ಬೆಂಗಳೂರು: ಪಶ್ಚಿಮ ಘಟ್ಟಗಳ ಸಂರಕ್ಷಣೆ ನೆಪದಲ್ಲಿ ಮಲೆನಾಡು ಮತ್ತು ಕರಾವಳಿ ಭಾಗದ ಜನಸಾಮಾನ್ಯರನ್ನು ಆತಂಕಕ್ಕೆ ತಳ್ಳಿರು ಕಸ್ತೂರಿರಂಗನ್ ವರದಿಯ 7ನೇ ಕರಡು ಅಧಿಸೂಚನೆಯನ್ನು ಪ್ರಸ್ತುತ ಯಥಾಸ್ಥಿತಿಯಲ್ಲಿ ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ವಿಧಾನಸಭೆ ಹಾಗೂ ವಿಧಾನ ಪರಿಷತ್ತಿನಲ್ಲಿ ಸರ್ವಾನುಮತದ ಐತಿಹಾಸಿಕ ನಿರ್ಣಯವನ್ನು ಅಂಗೀಕರಿಸಿದೆ. ವರದಿಯ ನ್ಯೂನತೆಗಳನ್ನು ತೊಡೆದುಹಾಕಲು ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಉನ್ನತ ಮಟ್ಟದ ತಜ್ಞರ ಸಮಿತಿ ರಚಿಸಲು ತೀರ್ಮಾನಿಸಲಾಗಿದ್ದು, ಗ್ರಾಮ ಹಾಗೂ ಸರ್ವೇ ನಂಬರ್ವಾರು ಭೌತಿಕ ಸಮೀಕ್ಷೆ ನಡೆಸಲು ಕೇಂದ್ರ ಸರ್ಕಾರಕ್ಕೆ ಒಂದು ವರ್ಷದ ಕಾಲಾವಕಾಶ ಕೋರಲು ಒಮ್ಮತದ ತೀರ್ಮಾನ ಕೈಗೊಳ್ಳಲಾಗಿದೆ.
ವಿಧಾನಮಂಡಲದ ವಿಶೇಷ ಅಧಿವೇಶನದಲ್ಲಿ ಕಸ್ತೂರಿರಂಗನ್ ಕರಡು ಅಧಿಸೂಚನೆ ಕುರಿತು ನಡೆದ ದೀರ್ಘ ಹಾಗೂ ಸುದೀರ್ಘ ಚರ್ಚೆಗೆ ಉತ್ತರಿಸಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ವಿವರಣೆ ನೀಡಿದ ಉಪಮುಖ್ಯಮಂತ್ರಿ ಮತ್ತು ಕಂದಾಯ ಸಚಿವ ಡಾ. ಜಿ. ಪರಮೇಶ್ವರ ಅವರ ನಿರ್ಣಯಗಳಿಗೆ ಆಡಳಿತ ಮತ್ತು ವಿರೋಧ ಪಕ್ಷಗಳ ಉಭಯ ಸದನಗಳ ಸದಸ್ಯರು ಒಮ್ಮತದ ಒಪ್ಪಿಗೆ ಸೂಚಿಸಿದರು.
ಅವೈಜ್ಞಾನಿಕ ಉಪಗ್ರಹ ಸಮೀಕ್ಷೆ; ಗ್ರಾಮವಾರು ಭೌತಿಕ ಸರ್ವೆಗೆ ಪಟ್ಟು
ಕೇಂದ್ರ ಸರ್ಕಾರವು ಜುಲೈ 27, 2026ರಂದು ಹೊರಡಿಸಿರುವ 7ನೇ ಕರಡು ಅಧಿಸೂಚನೆಯಲ್ಲಿ ಕರ್ನಾಟಕದ 10 ಜಿಲ್ಲೆಗಳ 1,449 ಗ್ರಾಮಗಳ ಒಟ್ಟು 20,668 ಚದರ ಕಿ.ಮೀ. ಪ್ರದೇಶವನ್ನು ಪರಿಸರ ಸೂಕ್ಷ್ಮ ವಲಯ (ESA) ಎಂದು ಗುರುತಿಸಿದೆ. ಇದು ಕೇವಲ ಉಪಗ್ರಹ (Satellite) ಚಿತ್ರಗಳನ್ನು ಆಧರಿಸಿದ ಅವೈಜ್ಞಾನಿಕ ಸಮೀಕ್ಷೆಯಾಗಿದೆ ಎಂದು ಮುಖ್ಯಮಂತ್ರಿಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಉಪಗ್ರಹ ಚಿತ್ರಗಳಲ್ಲಿ ದಟ್ಟ ಅರಣ್ಯ ಮತ್ತು ರೈತರ ಹಸಿರು ಕೃಷಿ-ತೋಟಗಳ ಭೂಮಿ ಒಂದೇ ಸಮನಾಗಿ ಕಾಣುತ್ತದೆ. ಕೇವಲ ಶೇ. 20ರಷ್ಟು ಅರಣ್ಯವಿರುವ ಇಡೀ ಗ್ರಾಮವನ್ನೇ ಪರಿಸರ ಸೂಕ್ಷ್ಮ ಪ್ರದೇಶ ಎಂದು ಘೋಷಿಸುವುದು ತಪ್ಪು. ಇದರಿಂದಾಗಿ ತಲೆತಲೆಮಾರಿನಿಂದ ಬದುಕುತ್ತಿರುವ ಕಾಡಂಚಿನ ಜನರ ಮನೆ ನಿರ್ಮಾಣ, ಆಸ್ತಿ ವಾರಸುದಾರಿಕೆ, ಕೃಷಿ ಹಾಗೂ ರಸ್ತೆ, ಶಾಲೆ, ಕುಡಿಯುವ ನೀರಿನ ಪೈಪ್ಲೈನ್ನಂತಹ ಮೂಲಸೌಕರ್ಯಗಳಿಗೆ ಭಾರಿ ತೊಂದರೆಯಾಗಲಿದ್ದು, ಸ್ಥಳೀಯರಲ್ಲಿ ತೀವ್ರ ಆತಂಕ ಮೂಡಿಸಿದೆ.
ರಾಜ್ಯದಲ್ಲಿ ಈ ಬಾರಿಯ ಬರ ಪರಿಸ್ಥಿತಿಯೂ ಅತ್ಯಂತ ಗಂಭೀರವಾಗಿದ್ದು, ವಾಡಿಕೆಗಿಂತ ಶೇ. 36 ರಷ್ಟು ಮಳೆ ಕೊರತೆಯಾಗಿದೆ (ದಕ್ಷಿಣ ಒಳನಾಡಿನಲ್ಲಿ ಶೇ. 46, ಉತ್ತರ ಒಳನಾಡಿನಲ್ಲಿ ಶೇ. 44, ಮಲೆನಾಡಿನಲ್ಲಿ ಶೇ. 38 ಹಾಗೂ ಕರಾವಳಿಯಲ್ಲಿ ಶೇ. 28 ರಷ್ಟು ಕೊರತೆ). ಈ ಸಂಕಷ್ಟದ ನಡುವೆ ಕಸ್ತೂರಿರಂಗನ್ ವರದಿಯ ನ್ಯೂನತೆಗಳನ್ನು ನಿವಾರಿಸಲು ಪ್ರತಿಯೊಂದು ಗ್ರಾಮದ ಮನೆ, ಶಾಲೆ, ತೋಟಗಾರಿಕೆ ಜಮೀನು, ವಿದ್ಯುತ್ ಕಂಬಗಳ ನಕ್ಷೆ ತಯಾರಿಸಿ ನೈಜ ವರದಿ ಸಿದ್ಧಪಡಿಸಬೇಕಿದೆ. ಕಾಡಿನೊಳಗೇ ‘ಬಫರ್ ಜೋನ್’ ಮಾಡಿಕೊಳ್ಳಲಿ, ಆದರೆ ಬಡವರ ಬದುಕಿಗೆ ತೊಂದರೆಯಾಗದಂತೆ ಭೌತಿಕ ಸಮೀಕ್ಷೆ ನಡೆಸಲು ಕೇಂದ್ರಕ್ಕೆ ಒಂದು ವರ್ಷ ಕಾಲಾವಕಾಶ ಕೋರಲಾಗುವುದು ಎಂದು ಸಿಎಂ ಸ್ಪಷ್ಟಪಡಿಸಿದರು.
ಕೇಂದ್ರಕ್ಕೆ ಸರ್ವಪಕ್ಷ ನಿಯೋಗ; ಸುಪ್ರೀಂ ಕೋರ್ಟ್ನಲ್ಲಿ ಕಾನೂನು ಹೋರಾಟ
ಕೇಂದ್ರ ಸರ್ಕಾರದ ಮಟ್ಟದಲ್ಲಿ ರಾಜ್ಯದ ನಿಲುವನ್ನು ಗಟ್ಟಿಯಾಗಿ ಸಮರ್ಥಿಸಲು ಮತ್ತು ಪ್ರಧಾನಮಂತ್ರಿ ಹಾಗೂ ಕೇಂದ್ರ ಸಚಿವರನ್ನು ಭೇಟಿ ಮಾಡಲು ಬೃಹತ್ ಸರ್ವಪಕ್ಷ ನಿಯೋಗವನ್ನು ದೆಹಲಿಗೆ ಕೊಂಡೊಯ್ಯಲು ಸದನದಲ್ಲಿ ತೀರ್ಮಾನಿಸಲಾಗಿದೆ. ಸುಪ್ರೀಂ ಕೋರ್ಟ್ನಲ್ಲಿ ಈ ಪ್ರಕರಣದ ಸಮರ್ಥ ವಾದ ಮಂಡನೆಗಾಗಿ ದೇಶದ ಹಿರಿಯ ವಕೀಲರನ್ನು ನೇಮಿಸಲು ಸಹಮತ ಮೂಡಿದೆ. “ಮತದಾರರೇ ನಮ್ಮ ಪ್ರಭುಗಳು. ರಾಜಕೀಯ ಮಾಡುವ ಸಮಯದಲ್ಲಿ ರಾಜಕೀಯ ಮಾಡೋಣ. ಈಗ ಪಕ್ಷಭೇದ ಮರೆತು ಕರ್ನಾಟಕದ ಎಲ್ಲ ಸಂಸದರು ಒಗ್ಗಟ್ಟಿನಿಂದ ಧ್ವನಿ ಎತ್ತಿ ರೈತರು ಮತ್ತು ಜನಸಾಮಾನ್ಯರನ್ನು ಬದುಕಿಸಬೇಕಿದೆ” ಎಂದು ಮುಖ್ಯಮಂತ್ರಿಗಳು ಕರೆ ನೀಡಿದರು.
ರಾಜ್ಯ ಸರ್ಕಾರವು 2004ರಿಂದಲೇ ಈ ವರದಿಯ ವಿವಿಧ ಕರಡುಗಳಿಗೆ ಆಕ್ಷೇಪ ಸಲ್ಲಿಸುತ್ತಾ ಬಂದಿದ್ದು, ಈಗಾಗಲೇ 6 ಬಾರಿ ಕರಡುಗಳನ್ನು ತಿರಸ್ಕರಿಸಿದೆ. ಈ ಬಾರಿ 7ನೇ ಕರಡು ಅಧಿಸೂಚನೆ ಹೊರಬಿದ್ದಾಗ ಆದಿವಾಸಿಗಳು ಮತ್ತು ಸ್ಥಳೀಯರನ್ನು ಭೇಟಿಯಾಗಿ ಚರ್ಚಿಸಿದ್ದೇನೆ. ಬಾಳೆಹೊನ್ನೂರು, ಶಿವಮೊಗ್ಗ, ಸಕಲೇಶಪುರ ಭಾಗದಲ್ಲಿ 10 ಸಾವಿರಕ್ಕೂ ಹೆಚ್ಚು ಜನರು ಪಾದಯಾತ್ರೆ ಹಾಗೂ ಸಭೆ ನಡೆಸಿ ಆತಂಕ ತೋಡಿಕೊಂಡಿದ್ದಾರೆ. ಅವರ ಅಭಿಪ್ರಾಯ ಆಲಿಸಲೆಂದೇ ವಿಶೇಷ ಅಧಿವೇಶನ ಕರೆದು, 30ಕ್ಕೂ ಹೆಚ್ಚು ಶಾಸಕರ ಮಹತ್ವದ ಸಲಹೆಗಳನ್ನು ಕ್ರೋಢೀಕರಿಸಿ ಈ ಒಮ್ಮತದ ನಿರ್ಣಯ ಮಂಡಿಸಲಾಗಿದೆ ಎಂದು ಸಿಎಂ ವಿವರಿಸಿದರು.
ಕಾಡು ಉಳಿಯಬೇಕು, ರೈತರೂ ಬದುಕಬೇಕು; ಬಂದೂಕು ಜಪ್ತಿಗೆ ಸಿಎಂ ಖಡಕ್ ಆದೇಶ
ಪಶ್ಚಿಮ ಘಟ್ಟಗಳ ಪರಿಸರ, ಜೀವವೈವಿಧ್ಯ, ನದಿಗಳ ಮೂಲ ಹಾಗೂ ಶಿವಮೊಗ್ಗದ ಕಪ್ಪು ಚಿರತೆ, ಆನೆಗಳಂತಹ ವನ್ಯಜೀವಿಗಳನ್ನು ಸಂರಕ್ಷಿಸುವುದು ಸರ್ಕಾರದ ಬದ್ಧತೆಯಾಗಿದೆ. “ಕಾಡು ಉಳಿದರೆ ನಾಡು, ಕಾಡು ಇದ್ದರೆ ಮಳೆ, ಪರಿಸರ ಉಳಿಯಬೇಕು ಹಾಗೂ ರೈತರೂ ಬದುಕಬೇಕು ಎಂಬುದು ಸರ್ಕಾರದ ನಿಲುವು” ಎಂದ ಸಿಎಂ, ತಲೆತಲೆಮಾರಿನಿಂದ ಅಲ್ಲಿಯೇ ಬದುಕು ಕಟ್ಟಿಕೊಂಡಿರುವ ರೈತರು, ಆದಿವಾಸಿಗಳು ಮತ್ತು ಸ್ಥಳೀಯ ಕುಟುಂಬಗಳನ್ನು ಸ್ಥಳಾಂತರಿಸುವುದು ಅಥವಾ ಅವರಿಗೆ ಕಿರುಕುಳ ನೀಡುವುದು ಸರ್ಕಾರದ ನಿಲುವಲ್ಲ ಎಂದರು. ಈಗಾಗಲೇ ಮಂಜೂರಾದ ಪ್ರದೇಶಗಳನ್ನು ಸೇರಿಸಬಾರದು ಹಾಗೂ ಪುನರ್ವಸತಿ ಪ್ರಸ್ತಾಪವಿಲ್ಲದೆ ತೆರವು ಮಾಡಬಾರದು. ಬಗರ್ಹುಕುಂ, ಅರಣ್ಯ ಹಕ್ಕು ಕಾಯ್ದೆ, ಡೀಮ್ಡ್ ಫಾರೆಸ್ಟ್, ಭೂಮಂಜೂರಾತಿ ಪ್ರಕರಣಗಳನ್ನು ಪರಿಶೀಲಿಸದೆ ಸ್ಥಳೀಯರ ವಿರುದ್ಧ ಕ್ರಮ ಕೈಗೊಳ್ಳಬಾರದು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.
ಇದೇ ವೇಳೆ ಅರಣ್ಯ ಪ್ರದೇಶಗಳಲ್ಲಿ ಹೊಸದಾಗಿ ಒತ್ತುವರಿ ಮಾಡುವುದನ್ನು ಸಂಪೂರ್ಣವಾಗಿ ನಿಲ್ಲಿಸಲು ಸೂಚಿಸಲಾಗಿದೆ. ಅಕ್ರಮ ಬೇಟೆ ತಡೆಯಲು ಕಟ್ಟುನಿಟ್ಟಿನ ಕ್ರಮ ಪ್ರಕಟಿಸಿದ ಸಿಎಂ, “ಕಾಡಂಚಿನಲ್ಲಿ ಬದುಕುವವರು ತಮ್ಮ ಬಳಿಯಿರುವ ಬಂದೂಕುಗಳನ್ನು ನವೆಂಬರ್ 1ರೊಳಗೆ ಕಡ್ಡಾಯವಾಗಿ ಪೊಲೀಸ್ ಠಾಣೆಗಳ ವಶಕ್ಕೆ ನೀಡಬೇಕು; ಸೂಕ್ತ ಪರವಾನಗಿ ಪಡೆದಿದ್ದರೆ ಪರಿಶೀಲಿಸಿ ಹಿಂತಿರುಗಿಸಲಾಗುವುದು, ಇಲ್ಲದಿದ್ದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು” ಎಂದು ಖಡಕ್ ಎಚ್ಚರಿಕೆ ನೀಡಿದರು. ವನ್ಯಜೀವಿ ಸಂರಕ್ಷಣೆ ಮತ್ತು ಮಾನವ-ವನ್ಯಜೀವಿ ಸಂಘರ್ಷ ತಡೆಯಲು ಆಧುನಿಕ ತಂತ್ರಜ್ಞಾನ, ಕ್ಯಾಮೆರಾಗಳು ಹಾಗೂ ಆನೆಗಳ ಚಲನವಲನಗಳ ಮೇಲೆ ನಿಗಾ ವಹಿಸುವ ಹೈಟೆಕ್ ವ್ಯವಸ್ಥೆಯನ್ನು ಬಳಸಲಾಗುವುದು ಎಂದು ತಿಳಿಸಿದರು.

