ಬೆಂಗಳೂರು: “ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆಯ ಐದು ಗ್ಯಾರಂಟಿ ಯೋಜನೆಗಳು ಇಂದು ಜಾಗತಿಕ ಮಟ್ಟದಲ್ಲಿ ಸದ್ದು ಮಾಡುತ್ತಿವೆ. ವಿಶ್ವದ ಬಲಿಷ್ಠ ರಾಷ್ಟ್ರವಾದ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೂ ಸಹ ತಮ್ಮ ದೇಶದಲ್ಲಿ ಇಂತಹ ಜನಕಲ್ಯಾಣ ಯೋಜನೆಗಳನ್ನು ಜಾರಿಗೊಳಿಸುವ ಬಗ್ಗೆ ಮಾತನಾಡುತ್ತಿದ್ದಾರೆ. ಇದು ನಮ್ಮ ಯೋಜನೆಗಳ ಶಕ್ತಿಗೆ ಸಿಕ್ಕ ದೊಡ್ಡ ಹೆಮ್ಮೆಯ ನಿದರ್ಶನ” ಎಂದು ವಿಧಾನ ಪರಿಷತ್ ಶಾಸಕ ಹಾಗೂ ರಾಜ್ಯ ಗ್ಯಾರಂಟಿ ಅನುಷ್ಠಾನ ಸಮಿತಿ ಉಪಾಧ್ಯಕ್ಷ ದಿನೇಶ್ ಗೂಳಿಗೌಡ ಪ್ರತಿಪಾದಿಸಿದ್ದಾರೆ.
ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಕುರಿತು ಬಿಜೆಪಿ ಹಿರಿಯ ಸದಸ್ಯ ಹಾಗೂ ಮಾಜಿ ಸಭಾಪತಿ ಬಸವರಾಜ ಹೊರಟ್ಟಿ ಅವರು ವ್ಯಕ್ತಪಡಿಸಿದ ಆಕ್ಷೇಪಕ್ಕೆ, ದಿನೇಶ್ ಗೂಳಿಗೌಡ ಅವರು ವಿಧಾನ ಪರಿಷತ್ತಿನಲ್ಲಿ ಅಂಕಿ-ಅಂಶಗಳ ಸಹಿತ ಸುದೀರ್ಘ ಪ್ರತಿಕ್ರಿಯೆ ನೀಡಿದರು.
ಕಾರ್ಡ್ದಾರರ ಖಾತೆಗೆ ನೇರ ಹಣ ವರ್ಗಾವಣೆ:
“ಗ್ಯಾರಂಟಿ ಯೋಜನೆಗಳನ್ನು ಎಲ್ಲರಿಗೂ ನೀಡಿರುವುದು ಸರಿಯಲ್ಲ” ಎಂಬ ಬಸವರಾಜ ಹೊರಟ್ಟಿ ಅವರ ವಾದವನ್ನು ತಳ್ಳಿಹಾಕಿದ ದಿನೇಶ್ ಗೂಳಿಗೌಡ, ಇಡೀ ಭಾರತ ದೇಶದಲ್ಲೇ ಕಲ್ಯಾಣ ಯೋಜನೆಗಳಿಗಾಗಿ ಒಟ್ಟು 1,47,658 ಕೋಟಿ ರೂಪಾಯಿಗಳನ್ನು ಯಾವುದೇ ಮಧ್ಯವರ್ತಿಗಳಿಲ್ಲದೆ ನೇರವಾಗಿ ಜನರ ಖಾತೆಗೆ ವರ್ಗಾಯಿಸಿದ (DBT) ದೇಶದ ಮೊದಲ ಮಾದರಿ ಕರ್ನಾಟಕದ್ದಾಗಿದೆ ಎಂದರು.
ಗೃಹಲಕ್ಷ್ಮಿ ಯೋಜನೆ: ಕುಟುಂಬ ನಿರ್ವಹಣೆ, ಮಕ್ಕಳ ಶಾಲಾ ಶುಲ್ಕ ಹಾಗೂ ಔಷಧ ವೆಚ್ಚಕ್ಕಾಗಿ ರಾಜ್ಯದ 1 ಕೋಟಿ 24 ಲಕ್ಷಕ್ಕೂ ಅಧಿಕ ಮಹಿಳೆಯರಿಗೆ ಇದುವರೆಗೆ 33 ಕಂತುಗಳಲ್ಲಿ ತಲಾ 66,000 ರೂ. ಜಮೆ ಮಾಡಲಾಗಿದೆ. ಈ ಒಂದೇ ಯೋಜನೆಯಡಿ ಒಟ್ಟು 67,500 ಕೋಟಿ ರೂ. ಹಣವನ್ನು ಮಹಿಳೆಯರ ಖಾತೆಗೆ ತಲುಪಿಸಲಾಗಿದೆ.
ಗೃಹಜ್ಯೋತಿ ಯೋಜನೆ: ರಾಜ್ಯದ ಒಟ್ಟು 2 ಕೋಟಿ 5 ಲಕ್ಷ ಮನೆಗಳ ಪೈಕಿ 1 ಕೋಟಿ 67 ಲಕ್ಷ ಮನೆಗಳಿಗೆ 200 ಯೂನಿಟ್ವರೆಗೆ ಉಚಿತ ವಿದ್ಯುತ್ ನೀಡಲಾಗುತ್ತಿದ್ದು, ಕಳೆದ 3 ವರ್ಷಗಳಲ್ಲಿ ಸರ್ಕಾರ ಈ ಉದ್ದೇಶಕ್ಕಾಗಿ 21,500 ಕೋಟಿ ರೂ. ವೆಚ್ಚ ಮಾಡಿದೆ.
ಯುವನಿಧಿ ಯೋಜನೆ: 3,99,000 ನಿರುದ್ಯೋಗಿ ಪದವೀಧರರು (ತಿಂಗಳಿಗೆ 3,000 ರೂ.) ಹಾಗೂ ಡಿಪ್ಲೋಮಾ ಪದವೀಧರರಿಗೆ (ತಿಂಗಳಿಗೆ 1,500 ರೂ.) ಗರಿಷ್ಠ 2 ವರ್ಷಗಳ ಕಾಲ ಆರ್ಥಿಕ ನೆರವು ನೀಡಲು 1,268 ಕೋಟಿ ರೂ.ಗಳನ್ನು ಸರ್ಕಾರ ಬಳಸಿದೆ.
ಬರಗಾಲದಲ್ಲಿ ಜನರ ಕೈಹಿಡಿದ ಅನ್ನಭಾಗ್ಯ:
ಅನ್ನಭಾಗ್ಯ ಯೋಜನೆಯಡಿ ರಾಜ್ಯದ 1 ಕೋಟಿ 48 ಲಕ್ಷ ಕಾರ್ಡ್ಗಳ ವ್ಯಾಪ್ತಿಗೆ ಬರುವ 4.5 ಕೋಟಿ ಸದಸ್ಯರಿಗೆ ತಲಾ 10 ಕೆಜಿ ಅಕ್ಕಿ ನೀಡಲಾಗುತ್ತಿದೆ. ಪ್ರಸ್ತುತ ರಾಜ್ಯ ಎದುರಿಸುತ್ತಿರುವ ತೀವ್ರ ಬರಗಾಲ ಹಾಗೂ ಮಳೆ ಕೊರತೆಯ ಸಂದರ್ಭದಲ್ಲೂ ಜನರು ಊರು ತೊರೆದು ಗೂಳೆ ಹೋಗದಂತೆ ಈ ಐದೂ ಗ್ಯಾರಂಟಿಗಳು ಜನಸಾಮಾನ್ಯರನ್ನು ಕೈಹಿಡಿದು ಕಾಯುತ್ತಿವೆ ಎಂದು ಅವರು ಸದನದ ಗಮನ ಸೆಳೆದರು.

