗೆ ಇಲಾಖೆ ವ್ಯಾಪ್ತಿಯ ನಾಲ್ಕು ನಿಗಮಗಳ ಮಂಡಳಿ (ಬೋರ್ಡ್) ಅಸ್ತಿತ್ವಕ್ಕೆ ಬರಲಿದೆ. ಪ್ರತಿ 3 ತಿಂಗಳಿಗೊಮ್ಮೆ ಕಡ್ಡಾಯವಾಗಿ ಬೋರ್ಡ್ ಸಭೆ ನಡೆಸಬೇಕು ಎಂದು ಸೂಚಿಸಿದರು.

ಸಭೆಯಲ್ಲಿ ಶಾಸಕ ಶಿವಾನಂದ ಪಾಟೀಲ್, ನೀರಾವರಿ ಇಲಾಖೆ ಕಾರ್ಯದರ್ಶಿ ಕುಲಕರ್ಣಿ ಹಾಗೂ ಕೃಷ್ಣಾ ಭಾಗ್ಯ ಜಲ ನಿಗಮದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಏನಿದು ವಿವಾದ?

ಈ ಯೋಜನೆಯಡಿ ಒಟ್ಟು 176 ಗ್ರಾಮಗಳು ಮುಳುಗಡೆಯಾಗಿದ್ದವು. ನಾರಾಯಣಪುರ ಜಲಾಶಯದ ಹಿನ್ನೀರಿನಲ್ಲಿ 40 ಗ್ರಾಮಗಳು ಮತ್ತು ಆಲಮಟ್ಟಿ ಜಲಾಶಯದ ಹಿನ್ನೀರಿನಲ್ಲಿ 136 ಗ್ರಾಮಗಳು ಮುಳುಗಡೆಯಾಗಿದ್ದವು. 3,435 ಸಂತ್ರಸ್ತ ಕುಟುಂಬಗಳಿಗಾಗಿ 5,664 ನಿವೇಶನಗಳ ಪುನರ್ವಸತಿ ಕೇಂದ್ರವನ್ನು 1995ರಲ್ಲಿ ರಚಿಸಲಾಗಿತ್ತು.

ಆದರೆ ಇದರಲ್ಲಿ 1,117 ನಿವೇಶನಗಳು ಕಾನೂನುಬಾಹಿರವಾಗಿ ಹಂಚಿಕೆಯಾಗಿದ್ದವು. ಮಧ್ಯವರ್ತಿಗಳು ನಕಲಿ ದಾಖಲೆ ಸೃಷ್ಟಿಸಿ ಅನರ್ಹರಿಗೆ ನಿವೇಶನ ನೀಡಿದ್ದರು. 123 ನಿವೇಶನಗಳು ಇಬ್ಬಿಬ್ಬರಿಗೆ (ಡಬಲ್) ಹಂಚಿಕೆಯಾಗಿದ್ದವು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 2016ರಲ್ಲಿ ಸಿಒಡಿ ತನಿಖೆ ನಡೆದು 8 ಮಂದಿ ಅಧಿಕಾರಿಗಳ ಮೇಲೆ ಚಾರ್ಜ್ ಶೀಟ್ ಸಹ ಸಲ್ಲಿಕೆಯಾಗಿತ್ತು. ಇದರಲ್ಲಿ ಎಸ್.ಎಲ್.ಒ ಮತ್ತು ಆರ್.ಒ ಹಂತದ ಅಧಿಕಾರಿಗಳೂ ಅಕ್ರಮ ಎಸಗಿದ್ದರು. ಆದರೆ ತನಿಖೆ ಇಂದಿಗೂ ಪೂರ್ಣಗೊಂಡಿಲ್ಲ.


Share this with Friends

Related Post